ಕಾರ್ಕಳ: ನಿಟ್ಟೆ ಡಾ.ಎನ್.ಎಸ್.ಎಂ ಪ್ರಥಮದರ್ಜೆ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನಾಲ್ಕು ದಿನಗಳ ಕೌಶಲ್ಯ ತರಬೇತಿ ಕಾರ್ಯಾಗಾರವನ್ನು ಮೇಜರ್ ರಾಧಾಕೃಷ್ಣ ಉದ್ಘಾಟಿಸಿದರು.
ಇವರು ನೆರೆದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ, ಪ್ರತಿಯೊಬ್ಬರಲ್ಲೂ ಅಪಾರವಾದ ಅಂತಃಶಕ್ತಿಯಿದೆ, ಆದರೆ ಉದರದಲ್ಲಿ ಕಸ್ತೂರಿ ಹದುಗಿಸಿಕೊಂಡು ಊರೆಲ್ಲ ಅರಸುತ್ತಾ ಇರುವ ಕಸ್ತೂರಿ ಮೃಗದಂತೆ ನಾವು ನಮ್ಮ ಶಕ್ತಿಯನ್ನು ಹೊರಗೆ ಹುಡುಕುತ್ತಿದ್ದೇವೆ, ಹಾಗಾಗಿ ವಿದ್ಯಾರ್ಥಿಗಳು ಎಲ್ಲವೂ ಬಾಹ್ಯ ಪ್ರಪಂಚದಿಂದ ಬರುತ್ತದೆ ಎನ್ನುವ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು, ಆಗ ಮಾತ್ರ ಯಶಸ್ಸು ಸಾಧ್ಯ ಎಂದು ತಿಳಿಸಿದರು.
ನಾಲ್ಕು ದಿನಗಳ ಕೌಶಲ್ಯ ತರಬೇತಿ ಕಾರ್ಯಾಗಾರದ ಕುರಿತು ದಿಕ್ಸೂಚಿ ನುಡಿಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾ ಕುಮಾರಿ ಬಿ.ಕೆ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಶ್ರೇಯೋಭಿವೃದ್ದಿಗಾಗಿ ನಿರಂತರ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ, ವಿದ್ಯಾರ್ಥಿಗಳ ಉಜ್ವಲವಾದ ಭವಿಷ್ಯಕ್ಕಾಗಿ ಶ್ರಮವಹಿಸುತ್ತಿದೆ, ವಿದ್ಯಾರ್ಥಿಗಳು ಇದರಿಂದ ಪ್ರಯೋಜನವನ್ನು ಪಡೆದು ಯಶಸ್ಸು ಸಾಧೀಸುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ ಆಫ್ ಕ್ಯಾಂಪಸ್ ನ ಸಿಎಂ&ಡಿ ನಿರ್ದೇಶಕ ಯೋಗಿಶ್ ಹೆಗ್ಡೆ ಅಧ್ಯಕ್ಷೀಯ ಮಾತುಗಳನ್ನಾಡಿದರು. ಇವರು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ ತನ್ನ ಪಠ್ಯ ಚಟುವಟಿಕೆಗಳಲ್ಲಿ ವರ್ತಮಾನದ ಅಗತ್ಯಗಳ ಕಡೆಗೆ ಹೆಚ್ಚಿನ ಗಮನಹರಿಸುತ್ತಿದೆ ಇದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು, ಹಾಗೆಯೇ ವಿದ್ಯಾರ್ಥಿಗಳಿಗೆ ಆಫ್ ಕ್ಯಾಂಪಸ್ ನ ಸೌಲಭ್ಯಗಳನ್ನು ಪರಿಚಯಿಸಿದ ಇವರು ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಸಾಧ್ಯವಾದಷ್ಟು ಮೊಬೈಲ್ ಬಳಕೆಯಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ನಿಕಾಯಗಳ ಮುಖ್ಯಸ್ಥರುಗಳು, ಐಕ್ಯೂಎಸಿ ಸಂಯೋಜಕ ಪ್ರಕಾಶ್.ಬಿ. ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಸುಮನ ಎಂಕೆ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಮೀನಾಕ್ಷಿ ಅತಿಥಿಗಳನ್ನು ಪರಿಚಯಿಸದರು, ನಿಶ್ಮಿತಾ ಶೆಟ್ಟಿ ವಂದಿಸಿದರು, ತಾಝಿಮಾ ತಾಝ್ ಕಾರ್ಯಕ್ರಮವನ್ನು ನಿರೂಪಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ