ಉಡುಪಿ: ಡಾ. ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ನೇತಾಜಿ ಸುಭಾಷ್ ಚಂದ್ರ ಸರಕಾರಿ ಪ್ರೌಢ ಶಾಲೆ ಗಾಂಧಿನಗರ ಮರವಂತೆ ಇವರ ಸಹಯೋಗದಲ್ಲಿ ಮಕ್ಕಳಿಗಾಗಿ ಕಾರಂತರು-2 ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಡಾ.ಕಾರಂತರ ಪರಿಚಯ, ರಂಗವಲ್ಲಿಯ ಮೂಲಕ ಕಾರಂತರು ಕಾರ್ಯಕ್ರಮದಲ್ಲಿ ಖ್ಯಾತ ರಂಗವಲ್ಲಿ ಕಲಾವಿದೆ ಡಾ. ಭಾರತಿ ಮರವಂತೆ ಅವರಿಂದ ಶಾಲಾ ವಿದ್ಯಾರ್ಥಿಗಳಿಗೆ ಕಾರಂತರ ಪುಸ್ತಕಗಳಲ್ಲಿರುವ ಚಿತ್ರಗಳನ್ನು ರಂಗವಲ್ಲಿಯ ಮೂಲಕ ಚಿತ್ರಿಸುವ ನೂತನ ಕಾರ್ಯಕ್ರಮವು ಶಾಲೆಯ ವಸಂತಿ ಕುಮಾರಿ ಕಲಾಂಗಣದಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಲಾ ಸಂಸ್ಥಾಪಕ ಸಮಿತಿಯ ಅಧ್ಯಕ್ಷ ಎಸ್ ಜನಾರ್ದನ ಮರವಂತೆ, ಡಾ. ಶಿವರಾಮ ಕಾರಂತರು ಸಾಹಿತ್ಯ ಮೂಲಕ ಸಮಾಜದಲ್ಲಿ ಅನೇಕ ಬದಲಾವಣೆಯನ್ನು ತಂದವರು, ಇಂದಿನ ಯುವ ಪೀಳಿಗೆಯು ಅವರ ಕುರಿತು ಇನ್ನಷ್ಟು ವಿಚಾರಗಳನ್ನು ಅರಿಯುವುದು ಅತ್ಯಗತ್ಯ ಎಂದರು.
ಖ್ಯಾತ ರಂಗವಲ್ಲಿ ಕಲಾವಿದೆ ಉಪನ್ಯಾಸ ನೀಡಿ ಮಾತನಾಡಿ, ಮಕ್ಕಳ ಕುರಿತು ವಿಶೇಷ ಕಾಳಜಿ ಹೊಂದಿದ್ದ ಕಾರಂತರು ಮಕ್ಕಳಿಗಾಗಿ ಅನೇಕ ಪುಸ್ತಕಗಳನ್ನು ಸರಳ ಬರವಣಿಗೆ ಮೂಲಕ ರಚಿಸಿದ್ದು, ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು, ಡಾ. ಶಿವರಾಮ ಕಾರಂತರು ಪ್ರಯೋಗಶೀಲತೆಯ ಮನೋಭಾವದಿಂದಾಗಿ ಸಾಹಿತ್ಯ ಮಾತ್ರವಲ್ಲದೇ ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು, ಕಾರಂತರನ್ನು ಕೇಂದ್ರವಾಗಿಟ್ಟುಕೊಂಡು ಪಠ್ಯಪೂರಕ ಚಟುವಟಿಗಳ ಮೂಲಕ ವಿದ್ಯಾರ್ಥಿಗಳ ವ್ಯಕ್ತಿ ವಿಕಸನಕ್ಕೆ ಸಹಕಾರಿಯಾಗುವಂತಹ ಕಾರ್ಯಕ್ರಮದ ಅಯೋಜನೆಗೊಳಿಸುವುದು ಟ್ರಸ್ಟಿನ ಮುಖ್ಯ ಉದ್ದೇಶವಾಗಿದೆ ಎಂದರು.
ಡಾ. ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಡಾಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ರಂಗೋಲಿ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಸುಜಾತಾ, ಶಾಲಾ ರಜತೋತ್ಸವ ಸಮಿತಿಯ ಅಧ್ಯಕ್ಷ ದಯಾನಂದ ಬಳೆಗಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಾ. ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಸ್ವಾಗತಿಸಿ, ಅಧ್ಯಾಪಕ ರಮೇಶ್ ನಿರೂಪಿಸಿ, ಹಿತೇಶ್ ಶೆಟ್ಟಿ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ