ಉಜಿರೆ: ವಯೋಸಹಜವಾಗಿ ಮೈಗೂಡುವ ಋಣಾತ್ಮಕ ಚಿಂತನೆಗಳನ್ನು ತೊರೆದಾಗ ಮನಸಿನ ಮೇಲೆ ಹಿಡಿತ ಸಾಧಿಸಲು ಸಾಧ್ಯ ಎಂದು ಉಜಿರೆಯ ಶ್ರೀ ಧ. ಮಂ. ಕಾಲೇಜಿನ ಮನಃಶಾಸ್ತ್ರ (ಸ್ನಾತಕೋತ್ತರ) ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಅಶ್ವಿನಿ ಎಸ್. ಶೆಟ್ಟಿ ಅಭಿಪ್ರಾಯಪಟ್ಟರು.
ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಜು.18ರಂದು ಅವರು ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿ ಸಂಘ ‘ಸ್ಪಟಿಕ’ ಉದ್ಘಾಟಿಸಿ, ‘ಕಾಲೇಜು ಜೀವನದಲ್ಲಿ ಮಾನಸಿಕ ಆರೋಗ್ಯದ ಪೋಷಣೆ’ ಕುರಿತು ಉಪನ್ಯಾಸ ನೀಡಿದರು.
ಜೀವನದಲ್ಲಿ ಬರುವ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ವಿದ್ಯಾರ್ಥಿಗಳಲ್ಲಿ ಬರಬೇಕು. ಬದುಕಿನಲ್ಲಿ ಎದುರಾಗುವ ತೊಂದರೆಗಳನ್ನು ಸ್ವೀಕರಿಸಿ, ತಾಳ್ಮೆಯಿಂದ ಚಿಂತಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಮನಸು ಮತ್ತು ಮೆದುಳಿನ ಸಮತೋಲನ ನಿರ್ವಹಣೆಯಿಂದ ಮಾನಸಿಕ ಆರೋಗ್ಯ ವೃದ್ಧಿಸುತ್ತದೆ ಎಂದರು.
“ಮನಸ್ಸಿನ ದುಗುಡಗಳನ್ನು ನಮಗೆ ಸೂಕ್ತ ಎನಿಸುವ ವ್ಯಕ್ತಿಯ ಜೊತೆ ಹಂಚಿಕೊಂಡಾಗ ಮಾತ್ರ ಅವುಗಳಿಗೆ ಪರಿಹಾರ ಸಾಧ್ಯ. ನಮ್ಮ ಬದುಕಿನಲ್ಲಿ ಎದುರಾಗುವ ಪರಿಸ್ಥಿತಿಗಳಿಗೆ ನಾವು ಯಾವ ರೀತಿ ಸ್ಪಂದಿಸಬೇಕು ಎಂಬುದರ ಬಗ್ಗೆ ನಮಗೆ ಅರಿವಿರಬೇಕು. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಎಂಬುದು ಇದ್ದೇ ಇದೆ. ಅವುಗಳನ್ನು ಹುಡುಕುವ ತಾಳ್ಮೆ ಮೈಗೂಡಬೇಕು” ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಪ್ರತಿಯೊಂದು ವಿಚಾರಕ್ಕೂ ತಂತ್ರಜ್ಞಾನದ ಮೊರೆ ಹೋಗುವುದನ್ನು ನಿಲ್ಲಿಸಿ ತಮ್ಮ ಮೆದುಳಿಗೆ ಕೆಲಸ ಕೊಡಬೇಕು. ಹಾಗಾದಾಗ ಮಾತ್ರ ಮೆದುಳು ಚುರುಕಾಗಿ ಕಾರ್ಯ ನಿರ್ವಹಿಸಲು ಸಾಧ್ಯ. ಯುವಜನತೆ ಮನಸ್ಸಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಅನಿವಾರ್ಯತೆಯಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನಲ್ಲಿ ಪ್ರತಿ ವಿಷಯಕ್ಕೂ ವಿಷಯವಾರು ಸಂಘ ರಚಿಸಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಮನೋರಂಜನೆಯ ಉದ್ದೇಶಕ್ಕಲ್ಲ. ಬದಲಾಗಿ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಎಂದರು.
ರಸಾಯನಶಾಸ್ತ್ರ ವಿಭಾಗವು ಹಿಂದಿನಿಂದಲೂ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ ಆ ಯಶಸ್ಸನ್ನು ಮುನ್ನಡೆಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದರು. ವಿದ್ಯಾರ್ಥಿಗಳು ತಯಾರಿಸಿದ ‘ಸ್ಪಟಿಕ’ ಭಿತ್ತಿಪತ್ರಿಕೆ ಅನಾವರಣಗೊಳಿಸಲಾಯಿತು.
ಕಾಲೇಜಿನ ಉಪ ಪ್ರಾಂಶುಪಾಲೆ, ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥೆ ನಂದ ಕುಮಾರಿ ಕೆ.ಪಿ., ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಾದ ಮೌಲ್ಯ ಮತ್ತು ಸಿಂಚನ, ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರಶಾಂತ್ ಸ್ವಾಗತಿಸಿ, ಜೋಷ್ಣಾ ವಂದಿಸಿ, ಅನ್ವಿತಾ ಸೇರಾ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ