ಪಣಜಿ: ಈಗಾಗಲೇ ಖರೀದಿಸಿದ ಜಾಗ ಉತ್ತಮ ಸ್ಥಳದಲ್ಲಿದೆ, ಇದು ಕನ್ನಡ ಭವನ ನಿರ್ಮಾಣಕ್ಕೆ ಸೂಕ್ತ ಸ್ಥಳ ಎಂದು ನಾವು ನಿಗದಿಪಡಿಸಿದೆವು. ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಜಾಗ ಖರೀದಿಸಲು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಆಸಕ್ತಿ ವಹಿಸಿ ಕೂಡಲೇ ಜಾಗ ಖರೀದಿಗೆ ಸೂಚಿಸಿದರು. ಇಷ್ಟೇ ಅಲ್ಲದೆಯೇ ಆರ್ಥಿಕ ಇಲಾಖೆ ಹಣ ಬಿಡುಗಡೆಗೆ ಸೂಚಿಸಿದರು. ಗೋವಾದ ಕನ್ನಡಿಗರು ಸ್ವಾಭಿಮಾನದಿಂದ ಬದುಕು ಬದುಕುವಂತಾಗಲು ಕನ್ನಡ ಭವನ ನಿರ್ಮಾಣ ಅಗತ್ಯ. ಇದಕ್ಕೆ ಕರ್ನಾಟಕ ಸರ್ಕಾರದ ಸಹಾಯ ಸಹಕಾರ ಅಗತ್ಯ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವನಮರದ್ ನುಡಿದರು.
ಗೋವಾದ ವೆರ್ಣಾದಲ್ಲಿ ಆಯೋಜಸಿದ್ದ ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಕನ್ನಡಿಗರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಸೂಚಿಸಿರವಂತೆಯೇ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದಲೇ ಹಣವನ್ನು ಹಾಕಿ ಗೋವಾದಲ್ಲಿ ಕನ್ನಡ ಭವನಕ್ಕೆ ಜಾಗ ಖರೀದಿಸಿದ್ದೇವೆ. ಗೋವಾದಲ್ಲಿ ಕನ್ನಡಿಗರೊಂದಿಗೆ ಗೋವಾದ ಮುಖ್ಯಮಂತ್ರಿಗಳು, ಶಾಸಕರು ಬಂದು ಕುಳಿತುಕೊಂಡು ಕನ್ನಡಿಗರ ಸಮಸ್ಯೆಗಳನ್ನು ಆಲಿಸುವಂತಾಗಬೇಕು. ಗೋವಾದಲ್ಲಿ ಕನ್ನಡಿಗರನ್ನು ಬಿಟ್ಟರೆ ನಮಗೆ ಸಾಧ್ಯವಿಲ್ಲ ಎಂಬ ಮನಸ್ಥಿತಿಗೆ ಇಲ್ಲಿನ ಸರ್ಕಾರಗಳು ಬರುವಂತಾಗಬೇಕು. ಸ್ಥಳೀಯವಾಗಿಯೂ ನೀವು ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು ಎಂದು ಸೋಮಣ್ಣ ಬೇವಿನಮರದ್ ನುಡಿದರು.
ಎಲ್ಲಿ ಸಂಘಟನೆ ಗಟ್ಟಿಯಾಗಿರುತ್ತದೆಯೋ ಅಲ್ಲಿ ಸಂಘಟನೆ ಮುರಿಯುವವರೂ ಇರುತ್ತಾರೆ. ಕನ್ನಡಿಗರೆಲ್ಲಿಯೂ ಒಗ್ಗೂಡಿ ಕನ್ನಡ ಭವನ ನಿರ್ಮಾಣಕ್ಕೆ ಶೃಮ ವಹಿಸಬೇಕು. ಆದಷ್ಟು ಬೇಗ ಕನ್ನಡ ಭವನ ನಿರ್ಮಾಣಕ್ಕೆ ಕರ್ನಾಟಕದ ಮುಖ್ಯಮಂತ್ರಿಗಳನ್ನು ಕರೆಸಿ ಗೋವಾ ಮುಖ್ಯಮಂತ್ರಿಗಳನ್ನೂ ಆಮಂತ್ರಿಸಿ ಭೂಮಿ ಪೂಜೆ ನೆರವೇರಿಸುವಂತಾಗಲಿ ಎಂದು ಸೋಮಣ್ಣ ಬೇವಿನಮರದ್ ನುಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ ಮಾತನಾಡಿ-ಗೋವಾದ ಬೈನಾದಲ್ಲಿ 500ಕ್ಕೂ ಹೆಚ್ಚು ಕನ್ನಡಿಗರ ಮನೆ ತೆರವುಗೊಳಿಸಿದ್ದರಿಂದ ಕನ್ನಡಿಗರು ನಿರಾಶ್ರಿತರಾಗಿದ್ದರು. ಗೋವಾದಲ್ಲಿ ಅಂದು ಕನ್ನಡ ಭವನ ಇದ್ದಿದ್ದರೆ ಈ ನಿರಾಶ್ರಿತರಿಗೆ ತಾತ್ಕಾಲಿಕ ವಸತಿ ಕಲ್ಪಿಸಲು ಸಾಧ್ಯವಾಗುತ್ತಿತ್ತು. ಆದರೆ ಇಂದು ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಸುಸಂದರ್ಭ ಕೂಡಿ ಬಂದಿದೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಗೋವಾದ ವೆರ್ಣಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಈಗಾಗಲೇ ಜಾಗ ಖರೀದಿಸಿದೆ. ಈಗ ಕನ್ನಡ ಭವನ ನಿರ್ಮಾಣ ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಕನ್ನಡ ಸಾಹಿತ್ಯ ಪರಿಷತ್ತು ಗೋವಾ ರಾಜ್ಯಾಧ್ಯಕ್ಷ ಸಿದ್ಧಣ್ಣ ಮೇಟಿ ಮಾತನಾಡಿ-ನಾವು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಾ ಬಂದಾಗ ನಮಗೆ ಸ್ಥಾನಮಾನಗಳು ತಮಗೆ ತಾವಾಗಿಯೇ ಸಿಗುತ್ತಾ ಬರುತ್ತದೆ. ಶೃಮ ಇಲ್ಲದೆಯೇ ಯಾವುದೇ ವ್ಯಕ್ತಿ ಮುಂದೆ ಬರಲು ಸಾಧ್ಯವಿಲ್ಲ. ಕನ್ನಡ ಭವನ ನಿರ್ಮಾಣವಾಗಬೇಕೆಂಬ ಉದ್ದೇಶದಿಂದ ನಾವು ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಲೇ ಬಂದಿದ್ದೇವೆ. ಇಂದು ಅದರ ಫಲ ಸಿಕ್ಕಿದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಜರಿ ಯಲ್ಲಾಲಿಂಗ ಮಠದ ಕಂಬಳಯ್ಯ ಮಹಾರಾಜರು, ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ್ ರೆಡ್ಡಿ, ರಾಷ್ಟ್ರೀಯ ಬಂಜಾರ ಸಮಾಜದ ಅಧ್ಯಕ್ಷ ಸುರೇಶ್ ರಜಪೂತ, ಅಖಿಲಗೋವಾ ವೀರಶೈವ ಲಿಂಗಾಯತ ಸಮಾಜದ ರುದ್ರಯ್ಯ ಹಿರೇಮಠ, ಗೋವಾ ಬಂಜಾರ ಸಮಾಜದ ಅಧ್ಯಕ್ಷ ಆನಂದ ಅಂಗಡಿ, ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಮಂಜುನಾಥ ನಾಟೀಕರ್, ಕರ್ನಾಟಕ ರಾಜ್ಯೋತ್ಸವ ಸಮೀತಿಯ ಸದಸ್ಯರಾದ ರಾಘವ ಶೆಟ್ಟಿ, ಕರ್ನಾಟಕ ರಾಜ್ಯೋತ್ಸವ ಸಮೀತಿಯ ಕಾರ್ಯಕಾರು ಸಮೀತಿಯ ಸದಸ್ಯ ರಾಜೇಶ್ ಶೆಟ್ಟಿ, ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣಕುಮಾರ್, ಕರ್ನಾಟಕ ರಕ್ಷಣಾ ವೇದಿಕೆಯ ಗೋವಾ ರಾಜ್ಯಾಧ್ಯಕ್ಷ ಬಸವರಾಜ ಗೌಡರ್, ಮಾಪ್ಸಾ ಕನ್ನಡ ಸಂಘದ ಅಧ್ಯಕ್ಷ ಶಂಭು ಶೆಟ್ಟರ್, ಕಸಾಪ ಗೋವಾ ರಾಜ್ಯ ಕಾರ್ಯದರ್ಶಿ ನಾಗರಾಜ ಗೋಂದಕರ್, ಕಸಾಪ ಗೋವಾ ರಾಜ್ಯ ಘಟಕದ ತವರಪ್ಪ ಲಮಾಣಿ ಮತ್ತಿತರರು ಉಪಸ್ಥಿತರಿದ್ದರು.
ಜುವಾರಿನಗರ ಕನ್ನಡ ಸಂಘದ ಅಧ್ಯಕ್ಷ ಶಿವಾನಂದ ಬಿಂಗಿ ಕಾರ್ಯಕ್ರಮಕ್ಕೆ ಸ್ವಾಗತ ಕೋರಿ ಕಾರ್ಯಕ್ರಮ ನಿರೂಪಿಸಿದರು. ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗೋವಾ ಕನ್ನಡ ಸಂಘಟನೆಗಳ ಪದಾಧಿಕಾರಿಗಳು ತಮ್ಮ ಅನಿಸಿಕೆ ಅಭಿಪ್ರಾಯ ಹಂಚಿಕೊಂಡರು. ಸಭೆಗೆ ಆರಂಭಕ್ಕೂ ಮುನ್ನ ಕನ್ನಡ ಭವನ ನಿರ್ಮಾಣಕ್ಕೆ ಖರೀದಿಸಿದ ಜಾಗಕ್ಕೆ ತೆರಳಿ ಭೂಮಿ ಪೂಜೆ ಸಲ್ಲಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ