ಶ್ರೀ ವಿಬುಧೇಶ ತೀರ್ಥರು: ಬದುಕನ್ನು ಶಿಕ್ಷಣಕ್ಕಾಗಿಯೇ ವಿಶೇಷವಾಗಿ ಮೀಸಲಾಗಿಟ್ಟ ವಿಲಕ್ಷಣ ಯತಿ

Upayuktha
0






ಶ್ರೀ ವಿಬುಧೇಶ ತೀರ್ಥರ ಬದುಕಿಗೆ ಮೂರು ಆಯಾಮಗಳು. 1: ವ್ಯಕ್ತಿಯಾಗಿ ಬದುಕನ್ನು ಬಾಳಿದ ರೀತಿ. 2: ಸಂನ್ಯಾಸ ಬದುಕನ್ನು ಸ್ವೀಕರಿಸಿದ ಕ್ರಮ. 3: ಶಿಕ್ಷಣಕ್ಕಾಗಿ ಬದುಕನ್ನು ಮೀಸಲಿಟ್ಟ ಬಗೆ. 10ನೇ ವಯಸ್ಸಿಗೇ ಸಂನ್ಯಾಸ ದೀಕ್ಷೆ ಪಡೆದಿದ್ದರಿಂದ ಬಾಲ್ಯದ ದಿನಗಳನ್ನು ಮಾತ್ರ ಅವರನ್ನು ಸಾಮಾನ್ಯ ಮನುಷ್ಯನಂತೆ ಗ್ರಹಿಸುವಂತೆ ಮಾಡುತ್ತವೆ. ಬಾಲ್ಯದ ಸ್ವಭಾವದ ಚಹರೆ ಅಥವಾ ಚಿಹ್ನೆಗಳೇ ಜೀವನದುದ್ದಕ್ಕೂ ಪ್ರಧಾನವಾಗಿ ಕಾಣಿಸುವುದರಿಂದ ತನ್ನೊಳಗಿನ ಆಸಕ್ತಿ ಮತ್ತು ಅಭಿರುಚಿಯ ಕ್ಷೇತ್ರವನ್ನು ಸಂನ್ಯಾಸಿಯ ಬದುಕಿನ ಇತಿಮಿತಿಯಲ್ಲೇ ಸಾಧಿಸುತ್ತಾ ಉನ್ನತಿಯನ್ನು ಕಂಡರು. ಹಾಗೆಯೇ, ಮಾತೃಭೂಮಿಯ ಬಗ್ಗೆ ಶ್ರೀಗಳಲ್ಲಿದ್ದ ಶ್ರೇಷ್ಠತೆಯ ತುಡಿತ ಸಂನ್ಯಾಸಿಯಾದ ಮೇಲೂ ವಿಸ್ತಾರವನ್ನು ಪಡೆಯಿತು. ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿದ್ದ ಅವರ ರಾಷ್ಟ್ರೀಯ ಬದ್ಧತೆಯು ಸೋನಿಯಾ ಗಾಂಧಿ ಪ್ರಧಾನಿಯಾದರೆ ದೇಶವನ್ನು ಬಿಡುತ್ತೇನೆ ಎನ್ನುವಲ್ಲಿಯವರೆಗೂ ವಿಸ್ತರಿಸಿತ್ತು.


ರಾಷ್ಟ್ರ ಎಲ್ಲಕ್ಕಿಂತಲೂ ದೊಡ್ಡದೆಂಬುದು ಶ್ರೀಗಳ ಪ್ರಖರ ಮಾತು. ತಾನು ಕಟ್ಟಿ ಬೆಳೆಸಿದ ವಿದ್ಯಾಸಂಸ್ಥೆಗಳು ರಾಷ್ಟ್ರದ ಸಂಪನ್ಮೂಲಗಳೆಂದೇ ಯಾವತ್ತೂ ಭಾವಿಸಿದ್ದ ಶ್ರೀಗಳ ಶೈಕ್ಷಣಿಕ ಪರಿಕಲ್ಪನೆಗಳು ರಾಷ್ಟ್ರೀಯತೆಯನ್ನು ಪ್ರತಿನಿಧಿಸುತ್ತದೆ. ಇಂಗ್ಲಿಷ್ ಮಾಧ್ಯಮ ಶಿಕ್ಷಣದ ಅನಿವಾರ್ಯತೆ ಮತ್ತು ಮಹತ್ತ್ವದ ಬಗ್ಗೆ ಸರ್ಕಾರಗಳು ಈಗ ಎಚ್ಚರಗೊಂಡು ಮುಂದಡಿಯಿಟ್ಟಿವೆ. ಆದರೆ, ಸುಮಾರು 50 ವರ್ಷಗಳ ಹಿಂದೆಯೇ ಶ್ರೀಗಳು ಜಗತ್ತಿನ ಜ್ಞಾನವನ್ನು ಪಡೆಯಬೇಕು, ಸಮಕಾಲೀನ ಜಗತ್ತಿನೊಂದಿಗೆ ನಮ್ಮ ಮಕ್ಕಳು ಸ್ಪರ್ಧಿಸಬೇಕು. ಅದಕ್ಕೆ ಇಂಗ್ಲಿಷ್ ಬೇಕೇ ಬೇಕು ಎಂದು ಬಲವಾಗಿ ನಂಬಿದ್ದರು. ಆರಂಭದಲ್ಲಿ ತಾನೂ ಬಟ್ಲರ್ ಇಂಗ್ಲಿಷನ್ನೇ ಮಾತಾಡುತ್ತಿದ್ದೆ ಅಂತ ಒಮ್ಮೆ ತಮಾಷೆಗೆ ಹೇಳಿದ್ದರು. ಯಾಕೆ ಹಾಗೆ ಹೇಳಿದರು ಅಂತ ನಾನು ಆಲೋಚಿಸಿದಾಗ ನಾಕು ದಿನ ಬಿಟ್ಟು ಅರ್ಥವಾಗಿತ್ತು. ಯಾಕೆಂದರೆ, ಎದುರುಗಡೆ ಇರುವ ಯಾವುದೇ ಶಿಕ್ಷಕರು ಇಂಗ್ಲಿಷಿನಲ್ಲಿ ಮಾತಾಡುವಾಗ ತಡವರಿಸುತ್ತಿದ್ದರೆ ಅವರಿಗೆ ಆತ್ಮವಿಶ್ವಾಸ ಮತ್ತು ಧೈರ್ಯ ತುಂಬುವುದಕ್ಕಾಗಿ ಅವರು ಹೀಗೆ ಹೇಳುತ್ತಿದ್ದರು.


ಅವರ ಪ್ರಕಾರ, ಯಾವುದೇ ಶಿಕ್ಷಣದ ಉದ್ದೇಶ ಮತ್ತು ಗುರಿ ಮಗುವಿನ ಆತ್ಮವಿಶ್ವಾಸವನ್ನು ವೃದ್ಧಿಸುವುದು. ಅಂತರಂಗ ಮತ್ತು ಬಹಿರಂಗಗಳನ್ನು ಸಮೃದ್ಧಗೊಳಿಸುವುದು. ಯಾವ ಕಾಲೇಜು, ವಿಶ್ವವಿದ್ಯಾಲಯದಲ್ಲಿ ಪದವಿ, ಡಾಕ್ಟರೇಟ್ ಪಡೆಯದ, ಶೈಕ್ಷಣಿಕ ಮನೋವಿಜ್ಞಾನವನ್ನು ಓದಿಲ್ಲದ, ಸ್ವಾಧ್ಯಾಯ ಮತ್ತು ಜೀವನಾನುಭವವನ್ನೇ ಪ್ರಾಯೋಗಿಕವಾಗಿ ಸಾಂದರ್ಭಿಕವಾಗಿ ಬಳಸಿಕೊಳ್ಳುತ್ತಾ ಜೀವನಿಷ್ಠಮೌಲ್ಯಗಳನ್ನಾಗಿ ತನ್ನರಿವಿನೊಳಗೆ ಉತ್ಪತ್ತಿ ಮಾಡಿಕೊಂಡ ಶ್ರೀಗಳ ಶಿಕ್ಷಣದ ಪರಿಕಲ್ಪನೆ. ಇದರಿಂದ ಪ್ರತಿಯೊಂದು ಕ್ರಿಯೆಗೂ ತಕ್ಷಣಕ್ಕೆ react ಮಾಡಲು ಅವರಿಗೆ ಸಾಧ್ಯವಾಗಿತ್ತು. ಈ ರೀತಿ ತಕ್ಷಣಕ್ಕೆ react ಮಾಡುವುದಿದೆಯಲ್ಲ ಅದು ಉತ್ತಮ ನಾಯಕತ್ವದ ಲಕ್ಷಣ. ತಕ್ಷಣಕ್ಕೆ ಪ್ರತಿಕ್ರಿಯೆ ಇಲ್ಲವಾಗುವುದು ಭ್ರಷ್ಟಾಚಾರಕ್ಕೆ ದಾರಿಯಾಗುತ್ತದೆ, ಅದೇ ಭ್ರಷ್ಟಾಚಾರವಾಗುತ್ತದೆ. 

           

ಇಂಗ್ಲಿಷ್ ಜ್ಞಾನ ಹೆಚ್ಚಲು ಇಂಗ್ಲಿಷ್ ಕಾದಂಬರಿ, ಸಣ್ಣಕತೆಗಳನ್ನು ಓದಲು ಪ್ರೇರಣೆ, ಪ್ರೋತ್ಸಾಹವನ್ನು ಮಾಡುತ್ತಿದ್ದರು. ಎದುರಿನವರಿಗೆ ಶ್ರೀಗಳ ಮಾತುಗಳಲ್ಲಿ ಒಮ್ಮೆಲೇ ಒಂದು ತರದ ಭಯವಾಗುತ್ತಿತ್ತು. ಕಾರಣ ಅವರ ಸಿಡುಕು, ಮುಂಗೋಪದ ಸ್ವಭಾವ. ಜನ್ಮತಃ ಇದ್ದ ಅವರ ಸಿಡುಕು, ಮುಂಗೋಪಕ್ಕೆ ಸಾತ್ವಿಕದ ಸಂಸ್ಕಾರವಿತ್ತು, ತುಂಬು ಪ್ರೀತಿಯ ಕಾಳಜಿಯಿತ್ತು. ಮಕ್ಕಳೊಂದಿಗೆ ಮಕ್ಕಳಂತೆ ವಿದ್ವಾಂಸರೊಂದಿಗೆ ವಿದ್ವಾಂಸರಂತೆ ಅವರು ಸಂನ್ಯಾಸ ಜೀವನ ಕ್ರಮದಲ್ಲಿದ್ದರೂ ಎಲ್ಲ ಬಗೆಯ ತಾದಾತ್ಮ್ಯಕ್ಕೆ ಅಡ್ಡಿಯಾಗದಂತೆ ಒಂದು ನಿರ್ದಿಷ್ಟ ಅಂತರವನ್ನು ಕಾಯ್ದುಕೊಂಡಿದ್ದರು. ಮಹತ್ವದ ವಿಚಾರವೇನೆಂದರೆ, ಸಾಮಾಜಿಕವಾಗಿ ಎರಡು ನೆಲೆಗಳಲ್ಲಿ ಅವರನ್ನು ಸ್ಥಾಪಿಸಿಕೊಳ್ಳಲು ಅವರಿಗೇ ಸಾಧ್ಯವಾಗಿದ್ದು ಅವರ ಶೈಕ್ಷಣಿಕ ಪರಿಕಲ್ಪನೆಗಳಿಂದಲೇ! ಒಂದು: ಅವರು ಗಳಿಸಿದ ಯಶಸ್ಸು. ಶ್ರೀಗಳ ಶೈಕ್ಷಣಿಕ ಯಶಸ್ಸನ್ನು ಸಮಾಜವೇ ನಿರ್ಧರಿಸಿದೆ. ಇನ್ನೊಂದು: ತನ್ಮೂಲಕ ಅವರು ಪಡೆದ ಸಾರ್ಥಕ್ಯ. ಇದು ಶ್ರೀಗಳ ಆಂತರಂಗದ ವಿಚಾರ. ಅದನ್ನು ಶ್ರೀಗಳೇ ಕಂಡುಕೊಂಡಿದ್ದಾರೆ.


ತನ್ನ ವಿದ್ಯಾಲಯಗಳ  ಸ್ಟ್ಯಾಂಡರ್ಡ್ ಬಗ್ಗೆ ಅವರಲ್ಲಿ ಯಾವತ್ತೂ ಸಂದೇಹವಿರಲಿಲ್ಲ, ಅಸಮಾಧಾನ ವಿರಲಿಲ್ಲ. ಇನ್ನೂ ಎತ್ತರಕ್ಕೇರಬೇಕೆಂಬ ಹಂಬಲವಿತ್ತು, ಕನಸಿತ್ತು. ಆ ಕನಸನ್ನು ಎಲ್ಲರಲ್ಲೂ ಮೂಡಿಸುತ್ತಾ ತಾವು ಮುಂದಾಗಿ ಸಾಗಿದವರವರು. ತಪ್ಪನ್ನಾಗಲಿ, ಪ್ರಮಾದವನ್ನಾಗಲಿ ಅವರು ಸ್ವೀಕರಿಸುವ ರೀತಿಯಲ್ಲೇ ಅವರ ಜಡ್ಜ್ ಮೆಂಟ್ ಗೊತ್ತಾಗಿ ಬಿಡುತ್ತಿತ್ತು. ಒಮ್ಮೆ ನೋ ಎಂದರೆ ಮುಗಿದೇ ಹೋಯಿತು. ಬ್ರಹ್ಮನೇ ಬಂದರೂ ಯೆಸ್ ಎನ್ನಿಸಲು ಸಾಧ್ಯವಿಲ್ಲದ ಕಾಠಿಣ್ಯ! Of course ಅಂಥ ದೃಢ ತೀರ್ಮಾನವನ್ನು ಅವರು ತೆಗೆದುಕೊಳ್ಳುವುದು ತೀರಾ ಅಪರೂಪದಲ್ಲಿ ಅಪರೂಪ. ಅವರ Judgement ಮಾತ್ರ ಯಾವತ್ತೂ ಸುಳ್ಳಾಗುತ್ತಿರಲಿಲ್ಲ. ದೂರದೃಷ್ಟಿ ಪರ್ಫೆಕ್ಟ್. ಒಬ್ಬನ ಯೋಗ್ಯತೆ ಮತ್ತು ಸಾಮರ್ಥ್ಯವನ್ನು ಕ್ಷಣಮಾತ್ರದಲ್ಲಿ ಅಳೆದು ತೂಗಿನೋಡಿ ಕೆಲಸವನ್ನು ಕೊಡುತ್ತಿದ್ದರು, ಇಲ್ಲ ನೇಮಿಸುತ್ತಿದ್ದರು. ಯಶಸ್ಸಿನ ಹಿಂದೆ ಓಡುವವನು ಯಾವತ್ತೂ ಉಳಿದವರಿಗಿಂತ ಮುಂದಿರುತ್ತಾನೆ. ಶ್ರೀಗಳ ಚಿಂತನೆ ಹತ್ತು ವರ್ಷಗಳ ಅನಂತರದ ದಿನಗಳದ್ದು. ಅಷ್ಟು ಎತ್ತರದ ದೂರಗಾಮಿತ್ವ! ಅಂತರಂಗದಲ್ಲಿ ಅವರು ಭಾವುಕರು. ಅಂತೆಯೇ ತಾನು ಬದುಕುವ ಸುತ್ತಲ ಜಗತ್ತಿನೊಂದಿಗೆ ಒಡನಾಟ ಮುದವಾಗಿರಿಸಿ ಕೊಂಡಿದ್ದರು. ಆದರೆ ಅದನ್ನು ವ್ಯಕ್ತಪಡಿಸುವಲ್ಲಿ ನೇರಮಾರ್ಗ, ದಿಟ್ಟತೆ, ನಿಷ್ಠುರತೆ! ಒಂಥರಾ ಹುಲಿಯ ಮುದ್ದು! 


ಮಗುವಿನಂಥ ಮುಗ್ಧತೆ ಅವರಲ್ಲಿತ್ತು. ತರಗತಿಗಳಿಗೆ ಬಂದು ಪಾಠವನ್ನು ಮಾಡುತ್ತಿದ್ದರು. ಯಾರೂ ಸಹಜವಾಗಿ ಸುಲಭವಾಗಿ ಉತ್ತರಿಸಲು ಸಾಧ್ಯವಾಗದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅವರೊಮ್ಮೆ, ಮಗು‌ ದೊಡ್ಡವರಿಗೆ ಯಾವ ಪಾಠವನ್ನು ಕಲಿಸುತ್ತದೆಂದು ನನ್ನದೇ ತರಗತಿಯಲ್ಲಿ ಕೇಳಿದ್ದರು. ಮಕ್ಕಳೆಲ್ಲಾ ಮನಸಿಗೆ ತೋಚಿದಂತೆ ಉತ್ತರಿಸಿದರು. ಎಲ್ಲರದ್ದೂ ಮುಗಿತು. ಪಕ್ಕದಲ್ಲೇ ಇದ್ದ ನನ್ನನ್ನು ಕೇಳಿದರು. ನಾನು ಮುಗ್ಧತೆ ಅಂದೆ. ಅಲ್ಲ ಅಂದರು. ಮಗು ದೊಡ್ಡವರಿಗೆ ನಗುವುದನ್ನು ಕಲಿಸುತ್ತದೆ ಅಲ್ವಾ ಅಂದರು. ಅರೆಕ್ಷಣ ಶಾಂತವಾಗಿ ಆಲೋಚಿಸಿದ ಮಕ್ಕಳಿಗೆ, ಅರೆ, ಹೌದಲ್ವಾ, ನಮಗಿದು ಹೊಳಿಲೇ ಇಲ್ಲವಲ್ಲ ಅಂತನಿಸಿ ಎಲ್ಲರ ಮುಖದಲ್ಲಿ ನಗು ಮೂಡಿತು. ಪ್ರತಿಯೊಬ್ಬರೂ ನಗುತ್ತಲೇ ಮಗುವನ್ನು ಎತ್ತಿಕೊಳ್ಳುವುದು. ಅಂದರೆ ಮಗು ನಮಗೆ ನಗುವ ಪಾಠವನ್ನು ಕಲಿಸುತ್ತದೆನ್ನುತ್ತಾ ಶ್ರೀಗಳು. ಅಷ್ಟು ಸೂಕ್ಷ್ಮ ಸಂವೇದನಾ ಶಕ್ತಿ! ಇಂಥ ಕೆಲವು ಸಂಗತಿಗಳು ಅವರು ನನ್ನ ತರಗತಿಗೆ ಬಂದ ಸಂದರ್ಭಗಳಲ್ಲಿ, ಒಡನಾಟಗಳಲ್ಲಿ ಆಗಿವೆ. ಶ್ರೀಗಳ ಒಡನಾಟದಲ್ಲಿದ್ದವರಿಗೆ ಇಂಥ ಅನುಭವಗಳು ಯಥೇಚ್ಛ! ಈ ಶಕ್ತಿಯೇ ಅವರ ಶಿಕ್ಷಣದ ಅಂತರಂಗದ ಆಕೃತಿಗಳನ್ನು ರೂಪಿಸಿವೆ. ಸ್ವಾಧ್ಯಯನ ಶ್ರೀಗಳಲ್ಲಿತ್ತು. ಶಿಕ್ಷಣದ ಆಂತರಿಕ ವಿನ್ಯಾಸಗಳು ಸಾರುವ ಅಂತರಂಗದ ಮಾರ್ದವತೆ, ಪ್ರಕೃತಿಯೊಂದಿಗಿನ ಸಂಬಂಧ, ಭಾವ ಪ್ರಪಂಚದ  ವಿಸ್ತಾರ- ಇವುಗಳು ಶ್ರೀಗಳಲ್ಲಿ ಢಾಳವಾಗಿದ್ದವು.


ಓರ್ವ ಸಂನ್ಯಾಸಿಯಾಗಿ ಮಠದೊಳಗೆ ವಿದ್ಯಾರ್ಥಿಗಳಿಗೆ ವೇದಾಧ್ಯಯನ ಪಾಠಶಾಲೆಗಳನ್ನು ನಡೆಸುತ್ತಿದ್ದ ಶ್ರೀಗಳು, ಬ್ರಿಟಿಷರನ್ನು ವಿರೋಧಿಸುತ್ತಲೇ ಮೆಕಾಲೆ ಬುನಾದಿಯ ಇಂಗ್ಲಿಷ್ ಶಿಕ್ಷಣವನ್ನು ಬೆಂಬಲಿಸಿದ್ದರು. ಕನ್ನಡ ಮೂಲದ ಕೆಲವು ಇಂಗ್ಲಿಷ್ ಸ್ಕಾಲರ್ ಗಳನ್ನು ಅವರು ಮೆಚ್ಚಿದ್ದರು ಕೂಡ. ಅನಂತಮೂರ್ತಿಯವರ ಇಂಗ್ಲಿಷ್ ಪ್ರಭುತ್ವವನ್ನು ಮೆಚ್ಚಿ ನನ್ನಲ್ಲಿ ಅವರ‌ ಬಗ್ಗೆ ಸುಮಾರು ಅರ್ಧ ಗಂಟೆ ಮಾತಾಡಿದ್ದರು. ಅನಂತಮೂರ್ತಿಯವರ ಸಂಸ್ಕಾರವನ್ನು ಉಡುಪಿಯಲ್ಲಿ ವಿರೋಧಿಸಿದಾಗ ಅನಂತಮೂರ್ತಿಯವರನ್ನು ಸಮ್ಮಾನಿಸಿದ ಶ್ರೀಗಳು, ತ್ರೈಮಾಸಿಕ ಶಿಕ್ಷಣ ಪದ್ಧತಿಯನ್ನು ಅನಂತಮೂರ್ತಿ ಬೆಂಬಲಿಸಿದ್ದನ್ನು ತಪ್ಪೆಂದೂ ಹೇಳಿದ್ದರು. ಇಂಗ್ಲಿಷ್ ಪ್ರಿಯರಾದ ಶ್ರೀಗಳಿಗೆ ಕನ್ನಡ ಸಾಹಿತ್ಯದಲ್ಲೂ ಅವರಿಗೆ ಒಳ್ಳೆಯ ಜ್ಞಾನವಿತ್ತು. ಮಾಸ್ತಿಯವರನ್ನು ಬಹುವಾಗಿ ಮೆಚ್ಚಿದ್ದರು. ಕಾರಂತರಲ್ಲಿರುವ ಜ್ಞಾನವನ್ನು ಹೊಗಳಿದ್ದರು. ಇತಿಹಾಸ, ಪೌರಾಣಿಕ ಸಾಹಿತ್ಯವನ್ನು ಓದುವಂತೆ ಆಧುನಿಕ ಸಾಹಿತ್ಯವನ್ನೂ ಓದುತ್ತಿದ್ದರು. 


ಇಂದಿನ ಆಧುನಿಕ ಶಿಕ್ಷಣ ಬ್ರಿಟಿಷರದ್ದು. ಅದನ್ನೇ ನಾವು ನಿತ್ಯಜೀವನದಲ್ಲೂ ಅನುಸರಣೆ ಮತ್ತು ಅನುಕರಣೆ ಮಾಡುತ್ತಿದ್ದೇವೆ. ಇದೊಂದು ಬಗೆಯಲ್ಲಿ ದಾಸ್ಯಮನೋಭಾವವಲ್ಲವೇ‌ ಎಂದಿದ್ದೆ ನಾನು. ಜಗತ್ತಿನ ಜ್ಞಾನವನ್ನು ಇಂಗ್ಲಿಷಿನಿಂದಲೇ ಪಡೆಯಲೇಬೇಕು. ಆದರೆ ಅವರ ಸಂಸ್ಕೃತಿಯನ್ನಲ್ಲ ಎಂದು ಸಿಟ್ಟಿನಿಂದಲೇ ಆಡಿದ್ದರು. ತನ್ನ ವಿದ್ಯಾಸಂಸ್ಥೆಗಳಲ್ಲಿ ನಿತ್ಯವೂ ಬೆಳಗ್ಗೆ ಮತ್ತು ಸಂಜೆ ಭಗವದ್ಗೀತೆಯನ್ನು ಹೇಳಿಕೊಡುತ್ತಿದ್ದರು. ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ ನೀಡಬೇಕೆಂಬ ಶ್ರೀಗಳು ಕನ್ನಡ, ಸಂಸ್ಕೃತ ಮತ್ತು ಹಿಂದಿಯ ಬಗ್ಗೆ ಅಭಿಮಾನ ಇದ್ದವರೇ ಆಗಿದ್ದರು. ಸಂಸ್ಕೃತ ಅವರಿಗೆ ಕರತಲಾಮಲಕ. ಕನ್ನಡದಲ್ಲೂ ಅಷ್ಟೇ ಪ್ರಭುತ್ವವಿತ್ತು. ಛಂದಸ್ಸಿನಲ್ಲಿ ಹಿಡಿತವಿತ್ತು. ನನ್ನ ತರಗತಿಯಲ್ಲಿ ಅಲಂಕಾರ ಪಾಠ ಮಾಡಿದ್ದರು. ಎಲ್ ಕೆಜಿಯಿಂದ ಸ್ನಾನಕೋತ್ತರದವರೆಗೆ ಪ್ರತಿ ತರಗತಿಗೂ ಹೋಗಿ ಮಕ್ಕಳ ಹತ್ತಿರ ಮಾತಾಡುವ ಅಭ್ಯಾಸ ಅವರಲ್ಲಿ ಕೊನೆಯವರೆಗೂ ಇತ್ತು. ಪ್ರತಿ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದೆಂಬ ತುಡಿತ ಅವರದ್ದು. ವಿದ್ಯಾರ್ಥಿಗಳನ್ನು ಸೇರಸಿಕೊಳ್ಳುವಾಗ ಯಾವುದೇ ರಾಜಕೀಯ ಲಾಭಿಗೆ ಮಣಿಯುತ್ತಿರಲಿಲ್ಲ. ಎಷ್ಟೇ ದೊಡ್ಡ ಇನ್ ಪ್ಲೂಯೆನ್ಸ್ ಇದ್ದರೂ ದರಕರಿಸುತ್ತಿರಲಿಲ್ಲ. ಸಂದರ್ಶನವನ್ನು ಎದುರಿಸಲೇಬೇಕು. ಪ್ರತಿಭೆಯಿದ್ದರೆ ಸೀಟು ಪಡೆಯುತ್ತಾನೆಂದು ನೇರವಾಗಿಯೇ ಹೇಳಿಬಿಡುವ ನಿಷ್ಠುರತೆ ಅವರದು!


ಇಂಗ್ಲಿಷ್ ಶಿಕ್ಷಣವು ಭವಿಷ್ಯದ ಭಾರತವನ್ನು ಗಟ್ಟಿಯಾಗಿ ಕಟ್ಟಿಕೊಡಲು ಸಾಧ್ಯವೆಂದು ಶ್ರೀಗಳು ನಂಬಿದ್ದರೂ ಕೇವಲ ಸಾಕ್ಷರತೆಯನ್ನು ಹೆಚ್ಚಿಸುವ ಉದ್ದೇಶ ಮತ್ತು ಗುರಿ ಅವರದಲ್ಲ. ಅಗತ್ಯವಾದ  ಮೂಲಭೂತ ಸೌಕರ್ಯಗಳೊಂದಿಗೆ ಶಾಲೆ ನಿರ್ಮಾಣವಾಗಬೇಕು. ಕೇವಲ ಸಾಕ್ಷರತೆಯ ಕ್ರಮದಲ್ಲಿ ಅವರು ಶೈಕ್ಷಣಿಕ ಪ್ರಗತಿಯನ್ನು ನಿರ್ಧರಿಸುತ್ತಿರಲಿಲ್ಲ. ವಿದ್ಯಾರ್ಥಿಗಳ ಜ್ಞಾನದ ಸಮಗ್ರತೆ-ಸಮೃದ್ಧತೆಯನ್ನು ನಿರೀಕ್ಷಿಸುತ್ತಿದ್ದರು. ಪಠ್ಯಕ್ಕೆ ಎಷ್ಟು ಮಹತ್ತ್ವವನ್ನು ನೀಡುತ್ತಿದ್ದರೋ ಪಠ್ಯೇತರ ಸಾಧನೆಗೆ ಪೂರಕವಾಗಿ ಮೂಡಿಸುವ ಸಲುವಾಗಿ ಕ್ರೀಡೆ, ಟೈಲರಿಂಗ್ ಕಡೆಗೂ ಪ್ರಾಮುಖ್ಯತೆಯನ್ನು ನೀಡಿದ್ದರು. ಪಠ್ಯೇತರ ಚಟುವಟಿಕೆಗಳು ಪಠ್ಯಕ್ಕೆ ಪೂರಕವಾಗಿರಬೇಕೆಂಬ ಅವರ ಶೈಕ್ಷಣಿಕ ಪರಿಕಲ್ಪನೆಗಳಲ್ಲಿ ಬಹುದೊಡ್ಡ ಕನಸಿತ್ತು. ಬ್ರಿಟಿಷ್‌ ಪ್ರಜಾಪ್ರಭುತ್ವ ವ್ಯವಸ್ಥೆಗಿಂತ ಭಿನ್ನವಾದ ಪ್ರಜಾಪ್ರಭುತ್ವ ಅದೂ ಸಂಪೂರ್ಣವಾಗಿ ಭಾರತೀಯತೆಯ ಚಿಂತನೆಯದ್ದಾಗಿರಬೇಕು ಎಂದಿದ್ದರು. ತಾಂತ್ರಿಕ ಶಿಕ್ಷಣ, ವೃತ್ತಿಪರ ಶಿಕ್ಷಣವನ್ನೂ ಗಂಭೀರವಾಗಿ ಆಲೋಚಿಸಿದ್ದರು. ಆದರೆ ಪ್ರಾಥಮಿಕ ಶಿಕ್ಷಣವೇ ಎಲ್ಲದಕ್ಕೂ ಮೂಲಬೇರು. ಉನ್ನತ ವ್ಯಾಸಂಗಕ್ಕೆ ಬೇಕಾದ ಈ ಮೂಲಬೇರನ್ನು ಭದ್ರಗೊಳಿಸುವುದರಲ್ಲಿಯೇ ಅವರು ಹೆಚ್ಚು ಗಮನವನ್ನು ನೀಡಿದರು. ಕೇವಲ ಭಾವುಕತೆಯ ಅವರಲ್ಲಿರಲಿಲ್ಲ. ವಾಸ್ತವವನ್ನು ಅರ್ಥೈಸಿಕೊಳ್ಳುವ ಅವರ ಸಾಮರ್ಥ್ಯ ಅದ್ಭುತವಾಗಿತ್ತು. ತನ್ನ ಮಿತಿಯನ್ನೆಂದೂ ಮೀರಲಿಲ್ಲವಾದ್ದರಿಂದ ತಾಂತ್ರಿಕ ಶಿಕ್ಷಣಕ್ಕೆ ಒಲವಿದ್ದರೂ ಅವರು ಕೈಹಾಕಲಿಲ್ಲ.


ದೇಶದ ಭವಿಷ್ಯವನ್ನು ನಿರ್ಧರಿಸುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಕ್ಕೇ ಹೆಚ್ಚು ಒತ್ತು ಕೊಟ್ಟರು. ಅದರ ಪರಿಣಾಮವಾಗಿ ದೆಹಲಿ, ಮುಂಬೈ, ಬೆಂಗಳೂರು, ಮಲೆನಾಡು, ಕರಾವಳಿಯ ಭಾಗಗಳಲ್ಲಿ ವಿದ್ಯಾಸಂಸ್ಥೆಗಳನ್ನು ಆರಂಭಿಸಿದರು. ಮನಸ್ಸು ಮಾಡಿದರೆ ಅವರಿಂದ ಇಂಜನಿಯರಿಂಗ್ ಕಾಲೇಜನ್ನು ತೆರೆಯುವುದು ಅಸಾಧ್ಯವಾಗಿರಲಿಲ್ಲ! ತನ್ನ ವಿದ್ಯಾಸಂಸ್ಥೆಗಳಲ್ಲಿ ಕಾರ್ಪೊರೇಟ್ ಶಿಕ್ಷಣ ಪ್ರಪಂಚದ ಕರಿನೆರಳು ಬೀಳದಂತೆ ಕಾಪಿಟ್ಟರು. ಹಣ ಮಾಡುವುದು ಅವರ ಧ್ಯೇಯವೇ ಅಲ್ಲ‌. ಮಕ್ಕಳಿಂದ ಪಡೆದ ಹಣ ಮಕ್ಕಳ ಶ್ರೇಯೋಭಿವೃದ್ಧಿಗೆ ಮೀಸಲು! ಮಕ್ಕಳ ಸರ್ವತೋಮುಖ ಶೈಕ್ಷಣಿಕ ಪ್ರಗತಿಯನ್ನು ಮಾತ್ರ ಲಕ್ಷ್ಯವಿರಿಸಿ ಒಂದೊಂದೇ ಪರಿಕಲ್ಪನೆಯನ್ನು ಕಟ್ಟಿದರು. ಹೀಗಾಗಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸುವುದು ಅವರಿಂದ ಸಾಧ್ಯವಾಯಿತು. ಶ್ರೀಗಳು ಪ್ರಚಾರಪ್ರಿಯರಲ್ಲ, ಅವಕಾಶವಾದಿಗಳಲ್ಲ. ಯಾರನ್ನೂ ಯಾವುದನ್ನೂ use and throw ಮನಸ್ಥಿತಿಯಲ್ಲಿ ಒದಗಿಸಿಕೊಂಡವರಲ್ಲ. ಆಗಲ್ಲ ಅಂತ ಒಮ್ಮೆ ಮನಸಿಗೆ ಬಂದರೆ ಮುಗಿತು, ಮತ್ತೆಂದೂ ಸ್ವೀಕರಿಸಿದ ಹಠ! ತಾನಿರುವಂತೆಯೇ ತನ್ನನ್ನು ಸಮಾಜ ಒಪ್ಪಬೇಕು. ಯಾರೇ ಆಗಲಿ ಆತ್ಮಸಂಮಾನವನ್ನು ಮರೆತು ತನಗೆ ನಮಸ್ಕರಿಸಬಾರದು. ವ್ಯಕ್ತಿ ತುಷ್ಟೀಕರಣ ಸಲ್ಲ. ಯಾರನ್ನೂ ಅವರು ಓಲೈಸಲಿಲ್ಲ. ಯಾರಾದರೂ ಓಲೈಸುವಂಥ ನಾಟಕ ಮಾಡಿದರೆ ಸಹಿಸುತ್ತಿರಲಿಲ್ಲ. ಸರಳತನ ಅವರ ಇನ್ನೊಂದು ವ್ಯಕ್ತಿ ವೈಶಿಷ್ಟ್ಯ. ಜರತಾರಿಯ ಕಾವಿಯನ್ನು ಅವರು ಉಡಲಿಲ್ಲ. ಕೊನೆಯ ಕೆಲವು ವರ್ಷಗಳ ಹಿಂದೆ ಅವರು ಇಂಡಿಗೋ ಕಾರು ಖರೀದಿಸಿದ್ದು ಬಿಟ್ಟರೆ ಓಮಿನಿಯಲ್ಲೇ ಓಡಾಡಿದರು. ಬೆಂಝ್ ಕಾರನ್ನು ಕೊಡುತ್ತೇವೆಂದು ಅವರ ಅಭಿಮಾನಿಗಳು ಹೇಳಿದಾಗಲೂ ಸ್ವೀಕರಿಸಲಿಲ್ಲ. 


ಸಂನ್ಯಾಸಿಯಾಗಿ, ಶಿಕ್ಷಣ ಚಿಂತಕರಾಗಿ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಸಹಭಾಗಿತ್ವದ ಎಚ್ಚರದೊಂದಿಗೆ ಆರೋಗ್ಯ, ಲಿಂಗ ಸಮಾನತೆ, ಸೆಕ್ಯುಲರ್, ಮನೋಭಾವ, ಬೌದ್ಧಿಕ ಆಕಾಂಕ್ಷೆ ಮತ್ತು ಆರ್ಥಿಕ ಪ್ರಗತಿ, ವಿನಿಯೋಗತ್ವದ ತಾತ್ವಿಕ ಪರಿಕಲ್ಪನೆ- ಮುಂತಾದ ಆಕೃತಿಗಳಿಂದ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳನ್ನು ಸಂಪನ್ನಗೊಳಿಸಿದವರು ಶ್ರೀಗಳು. ಸ್ವಾತಂತ್ರ್ಯೋತ್ತರದ ರಾಷ್ಟ್ರೀಯ ಶಿಕ್ಷಣ ನೀತಿಗಳನ್ನು ಬೆಂಬಲಿಸಿದರು. ತರಗತಿಯಲ್ಲಿ ಟೇಬಲ್ ಇರಬಾರದು, ಸಣ್ಣ ತರಗತಿಗಳಿಗೆ ಶಿಕ್ಷಕರು ಕೋಲನ್ನು, ಸ್ಕೇಲನ್ನು ಒಯ್ಯಬಾರದು, ಒಯ್ಯುವ ಅನಿವಾರ್ಯತೆ ಇದ್ದಾಗಲೂ ಸ್ಕೇಲನ್ನು ತೋರಿಸಿ ಪಾಠ ಮಾಡಬಾರದು, ಫ್ರೀ ಇದ್ದಾಗ ಶಿಕ್ಷಕರು ಹರಟುವಂತಿಲ್ಲ. ಮುಂದಿನ ತರಗತಿಗೆ ಪಾಠ ಸಂಬಂಧಿತ ಸಿದ್ಧತೆಗಾಗಿ ಲೈಬ್ರರಿಗೆ ಹೋಗಬೇಕು. ಶಿಕ್ಷಕರು ಏನಾದರೂ ಓದುತ್ತಲೇ ಇರಬೇಕು. ಇಂಗ್ಲಿಷಲ್ಲಿ ಮಾತಾಡಬೇಕು. ಬರಲ್ಲ ಎಂದಾಗ ಸಿಟ್ಟಾಗುತ್ತಿದ್ದರು. ಆದರೆ ಆ ಸಿಟ್ಟಿನಲ್ಲೂ ಇಂಗ್ಲಿಷನ್ನು ಕಲಿಯಲಿಯೆಂಬ ಕಾಳಜಿಯಿತ್ತು. ಮಕ್ಕಳೂ ಇಂಗ್ಲಿಷಲ್ಲೇ ಮಾತಾಡಬೇಕು. ಆಟ ಆಡುವಾಗಲೂ ಇಂಗ್ಲಿಷಲ್ಲೇ ಮಾತಾಡಬೇಕು. ಇದರಿಂದ ಮಕ್ಕಳಿಗೆಲ್ಲಾ ಇರಿಸು ಮುರುಸಾಗುತ್ತಿತ್ತು. 


ಪರ ಮತ್ತು ಅಪರ- ಎರಡೂ ವಿದ್ಯೆಗಳನ್ನು ನನಸು ಮಾಡುವ ಸಾಹಸ ಪ್ರವೃತ್ತಿ ಅವರಲ್ಲಿ ಸಂವರ್ಧನೆಯಾಗುತ್ತಲೇ ಹೋದದ್ದು ಮಾತ್ರ ದೈವಾನುಗ್ರಹವೇ ಸರಿ! ಅಸೀಮವಾದ ಉತ್ಸಾಹವನ್ನು ತನ್ನ ವಿದ್ಯಾಸಂಸ್ಥೆಗಳಲ್ಲಿ ದುಡಿಯುವವರಲ್ಲಿ ಶ್ರೀಗಳು ನಿರೀಕ್ಷಿಸುತ್ತಿದ್ದರು. ಪ್ರತಿಯೊಬ್ಬರಿಗೂ ಕನಸನ್ನು ಕಾಣುವಂತೆ ಮೇಲ್ಪಂಕ್ತಿಯಾಗೇ ಉಳಿದುಬಿಟ್ಟರು. ಇಡಿಯ ಮಾನವ ಜನಾಂಗವನ್ನೆ ತನ್ನ ಪುಟ್ಟ ತೋಳುಗಳಿಂದ ತಬ್ಬಬೇಕೆಂದು ಅವರು ಕನಸು ಕಂಡವರು ಎಂದು ಬನ್ನಂಜೆ ಹೇಳಿದ್ದರು. ದೊಡ್ಡ ಯತಿಗಳನ್ನು ಹತ್ತಿರದಿಂದ ನೋಡುವುದು ಬಲು ಕುತೂಹಲವೂ, ಆಸಕ್ತಿದಾಯಕವೂ ಹೌದು. ಎಷ್ಟೋ ಸ್ವಾಮೀಜಿಗಳನ್ನು ಹತ್ತಿರದಿಂದ ಕಾಣಲು ಸುಲಭವಾಗಿ ಸಾಧ್ಯವಾಗುವುದೇ ಇಲ್ಲ. ಆದರೆ ಉಡುಪಿಯ ಅಷ್ಟಮಠದ ಸ್ವಾಮೀಜಿಗಳು ಜನರಿಗೆ ಸುಲಭದಲ್ಲಿ ಹತ್ತಿರದಲ್ಲಿ ನೋಡುವಷ್ಟು ಹತ್ತಿರ! ಯಾವುದೇ ಸಮಯದಲ್ಲಿ ಭೇಟಿಯಾಗುವುದು! Of course ಉಡುಪಿಯ ಯತಿಗಳು ಯಾರೂ ಜಗದ್ಗುರುಗಳು ಎಂಬಂತೆ ವರ್ತಿಸಿಲ್ಲ ಮತ್ತು ತಮ್ಮ ನಾಮಧೇಯಗಳ ಹಿಂದೆ ಸೇರಿಸಿಕೊಂಡಿಲ್ಲ. ಶ್ರೀಗಳಲ್ಲಿ ರಾಷ್ಟ್ರೀಯ ಚಿಂತನೆಯಲ್ಲಿ ಸ್ವಾರ್ಥವಿರಲಿಲ್ಲ. ಬೆಂಗಳೂರಿನ ದೊಡ್ಡಗುಬ್ಬಿಯಲ್ಲಿ ಹರಿಜನರಿಗೆ ಒಂದು ಕಾಲನಿ ಮಾಡಿಸಿದರು. ಉದ್ಯೋಗವನ್ನು ನೀಡಿದರು.


ತಮ್ಮ ಶಾಲೆಗಳಲ್ಲಿ ಓದಿಸಿದರು. ಒಮ್ಮೆ ತಾನು ಬೆಳೆಸಿದ ಹರಿಜನ ಕೇರಿಗೆ ಹೋಗಿದ್ದರು. ಶಾಲೆ ತಪ್ಪಿಸಿ ಆಟವಾಡುತ್ತಿದ್ದ ಹುಡುಗನನ್ನು ಕರೆದು "ಯಾಕೆ ಮಗು, ಶಾಲೆಗೆ ಹೋಗಿಲ್ಲ?" ಎಂದರು. ಹುಡುಗ, "ಮನೆಯಲ್ಲಿ ಸ್ವಲ್ಪ ಕೆಲ್ಸ ಇತ್ತು. ಅಪ್ಪ ಹೋಗಬೇಡಾಂದ" ಎಂದ. "ನೋಡು, ನಾಳೆ‌ ನೀನು ದೊಡ್ಡವನಾಗ್ತೀಯ. ನಿನಗೊಬ್ಬ ಹೆಂಡತಿ ಬರ್ತಾಳೆ. ಅವಳು ತವರಿಂದ ನಿನಗೊಮ್ಮೆ ಒಂದು ಓಲೆ ಹಾಕ್ತಾಳೆ. ನೀನು ಶಾಲೆ ತಪ್ಪಿಸಿ ಹೀಗೆ ಓದು ಕಲಿಯದೆ ದಡ್ಡನಾಗಿರ್ತೀಯಾ, ಹೆಂಡತಿ ಕಳಿಸಿದ ಓಲೆ ಓದಲಿಕ್ಕೆ ಬರೋಲ್ಲ! ಆಗೇನು ಮಾಡ್ತೀಯಾ? ಪಕ್ಕದ ಮನೆಗೆ ಹೋಗಿ 'ನನ್ನ ಹೆಣ್ತಿ ಓಲೆ ಬರೆದವ್ಳೆ, ಒಸಿ ಓದಿ ಹೇಳಿ ಅಂತೀಯಾ? ನಾಚಿಕೆಗೇಡು ಅಲ್ವಾ? ಅದರಿಂದ ನಿನ್ನ ಹೆಣ್ತಿ ಓಲೆ ಓದಲಿಕ್ಕಾದರೂ ನೀನು ಓದು ಬರೆಹ ಕಲಿಯಬೇಕು, ಅಲ್ವಾ? ಅದರಿಂದ ಶಾಲೆ ತಪ್ಪಿಸಬಾರದಪ್ಪಾ, ನಾಳೆಯಿಂದ ತಪ್ಪದೆ ಶಾಲೆಗೆ ಹೋಗು, ಓದಿ ಜಾಣನಾಗು' ಎಂದರು ಸ್ವಾಮೀಜಿ. ದಲಿತರ ಮಕ್ಕಳ ವಿದ್ಯಾಭ್ಯಾಸದ ಬಗೆಗೆ ಶ್ರೀಗಳಲ್ಲಿದ್ದ ಅಪಾರ ಕಾಳಜಿಯಿದು.


ಇನ್ನೊಂದು ಪ್ರಸಂಗ: ಕಸಿ ಮಾವಿನ ಸಸಿ ತರಿಸಿ ಆ ದಲಿತರ, ಬಡವರ ಕೇರಿಯ ಮಂದಿಗೆಲ್ಲ ಹಂಚಿದರು. 'ಇದನ್ನು ನಿಮ್ಮ ತೋಟದಲ್ಲಿ ನೆಟ್ಟು ನೀರೆರೆದು ಬೆಳೆಸಿ, ಈ ದೇಶದ ಅತ್ಯಂತ ಶ್ರೀಮಂತರ ಮಕ್ಕಳು ತಿನ್ನುವ ಹಣ್ಣನ್ನು ನಿಮ್ಮ ಮಕ್ಕಳೂ ತಿನ್ನುವಂತಾಗಬೇಕು' ಎನ್ನುವುದು ನನ್ನಾಸೆ. ಈ ಸಂಗತಿಯನ್ನು ಹೇಳಿದ್ದು ಬನ್ನಂಜೆಯವರು. ಶ್ರೀಗಳು ಗುಣಗ್ರಾಹಿತ್ವಕ್ಕೆ ಒಂದು ನಿದರ್ಶನ: ವಿದ್ಯಾಭೂಷಣರು ಸ್ವಾಮೀಜಿಯಾಗಿದ್ದಾಗ ಪೂಜೆಯ ಅನಂತರ ಪರಸ್ಪರ ತೀರ್ಥ ವಿನಿಮಯ ಸಂದರ್ಭ. ಅವರು ನೀಡಿದ ತೀರ್ಥವನ್ನು ಸ್ವೀಕರಿಸಿ ಶ್ರೀಗಳು ಕಣ್ಣರಳಿಸಿ, ಮನತುಂಬಿ ನಕ್ಕು "ನೀವು ನೀಡಿದ ಪಂಚಾಮೃತ ತೀರ್ಥವೂ ಸಿಹಿ- ಮತ್ತೆ ನಿಮ್ಮ ದನಿಯೂ ಬಹಳ ಸಿಹಿ" ಎಂದು ಹೇಳುತ್ತಿದ್ದುದನ್ನು ವಿದ್ಯಾಭೂಷಣರು ನೆನಪಿಸಿಕೊಳ್ಳುತ್ತಾರೆ. ಆಧುನಿಕ ಶಿಕ್ಷಣಕ್ಕೆ ಆಧುನಿಕ ದೃಷ್ಟಿಕೋನ. ಶ್ರೀಗಳ ಶಿಕ್ಷಣ ಪ್ರೀತಿ ಬಹುದೊಡ್ಡದು. ಅವರ ಕನ್ವಿಕ್ಷನ್ ಎಲ್ಲಕ್ಕಿಂತಲೂ ದೊಡ್ಡದು. ಕೆಲಸ ಮಾಡುತ್ತಲೇ ಸಂಜೆಯ ಬಿಡುವಿನಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜನ್ನು ಆರಂಭಿಸಿದ್ದು ಬಡವರ ಓದು ಅರ್ಧಕ್ಕೇ ನಿಲ್ಲಬಾರದೆಂಬ ಉದ್ದೇಶದಿಂದ. ಹಳ್ಳಿಯೊಂದರಲ್ಲಿ ಆರಂಭಿಸಿದ ಶಾಲೆಗೆ ಪರಿಶಿಷ್ಟ ವರ್ಗದ ಮಕ್ಕಳು ಬರಲು ಹಿಂದೇಟು ಹಾಕಿದಾಗ ಶ್ರೀಗಳು ಅವರ ಮನೆಗಳಿಗೇ ಹೋಗಿ ಅವರ ಮಕ್ಕಳನ್ನು ಕೈಹಿಡಿದು ಕರೆದುಕೊಂಡು ಬಂದರು. 


ಇಂಗ್ಲಿಷ್ ಶಿಕ್ಷಣದ ಮೂಲಕ ಜ್ಞಾನವನ್ನು ಪಡೆಯಬೇಕೆಂಬ ಹಂಬಲವನ್ನು ಇಟ್ಟುಕೊಂಡಿದ್ದರೇ ವಿನಾ ಚಿಂತಿಸುವ ಸಾಮರ್ಥ್ಯವನ್ನು ನಾಶಪಡಿಸುವ ಉದ್ದಿಶ್ಯ ಅವರದ್ದಲ್ಲ. ಮನೆಯಲ್ಲೂ, ಶಾಲೆಯಲ್ಲೂ ಮಾತೃಭಾಷಿಗರಾಗೇ ಉಳಿಯಬಾರದೆಂಬ ಕಾಳಜಿಯಿತ್ತು. ಜಾಗತೀಕರಣದ ಮೂಲಕ ನಮ್ಮರಿವನ್ನು ನಾಶಮಾಡುವ ಇಂಗ್ಲಿಷ್ ಶಿಕ್ಷಣ ಶ್ರೀಗಳ ಪರಿಕಲ್ಪನೆಯಲ್ಲ. ನಮ್ಮ ಮಕ್ಕಳು ದೇಶದ ಮಕ್ಕಳಾಗಿಯೇ ಇರಬೇಕು. ಕೈಗಳನ್ನು ಜೋಡಿಸಿಯೇ ನಮಸ್ಕರಿಸಬೇಕು. ಹಿರಿಯರ ಎಡಗಾಲನ್ನು ಎಡಗೈಯಲ್ಲೂ, ಬಲಗಾಲನ್ನು ಬಲಗೈಯಲ್ಲೂ ಮುಟ್ಟಿಯೇ ನಮಸ್ಕರಿಸಬೇಕೆಂದು ಶಾಲಾ ಪ್ರಾರ್ಥನೆಯ ವೇಳೆಯಲ್ಲಿ ಹೇಳುತ್ತಿದ್ದರು. ಹಾಯ್ ಹೇಳುವ ಸಂಸ್ಕೃತಿಯನ್ನು ಬೆಳೆಸಿಲ್ಲ. ಇಂಗ್ಲಿಷ್ ಶಿಕ್ಷಣದ ವಿದ್ಯಾರ್ಥಿಯಾಗಿ ನಮ್ಮ ಸಂಸ್ಕೃತಿಯನ್ನು ಮರೆಯಬಾರದು. ನಾವು ನಾವಾಗಿಯೇ ಇರಬೇಕು. ನಮ್ಮತನವನ್ನು ಮಾರಿಕೊಳ್ಳಬಾರದೆನ್ನುತ್ತಿದ್ದರು. ಇಂಗ್ಲಿಷ್ ಕಲಿತರೆ ಒಳ್ಳೆಯ ಉದ್ಯೋಗ ಸಿಗುತ್ತದೆ- ಎಂಬ ವಿಚಿತ್ರವಾದ ವಾದ ಅವರದ್ದಲ್ಲ. ಪೂರ್ವಾಶ್ರಮದಲ್ಲಿ ಅವರು ತಾನೊಬ್ಬ ವಿಜ್ಞಾನಿಯಾಗಬೇಕೆಂಬ ಕನಸನ್ನು ಹೊಂದಿದವರು. ಇಂಗ್ಲಿಷ್ ಶಿಕ್ಷಣದ ಮೂಲಕ ವಿಜ್ಞಾನ ಕ್ಷೇತ್ರದಲ್ಲಿ ನಮ್ಮ ಮಕ್ಕಳು ಸಾಧನೆ ಮಾಡಬೇಕೆಂಬ ಮಹತ್ವಾಕಾಂಕ್ಷೆ ಅವರಲ್ಲಿತ್ತು. ಇಂಗ್ಲಿಷ್ ಶಿಕ್ಷಣ ಪಡೆದು ತುಂಬಾ ಹಣವನ್ನು ಗಳಿಸಿ ಅಥವಾ ಗಳಿಸಲು ಸಾಧ್ಯ ಎಂಬ ಧ್ಯೇಯ-ಧೋರಣೆ ಅವರಲ್ಲಿ ಎಂದೂ ಕಂಡಿಲ್ಲ. ಇಲ್ಲಿಯ ಎಲ್ಲ ಸೌಲಭ್ಯಗಳನ್ನು ಅನುಭವಿಸಿ, ವಿದ್ಯಾಭ್ಯಾಸ ಮಾಡಿ ವಿದೇಶಕ್ಕೆ ಹಾರಿಹೋಗುವುದನ್ನು ಅವರು ಸಹಿಸುತ್ತಿರಲಿಲ್ಲ. ಅನೇಕ ವೇದಿಕೆಗಳಲ್ಲಿ ಇದನ್ನವರು ಹೇಳಿದವರು. ನೀವು ಕಲಿತದ್ದು ನಿಮ್ಮ ಸಮಾಜಕ್ಕೆ ವಿನಿಯೋಗವಾಗಬೇಕು. ಇಲ್ಲಿ ನೀವು ಶಿಕ್ಷಕರಾಗಿ, ಗುಮಾಸ್ತರಾಗಿ, ಪ್ರಾಧ್ಯಾಪಕರಾಗಿ, ಅಥವಾ ಬ್ಯುಸಿನೆಸ್ ಅನ್ನಾದರೂ ಮಾಡಿ, ಆದರೆ ಹೆಚ್ಚು ಹಣ ಸಂಪಾದನೆಗೆ ವಿದೇಶಕ್ಕೆ ಹೋಗಬೇಡಿ ಎನ್ನುತ್ತಿದ್ದರು.


ಶ್ರೀಗಳ ವಿದ್ಯಾಸಂಸ್ಥೆಗಳು ಮುಖ್ಯವಾಗಿ ಗ್ರಾಮೀಣ ಭಾಗಗಳಲ್ಲಿವೆ. ದೇಶದ ಜೀವನಾಡಿ ಹಳ್ಳಿಗಳಲ್ಲಿದೆ ಎನ್ನುವ ಅವರಲ್ಲಿ ಆಧುನಿಕ ಜಗತ್ತಿಗೆ ಸ್ಪಂದಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕೆಂಬ ಎಚ್ಚರವೂ ಇತ್ತು. ಅವರ ಹಸ್ತದಲ್ಲಿದ್ದ ಐದು ಬೆರಳು ದೇಶಕ್ಕಾಗಿ ದುಡಿದರೆ ಆರನೆಯ ಬೆರಳು ಶ್ರೀ ಕೃಷ್ಣ ಮುಖ್ಯಪ್ರಾಣರನ್ನು ಆರಾಧಿಸುತ್ತಿತ್ತು. ಸರ್ಕಾರದ ದೇಣಿಗೆಯಿಲ್ಲದೇ ಇಷ್ಟೊಂದು ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳನ್ನು ಕಟ್ಟುವುದೆಂದರೆ ಸಣ್ಣಮಾತೇ! ಕುಟುಂಬವನ್ನು ನಡೆಸಲು ಸಾಧ್ಯವಾಗದವರೆಲ್ಲ ಶಾಲೆಯನ್ನು ತೆರೆಯುವ ಸಾಹಸಕ್ಕೆ ಕೈಹಾಕಿ ಸುಟ್ಟುಕೊಂಡವರಿದ್ದಾರೆ. ಅಂಥದ್ದರಲ್ಲಿ ಅಷ್ಟು ವರ್ಷಗಳ ಹಿಂದೆಯೇ ದೆಹಲಿ, ಮುಂಬೈ, ಬೆಂಗಳೂರು ಭದ್ರಾವತಿ, ಬೇಲೂರು, ಆಲ್ದೂರು, ಸಂಗಮೇಶ್ವರ ಪೇಟೆ, ಉಡುಪಿ, ಅದಮಾರು, ಪಡುಬಿದ್ರಿಗಳಲ್ಲಿ ಮಾದರಿ ವಿದ್ಯಾಸಂಸ್ಥೆಗಳನ್ನು ಕಟ್ಟಿ ಬೆಳೆಸುವುದು ಊಹೆಗೂ ನಿಲುಕದ ಸಾಧನೆ! ಅಂದೇ ಅವರು ಕಂಪ್ಯೂಟರ್ ಶಿಕ್ಷಣದ ಮಹತ್ವವನ್ನು ಗ್ರಹಿಸಿದ್ದರು. ತನ್ನ ವಿದ್ಯಾಸಂಸ್ಥೆಗಳಲ್ಲಿ ಅಳವಡಿಸಿದ್ದರು. ಶಿಕ್ಷಕರಲ್ಲಾಗಲೀ ವಿದ್ಯಾರ್ಥಿಗಳಲ್ಲಾಗಲೀ  ಸೋಮಾರಿತನ, ಹಾಳು ಹರಟೆ, ಅಸಡ್ಡೆ,  ಸಿನಿಕತನವನ್ನು ಕಂಡು ಸಿಟ್ಟುಗೊಳ್ಳುತ್ತಿದ್ದರು. ತನ್ನ ಧೋರಣೆಗಳಲ್ಲಿ ಇವತ್ತು ಯಾವತ್ತೂ ರಾಜೀ ಮಾಡಿಕೊಂಡದ್ದು ಕಡಿಮೆಯೇ!


ಸಂಸ್ಕೃತ ಮಹಾಪಾಠ ಶಾಲೆಯ ಭವ್ಯ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಹಣದ ಕೊರತೆಯಾಗಿತ್ತು. ಸುಮಾರು 70 ವರ್ಷಗಳ ಹಿಂದೆ ಶ್ರೀಗಳು ಹುಬ್ಬಳ್ಳಿ ಧಾರವಾಡ ಮುಂತಾದ ಸ್ಥಳಗಳಲ್ಲಿ ಕೇವಲ 10ರೂ.ಗೆ ಪಾದಪೂಜೆಗಳಿಗೆಂದು ಮನೆಮನೆಗೆ ತೆರಳಿ ಬಂದ ಹಣವನ್ನೆಲ್ಲಾ ಸುರಿದು ಕಟ್ಟಡ ಪೂರ್ಣಗೊಳಿಸಿದರು. ತನ್ನ ಮೊದಲ ಪರ್ಯಾಯದಲ್ಲಿ ಶ್ರೀ ಧರ್ಮವೀರ, ಡಾ.ಸರೋಜಿನಿ ಮಹಿಷಿ, ಜನರಲ್ ಕಾರ್ಯಪ್ಪರಂಥ ಮಹನೀಯರನ್ನು ಆಹ್ವಾನಿಸಿ ಬಹಿರಂಗಾಧಿವೇಶನದಲ್ಲಿ ಬಿರುದುಗಳನ್ನಿತ್ತು ಸಂಮಾನಿಸಿದರು. ಪ್ರತಿದಿನ 3 ಸಾವಿರಕ್ಕೂ ಅಧಿಕ ಬಡ ವಿದ್ಯಾರ್ಥಿಗಳಿಗೆ ಅನ್ನದಾನವಿತ್ತು ಅವರ ವಿದ್ಯಾಭ್ಯಾಸಕ್ಕೆ ಎರವಾದರು. ಎರಡನೆಯ ಪರ್ಯಾಯದಲ್ಲಿ ವೇದಾಂತ, ವ್ಯಾಕರಣ, ಜ್ಯೋತಿಷ ಮತ್ತು ನ್ಯಾಯ- ಈ ವಿಭಾಗದಲ್ಲಿ ತಜ್ಞ ಪಂಡಿತರನ್ನು ನೇಮಿಸಿ ಪ್ರತ್ಯೇಕ ಕಾರ್ಯಾಲಯಗಳನ್ನು ತೆರೆದು ಜನತೆಯ ವಿದ್ಯಾದಾಹಕ್ಕೆ ಪ್ರೋತ್ಸಾಹವನ್ನಿತ್ತರು. ಈ ಅವಧಿಯಲ್ಲಿ ಮೊಟ್ಡಮೊದಲ ಬಾರಿಗೆ ದೇಶದ ಪ್ರಧಾನಿಯಾದ ಇಂದಿರಾ ಗಾಂಧಿ ಕೃಷ್ಣ ಮಠಕ್ಕೆ ಬಂದಿದ್ದು ಬಹುವಿಶೇಷ. ಅರ್ಥಮಂತ್ರಿ ವೈ.ಬಿ.ಚವ್ಹಾಣ್, ಡಾ.ಟಿ.ಎ.ಪೈ, ಆರ್.ಡಿ.ಖಾಡೀಲ್ಕರ್, ರಾಜಬಹಾದ್ದೂರ್ ಮೊದಲಾದ ಮಂತ್ರಿಗಳು, ರಾಜ್ಯಪಾಲರುಗಳು, ಮುಖ್ಯಮಂತ್ರಿ, ಮಂತ್ರಿಗಳು ಈ ಅವಧಿಯಲ್ಲೇ ಕೃಷ್ಣ ದರ್ಶನ ಪಡೆದದ್ದು ವಿಶೇಷ. ಶ್ರೀಗಳಿಗೆ ಯಕ್ಷಗಾನ, ಕೀರ್ತನೆ, ನಾಟ್ಯಗಳಲ್ಲಿ ಆಸಕ್ತಿ. ಇವುಗಳನ್ನು ಪ್ರೋತ್ಸಾಹಿಸಿ ಅನೇಕ ಕಲಾವಿದರನ್ನು ಬರಮಾಡಿಕೊಂಡು ಸಂಮಾನಿಸಿದರು. ಪರ್ಯಾಯದ ಅವಧಿಯಲ್ಲಿ ಕಲೆ, ಕಲಾವಿದರನ್ನು ಆದರಿಸಿ ಗೌರವಿಸಿ ಸಾಮಾಜಿಕ ಸ್ಥಾನಮಾನವನ್ನು ಒದಗಿಸಿದ್ದು ಉಲ್ಲೇಖನೀಯ. ಅವರಿಂದ ಸಂಮಾನಕ್ಕೆ ಒಳಪಟ್ಟು ಸಾಮಾಜಿಕವಾಗಿ ಘನತೆಯನ್ನು ಪಡೆದು ಆರ್ಥಿಕ ಸ್ವಾಸ್ಥ್ಯವನ್ನು ಹೊಂದಿ ಬದುಕನ್ನು ಚೆನ್ನು ಮಾಡಿಕೊಂಡವರೆಷ್ಟೋ! 


ಅವರ ಬಹುದೊಡ್ದ ಕನಸು ಬೆಂಗಳೂರಿನ ಬಿದಲೂರಿನಲ್ಲಿರುವ ಪೂರ್ಣಪ್ರಜ್ಞ ಸೈಂಟಿಫಿಕ್‌ ರಿಸರ್ಚ್ ಸೆಂಟರ್. ವಾಜಪೇಯಿಯವರಿಂದ ಶಂಕುಸ್ಥಾಪನೆ. ಅಡ್ವಾಣಿಯವರಿಂದ ಉದ್ಘಾಟನೆ. ಯು.ಆರ್.ರಾವ್, ಸಿ.ಎನ್‌. ಆರ್.ರಾವ್ ರಂಥ ವಿಶ್ವಮಾನ್ಯ ವಿಜ್ಞಾನಿಗಳನ್ನು ಗೌರವಸಲಹೆಗಾರರನ್ನಾಗಿ ನೇಮಿಸಿದರು. ಇಂದು ಡಾ. ಆನಂದ ಹಲಗೇರಿಯವರ ಸಮರ್ಥ ನಿರ್ದೇಶನದಲ್ಲಿ ಮಹತ್ತ್ವದ ದಾಪುಗಾಲಿನ ಸಾಧಿಸಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದೆ. ಈ ರೀಸರ್ಚ್ ಸೆಂಟರಿನ ಮೂಲ ಉದ್ದಿಶ್ಯ ಮತ್ತು ಗುರಿಯೇ ಮೂಲ ವಿಜ್ಞಾನ ಮತ್ತು ಅನ್ವಯಿಕ ವಿಜ್ಞಾನದ ಬಗೆಗಿನ ಕುತೂಹಲವನ್ನು ಪ್ರೋತ್ಸಾಹಿಸುವುದು ಮತ್ತು ಪ್ರೊಮೋಟ್ ಮಾಡುವುದು. ಈ ಹಿನ್ನೆಲೆಯಲ್ಲಿ ಶ್ರೀಗಳ ಮನೋಭಿಲಾಷೆಯನ್ನು ಮುಟ್ಟುವಲ್ಲಿ ಈ ಸಂಶೋಧನಾ ಕೇಂದ್ರವು ಯಶಸ್ಸಿನ ಏರುದಾರಿಯಲ್ಲಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಜರ್ನಲ್ ಗಳಲ್ಲಿ 200 Research Papers  ಗಳನ್ನು ಇದು ಪ್ರಕಟಿಸಿದೆ. ಅಂತಾರಾಷ್ಟ್ರೀಯ ಪೇಟೆಂಟ್ ಗಳಲ್ಲಿ ಯುಎಸ್ ಪೇಟೆಂಟ್ ಗ್ರಾಂಟ್ ಪಡೆದಿದೆ. 11 ರಿಸರ್ಚ್ ಪೇಪರುಗಳಿಗೆ ಡಾಕ್ಟರೇಟ್ ಸಂದಿವೆ.


ಭಾರತ ರತ್ನ ಪ್ರೊ. ಸಿ.ಎನ್‌.ಆರ್.ರಾವ್ ಈ ಸಂಶೋಧನಾ ಕೇಂದ್ರದ ಕಾರ್ಯಕ್ಷಮತೆಯನ್ನು ಗುರುತರ ಸಾಧನೆಯನ್ನು ಮೆಚ್ಚಿ ಉಲ್ಲೇಖಿಸಿದ್ದಾರೆ. ಅವರ ಹೆಸರಿನಲ್ಲಿ ನಿರ್ಮಿಸಲಾದ ಅತ್ಯಾಧುನಿಕ ಪ್ರಯೋಗಾಲಯಕ್ಕೂ ಅವರೇ ದೇಣಿಗೆಯನ್ನು ನೀಡಿರುವುದು ಗಮನಾರ್ಹ ಸಂಗತಿ. Materials Science and Catalysis, Biological Sciences, Theoretical Sciences- ಈ ಮೂರೂ ವಿಭಾಗಗಳಲ್ಲಿ 2010 ರಿಂದಲೂ ವಿಭಿನ್ನ ಬಗೆಯ ರಾಷ್ಟ್ರೀಯ ಸೆಮಿನಾರುಗಳನ್ನು ಆಯೋಜಿಸುತ್ತಲೇ ಬಂದಿರುವ ಈ ಸಂಶೋಧನಾ ಕೇಂದ್ರವು 2018 ರಲ್ಲಿ 23rd National Symposium on Catalysis ಅನ್ನು ಆಯೋಜಿಸಿತ್ತು. ವರ್ಷಕ್ಕೆ 5-6 ಸರ್ಕಾರಿ ಪ್ರಾಜೆಕ್ಟುಗಳನ್ನು, ಹಾಗೂ ಇಂಡಸ್ಟ್ರಿಗಳ ಪ್ರಾಜೆಕ್ಟುಗಳನ್ನು ಇಲ್ಲಿ ಪ್ರೊಮೋಟ್ ಮಾಡಲಾಗುತ್ತದೆ. ಇನ್ಸುಲಿನ್, ಕ್ಯಾನ್ಸರ್ ಮತ್ತು ನ್ಯಾಚುರಲ್ ಸೋರ್ಸ್ ಬಗ್ಗೆ ಸಂಶೋಧನೆ ನಡೆಯುತ್ತಿದೆ. 8 ಹಿರಿಯ ಅನುಭವಿ ಪ್ರಾಧ್ಯಾಪಕರು ಹಾಗೂ ಸಂಶೋಧಕರ ಮಾರ್ಗದರ್ಶನದಲ್ಲಿ ಸುಮಾರು 25 ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ಸಕ್ರಿಯರಾಗಿದ್ದಾರೆ. ಅವರಿಗೆಲ್ಲಾ ಕೇಂದ್ರದಿಂದಲೇ ಸ್ಕಾಲರ್ಶಿಪ್ ಸೌಲಭ್ಯವಿದೆ. ಉತ್ತಮವಾದ ಮೂಲಭೂತ ಸೌಕರ್ಯಗಳನ್ನು ಹೊಂದಿರುವುದರಿಂದ ಆಸಕ್ತರು ಇಲ್ಲಿಗೆ ಭೇಟಿ ಮಾಡಲು ವ್ಯವಸ್ಥೆ ಮಾಡಲಾಗಿದೆ. ಶ್ರೀಗಳ ಕನಸನ್ನು ನನಸು ಮಾಡುತ್ತಿರುವ ಈ ರೀಸರ್ಚ್ ಸೆಂಟರ್ ಪ್ರಸಕ್ತ ಕಾಲದಲ್ಲಿ ಕಾಯಾ‌-ವಾಚಾ-ಮನಸಾ ಪ್ರವೃತ್ತವಾಗಿದೆ. ಶ್ರೀ ವಿಶ್ವಪ್ರಿಯ ತೀರ್ಥರು ಮತ್ತು ಆಡಳಿತ ಮಂಡಳಿಯ ಬಹುಶ್ರುತ ಶ್ರಮ ಶ್ಲಾಘನೀಯ. ರಾಷ್ಟ್ರಮಟ್ಟದಲ್ಲಿ ಗುರುತರವಾದ ಸ್ಥಾನವನ್ನು ಪಡೆಯಲಿದೆ ಎಂಬುದರಲ್ಲಿ ಈಗಾಗಲೇ ಆದ ಸಾಧನೆಗಳು ಕೈಗನ್ನಡಿಯಾಗಿ ಕಾಣುತ್ತವೆ. 


1975 ರಲ್ಲಿ ತುರ್ತುಪರಿಸ್ಥಿತಿಯನ್ನು ಆಚಾರ್ಯ ವಿನೋಬಾ ಭಾವೆ ಅನುಶಾಸನ ಪರ್ವ ಎಂದು ಬಣ್ಣಿಸಿದ್ದರು. ತುರ್ತು ಪರಿಸ್ಥಿತಿಯು ಶಿಸ್ತಿಗೆ ಒತ್ತು ನೀಡುತ್ತದೆಂದು ವ್ಯಾಖ್ಯಾನಿಸಿದರು. ಅವರಂತೇ ಶ್ರೀಗಳು ಕೂಡ! ಪ್ರಜಾಪ್ರಭುತ್ವದಿಂದ ಏನೂ ಸಾಧ್ಯವಾಗುವುದಿಲ್ಲ ಎಂಬ ಸ್ಥಿತಿಯನ್ನು ನಾವು ತಲುಪಿದ್ದೇವೆ; ಇದರಿಂದ ಸಮಾಜದ ಉದ್ಧಾರ ಆಗುವುದಾದರೆ ಆಗಲಿ ಎಂಬ ನಿಲುವನ್ನು ಶ್ರೀಗಳು ತಾಳಿದ್ದರು. ಕವಿ ಅಡಿಗರು ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನಸಂಘದಿಂದ ಸ್ಪರ್ಧಿಸಲು ಮುಂದಾದಾಗ ಶ್ರೀಗಳು ವಿರೋಧಿಸಿದ್ದಕ್ಕೆ ಪಕ್ಷ ರಾಜಕೀಯದ ಆರೋಪ ಅವರ‌ ಮೇಲಿತ್ತು. (ಒಂದು ಸಮಯದಲ್ಲಿ ಇಂದಿರಾ ಗಾಂಧಿಯವರಿಗೆ ಕರ್ನಾಟಕದ ಆಧ್ಯಾತ್ಮ ಗುರುಗಳಿಂತಿದ್ದವರಿವರು) ಅದು ಸತ್ಯವೇ ಆಗಿದ್ದರೆ, ಸೋನಿಯಾ ಗಾಂಧಿ ಪ್ರಧಾನಿಯಾದರೆ ದೇಶ ಬಿಡುತ್ತೇನೆಂಬ ಹೇಳಿಕೆಯನ್ನು ಯಾಕೆ ಕೊಟ್ಟರೆಂಬ ಪ್ರಶ್ನೆ ಹುಟ್ಟುವುದಿಲ್ಲವೆ? ಮೇಲಾಗಿ ಅವರು ತನ್ನ ಹೇಳಿಕೆಗೆ ಕೊನೆಯವರೆಗೂ ಬದ್ಧರಾಗಿದ್ದರು. "ತಾವು ದೇಶ ಬಿಡುತ್ತೇನೆಂದು ಹೇಳಿದ್ದೀರಿ. ಎಲ್ಲಿಗೆ ಹೋಗುತ್ತೀರಿ" ಅಂತ ನಾನೇ ಶ್ರೀಗಳನ್ನು ಕೇಳಿದ್ದೆ. "ನೇಪಾಳಕ್ಕೆ ಹೋಗುತ್ತೇನೆ" ಅಂತ ಖಂಡತುಂಡಾಗಿ ಹೇಳಿದ್ದರು. ಕನ್ನಡದ ಮೇರು‌ನಟ ರಾಜಕುಮಾರ ಶ್ರೀಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಶ್ರೀಗಳ ಶಾಲೆಗಳಿಗೆ ರಾಜಕುಮಾರ್ ನೈಟ್ಸ್ ಕಾರ್ಯಕ್ರಮದ ಮೂಲಕ ಧನ ಸಹಾಯವನ್ನು ಮಾಡಿದ್ದರು. ಮುಂಬೈಯ ಪೂರ್ಣಪ್ರಜ್ಞ ವಿದ್ಯಾಕೇಂದ್ರವು ಒಂದೇ ವರ್ಷದ ಅಂತರದಲ್ಲಿ ಇಬ್ಬರು ರಾಷ್ಟ್ರಪತಿಗಳನ್ನು ಆಹ್ವಾನಿಸಿದ ಸಂಸ್ಥೆ. ಅಡಿಪಾಯಕ್ಕೆ ಬಂದವರು ಡಾ. ರಾಧಾಕೃಷ್ಣನ್. ಮರುವರ್ಷ ಉದ್ಘಾಟನೆಗೆ ಬಂದವರು ಡಾ. ಝಾಕಿರ್ ಹುಸೇನ್. ದೇಶದ ಅತ್ಯುನ್ನತ ಹುದ್ದೆಯಲ್ಲಿರುವವರನ್ನು ತಮ್ಮ ವಿದ್ಯಾಸಂಸ್ಥೆಗಳಿಗೆ ಶ್ರೀಗಳು ಆಹ್ವಾನಿಸುತ್ತಿದ್ದರು. ಅವರಿಂದ ಸಹಾಯ ಸಲಹೆಯನ್ನೂ ಪಡೆಯುತ್ತಿದ್ದರು.    


ಕೊನೆಯ ಮಾತು: ವ್ಯವಹಾರಕ್ಕಾಗಿ ಒಂದು ಸತ್ಯವನ್ನು, ಆಧ್ಯಾತ್ಮಿಕ ನೆಮ್ಮದಿಗಾಗಿ ಇನ್ನೊಂದು ಸತ್ಯವನ್ನು ಯಾವ ಸಂತನೂ ಅನುಸರಿಸಲೂ ಆಚರಿಸಲೂ ಬಾರದು. ಈ ಜಾಡಿನಲ್ಲಿ ಎಷ್ಟೋ ಸಂತರ ಬದುಕು ಆದರ್ಶದ ಮೇಲ್ಪಂಕ್ತಿಯಾಗಿದೆ. ವರ್ತಮಾನದಲ್ಲೂ ಅಂಥವರಿದ್ದಾರೆ. ಕೇವಲ ಅಲೌಕಿಕ ಬದುಕನ್ನು ಮಾತ್ರ ಚಿಂತಿಸುತ್ತಾ ದೇವರನ್ನು ಕಾಣುವ ಪರಮ ಹಂಬಲದ ಒಬ್ಬ ಯತಿಗೂ ಹಾಗೆ ಬದುಕಲು ಸರಿಹೊತ್ತಿನಲ್ಲಿ ಸಾಧ್ಯವೆಂದು ನಾನು ನಂಬಲಾರೆ. ಮನುಷ್ಯ ಸಹಜ ದೌರ್ಬಲ್ಯಗಳನ್ನು ದಾಟುವ ಪ್ರಯತ್ನದಲ್ಲಿ ಶ್ರೀಗಳ ಬದುಕಿನ ಸಾಹಸಗಾಥೆ ಬಲು ರೋಚಕ! ಅವರು ವೈದಿಕ ಧರ್ಮದ ಕಂದಾಚಾರವನ್ನೂ ನಿರಾಕರಿಸಿದರು. ಅಸ್ಪೃಶ್ಯತೆಯನ್ನು ಮೀರಿದ್ದರಿಂದ ದಲಿತರ ಮನೆಗಳಿಗೆ ಕಾಲಿಟ್ಟರು. ಆಡಂಬರದ ಮಡಿವಂತ ಸಮಾಜದಲ್ಲೇ ಹುಟ್ಟಿಬಂದು ಅದೇ ಮಡಿವಂತ ಸಮಾಜವನ್ನು ತಿದ್ದಲು ಪ್ರಯತ್ನಿಸಿದ್ದಂತೂ ಬಹು ಸೋಜಿಗದ ಸತ್ಯ! ಈ ಮಧ್ಯೆಯೇ ವೈದಿಕ ಪರಂಪರೆಯಲ್ಲಿ ಅತ್ಯುತ್ತಮವಾದುದರ ಜೊತೆ ತಾದಾತ್ಮ್ಯವನ್ನು ಹೊಂದಿದರು. ಒಣ ತರ್ಕದ ರಾಷ್ಟ್ರಾಭಿಮಾನ ಅವರಲ್ಲಿರಲಿಲ್ಲ. ಎಲ್ಲವನ್ನೂ ಗ್ರಹಿಸಿ ಪ್ರಶ್ನಿಸುವ ಮೂಲಕವೇ ಸತ್ಯವನ್ನು ಕಾಣಬೇಕೆಂಬ ಅವರೊಳಗಿನ ವಿಜ್ಞಾನಿ, ಸಂನ್ಯಾಸಿಯಾದ ಅವರನ್ನು ಕೊನೆಯವರೆಗೂ ಕಾಡುತ್ತಿದ್ದನೇನೋ!




- ಟಿ. ದೇವಿದಾಸ್



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top