ಉಡುಪಿ ಜಿಲ್ಲೆಯ 868 ಅಸಹಾಯಕರಿಗೆ ಮಾಸಾಶನದ ನೆರವು; 779 ವಿಶೇಷ ಚೇತನರಿಗೆ ಉಚಿತ ಸಲಕರಣೆಗಳ ವಿತರಣೆ

Upayuktha
0


ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 868 ಅಸಹಾಯಕರಿಗೆ ಮಾಸಾಶನದ ನೆರವು ಹಾಗೂ 779 ಮಂದಿ ವಿಶೇಷ ಚೇತನರಿಗೆ ಉಚಿತ ಸಲಕರಣೆಗಳನ್ನು ವಿತರಿಸಲಾಗಿದೆ.


ಈ ಕಾರ್ಯಕ್ರಮದನ್ವಯ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಿಲ್‌ ಕುಮಾರ್‌ ಎಸ್‌.ಎಸ್ ಇವರ ನಿರ್ದೇಶನದಂತೆ, ಇದುವರೆಗೆ ಜಿಲ್ಲೆಯಲ್ಲಿ 779 ಫಲಾನುಭವಿಗಳಿಗೆ ಸಲಕರಣೆಗಳನ್ನು ಉಚಿತವಾಗಿ ನೀಡಲಾಗಿದೆ. ಇದು ವಿಶೇಷ ಚೇತನರ ಅತ್ಮಸ್ಥೈರ್ಯವನ್ನು ಹೆಚ್ಚಿಸಿ ಅವರ ದೈನಂದಿನ ಬದುಕಿಗೆ ನೆರವಾಗಿದೆ ಎಂದು ಕರಾವಳಿ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ ಹಾಗೂ ಉಡುಪಿ ಜಿಲ್ಲಾ ನಿರ್ದೇಶಕರಾದ ನಾಗರಾಜ ಶೆಟ್ಟಿಯವರು ತಿಳಿಸಿದರು.


ಧರ್ಮಾಧಿಕಾರಿ ಹೆಗ್ಗಡೆಯವರ ದೂರದೃಷ್ಟಿಯ ಯೋಜನೆ- ಅಸಹಾಯಕರಿಗೆ ಮಾಸಾಶನದ ನೆರವು: 

ಹಲವಾರು ಕಾರಣಗಳಿಗೆ ತಮ್ಮ ವೃದ್ಧಾಪ್ಯದ ಜೀವನದಲ್ಲಿ ನೋಡಿಕೊಳ್ಳುವವರು ಯಾರು ಇಲ್ಲದೆ ಅನಾಥರಾಗಿರುವ ಅದೆಷ್ಟೋ ಹಿರಿ ಜೀವಗಳನ್ನು ಗಮನಿಸಬಹುದು. ತಮ್ಮ ಇಳಿ ವಯಸ್ಸಿನಲ್ಲಿ ನಡೆದಾಡಲು ಸಾಧ್ಯವಾಗದೇ, ದುಡಿಯಲು ಸಾಧ್ಯವಾಗದೇ, ಜೀವನ ನಿರ್ವಹಣೆ ಹಾಗೂ ಒಪ್ಪೊತ್ತಿನ ಊಟಕ್ಕೂ ಪರದಾಡುವವರನ್ನು ಕಾಣುತ್ತೇವೆ. ದೈನಂದಿನ ಜೀವನ ನಿರ್ವಹಣೆ ಸಮಸ್ಯೆಯೊಂದಿಗೆ ವಯೋ ಸಹಜವಾದ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುವುದನ್ನು ಕಾಣುತ್ತೇವೆ. ಇಂತವರಿಗಾಗಿಯೇ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ ವಿ. ಹೆಗ್ಗಡೆಯವರು “ಮಾಸಾಶನ” ಕಾರ್ಯಕ್ರಮ ಜಾರಿಗೆ ತಂದರು. ದುಡಿಯಲು ಶಕ್ತಿಯಿಲ್ಲದೇ ಅತ್ಯಂತ ಅಸಹಾಯಕ ಸ್ಥಿತಿಯಲ್ಲಿರುವ ವ್ಯಕ್ತಿಗಳ ಜೀವನ ನಿರ್ವಹಣೆಗಾಗಿ ಪ್ರತೀ ತಿಂಗಳು ಸಂಸ್ಥೆಯಿಂದ ಮಾಸಾಶನ ನೀಡುವ ವ್ಯವಸ್ಥೆ ಇದಾಗಿದೆ. 


ವಿವಿಧ ಗಂಭೀರ ಕಾಯಿಲೆಯಿಂದ ಬಳಲುತ್ತಾ, ತೀರಾ ಸಂಕಷ್ಟದಲ್ಲಿರುವ ಅಂಗವಿಕಲರಿಗೆ ಹಾಗೂ ಅಸಹಾಯಕ ವಯೋವೃದ್ಧರಿಗೆ ಈ ಮಾಸಾಶನ ನೀಡಲಾಗುತ್ತಿದೆ. ಇಂತವರಿಗೆ ಪ್ರತೀ ತಿಂಗಳು ರೂ.1,000/- ದಿಂದ ರೂ.3,000/- ದವರೆಗೆ ಮಾಸಾಶನವನ್ನು ಯೋಜನೆಯ ಮೂಲಕ ತಲುಪಿಸಲಾಗುತ್ತಿದೆ. ಇದರಂತೆ ಜಿಲ್ಲೆಯ 868 ಅಸಹಾಯಕ ವ್ಯಕ್ತಿಗಳಿಗೆ ಪ್ರತೀ ತಿಂಗಳು ಈ ಮಾಸಾಶನವನ್ನು ತಲುಪಿಸಿ ಅವರ ಜೀವನ ನಿರ್ವಹಣೆಗೆ ನೆರವನ್ನು ನೀಡಲಾಗುತ್ತಿದೆ. 


ವಿಶೇಷ ಚೇತನರಿಗೆ ಸಲಕರಣೆಗಳ ಒದಗಣೆ:

ಹಲವರು ಹುಟ್ಟಿನಿಂದ, ಯೌವನದಲ್ಲಿ ಅಥವಾ ವೃದ್ಧಾಪ್ಯದಲ್ಲಿ ಬೇರೆ ಬೇರೆ ಕಾರಣಗಳಿಂದ ಎಲ್ಲರಂತೆ ಬದುಕುವ ಸಾಮರ್ಥ್ಯ ಕಳೆದುಕೊಂಡಿರುತ್ತಾರೆ.  ಕೆಲವರಿಗೆ ಹುಟ್ಟಿನಿಂದಲೇ ಕುರುಡು, ಅಂಗವಿಕಲತೆ ಸಮಸ್ಯೆಗಳು ಬಂದರೆ, ಇನ್ನು ಕೆಲವರಿಗೆ ದುರದೃಷ್ಟವಶಾತ್‌ ಅಪಘಾತಗಳು, ಮಾರಕ ರೋಗಗಳು ಕಾಣಿಸಿಕೊಳ್ಳುತ್ತಿದೆ. ಇದನ್ನು ಸಂಪೂರ್ಣ ಸರಿಪಡಿಸಲು ಆಗದಿದ್ದರೆ ಕೆಲವೊಂದು ಬದಲಿ ಪರಿಹಾರಗಳಿವೆ. ಈ ಸಮಸ್ಯೆಗಳನ್ನು ಮನಗಂಡು ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಇಂತಹ ವಿಶೇಷ ಚೇತನರಿಗೆ ವಿವಿಧ ಸಲಕರಣೆಗಳನ್ನು ನೀಡುವ “ಜನಮಂಗಲ” ಎನ್ನುವ ಕಾರ್ಯಕ್ರಮವನ್ನು ಪ್ರಾರಂಭಿಸಿದರು.


ಈ ಕಾರ್ಯಕ್ರಮದಲ್ಲಿ ಗಾಲಿ ಕುರ್ಚಿ, ಶೌಚಾಲಯದ ಬಳಕೆಗಾಗಿ ಗಾಲಿ ಕುರ್ಚಿ (Commode wheel chair), ನೀರು ಹಾಸಿಗೆ (Water bed), ನಡೆಗೋಲು (U Shape walker), ಮೊಣಕೈ ಊರುಗೋಲು ಮೊದಲಾದ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ಈ ಎಲ್ಲಾ ಸಲಕರಣೆಗಳನ್ನು ಉಚಿತವಾಗಿ ನೀಡುತ್ತಿದ್ದು, ವಿಕಲಚೇತನರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಸಲಕರಣೆಗಳ ಬಳಕೆಯ ಕುರಿತಂತೆ ಸಂಸ್ಥೆಯ ಕಾರ್ಯಕರ್ತರು ವಿವರಿಸಿ ಮಾಹಿತಿ ನೀಡುತ್ತಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top