ಮಂಗಳೂರು: ಎಲ್ಲೆಡೆಯೂ ಮಳೆ, ಪ್ರವಾಹ, ಪ್ರಕೃತಿ ವಿಕೋಪ, ಅಪಘಾತ, ಯುದ್ಧ ಇಂತಹ ಅನಾಹುತಗಳ ಬಗ್ಗೆಯೇ ಕೇಳಲ್ಪಡುತ್ತಿರುವ ಇಂತಹ ಸಂದರ್ಭದಲ್ಲಿ ನಗರದಿಂದ ದೂರವಾದ ಕಡಲತಡಿಯ ಪ್ರಶಾಂತವಾದ ವಾತಾವರಣದಲ್ಲಿ ಸಾಹಿತಿಗಳು ಸೇರಿಕೊಂಡು ಎಲ್ಲವನ್ನೂ ಮರೆತು ಒಟ್ಟಾಗಿ ಕುಳಿತು ಒಂದಿಷ್ಟು ಕವಿತೆ, ಸಂಗೀತ, ಹರಟೆಗಳನ್ನು ಮಾಡುವುದರಿಂದ ಮನಸ್ಸು ಪ್ರಫುಲ್ಲಿತವಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಡಾ. ಮಂಜುನಾಥ ರೇವಣಕರರು ಅಭಿಪ್ರಾಯಪಟ್ಟರು.
ಅವರು ಕಸಾಪ ಮಂಗಳೂರು ಘಟಕದ ವತಿಯಿಂದ ಗೌರವ ಕಾರ್ಯದರ್ಶಿಗಳಾದ ಡಾ. ಮುರಲೀಮೋಹನ್ ಚೂಂತಾರು ಹಾಗೂ ಡಾ. ರಾಜಶ್ರೀ ಮೋಹನ್ ದಂಪತಿಗಳು ತಮ್ಮ ಕಡಲತಡಿಯ ಮನೆ ಕನಸು ವಿನಲ್ಲಿ ಆಯೋಜಿಸಿದ ವರ್ಷ ವೈಭವ ಸಾಹಿತ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ಖ್ಯಾತ ಹಾಸ್ಯ ಲೇಖಕಿ ಪ್ರೊ. ಭುವನೇಶ್ವರಿ ಹೆಗಡೆಯವರು ಮುಖ್ಯ ಅತಿಥಿಗಳಾಗಿದ್ದು, ಕವಿಗಳು ತಮ್ಮ ಬದುಕಿನ ವಿವಿಧಾನುಭವಗಳನ್ನು ಕವನಗಳ ಮೂಲಕ ಹಂಚಿಕೊಂಡ ಬಗೆಯನ್ನು ಬಹಳವಾಗಿ ಮೆಚ್ಚಿಕೊಂಡು, ಇಂತಹ ಸಾಹಿತ್ಯ ಕಾರ್ಯಕ್ರಮಗಳು ಮನಸ್ಸಿನ ಭಾರಗಳನ್ನು ಹಗುರಾಗಿಸಿ ಒಂದಿಷ್ಟು ಕಾಲ ನೆನಪಿನಲ್ಲಿ ಉಳಿದು ಉಲ್ಲಸಿತಗೊಳಿಸುವಂತಹವುಗಳು. ನಗರದ ಒತ್ತಡದ ಬದುಕಿನಿಂದ ದೂರವಾಗಿ ಇಂತಹ ಪ್ರಶಾಂತವಾದ ವಾತಾವರಣದಲ್ಲಿ ಸೇರಿಕೊಳ್ಳಬೇಕು, ಎಲ್ಲವನ್ನೂ ಮರೆತು ಹೀಗೆ ಕಲೆಯುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ಇನ್ನೋರ್ವ ಮುಖ್ಯ ಅತಿಥಿ ಗೋವಿಂದದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿಯವರು ಡಾ. ಮುರಲೀಮೋಹನ್ ಚೂಂತಾರು ರವರ ಸಂಘಟನಾ ಚತುರತೆಗೆ ಮೆಚ್ಚಿಕೆ ಸೂಚಿಸಿ ರೆಡ್ ಕ್ರಾಸ್ ಸಂಸ್ಥೆಯ ಕೇಂದ್ರ ಸಮಿತಿಯ ಸದಸ್ಯರಾಗಿ ಆಯ್ಕೆಯಾದುದಕ್ಕೆ ಅವರನ್ನು ಅಭಿನಂದಿಸಿದರು.
ಖ್ಯಾತ ಯುವ ಗಾಯಕ ವಿನಮ್ರ ಇಡ್ಕಿದುರವರ ಮಧುರ ಗಾಯನ ಕಾರ್ಯಕ್ರಮಕ್ಕೆ ಇನ್ನಷ್ಟು ಕಳೆಯನ್ನು ನೀಡಿತು. ಗಣೇಶ ಪ್ರಸಾದ ಜೀ, ರಘು ಇಡ್ಕಿದು, ಡಾ. ಮೀನಾಕ್ಷಿ ರಾಮಚಂದ್ರ, ಡಾ. ಕಿಶನ್ ಬಾಳಿಲ, ಶೈಲಜಾ ಪುದುಕೋಳಿ, ಸಾವಿತ್ರಿ ರಮೇಶ್ ಭಟ್, ಎಸ್.ಕೆ. ಗೋಪಾಲಕೃಷ್ಣ ಭಟ್, ರೇಖಾಶಂಕರ್, ಎಂ.ಟಿ. ಭಟ್, ವಿಘ್ನೇಶ್ ಭಿಡೆ ಮುಂತಾದವರು ತಮ್ಮ ಕವನಗಳನ್ನು ವಾಚಿಸಿದರು. ಪ್ರೊ. ಭುವನೇಶ್ವರಿ ಹೆಗಡೆಯವರ ಪುತ್ರಿ ಆಭಾ ಹೆಗಡೆಯವರು ಉಪಸ್ಥಿತರಿದ್ದರು.
ಶ್ರೀಮತಿ ರತ್ನಾವತಿ ಬೈಕಾಡಿಯವರ ಕನ್ನಡ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಡಾ. ಮುರಲೀಮೋಹನ್ ಚೂಂತಾರು ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಗಣೇಶ ಪ್ರಸಾದ ಜೀಯವರು ವಂದಿಸಿದರು. ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ನಿರೂಪಿಸಿದರು. ಜಿಲ್ಲಾ ಸಮಿತಿಯ ಸನತ್ ಕುಮಾರ್ ಜೈನ್, ಪ್ರೊ. ರಮೇಶ್ ಭಟ್, ವಿದ್ಯಾ ಇಡ್ಕಿದು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ