ಉಜಿರೆ: ಸಾವಯವ ಕೃಷಿಯಲ್ಲಿ ಜನರು ಪಾಲ್ಗೊಳ್ಳುವ ಮೂಲಕ ನಿರುದ್ಯೋಗಕ್ಕೆ ಪರಿಹಾರ ನೀಡಬಹುದಾಗಿದೆ ಎಂದು ಬೆಂಗಳೂರಿನ ಸ್ವದೇಶಿ ಜಾಗರಣ ಮಂಚ್ ವೇದಿಕೆಯ ಹಿರಿಯ ಭಾಷಣಕಾರ ಕೆ. ಜಗದೀಶ ಅಭಿಪ್ರಾಯಪಟ್ಟರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗ ಹಾಗೂ ಉದ್ಯಮಶೀಲತೆ ಅಭಿವೃದ್ಧಿ ಕೋಶದ ವತಿಯಿಂದ ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ‘ಸ್ವೋದ್ಯೋಗ ಹಾಗೂ ಸ್ವದೇಶಿ ಚಿಂತನೆಯ ಮೂಲಕ ಸ್ವಾವಲಂಬಿ ಭಾರತ ನಿರ್ಮಾಣ’ ಕುರಿತು ಉಪನ್ಯಾಸ ನೀಡಿದರು.
ಭಾರತವು ಆರ್ಥಿಕವಾಗಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದರೂ ಉದ್ಯೋಗ ಕೊರತೆ ಹಾಗೆಯೇ ಇದೆ. ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ ಹಸು, ಜಾನುವಾರಗಳನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಅಧಿಕ ಉತ್ಪಾದನೆ ಮಾಡಬಹುದು ಎಂದು ಅವರು ಹೇಳಿದರು.
ಪ್ರತಿವರ್ಷ 1 ಕೋಟಿಗಿಂತಲೂ ಅಧಿಕ ಪದವೀಧರರು ಹೊರಬರುತ್ತಿದ್ದು, ಅವರಿಗೆ 10 ಲಕ್ಷದಷ್ಟು ಮಾತ್ರ ಉದ್ಯೋಗ ಸೃಷ್ಟಿಯಾಗುತ್ತಿದೆ. ಕೊರೋನ ನಂತರ ಪರಿಸ್ಥಿತಿ ಹದಗೆಟ್ಟಿದ್ದು, ಉದ್ಯೋಗ ಸೃಷ್ಟಿ ನಮ್ಮ ಮೊದಲ ಆದ್ಯತೆಯಾಗಿರಬೇಕು ಎಂದರು.
ಭಾರತದಲ್ಲಿ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮ (ಎಂ.ಎಸ್.ಎಂ.ಇ.)ಗಳಿಗೆ 26 ಶೇ.ದಷ್ಟು ಗ್ರಾಮೀಣ ಭಾಗದಲ್ಲಿ ಬೇಡಿಕೆ ಇದೆ. ಯೋಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಶ್ವದಲ್ಲಿ 8 ಸಾವಿರ ಕೋಟಿಯಷ್ಟು ಉದ್ಯಮಾವಕಾಶ ಇದೆ. ಸ್ವ ಉದ್ಯೋಗ ಸೃಷ್ಟಿಯಲ್ಲಿ ಸಣ್ಣ ವ್ಯಾಪಾರ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತಿದೆ. ಯುವಕರು ಉದ್ಯೋಗ ಸೃಷ್ಟಿ ಮಾಡಬೇಕು. ಪದವಿ ಜೊತೆ ಕೌಶಲ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಾಣಿಜ್ಯ ವಿಭಾಗ ಮುಖ್ಯಸ್ಥೆ ಡಾ. ರತ್ನಾವತಿ ಕೆ. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕರು, ಸಹಾಯಕ ಪ್ರಾಧ್ಯಾಪಕ ಡಾ. ಲಕ್ಷ್ಮೀನಾರಾಯಣ ಕೆ.ಎಸ್. ಸ್ವಾಗತಿಸಿ, ಸುಮನ್ ಜೈನ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ