ಬಂಟ್ವಾಳ: ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಬಣ್ಣದ ವೇಷದ ಮೂಲಕ ತನ್ನದೇ ಆದ ಮಾತುಗಾರಿಕೆಯೊಂದಿಗೆ ಗಮನ ಸೆಳೆದಿದ್ದ ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ಸಿದ್ದಕಟ್ಟೆ ಮಂಚಕಲ್ ನಿವಾಸಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ (60) ಭಾನುವಾರ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ನಿಧನ ಹೊಂದಿದ್ದಾರೆ. ಪತ್ನಿ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅವರು ಹೊಂದಿದ್ದರು.
ಹನುಮಗಿರಿ ಮೇಳದಲ್ಲಿ ಪ್ರಧಾನ ಬಣ್ಣದ ವೇಷಧಾರಿಯಾಗಿದ್ದ ಅವರ ಅಂತ್ಯಕ್ರಿಯೆ ಸ್ವಗೃಹದಲ್ಲಿ ಭಾನುವಾರ ಸಂಜೆ ನಡೆದ ವೇಳೆ ಸಹೋದ್ಯೋಗಿ ಕಲಾವಿದರ ಸಹಿತ ಅಭಿಮಾನಿಗಳು, ಬಂಧುಮಿತ್ರರು ಪಾಲ್ಗೊಂಡಿದ್ದರು.
1965ರಲ್ಲಿ ಸಿದ್ಧಕಟ್ಟೆಯಲ್ಲಿ ಜನಿಸಿದ್ದ ಅವರು ಆರನೇ ತರಗತಿ ವಿದ್ಯಾಭ್ಯಾಸದ ಬಳಿಕ 18ನೇ ವಯಸ್ಸಿನಲ್ಲಿ ಯಕ್ಷರಂಗ ಪ್ರವೇಶಿಸಿದರು. ಅಂದಿನ ಪ್ರಸಿದ್ಧ ಬಣ್ಣದ ವೇಷಧಾರಿ ಬಣ್ಣದ ಮಹಾಲಿಂಗ ಅವರ ಶೈಲಿಯಿಂದ ಆಕರ್ಷಿತರಾಗಿ ಅದರತ್ತಲೇ ಒಲವು ತೋರಿಸಿದ ಸಿದ್ಧಕಟ್ಟೆಯವರು, ರೆಂಜಾಳ ರಾಮಕೃಷ್ಣ ರಾವ್, ಸುಣ್ಣಂಬಳ ವಿಶ್ವೇಶ್ವರ ಭಟ್, ಬೆಳ್ಳಾರೆ ಮಂಜುನಾಥ ಭಟ್ ಮತ್ತು ಹಿರಿಯ ಕಲಾವಿದರಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡರು.
10 ವರ್ಷಗಳ ಕಾಲ ಕಟೀಲು ಮೇಳ, 13 ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ ಬಣ್ಣದ ವೇಷ ಸಹಿತ ಹಲವು ಪಾತ್ರಗಳನ್ನು ನಿರ್ವಹಿಸಿದ್ದ ಅವರು, ಬಳಿಕ ಕಳೆದ ವರ್ಷದವರೆಗೆ ಹೊಸನಗರ, ಎಡನೀರು ಮತ್ತು ಹನುಮಗಿರಿ ಮೇಳಗಳಲ್ಲಿ ತಿರುಗಾಟ ನಡೆಸಿದ್ದರು. ಇತ್ತೀಚೆಗೆ ಮಂಗಳೂರು ವಿವಿಯಿಂದ ಯಕ್ಷಮಂಗಳ ಪ್ರಶಸ್ತಿ ಸ್ವೀಕರಿಸಿದ್ದ ಅವರಿಗೆ ಹಲವು ಪ್ರಶಸ್ತಿ, ಸನ್ಮಾನಗಳು ಸಂದಿವೆ. ಭ್ರಾಮರಿ ಯಕ್ಷಮಣಿ ಪ್ರಶಸ್ತಿ, ಪೇಜಾವರ ಶ್ರೀಗಳ ಜನುಮದಿನದ ಶ್ರೀರಾಮ ವಿಠಲ ಪ್ರಶಸ್ತಿ, ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿ, ಸನ್ಮಾನಗಳು ಸಂದಿವೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ