ಉತ್ತಮ ಆರೋಗ್ಯಕ್ಕೆ ಯೋಗ ಬೇಕು

Upayuktha
0



'ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ.' ಎಂಬ ಘೋಷಾವಾಕ್ಯದೊಂದಿಗೆ 2025 ರ ಅಂದರೆ ಪ್ರಸ್ತುತ ವರ್ಷದ ಅಂತರಾಷ್ಟ್ರೀಯ ಯೋಗ ದಿನವನ್ನು ವಿಶ್ವದಲ್ಲಿ ಆಚರಿಸಲಾಗುತ್ತಿದೆ. ವಿಶ್ವಕ್ಕೆ ಭಾರತ ನೀಡಿದ ಭಾಗ್ಯವೆಂದರೆ ಅದು ಯೋಗ. ನಮ್ಮ ದೇಶ ಭಾರತವು ಯೋಗಾಭ್ಯಾಸಗಳ ತವರು ನೆಲವಾಗಿದೆ. ಯೋಗವು ಧ್ಯಾನ ಜ್ಞಾನಗಳ ಸಂಗಮ. ಮನೋಚಾಂಚಲ್ಯ ಸಮಸ್ಯೆಗೆ, ಏಕಾಗ್ರತೆಯ ಸಾಧನೆಗೆ ಯೋಗವು ಅತ್ಯಾವಶ್ಯಕ. ಮನಃಶಾಂತಿಗೆ, ನೆಮ್ಮದಿಗೆ, ಮನೋಲ್ಲಾಸಕ್ಕೆ ಯೋಗ ವಿಧಾನವೆ ಪ್ರಧಾನವಾಗಿದೆ. ಉತ್ತಮೋತ್ತಮವಾದ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೂ ಯೋಗವೇ ಬೇಕು. ಉತ್ತಮೋತ್ತಮ ಚಿಂತನೆಗಳಿಗೂ ಯೋಗವು ಅತೀ ಅಗತ್ಯ. ಭಾರತವು ಜಗತ್ತಿಗೆ ನೀಡಿದ ಒಂದು ದೊಡ್ಡ ಕೊಡುಗೆ ಯೋಗವಾಗಿದೆ.


ಪ್ರತಿ ವರ್ಷ ವಿಶ್ವ ಯೋಗ ದಿನವನ್ನು ಜೂನ್‌ 21 ರಂದು ವಿಶ್ವದಾದ್ಯಂತ ಬಹಳ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಆಧುನಿಕ ಯುಗದ ದಿನಮಾನಗಳಲ್ಲಿ ವಿಶ್ವದಾದ್ಯಂತ ಹೆಚ್ಚಿನ ಜನರು ತಮ್ಮ ಮಾನಸಿಕ ಒತ್ತಡ ಮತ್ತು ದೈಹಿಕ ಸೌಂದರ್ಯಕ್ಕಾಗಿ ಯೋಗದ ಮೊರೆ ಹೋಗುತ್ತಿದ್ದಾರೆ. ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚಿನ ಕಲೆಯಾಗಿದೆ. ಯೋಗವು ಆರು ಸಾವಿರ ವರ್ಷಕ್ಕೂ ಹಳೆಯದಾದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ಪ್ರತಿವರ್ಷ ಯೋಗ ದಿನಾಚರಣೆಯನ್ನು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ.


ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 2014 ರಲ್ಲಿ ಯೋಗದ ವಿಚಾರವಾಗಿ ವಿಷಯ ಮತ್ತು ಚರ್ಚೆಗಳು ಪ್ರಾರಂಭವಾದ ನಂತರ 2015 ರಿಂದ ವಾರ್ಷಿಕವಾಗಿ ಜೂನ್ 21 ರಂದು ವಿಶ್ವದಾದ್ಯಂತ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಯೋಗ ಮತ್ತು ಯೋಗಾಸನವು ನಮ್ಮ ಪ್ರಾಚೀನ ಭಾರತದಲ್ಲಿ ಜನ್ಮತಳೆದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. 


ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು  2014 ರಲ್ಲಿ ತಮ್ಮ ವಿಶ್ವ ಸಂಸ್ಥೆಯಲ್ಲಿನ ಸಾಮಾನ್ಯ ಸಭೆಯ ಭಾಷಣದಲ್ಲಿ ಜೂನ್ 21 ನೇ ತಾರೀಖನ್ನು ಅಂತರರಾಷ್ಟ್ರೀಯ ಯೋಗ ದಿನವೆಂದು ಆಚರಿಸಲು ಸೂಚಿಸಿದರು, ಏಕೆಂದರೆ ಜೂನ್ 21 ರಂದು ಭೂಮಿಯ ಉತ್ತರ ಗೋಳಾರ್ಧ ದಲ್ಲಿ ವರ್ಷದ ಅತ್ಯಂತ ದೀರ್ಘವಾದ ಹಗಲಿನ ದಿನವಾಗಿದೆ. ಆ ಮೂಲಕ ಪ್ರಾರಂಭವಾದ ಮೊಟ್ಟಮೊದಲ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು 2015 ಜೂನ್ 21ರಂದು ಆಚರಿಸಲಾಯಿತು. ದೆಹಲಿಯ ರಾಜಪಥದಲ್ಲಿ ಯೋಗಾಸನಗಳನ್ನು ಮಾಡುವ ಮೂಲಕ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಎರಡು ಹೊಸ ಗಿನ್ನಿಸ್ ದಾಖಲೆಯನ್ನು ಸ್ಥಾಪಿಸಿತ್ತು.


ಪದ್ಮಾಸನ (ಕಮಲದ ಭಂಗಿ), ಮುದ್ರಾಸನ,

ಅರ್ಧ ಮತ್ಸ್ಯೇಂದ್ರಾಸನ (ಸಮುದ್ರದ ಅರ್ಧ ಭಂಗಿ), ವಜ್ರಾಸನ (ಥಂಡರ್ಬೋಲ್ಟ್ ಭಂಗಿ) ,

ಸುಪ್ತ ವಜ್ರಾಸನ , ಕಾಕಾಸನ (ಕಾಗೆ ಭಂಗಿ),

ಕುಕ್ಕುಡಾಸನ (ನೆಲದ ಭಂಗಿ), ಕೂರ್ಮಾಸನ (ಆಮೆ ಭಂಗಿ), ಅಕರ್ಣ ಧನುರಾಸನ,

ಪಶ್ಚಿಮೋತ್ತನಾಸನ (ಮುಂದಕ್ಕೆ ಬೆಂಡ್ ಭಂಗಿ), ಜಾನು ಸಿರ್ಶಾಸನ (ತಲೆಯಿಂದ ಮೊಣಕಾಲಿನ ಭಂಗಿ) , ಏಕ ಪದ ಸಿರಸನ , ದಂಡಾಸನ (ಸಿಬ್ಬಂದಿ ಭಂಗಿ) , ಬದ್ಧ ಕೋನಸಾನ (ಬೌಂಡ್ ಆಂಗಲ್ ಭಂಗಿ) , ಸಿಂಹಾಸನ (ಸಿಂಹ ಭಂಗಿ) ಚಕ್ರಾಸನ , ತ್ರಿಕೋನಾಸನ, ಏಕಪಾದ ಪವನ ಮುಕ್ತಾಸನ , ದ್ವಿಪಾದ ಪ್ರಸರಣಾಸನ ಮುಂತಾದವು. ಹೀಗೆ ಯೋಗಾಸನಗಳ ಹೆಸರುಗಳ ಪಟ್ಟಿ ಬೆಳೆಯುತ್ತಲೆ ಹೋಗುತ್ತದೆ. ಹಾಗಾದರೆ ನಾವೀಗ ಈ ಯೋಗ ಮತ್ತು ಯೋಗಾಸನಗಳ ಮಹತ್ವ, ಅದರ ಪ್ರಯೋಜನಗಳನ್ನು ತಿಳಿಯೋಣ.


ಯೋಗಾಸನವು ದೈಹಿಕ ಚಟುವಟಿಕೆಗಿಂತ ಹೆಚ್ಚಾಗಿ ಮಾನಸಿಕ ಚಟುವಟಿಕೆಯಾಗಿದೆ. ಇದು ಸ್ವಯಂ ಅರಿವು ಅಂದರೆ ತನ್ನನ್ನು ತಾನು ತಿಳಿಯುವಂತೆ ಮಾಡುವುದು, ಧ್ಯಾನ ಅಂದರೆ ತನ್ನಲ್ಲಿ ಪರಮಾತ್ಮನನ್ನು ಏಕಾಗ್ರ ಚಿತ್ತದಿಂದ ಕಾಣುವುದು, ಉಸಿರಾಟದ ಕೆಲಸ ಮತ್ತು ಪಠಣವನ್ನು ಒಳಗೊಂಡಿರುತ್ತದೆ. ಯೋಗಾಸನಗಳನ್ನು ಮಾಡುವುದು ನಮ್ಮ ಸಂಪೂರ್ಣ ಯೋಗಕ್ಷೇಮಕ್ಕೆ ಅನುಕೂಲಕರವಾಗಿದೆ.


ಯೋಗಾಸನವು ಮನಸ್ಸಿನ ಆರೋಗ್ಯ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯೋಗಾಸನವು ಶರೀರದಲ್ಲಿ ಉಸಿರಾಟದ ಮಾದರಿಯನ್ನು ನಿಯಂತ್ರಿಸುತ್ತದೆ. ಯೋಗಾಸನವು ಖಿನ್ನತೆಯನ್ನು ಹೋಗಲಾಡಿಸಿ ಲವಲವಿಕೆಯನ್ನು ನೀಡುತ್ತದೆ.


ಯೋಗಾಸನವು ನಮ್ಮ ದೈಹಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. ಶರೀರವು ನಮ್ಯತೆಯನ್ನು ಹೊಂದುವ ಮೂಲಕ ತನ್ನ ಆರೋಗ್ಯ ವೃದ್ಧಿಗೆ ಕಾರಣವಾಗುತ್ತದೆ. ಯೋಗಾಸನದ ಭಂಗಿಗಳು ದೇಹವನ್ನು ನಮ್ಯತೆಯತ್ತ ಕೊಂಡೊಯ್ದು, ತೀವ್ರತರ ಅನಾರೋಗ್ಯದ ಖಾಯಿಲೆಗಳಿಂದ ನಮ್ಮನ್ನು ದೂರ ಮಾಡುತ್ತದೆ. ಇದು ಎಲ್ಲಾ ವಯಸ್ಸಿನವರಿಗೂ ದೈಹಿಕ ಆರೋಗ್ಯ ಸುಧಾರಣೆಗಾಗಿ ಅತ್ಯಗತ್ಯವಾಗಿದೆ.


ಯೋಗಾಸನವು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಒತ್ತಡವು ನಮ್ಮನ್ನು ಚಿಂತೆಯತ್ತ ಕೊಂಡೊಯ್ದು ಚಿತೆಗೆ ದೂಡುತ್ತದೆ. ಒತ್ತಡವು ನಮ್ಮನ್ನು ಹಲವಾರು ರೋಗಗಳಿಗೆ ಗುರಿಪಡಿಸುತ್ತದೆ. ವಿಶೇಷವಾಗಿ ಒತ್ತಡವನ್ನು ನಿರ್ವಹಣೆ ಮಾಡಲು ಮತ್ತು ನಿವಾರಣೆ ಮಾಡಲಿಕ್ಕೆಂದೇ ಹಲವು ರೀತಿಯ ಯೋಗಾಸನದ ಭಂಗಿಗಳಿವೆ. ನಮ್ಮ ಬದುಕನ್ನು ಬದಲಾಯಿಸುವ ಶಕ್ತಿ ಯೋಗಾಸನಕ್ಕೆ ಇದೆ. ಇದು ನಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ.


ಯೋಗಾಸನವು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ದೇಹಕ್ಕೆ ಶಕ್ತಿ, ನಿದ್ರೆಯ ಮಾದರಿ ಮತ್ತು ರೋಗನಿರೋಧಕ ಶಕ್ತಿಯನ್ನು ನೀಡುವ ಮೂಲಕ ಆರೋಗ್ಯವನ್ನು ಸುಧಾರಿಸುತ್ತದೆ. ಬೆಳಿಗ್ಗೆ ಬೇಗನೆ ಏಳುವ ಮೂಲಕ ಶರೀರವನ್ನು ದಿನಪೂರ್ತಿ ಲವಲವಿಕೆಯಿಂದಿಡಲು ಯೋಗಾಸನವು ಅನುಕೂಲಕಾರಿಯಾಗಿದೆ.


ಆಗಿಂದಾಗ್ಯೆ ಕೆಲವು ಕಹಿ ಘಟನೆಗಳಿಂದ ಉಂಟಾಗುವ ಮಾನಸಿಕ ತುಮುಲತೆ ಮತ್ತು ನೋವುಗಳನ್ನು ತಡೆಯಲು ಯೋಗಾಸನವು ಸಹಾಯಕವಾಗುತ್ತದೆ. ನಿರ್ದಿಷ್ಟ ಮತ್ತು ನಿಯಮಿತ ಯೋಗಾಸನಗಳು ನೈಸರ್ಗಿಕವಾಗಿ ಶರೀರ ಮತ್ತು ಮನಸ್ಸಿಗೆ ಪರಿಹಾರವನ್ನು ಪಡೆಯಲು ಸಹಾಯ ಮಾಡುತ್ತವೆ.


ಯೋಗಾಸನವು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಪ್ರತೀ ವ್ಯಕ್ತಿಯ ಸ್ವಯಂ ಅರಿವು ಆಗಿದೆ. ಅರಿತುಕೊಂಡ ಮೇಲೆ ಯೋಗಾಸನದ ಮೂಲಕ ದಿನಂಪ್ರತಿ ಹೃದಯವ ಆರೋಗ್ಯವನ್ನು ಕಾಪಾಡಲು ವ್ಯಕ್ತಿ ಮುಂದಾಗಬೇಕು. ಆರೋಗ್ಯ ಮತ ಹೃದಯವನ್ನು ಹೊಂದಲುಲು ಯೋಗಾಸನವೆಂಬ ಸಾಧನವು ಅನುಕೂಲಕಾರಿಯಾಗಿದೆ.


ಯೋಗಾಸನವು ಶರೀರದಲ್ಲಿನ ಮೂಳೆಗಳು ಮತ್ತು ಕೀಲುಗಳನ್ನು ಶಕ್ತಿಯುತವನ್ನಾಗಿಸುತ್ತದೆ. ವಯಸ್ಸು ಹೆಚ್ಚಾದಂತೆ ಶರೀರದಲ್ಲಿ ಕೀಲುಗಳು ಮತ್ತು ಮೂಳೆಗಳು ಶಕ್ತಿಹೀನಗೊಳ್ಳುತ್ತವೆ. ನಿಯಮಿತ ಯೋಗಾಸನ ಅಭ್ಯಾಸದಿಂದ ಶರೀರದಲ್ಲಿ ಶಕ್ತಿಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.


ಯೋಗಾಸನವು ಶರೀರದ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಶರೀರದ ತೂಕವು ಸಮತೋಲನವನ್ನು ಮೀರಿದಾಗ ದೇಹದಲ್ಲಿ ಆಲಸ್ಯ, ಜಡತ್ವ ಹೆಚ್ಚಾಗುತ್ತವೆ. ನಿಯಮಿತವಾದ ಯೋಗಾಭ್ಯಾಸದಿಂದ ಶರೀರದ ತೂಕವನ್ನು ಏರುಪೇರು ಆಗದಂತೆ ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ.


ಯೋಗಾಸನವು ಮಾನಸಿಕ ಶಾಂತತೆಯನ್ನು ಪ್ರೋತ್ಸಾಹಿಸುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಯಲ್ಲಿ ಮಹತ್ತರ ಪಾತ್ರ ವಹಿಸುವ ಯೋಗಾಸನವು ದೈಹಿಕ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಹಾತ್ಮ ಗಾಂಧೀಜಿಯವರು ಹೇಳಿದಂತೆ ಆರೋಗ್ಯರ ಶರೀರದಲ್ಲಿ ಆರೋಗ್ಯಕರ ಮನಸ್ಸಿರುತ್ತದೆ. ದೇಹ ಮತ್ತು ಮನಸ್ಸುಗಳು ಆರೋಗ್ಯವನ್ನು ಕಾಯ್ದುಕೊಂಡರೆ ಮನಃಶಾಂತಿ ತಾನಾಗಿಯೇ ಲಭಿಸುತ್ತದೆ. ಇದು ಯೋಗಾಸನದಿಂದ ಸಾಧ್ಯವಾಗುತ್ತದೆ.


ಯೋಗವು ಕೇವಲ ದೈಹಿಕ ಅಭ್ಯಾಸ ಮಾತ್ರವಲ್ಲದೆ ಆರೋಗ್ಯ, ಯೋಗಕ್ಷೇಮ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಪೂರಕವಾದ ಅಗತ್ಯ ವಿಧಾನವಾಗಿದೆ. ನಮ್ಮ ಆರೋಗ್ಯಕ್ಕೆ , ತಾರುಣ್ಯಕ್ಕೆ, ಲವಲವಿಕೆಗೆ ಯೋಗಾಭ್ಯಾಸವು ಬಹಳ ಅಗತ್ಯವಾಗಿದ್ದು ಮತ್ತು ಇದು ಎಲ್ಲರ ಜೀವನ ವಿಧಾನವಾಗಲಿ ಎಂಬುದೇ ಆಶಯ ಎಂದು ಹೇಳುತ್ತಾ ಎಲ್ಲರಿಗೂ “ಅಂತಾರಾಷ್ಟ್ರೀಯ ಯೋಗ ದಿನದ ಮೂಲಕ ಸರ್ವರಿಗೂ ಆರೋಗ್ಯ ಲಭಿಸಲಿ. ಸರ್ವೇಜನಾ: ಸುಖಿನೋ ಭವಂತು”.


-ಕೆ.ಎನ್. ಚಿದಾನಂದ.  ಹಾಸನ.

                                                




 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top