ನಮ್ಮೂರಿನಲ್ಲಿ ಮಳೆಗಾಲದಲ್ಲಿ ಪ್ರತಿಕೂಲ ಹವಾಮಾನದ ನಡುವೆಯೂ ಬೇಸಾಯದ ನಾಟಿ ಕೆಲಸಗಳನ್ನೆಲ್ಲಾ ಮುಗಿಸಿಕೊಂಡೆವು ಎಂದರೆ ಅದೊಂದು ದೊಡ್ಡ ಸಾಧನೆ ಮಾಡಿದಂತೆಯೇ ಸರಿ. ಸೌರಮಾನದ ವೃಷಭ ಮಾಸ ಅಂದರೆ ಬೇಸಗೆ ತಿಂಗಳಿನಲ್ಲೇ ಆರಂಭವಾದ ಆ ಕೃಷಿ ಚಟುವಟಿಕೆಯು ಮುಗಿಯುವಾಗ ಕರ್ಕಾಟಕ ಮಾಸ ಅಂದರೆ ಆಸಾಡಿ ತಿಂಗಳು ಬಂದಿರುತ್ತದೆ. ಸುಮಾರು ಎರಡು ತಿಂಗಳ ಕಾಲ ಮಳೆಯನ್ನೂ ಲೆಕ್ಕಿಸದೇ ಸರಿಯಾಗಿ ಊಟವನ್ನೂ ಮಾಡದೇ ನಿರಂತರವಾಗಿ ದುಡಿದ ರೈತರಿಗೆ ಆಗ ಸ್ವಲ್ಪ ವಿರಾಮ ಸಿಗುತ್ತದೆ. ಹೀಗಾಗಿ ಆ ಆಸಾಡಿ ತಿಂಗಳಿನ ಯಾವುದಾದರೂ ಒಂದು ದಿನ ಆಸಾಡಿ ಹಬ್ಬವನ್ನು ಆಚರಿಸುತ್ತಾರೆ. ಇದನ್ನು ಕೆಲವರು ನಾಗರಪಂಚಮಿಗೆ ಎಂಟು ದಿನ ಮೊದಲು ಆಚರಿಸಿದರೆ ಇನ್ನು ಕೆಲವರು ಸರಿಯಾಗಿ ಕರ್ಕಾಟಕ ಅಮಾವಾಸ್ಯೆಯ ದಿನವೇ ಆಚರಿಸುತ್ತಾರೆ.
ಈ ಆಸಾಡಿ ಹಬ್ಬದ ವಿಧಿ ವಿಧಾನಗಳಿಗೆ ಯಾವುದೇ ನಿರ್ದಿಷ್ಟ ನೀತಿ ನಿಯಮ ಎಂಬುದೇನೂ ಇರುವುದಿಲ್ಲ. ಕೆಲವರು ಅಂದು ನಮ್ಮೂರಿನ ಹಾಡಿಗಳಲ್ಲಿ ಬೆಳೆದಿರುವ ಕ್ಯಾನಿ ಗೆಂಡಿ (ಕೇನೆ ಗಡ್ಡೆ) ಯನ್ನು ಸಂಗ್ರಹಿಸಿ ತಂದು ಅದನ್ನು ಬೇಯಿಸಿ ತಯಾರಿಸಿದ ಉಂಡೆಗಳನ್ನು ತಿನ್ನುತ್ತಾರೆ. ಹೀಗಾಗಿ ಅವರು ಅದಕ್ಕೆ “ಕ್ಯಾನಿಗೆಂಡಿ ಹಬ್ಬ” ಎಂತಲೇ ಕರೆಯುತ್ತಾರೆ. ಇನ್ನು ಕೆಲವರು ಅಂದು ಕೆಸುವಿನ ಪತ್ರೊಡೆ ಮಾಡಿಕೊಂಡು ತಿನ್ನುತ್ತಾರೆ. ಒಟ್ಟಿನಲ್ಲಿ ಅದು ಮಳೆಗಾಲಕ್ಕೆ ಸರಿ ಹೊಂದುವ ತಿನಿಸನ್ನು ಮಾಡಿಕೊಂಡು ತಿನ್ನುವ ಹಬ್ಬ ಅಷ್ಟೇ.
ಇದಲ್ಲದೇ ಮಾಂಸಾಹಾರಿಗಳಲ್ಲಿ ಕೆಲವರ ಮನೆಯಲ್ಲಿ “ಜಕ್ಣಿ” ಆಚರಣೆಯೂ ಇರುತ್ತದೆ. ಜಕ್ಕಿಣಿ ಅಂದರೆ “ಯಕ್ಷಿಣಿ” ಎಂದರ್ಥ. ಈ ಹಿಂದೆ ಮರಣ ಹೊಂದಿದವರ ಪ್ರೇತಾತ್ಮಗಳಿಗೂ ಜಕ್ಣಿ ಎನ್ನುತ್ತಾರೆ. ಅವುಗಳನ್ನು ತೃಪ್ತಿಪಡಿಸುವ ಸಲುವಾಗಿ ಜಕ್ಣಿ ಆಚರಿಸುತ್ತಾರೆ. ಆಸಾಡಿ ತಿಂಗಳಿನ ಯಾವುದಾದರೂ ಒಂದು ದಿನ ರಾತ್ರಿ ಹೊತ್ತಿನಲ್ಲಿ ನೆಂಟರಿಷ್ಟರೆಲ್ಲ ಸೇರಿ ಮಾಂಸದ ಅಡುಗೆಗಳನ್ನು ತಯಾರಿಸಿ, ನಂತರ ಅವುಗಳನ್ನು ಅವರು ನಂಬಿದ ದೈವ, ಭೂತ, ಜಕ್ಣಿಗಳಿಗೆ ಅರ್ಪಿಸುತ್ತಾರೆ. ಬಳಿಕ ಎಲ್ಲರೂ ಸೇರಿ ಭೋಜನ ಮಾಡುವುದೇ ಜಕ್ಣಿ ಆಚರಣೆಯಾಗಿರುತ್ತದೆ. ಅವರಿಗೆ ಅದೇ ಆಸಾಡಿ ಹಬ್ಬವಾಗಿರುತ್ತದೆ.
ಹೀಗೆ ಬೇಸಾಯದ ನಿರಂತರ ಕೆಲಸದಿಂದ ದಣಿದವರು ಯಾವುದಾದರೂ ಒಂದು ದಿನ ವಿಶೇಷ ಭೋಜನ ಮಾಡುವುದೇ ಆಸಾಡಿ ಹಬ್ಬ ಹೊರತು ಯಾವುದೇ ನಿರ್ದಿಷ್ಟ ದೇವರ ಕುರಿತಾದ ಪೂಜೆಯ ಹಬ್ಬ ಇದಲ್ಲ.
- ಹರಿಕೃಷ್ಣ ಹೊಳ್ಳ, ಬ್ರಹ್ಮಾವರ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ