ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ 2025-2029ನೇ ಸಾಲಿನ ನೂತನ ವಿದ್ಯಾರ್ಥಿಗಳ ಓರಿಯಂಟೇಶನ್ ಕಾರ್ಯಕ್ರಮ
ಬೆಂಗಳೂರು: ನಿಗದಿತ ಪಠ್ಯವನ್ನಷ್ಟೇ ಕಲಿಸುವುದು ಉನ್ನತ ಶಿಕ್ಷಣ ಕ್ಷೇತ್ರದ ಕರ್ತವ್ಯವಲ್ಲ, ಪ್ರತಿಯೊಬ್ಬ ವಿದ್ಯಾರ್ಥಿಯೂ ಇಲ್ಲಿ ದೊರಕುವ ಪ್ರೋತ್ಸಾಹ ಹಾಗೂ ನೈತಿಕ ತಿಳುವಳಿಕೆಗಳಿಂದ ಸಮಗ್ರವಾಗಿ ಬೆಳೆಯುವಂತಾಗಬೇಕು. ಇದು ಸಾಧ್ಯವಾಗುವುದು ಕಲಿಕೆಯ ಕ್ಷೇತ್ರ ವಿವಿಧ ವಿಷಯಗಳನ್ನೊಳಗೊಂಡು ವಿದ್ಯಾರ್ಥಿಗಳಿಗೆ ಹೊಸ ಹೊಸತನ್ನು ಅನ್ವೇಷಿಸಲು ಪ್ರೇರೇಪಿಸಿದಾಗ ಮಾತ್ರ. ಇದರಿಂದ ವಿದ್ಯಾರ್ಥಿಗಳು ಮುಂದೆ ತಮ್ಮ ವೃತ್ತಿ ಬದುಕನ್ನು ರೂಪಿಸಿಕೊಳ್ಳುವಾಗ ನವನವೀನ ದೃಷ್ಟಿಕೋನಗಳನ್ನು ತಮ್ಮ ಅನ್ವೇಷಣೆಗಳಲ್ಲಿ ಸಂಯೋಜನೆ ಮಾಡಿ ಯಶಸ್ಸು ಕಾಣುತ್ತಾರೆ" ಎಂದು ವಿಶ್ವದ ಪ್ರಸಿದ್ಧ ವಯಲಿನ್ ವಾದಕ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಹಾಗೂ ಸಂಗೀತ ಮಾಂತ್ರಿಕ ಡಾ. ಎಲ್. ಸುಬ್ರಹ್ಮಣ್ಯಂ ಹೇಳಿದರು.
"ಸಂಗೀತ ಕ್ಷೇತ್ರದಲ್ಲೂ ಅಷ್ಟೆ. ಈಗಾಗಲೇ ಲಭ್ಯವಿರುವ ಸಿದ್ಧ ಮಾದರಿಗಳನ್ನೇ ಸದಾ ಪ್ರಸ್ತುತ ಪಡಿಸುತ್ತಿದ್ದರೆ ಅದು ಕ್ರಮೇಣ ಏಕತಾನತೆ ಅನ್ನಿಸುತ್ತದೆ. ಆದರೆ ನೂತನ ವಿಚಾರಗಳನ್ನು ಹಾಗೂ ದೃಷ್ಟಿಕೋನಗಳನ್ನು ಸಂಯೋಜಿಸುತ್ತಿದ್ದರೆ ಕೇಳುವವರಿಗೆ ಆ ಸಂಗೀತ ಆಹ್ಲಾದಕರವಾಗಿರುತ್ತದೆ ಹಾಗೂ ರೋಚಕವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನಿಟ್ಟೆ ವಿಶ್ವವಿದ್ಯಾಲಯ ವಿದ್ಯಾರ್ಥಿಸ್ನೇಹಿ ವಾತಾವರಣವನ್ನು ಸೃಷ್ಟಿಸಿರುವುದು ನಿಜಕ್ಕೂ ಪ್ರಶಂಸಾರ್ಹ" ಎಂದು ಅವರು ನುಡಿದರು.
ಅವರು ನಿಟ್ಟೆ ವಿಶ್ವವಿದ್ಯಾಲಯದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ 2025-2029ನೇ ಸಾಲಿನ ನೂತನ ವಿದ್ಯಾರ್ಥಿಗಳ ಓರಿಯಂಟೇಶನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಒಟ್ಟು 1600 ನೂತನ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
‘ವಿದ್ಯಾರ್ಥಿಗಳು ಸಮಯ ಸಿಕ್ಕಾಗ ಸಂಗೀತ ಆಲಿಸಬೇಕು. ಅದು ಮಾನಸಿಕ ಒತ್ತಡವನ್ನು ನಿಯಂತ್ರಿಸುತ್ತದೆ ಹಾಗೂ ಜೀವನೋತ್ಸಾಹವನ್ನು ಹೆಚ್ಚಿಸುತ್ತದೆ. ಅಲ್ಲದೆ ಸಂಭವಿಸಿರಬಹುದಾದ ವೈಫಲ್ಯಗಳ ವಿಷಾದದ ಸುಳಿಯಲ್ಲಿ ಸಿಲುಕದಂತೆ ಅತ್ಮವಿಶ್ವಾಸವನ್ನು ಅಧಿಕಗೊಳಿಸುತ್ತದೆ. ವಿಜ್ಞಾನವೇ ಹೇಳುವಂತೆ ಸಂಗೀತ ನಮ್ಮ ದೇಹದ ರಕ್ತದ ಸುಗಮ ಸಂಚಾರ ಹಾಗೂ ಭಾವೋದ್ವೇಗಗಳ ಸೂಕ್ತ ನಿಯಂತ್ರಣಕ್ಕೂ ನೆರವು ನೀಡುತ್ತದೆ’ ಎಂದರು.
ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್ ಮಾತನಾಡಿ, ಸಂಸ್ಥೆಯಲ್ಲಿ ಲಭ್ಯವಿರುವ ವಿವಿಧ ಸೌಲಭ್ಯಗಳು ಹಾಗೂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಇರುವ ಸದಾವಕಾಶಗಳ ಬಗ್ಗೆ ಮಾಹಿತಿ ನೀಡಿದರು.
ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ ಅಧ್ಯಕ್ಷತೆ ವಹಿಸಿದ್ದರು. ಪ್ರಾರಂಭದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್‌ನ ಉಪಾಧ್ಯಕ್ಷ ಡಾ. ಸಂದೀಪ್ ಶಾಸ್ತ್ರಿ ಸರ್ವರನ್ನೂ ಸ್ವಾಗತಿಸಿದರು. ಕೊನೆಯಲ್ಲಿ ಸಂಸ್ಥೆಯ ಶೈಕ್ಷಣಿಕ ಮುಖ್ಯಸ್ಥ ಡಾ. ಜೆ. ಸುಧೀರ್ ರೆಡ್ಡಿ ವಂದನಾರ್ಪಣೆ ಸಲ್ಲಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ