ಜುಲೈ 12ರಂದು ದ.ಕ ಜಿಲ್ಲಾ ಲೋಕ ಅದಾಲತ್

Upayuktha
0


ಮಂಗಳೂರು: "ತ್ವರಿತ ನ್ಯಾಯಕ್ಕಾಗಿ" ಎಂಬ ಘೋಷ ವಾಕ್ಯದೊಂದಿಗೆ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವ್ಯಾಜ್ಯ ಇತ್ಯರ್ಥಪಡಿಸಿಕೊಳ್ಳಿರಿ ಎನ್ನುವ ಮೂಲಕ, ರಾಜಿಯಾಗಬಹುದಾದ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಸುಲಭವಾಗಿ ಮತ್ತು ಶೀಘ್ರವಾಗಿ ಇತ್ಯರ್ಥಪಡಿಸುವ ಲೋಕ ಅದಾಲತ್ ಕಾರ್ಯಕ್ರಮ ಜು.12 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿದೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಇತ್ಯರ್ಥವಾಗಿ ಲೋಕ ಅದಾಲತ್ ಯಶಸ್ವಿಯಾಗಲು ಎಲ್ಲರೂ ಸಹಕರಿಸಬೇಕೆಂದು ಅಧ್ಯಕ್ಷರು, ದ.ಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಸವರಾಜ ಅವರು ಮನವಿ ಮಾಡಿದರು.


ಈಗಾಗಲೇ ಜುಲೈ 12ರಂದು ನಡೆಯಲಿರುವ ಲೋಕ ಆದಾಲತ್ ಕಾರ್ಯಕ್ರಮದಲ್ಲಿ ನ್ಯಾಯಾಧಿಶರು,ಮಂಗಳೂರು ವಕೀಲರ ಸಂಘದ ಅಧ್ಯಕ್ಷರು ಹಾಗೂ ಸದಸ್ಯರುಗಳು, ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿ, ಅಭಿಯೋಜಕರು, ಇನ್ಸೂರೆನ್ಸ್ ಕಂಪೆನಿಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ.


ಈ ಬಾರಿಯ ಲೋಕ ಅದಾಲತ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವ ಸಿವಿಲ್, ವೈವಾಹಿಕ, ಮೋಟಾರು ಅಪಘಾತ ಪರಿಹಾರ ಪ್ರಕರಣಗಳು, ಚೆಕ್‌ಬೌನ್ಸ್ ಪ್ರಕರಣಗಳು ಸೇರಿದಂತೆ ಹಲವಾರು ಪರಸ್ಪರ ರಾಜಿಯಾಗಬಹುದಾದಂತ ಸಿವಿಲ್, ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುವುದು. ಅಲ್ಲದೆ ಬ್ಯಾಂಕುಗಳಿಗೆ ಸಂಬಂಧಿಸಿದ ಸಾಲದ ಹಣದ ವಸೂಲಾತಿ ಪ್ರಕರಣಗಳು, ವಿದ್ಯುಚ್ಛಕ್ತಿ ಮಂಡಳಿ, ಜಲ ಮಂಡಳಿ ಅಥವಾ ಜಿಲ್ಲಾ ನ್ಯಾಯಾಲಯಕ್ಕೆ ಬರಬಹುದಾದಂತಹ ಇತರೆ ಯಾವುದೇ ಪ್ರಕರಣಗಳನ್ನು ಪೂರ್ವ ವ್ಯಾಜ್ಯ ಪ್ರಕರಣಗಳೆಂದು ಪರಿಗಣಿಸಿ, ಅವುಗಳಲ್ಲಿ ಸಹ ಉಭಯ ಕಕ್ಷಿದಾರರನ್ನು ಕರೆಸಿಕೊಂಡು ರಾಜಿ ಸಂಧಾನದ ಮೂಲಕ ವಿವಾದಗಳನ್ನು ಬಗೆಹರಿಸಿ ನ್ಯಾಯ ಒದಗಿಸಲಾಗುವುದು.

ಅಲ್ಲದೆ ಈ ಬಾರಿ 'ಸಾಥಿ' ಅಭಿಯಾನದಡಿ ಪರಿತ್ಯಕ್ತ, ಪೋಷಕರಿಲ್ಲದ ಮಕ್ಕಳಿಗೆ ಆಧಾರ್ ಕಾರ್ಡ್ ಅನ್ನು ಮಾಡಿಸಲಾಗುತ್ತಿದ್ದು, ಅದಕ್ಕೆ ಅಗತ್ಯವಾದ ಜನನ ಪ್ರಮಾಣ ಪತ್ರವನ್ನು ಪಾಲಿಕೆಯವರು ಮಾಡಿಕೊಡಬೇಕೆಂದರು. ಅಲ್ಲದೆ ವಿಮಾ ಕಂಪನಿಗಳ ಸಹಿತ ವಿವಿಧ ಇಲಾಖೆಗಳು ಪ್ರಸಕ್ತ ನ್ಯಾಯಾಲಯದಲ್ಲಿ ಹಾಲಿ ಹಾಗೂ ಬಾಕಿ ಇರುವ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು.


ಈ ಹಿಂದೆ 2025 ಮಾರ್ಚ್ 8 ರಂದು ನಡೆದ ಲೋಕ ಅದಾಲತ್‌ನಲ್ಲಿ ಒಟ್ಟು 57,105 ಪ್ರಕರಣಗಳು ಇದ್ದು ಅದರಲ್ಲಿ 6324 ಪ್ರಕರಣವನ್ನು ಕೈಗೆತ್ತಿಗೊಂಡು ಅದರಲ್ಲಿ ಸುಮಾರು 3510 ಪ್ರಕರಣಗಳು ವಿಲೇವಾರಿ ಆಗಿವೆ. ಇನ್ನು ಪೂರ್ವ ಮೊಕದ್ದಮೆಗಳಲ್ಲಿ (Pre litigation) 46,330 ಮೊಕದ್ದಮೆಗಳಲ್ಲಿ 37,549 ಇತ್ಯರ್ಥ ಆಗಿದೆ. ಇನ್ನು ಈ ತಿಂಗಳ ಜುಲೈ.12 ರಂದು ನಡೆಯಲಿರುವ ಲೋಕ ಅದಾಲತ್ ನಲ್ಲಿ 57305 ರಷ್ಟು ಪ್ರಕರಣಗಳಲ್ಲಿ 9302 ಪ್ರಕರಣಗಳ ವಿಚಾರಣೆ ನಡೆದು, 3148 ಪ್ರಕರಣವನ್ನು ಕೈಗೆತ್ತಿಗೊಂಡು ಇತ್ಯರ್ಥಗೊಳಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.


ಮಹಿಳೆಯರಿಗೆ, ಮಕ್ಕಳಿಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ (ಆಯಾಯ ಜಿಲ್ಲೆಯ ಕಾನೂನು ಸೇವೆಗಳ ಪ್ರಾಧಿಕಾರದಿಂದ) ಉಚಿತ ಕಾನೂನು ನೆರವು ದೊರೆಯಲಿದೆ. ಕೆಲವೊಂದು ಪ್ರಕರಣಗಳು ಲೋಕ ಅದಾಲತ್ ನಲ್ಲಿ ಇತ್ಯರ್ಥಗೊಂಡರೆ ಪ್ರಕರಣ ಇತ್ಯರ್ಥಗೊಳಿಸಲು   ನ್ಯಾಯಾಲಯಕ್ಕೆ ಕಟ್ಟಿದ ಶುಲ್ಕವನ್ನು ಸಹ ಹಿಂದೆ ನೀಡಲಾಗುವುದು ಎಂದು ತಿಳಿಸಿದರು.


ಲೋಕ ಅದಾಲತ್‌ನಲ್ಲಿ ಸಾಧ್ಯವಾದಷ್ಟು ಪ್ರಕರಣಗಳು ವಿಲೇವಾರಿಗೊಂಡರೆ, ನ್ಯಾಯಾಲಯದಲ್ಲಿರುವ ಪ್ರಸಕ್ತ ವಿಚಾರಣೆಯಲ್ಲಿರುವ ಪ್ರಕರಣಗಳು ಬೇಗ ಬೇಗ ವಿಲೇವಾರಿ ಆಗಲಿದೆ. ಅಲ್ಲದೆ ವೈವಾಹಿಕ ಜೀವನದ ಪ್ರಕರಣ, ಅಣ್ಣ ತಮ್ಮಂದಿರ ವ್ಯಾಜ್ಯ, ಚೆಕ್ ಬೌನ್ಸ್ ಪ್ರಕರಣ, ಸಾಲ ವಸೂಲಾತಿ ಪ್ರಕರಣ, ಕ್ಷುಲ್ಲಕ ವಿಚಾರಕ್ಕಾಗಿ ಮಾಡಿದ ಪ್ರಕರಣ, ವಿದ್ಯುತ್ ಮತ್ತು ನೀರಿನ ಬಿಲ್ಗಳ ಪ್ರಕರಣ,ಮೋಟಾರು ವಾಹನ ಕಾಯ್ದೆಗೆ ಸಂಬಂಧ ಪಟ್ಟ ಪ್ರಕರಣ, ಕಾರ್ಮಿಕರಿಗೆ ಸಂಭದ ಪಟ್ಟ ಪ್ರಕರಣ, ಜಾಗದ ತಕರಾರು, ಪೆನ್ಷನ್ ವಿಷಯ, ಬಾಡಿಗೆ ಕರಾರುಗಳಿಗೆ ಅನ್ವಯವಾಗುವ ಪ್ರಕರಣ, ಮತ್ತು ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ವಿಲೇವಾರಿ ಮಾಡಲು ಅವಕಾಶ ಇದೆ. ಜೊತೆಗೆ ಹಲವಾರು  ವರ್ಷಗಳಿಂದ ಇತ್ಯರ್ಥವಾಗದೆ ಇರುವ ಕೆಲವೊಂದು ಕಠಿಣ ಪ್ರಕರಣಗಳು ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರ ಸಮ್ಮುಖ ಪರಸ್ಪರ ರಾಜಿಯಾಗುವ ಮೂಲಕ ವಿಲೇವಾರಿಗೊಂಡು ಸುಖಾಂತ್ಯಗೊಳ್ಳುವ ಸನ್ನಿವೇಶ ಕೂಡ ನಿರ್ಮಾಣವಾಗಿವೆ ಎಂದರು.


ಈ ನಿಟ್ಟಿನಲ್ಲಿ ಸಾರ್ವಜನಿಕರು ಕಾನೂನು ಸೇವೆಗಳ ಪ್ರಾಧಿಕಾರದಿಂದ ಇದರ ಬಗ್ಗೆ ಸೂಕ್ತ ಮಾಹಿತಿಯನ್ನು ಪಡೆದುಕೊಂಡು ಸದುಪಯೋಗ ಪಡೆದುಕೊಳ್ಳಬೇಕೆಂದು ಬಸವರಾಜ ಅಧ್ಯಕ್ಷರು, ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮಂಗಳೂರು ಇವರು ತಿಳಿಸಿದರು. 


ಪತ್ರಿಕಾಗೋಷ್ಠಿಯಲ್ಲಿ ನ್ಯಾಯಾಧೀಶರಾದ ಬಸವರಾಜ್, ಹಿರಿಯ ಸಿವಿಲ್ ನ್ಯಾಯಾಧೀಶರು, ಮತ್ತು ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ದಕ್ಷಿಣ ಕನ್ನಡ, ಜಿಲ್ಲಾ ಶ್ರೀಮತಿ ಜೈಬುನ್ನಿಸ, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ದಕ್ಷಿಣ ಕನ್ನಡ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top