ಮಂಗಳೂರು: ಜನಸಾಮಾನ್ಯರಿಗೆ ಸಾಮಾಜಿಕ ಅರಿವು ಮೂಡಿಸುವ ನಿಟ್ಟಿನಲ್ಲಿ ನಾಟಕ ಕಲೆಯನ್ನು ಪರಿಣಾಮಕಾರಿಯಾಗಿ ಬಳಸಿದ ಮಾಧವ ತಿಂಗಳಾಯರು ತುಳುನಾಡಿನ ಮೊದಲ ನಾಟಕಕಾರರಾಗಿದ್ದಾರೆ. ಅವರ ಜನಮರ್ಲ್ ನಾಟಕವು ತುಳು ಭಾಷೆಯ ಮೊದಲ ಪ್ರಕಟಿತ ನಾಟಕವಾಗಿದ್ದು ಐತಿಹಾಸಿಕ ಮಹತ್ವವನ್ನು ಹೊಂದಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿಯ ಅಧ್ಯಕ್ಷ ತಾರನಾಥ ಗಟ್ಟಿ ನುಡಿದರು.
ಅವರು ಸಂಕೇತ ಮಂಗಳೂರು ಮತ್ತು ಸಿಂಗಾರ ಸುರತ್ಕಲ್ ಸಹಯೋಗದಲ್ಲಿ ಹೊಯಿಗೆ ಬಜಾರಿನ ಇಂದಿರಾಭವನದಲ್ಲಿ ನಡೆದ ಮಾಧವ ತಿಂಗಳಾಯ ಜನ್ಮ ದಿನದ ನೆನಪು ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಯುವ ಜನತೆಯಲ್ಲಿ ತುಳು ಸಾಹಿತ್ಯದ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತುಳುನಾಡಿನ ಹಿರಿಯ ಸಾಧಕರನ್ನು ನೆನಪಿಸುವ ಕಾರ್ಯಕ್ರಮ ನಿರಂತರವಾಗಿ ಮಾಡಬೇಕು ಎಂದರು.
ಸಾಹಿತಿ ಪ್ರೇಮಚಂದ್ರ ಕೆ. ತಿಂಗಳಾಯ ಮಾತನಾಡಿ ಹಿರಿಯ ಸಮಾಜ ಸುಧಾರಕ ಮೋಹನಪ್ಪ ತಿಂಗಳಾಯ, ಕೃಷ್ಣಪ್ಪ ತಿಂಗಳಾಯ ಮತ್ತು ಮಾಧವ ತಿಂಗಳಾಯರು ಶ್ರೀ ಜ್ಞಾನೋದಯ ಸಮಾಜದ ಮೂಲಕ ಸಾಮಾಜಿಕ ಪರಿವರ್ತನೆಗಾಗಿ ಮಾಡಿದ ಕಾರ್ಯಗಳು ಅನನ್ಯವಾದವುಗಳು ಎಂದರು.
ಸಿಂಗಾರ ಸುರತ್ಕಲ್ ನ ಕಾರ್ಯದರ್ಶಿ ಕೃಷ್ಣಮೂರ್ತಿ ಮಾತನಾಡಿ ತುಳು ಮಾಧವ ತಿಂಗಳಾಯರು ಕನ್ನಡ ಮತ್ತು ತುಳು ಭಾಷೆಗಳಲ್ಲಿ ಬರೆದ ನಾಟಕಗಳು ಸಮಾಜದ ವಿಮರ್ಶೆ ಮಾಡುತ್ತಿದ್ದು ರಂಗಭೂಮಿಯಲ್ಲಿ ಯಶಸ್ಸು ಕಂಡ ನಾಟಕಗಳಾಗಿವೆ ಎಂದರು.
ಸಂಕೇತ ಮಂಗಳೂರಿನ ಸಂಚಾಲಕ ಮತ್ತು ಕಲಾವಿದ ಜಗನ್ ಪವಾರ್ ಬೇಕಲ್ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಮಾಧವ ತಿಂಗಳಾಯರ ಯುವ ಜನತೆಗೆ ಸ್ಫೂರ್ತಿಯಾಗಿದ್ದರು. ಅವರ ನೆನಪು ಸದಾ ಉಳಿಯುವ ಕಾರ್ಯ ನಡೆಯಬೇಕು ಎಂದರು. ಇಂಟಕ್ ಮಂಗಳೂರು ಚಾಪ್ಟರ್ ನ ಸಂಯೋಜಕ ಸುಭಾಸ್ ಬಸು ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಗಳನ್ನು ರಚನಾತ್ಮಕವಾಗಿ ಮಾಡಬೇಕು ಎಂದರು.
ಹಿರಿಯ ಸಾಮಾಜಿಕ ನಾಯಕ ಪ್ರಫುಲ್ಲ ಚಂದ್ರ ತಿಂಗಳಾಯ, ಸಂಕೇತ ಮಂಗಳೂರಿನ ಅಧ್ಯಕ್ಷ ಹರೀಶ್, ಕಲಾವಿದ ರಾಜೇಂದ್ರ ಕೇದಿಗೆ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ