ಹಾಸನ: ಕವಿತೆಗಳು ಕವಿಗಳ ಅಂತರಂಗದ ಭಾವಲಹರಿ, ಕವಿಗಳ ಆಶಯ, ಭಾವಗಳು ವಿವಿಧ ದೃಷ್ಟಿಕೋನದಿಂದ ವಿಷಯ ವಸ್ತುವಾಗಿ ಮೂರ್ತಗೊಂಡು ಕವಿತೆಗಳಾಗಿ ಹೊರಹೊಮ್ಮುತ್ತವೆ ಎಂದು ಮನೆಮನೆ ಕವಿಗೋಷ್ಠಿಯ ಸಂಚಾಲಕರಾದ ಸುಕನ್ಯ ಮುಕುಂದ ಅವರು 331ನೇ ತಿಂಗಳ ಮನೆಮನೆ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜುಲೈ ತಿಂಗಳ ಮೊದಲ ಭಾನುವಾರ ನಗರದ ಜ್ಞಾನಧಾರೆ ಪ್ಯಾರ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಮಧುಸೂದನ್ ಹಾಗೂ ಪತ್ರಕರ್ತ ವೆಂಕಟೇಶ್ ರವರ ಪ್ರಾಯೋಜಕತ್ವದಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮನೆಮನೆ ಕವಿಗೋಷ್ಠಿ ಕಾರ್ಯಕ್ರಮವು ಉತ್ತಮವಾಗಿ ಮೂಡಿ ಬರುತ್ತಿದ್ದು, ಇನ್ನೂ ಹೆಚ್ಚಿನ ಗುಣಾತ್ಮಕ ಸಾಹಿತ್ಯ ರಚನೆಯಲ್ಲಿ ತೊಡಗಿಕೊಳ್ಳಲಿ ಎಂದು ಆಶಿಸಿದರು.
ಆಗಮಿಸಿದ ಕವಿಗಳು ತಮ್ಮ ಕವನಗಳನ್ನು ವಾಚಿಸಿದರು. ದೇಶಭಕ್ತಿ, ಮನದ ತುಮುಲಗಳು, ಇತ್ತೀಚೆಗೆ ಘಟಿಸಿದ ಕರಾಳ ಕೃತ್ಯಗಳು ಹಾಗೂ ಪ್ರಕೃತಿಯ ತಲ್ಲಣಗಳನ್ನು ಎತ್ತಿ ಹಿಡಿಯುವಂತಹ ಅಂಶಗಳು ಕವಿತೆಗಳಲ್ಲಿ ಹೊರ ಹೊಮ್ಮಿದವು. ಕವಿತೆಗಳಿಗೆ ಮೌಲ್ಯಯುತ ವಿಮರ್ಶೆಯನ್ನು, ಅದರ ಸೊಬಗನ್ನು ವಿಸ್ತಾರವಾಗಿ ಕವಿಗಳು ವಿಶ್ಲೇಷಿಸಿದ್ದು ವಿಶೇಷವಾಗಿತ್ತು. ರತ್ನ ಕೃಷ್ಣೇಗೌಡ, ಸುಂದರೇಶ್ ಉಡುವಾರೆ, ರೇಖಾ ಪ್ರಕಾಶ್, ಭಾರತಿ, ಜಯಾ ರಮೇಶ್ , ಸುವರ್ಣ ಶಿವಪ್ರಕಾಶ್, ಡಾ|| ಶಾಂತ ಅತ್ನಿ , ಕಮಲಮ್ಮ, ಹೇಮರಾಗ , ನೀಲಾವತಿ, ಡಾ|| ಬರಾಳು ಶಿವರಾಮ್, ದಿಬ್ಬೂರು ರಮೇಶ್, ಗಿರಿಜಾ ನಿರ್ವಾಣಿ, ಅಪ್ಪಾಜಿಗೌಡ , ಪರಮೇಶ್ ಮಡಬಲು ಹಾಗೂ ಮಲ್ಲೇಶ್ ಕವನಗಳನ್ನು ವಾಚಿಸಿದರು.
ಲೇಖಕಿ ಎಸ್. ಲಲಿತ ರವರ 'ಮನದಕಣಿವೆ' ಯಿಂದ ಕೃತಿಯನ್ನು ಸಾಹಿತಿಗಳಾದ ಕೆ.ಎನ್. ಚಿದಾನಂದ ರವರು ಉತ್ತಮವಾಗಿ ವಿಮರ್ಶಿಸಿ ಕೃತಿ ಪರಿಚಯ ಮಾಡಿದರು. ಒಟ್ಟು ಅರವತ್ನಾಲ್ಕು ವಿವಿಧ ಲೇಖನಗಳಿಂದ ಕೂಡಿದ ಕೃತಿಯಲ್ಲಿ ಲೇಖಕರು ಜೀವನದ ಸೂಕ್ಷ್ಮ ಸಂಗತಿಗಳನ್ನು ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಸಾಮಾಜಿಕ ಜವಾಬ್ದಾರಿ, ಆಧ್ಯಾತ್ಮ, ವೈಯಕ್ತಿಕ ಸಂಬಂಧಗಳು, ನಿಸರ್ಗದ ಪ್ರತಿಫಲನೆ—ಇವು ಎಲ್ಲವೂ ಪ್ರಬಂಧಗಳ ಮೂಲಕ ಪ್ರತ್ಯಕ್ಷವಾಗುತ್ತವೆ.
ಮಲೆನಾಡಿನ ಸೌಂದರ್ಯ, ಮಳೆಯ ಸೊಬಗು, ಋತು ಹಾಗೂ ಮಾಸಗಳ ಇರುವಿಕೆಯನ್ನು ಪ್ರಬಂಧಗಳಲ್ಲಿ ಸಕಾರಾತ್ಮಕವಾಗಿ ಬಳಸಿಕೊಂಡಿರುವುದರಿಂದ ಇದೊಂದು ಯಶಸ್ವೀ ಕೃತಿಯಾಗಿದೆ. ಇದು ಓದುಗರ ಚಿಂತನೆಗೆ ಆಹ್ವಾನ ನೀಡುವ, ಮನಸ್ಸಿಗೆ ತಾಗುವಂತಹ ಆತ್ಮ ಮಂಥನದ ಲೇಖನಗಳ ಸಂಕಲನ. ನಿಸರ್ಗದ ಬಣ್ಣಗಳನ್ನು ವರ್ಣಿಸಿರುವುದಲ್ಲದೆ ನಮ್ಮ ಬದುಕಿನ ಬಣ್ಣಗಳನ್ನು ಶಬ್ದಗಳಲ್ಲಿ ಬಿಡಿಸಿ ಹಿಡಿದು ಕೃತಿಯನ್ನು ಅಪೂರ್ವವಾಗಿಸಿದ್ದಾರೆ.
ಲೇಖಕಿ ಎಸ್. ಲಲಿತರವರು ಮಾತನಾಡಿ ತಮ್ಮ ಲೇಖನಗಳು ಹೊರಹೊಮ್ಮಲು ಪತ್ರಕರ್ತರ ಪ್ರೇರಣೆ ಮತ್ತು ಪ್ರೋತ್ಸಾಹವೇ ಕಾರಣ ಎಂದು ಹೇಳಿದರು. ಹಿರಿಯ ಖ್ಯಾತ ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್, ಹಿರಿಯ ಪತ್ರಕರ್ತೆ ಲೀಲಾವತಿ, ಹಾಸನ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಮತೇಶ್, ಜ್ಞಾನಧಾರೆ ಪ್ಯಾರಾ ಮೆಡಿಕಲ್ ಕಾಲೇಜಿನ ಅಧ್ಯಕ್ಷೆ ರಾಧಮ್ಮ ಮುಂತಾದವರ ಉಪಸ್ಥಿತಿ ಕಾರ್ಯಕ್ರಮಕ್ಕೆ ಮೆರುಗು ತಂದಿತು.
ರೇಖಾ ಪ್ರಕಾಶ್ ಸ್ವಾಗತಿಸಿದರೆ ಭಾರತಿ ಅವರು ಎಲ್ಲರನ್ನು ವಂದಿಸಿದರು. ಡಾ. ಶಾಂತಾ ಅತ್ನಿ ಪ್ರಾರ್ಥಿಸಿದರೆ ವಾಣಿ ಮಹೇಶ್ ಕಾರ್ಯಕ್ರಮ ನಿರೂಪಿಸಿದರು. ಭಾರತಿ ಹಾದಿಗೆ, ವನಜಾಕ್ಷಿ, ಮಹೇಶ್, ಅರುಣ, ಸವಿತಾ ಮುಕುಂದ, ಮುಂತಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ