ಉಜಿರೆ: “ಯಕ್ಷಗಾನವು ಸಮಷ್ಟಿಯ ಕಲೆಯಾಗಿದ್ದು, ಇದನ್ನು ಕಲಿತು ಎಲ್ಲೆಡೆ ಪಸರಿಸುವ ಕಾರ್ಯ ಆಗಬೇಕು, ನಾವು ಕಲಿತು ಬೇರೆಯವರಿಗೆ ಕಲಿಸಿದಾಗ ಮಾತ್ರ ಕಲೆ ಬೆಳೆಯಲು ಸಾಧ್ಯ” ಎಂದು ಎಂದು ಖ್ಯಾತ ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ಉಜಿರೆ ಅಶೋಕ ಭಟ್ ಅಭಿಪ್ರಾಯಪಟ್ಟರು.
ಉಜಿರೆಯ ಶ್ರೀ ಧ.ಮಂ. ಕಾಲೇಜಿನ ಕಲಾ ಕೇಂದ್ರದಲ್ಲಿ ಜು.18ರಂದು ಅವರು ಯಕ್ಷಗಾನ ತರಬೇತಿ ಚಟುವಟಿಕೆ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಯಕ್ಷಗಾನ ಏಕ ವ್ಯಕ್ತಿ ಕಲೆಯಲ್ಲ. ಅದು ಸಮೂಹ ಕಲೆ. ಕರ್ನಾಟಕದ ಗಂಡು ಕಲೆಯಾದ ಯಕ್ಷಗಾನವನ್ನ ಕಲಿತು ಪಸರಿಸಬೇಕು. ಶ್ರದ್ಧೆ, ಪ್ರೀತಿ, ಭಕ್ತಿ ಇದ್ದರೆ ಕಲೆಯನ್ನು ಮೈಗೂಡಿಸಿಕೊಳ್ಳಬಹುದು ಎಂದರು.
ಯಕ್ಷಗಾನದಲ್ಲಿ ಮಾತುಗಾರಿಕೆ ಸಶಕ್ತವಾಗಿರಬೇಕು. ಆ ಮಾತು ಬರಬೇಕಾದರೆ ಕಾವ್ಯದ ಅಭ್ಯಾಸ ಮಾಡಬೇಕು. ಪ್ರಸಂಗಕ್ಕೆ ಸಂಬಂಧಪಟ್ಟಂತಹ ಕಾವ್ಯಗಳು ಯಾವುವು ಎಂಬುದನ್ನು ತಿಳಿಯಬೇಕು. ಮಾತಿನಲ್ಲಿ ಸಂಸ್ಕೃತಿ ಚಿತ್ರಿತವಾಗುತ್ತದೆ. ಇದನ್ನು ಅಭಿನಯಿಸುವುದು ಕಷ್ಟ. ಅದನ್ನು ಸೂಕ್ಷ್ಮವಾಗಿ ಅರ್ಥೈಸಿಕೊಳ್ಳಬೇಕು. ಹೀಗೆ ಅರ್ಥದ ಚಿಂತನೆ ಮಾಡಿದರೆ ಕವಿ ಪ್ರಯೋಗಿಸಿದ ಪದದ ಮೌಲ್ಯ ಹೆಚ್ಚುತ್ತದೆ ಎಂದು ಅವರು ತಿಳಿಸಿದರು.
ಎಸ್.ಡಿ.ಎಂ. ಕಾಲೇಜಿನ ಯಕ್ಷಗಾನ ಕಲಾ ಕೇಂದ್ರವು ಅಧ್ಯಯನ ಕೇಂದ್ರವಾಗಿ ವೈವಿಧ್ಯಮಯ ಕಲಿಕೆಯೊಂದಿಗೆ ಕೂಡಿದೆ. ಕಲಾ ಕೇಂದ್ರದಲ್ಲಿ ತೊಡಗಿಕೊಳ್ಳುವುದರಿಂದ ಏಕಾಗ್ರತೆ ವೃದ್ಧಿಸುತ್ತದೆ, ಕಲಿಕೆಗೆ ಸಹಾಯ ಆಗುತ್ತದೆ. ಕಲೆಯನ್ನು ಆರಾಧಿಸಿ, ಕಲೆಯ ಮಾರ್ಗದಲ್ಲಿ ಸಾಗಿ ಕಾಲೇಜಿಗೂ, ನಿಮಗೂ ಉತ್ತಮ ಹೆಸರು ಗಳಿಸಿ ಕೀರ್ತಿ ತನ್ನಿ ಎಂದರು.
ಕಲಾ ಕೇಂದ್ರದ ನೂತನ ಸಂಯೋಜಕರಾಗಿ ನೇಮಕಗೊಂಡ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನಾಗಣ್ಣ ಡಿ.ಎ. ಮಾತನಾಡಿ, "ಕಲೆ ಎಲ್ಲರನ್ನು ಕೈಬೀಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ" ಎಂದರು. ಹೊಸದಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಕಾಲೇಜಿನ ಆಡಳಿತಾಂಗ ಕುಲಸಚಿವ ಡಾ. ಶ್ರೀಧರ್ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. “ಹಿಂದೆ ಇಲ್ಲಿ ಯಕ್ಷಗಾನ ಕಲಿಕೆಗೆ ಆಸಕ್ತಿ ಇದ್ದರೂ ವ್ಯವಸ್ಥೆ ಇರದೇ ತರಗತಿಗಳಲ್ಲಿ ಸಂಜೆ ವೇಳೆ ಅಭ್ಯಾಸ ಮಾಡುತ್ತಿದ್ದರು. ಈಗ ಬಣ್ಣಗಾರಿಕೆ, ವೇಷ, ಇತ್ಯಾದಿ ಎಲ್ಲ ವ್ಯವಸ್ಥೆ ಇದೆ. ಉತ್ತಮ ಕಲಾವಿದ, ಉತ್ತಮ ಪ್ರೇಕ್ಷಕನಾಗುವುದಕ್ಕೆ ಎಲ್ಲ ಅವಕಾಶಗಳಿವೆ. ಈ ನಿಟ್ಟಿನಲ್ಲಿ ನೀವು ಅದೃಷ್ಟವಂತರು. ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಿ” ಎಂದರು.
ಕಲಾ ಕೇಂದ್ರದ ಕಳೆದ ವರ್ಷದ ಸಾಧನೆ ಹಾಗೂ ಸಂದ ಪ್ರಶಸ್ತಿಗಳ ಕುರಿತು ವಿದ್ಯಾರ್ಥಿ ಅಮೋಘ ಶಂಕರ್ ತಿಳಿಸಿದರು. ಕಳೆದ ವರ್ಷ ಅತೀ ಹೆಚ್ಚು ಯಕ್ಷಗಾನ ತರಗತಿಗೆ ಹಾಜರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಅಶೋಕ್ ಭಟ್ ಅವರನ್ನು ಸನ್ಮಾನಿಸಲಾಯಿತು.
ಕಲಾ ಕೇಂದ್ರದ ನಿಕಟಪೂರ್ವ ಸಂಯೋಜಕ ಡಾ. ಸುಧೀರ್ ಕೆ.ವಿ., ನೃತ್ಯ ಶಿಕ್ಷಕಿ ಚೈತ್ರ ಭಟ್, ನೃತ್ಯ ಶಿಕ್ಷಕ ವಿನ್ಯಾಸ್ ಭಂಡಾರಿ, ಕಾಲೇಜಿನ ಸಂಸ್ಕೃತ ವಿಭಾಗದ ಪ್ರಾಧ್ಯಾಪಕ ಶ್ರೇಯಸ್ ಪಾಳ್ಯಂದೆ, ವಾಣಿಜ್ಯ ವಿಭಾಗದ ಉಪನ್ಯಾಸಕ ಸಚಿನ್ ಉಪಸ್ಥಿತರಿದ್ದರು. ಯಕ್ಷಗಾನ ತರಬೇತುದಾರ ಅರುಣ್ ಕುಮಾರ್ ಧರ್ಮಸ್ಥಳ ಸ್ವಾಗತಿಸಿದರು. ಲಾವಣ್ಯ ವಂದಿಸಿದರು. ಅಂಕಿತ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ