ಕಲ್ಲಡ್ಕ: ‘ಶ್ರೀರಾಮ’ ಫ್ಲೈ ಓವರ್ ಸಾಂಕೇತಿಕ ಉದ್ಘಾಟನೆ

Upayuktha
0


ಬಂಟ್ವಾಳ: ಇಂದು (ಜೂನ್ 2) ಬೆಳಗ್ಗೆ 10 ಗಂಟೆಗೆ ಬಹುನಿರೀಕ್ಷೆಯ ಕಲ್ಲಡ್ಕ “ಶ್ರೀರಾಮ” ಪ್ಲೈ ಓವರ್ ಅನ್ನು  ಆರ್.ಎಸ್.ಎಸ್. ಪ್ರಮುಖರಾದ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರು ಸಾಂಕೇತಿಕವಾಗಿ ಉದ್ಘಾಟನೆ ಮಾಡಿದರು.


ನೂತನವಾಗಿ ನಿರ್ಮಾಣವಾದ ಕಲ್ಲಡ್ಕದ ಪ್ಲೈ ಓವರ್ ಗೆ ಕಲ್ಲಡ್ಕ ಶ್ರೀರಾಮ ಪ್ಲೈ ಓವರ್ ಎಂದು ಸ್ಥಳೀಯರು ನಾಮಕರಣ ಮಾಡಿದ್ದಾರೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅತ್ಯಂತ ಪ್ರಮುಖವಾದ ಅತಿದೊಡ್ಡ ಫ್ಲೈಓವರ್ ಇದಾಗಿದ್ದು, ಹೆದ್ದಾರಿ ಕಾಮಗಾರಿಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅಭಿನಂದನೆ ಸಲ್ಲಿಸಿದರು.


ಮೇ ಅಂತ್ಯದ ವೇಳೆ ಕಲ್ಲಡ್ಕ ಪ್ಲೈ ಓವರ್ ಸಂಪೂರ್ಣವಾಗಲಿದ್ದು ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಕೆ.ಎನ್.ಆರ್. ಕಂಪನಿಯವರು ತಿಳಿಸಿದ್ದರು.


ಇದೀಗ ಆರಂಭಿಕವಾಗಿ ಒಂದು ಪಾರ್ಶ್ವದಲ್ಲಿ ವಾಹನಗಳನ್ನು ಸಂಚರಿಸಲು ಬಿಡಲಾಗಿದೆ.  ಇದಕ್ಕಾಗಿ ಈಗಾಗಲೇ ಒಂದು ಬದಿಯಲ್ಲಿ ರಸ್ತೆಯಲ್ಲಿ ಎತ್ತರದ ಕಾಂಕ್ರೀಟ್ ಗೋಡೆಯನ್ನು ಕಟ್ಟಲಾಗಿದೆ. ನೀರು ಹರಿದುಹೋಗಲು ಪೈಪ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಕಾಮಗಾರಿ ಇನ್ನೂ ಬಾಕಿ ಇದೆ. ಬಿ.ಸಿ.ರೋಡ್ ನಿಂದ ಅಡ್ಡಹೊಳೆವರೆಗೆ 64 ಕಿ.ಮೀ. ಉದ್ದದ ಹೆದ್ದಾರಿ ಕಾಮಗಾರಿ 2017ರಲ್ಲಿ ಎಲ್. ಆಂಡ್ ಟಿ ಕಂಪನಿಗೆ 821 ಕೋಟಿ ರೂಗಳಿಗೆ ವಹಿಸಲಾಗಿತ್ತು. ಹಲವು ಕಾರಣಕ್ಕೆ ವಿಳಂಬವಾಗಿ ಬಳಿಕ ಅರ್ಧದಲ್ಲೇ ಸ್ಥಗಿತಗೊಂಡಿತು.  


2021ರಲ್ಲಿ 64 ಕಿ.ಮೀ. ಉದ್ದದ ಹೆದ್ದಾರಿಯನ್ನು 49 ಕಿ.ಮೀ ಹಾಗೂ 15 ಕಿ.ಮೀ. ಎಂದು ವಿಭಾಗಿಸಿ ಕೆಎನ್ ಆರ್ ಕನ್ಸ್ ಸ್ಟ್ರಕ್ಷನ್ಸ್ ಹೈದರಾಬಾದ್ ಹಾಗೂ ಎಂ. ಔತಡೆ ಪ್ರೈ. ಲಿ. ಮಹಾರಾಷ್ಟ್ರ ಕಂಪನಿಗಳಿಗೆ ಗುತ್ತಿಗೆ ನೀಡಲಾಯಿತು. ಅಲ್ಲಿಂದ ಕಾಮಗಾರಿಗೆ ವೇಗ ದೊರಕಿತು.


ಪಾಣೆಮಂಗಳೂರು, ಮೆಲ್ಕಾರ್, ಮಾಣಿ, ನೆಕ್ಕಿಲಾಡಿ, ಉಪ್ಪಿನಂಗಡಿ ಜಂಕ್ಷನ್, ಉಪ್ಪಿನಂಗಡಿ ಸುಬ್ರಹ್ಮಣ್ಯ ಕ್ರಾಸ್, ನೆಲ್ಯಾಡಿ, ಪೆರಿಯಶಾಂತಿಗಳಲ್ಲಿ ಓವರ್ ಪಾಸ್ ಮೇಲ್ಸೇತುವೆ ಹಾಗೂ ಕಲ್ಲಡ್ಕದಲ್ಲಿ 2.1 ಕಿ.ಮೀ. ಉದ್ದದ ಫ್ಲೈಓವರ್ ನಿರ್ಮಾಣ ಕಾಮಗಾರಿ ಏಕಕಾಲದಲ್ಲಿ ಆರಂಭಗೊಂಡಿತು.


ಕಲ್ಲಡ್ಕದ ಪೂರ್ಲಿಪ್ಪಾಡಿಯಿಂದ ಕೃಷ್ಣಕೋಡಿಯವರೆಗೆ ಒಟ್ಟು 2.1 ಕಿ.ಮೀ. ಉದ್ದರ ಈ ಮೇಲ್ಸೇತುವೆಯಲ್ಲಿ 70 ಪಿಲ್ಲರ್ ಗಳಿವೆ. ಒಂದರಿಂದ ಇನ್ನೊಂದಕ್ಕೆ 30 ಮೀಟರ್ ಅಂತರವಿದ್ದು, ಒಟ್ಟು 72 ಸ್ಪಾನ್‌ಗಳ ಫ್ಲೈಓವರ್ ಇದಾಗಿದೆ.


ಕಂಪೆನಿಯವರ ಮಾತಿನಂತೆ ಕಾಮಗಾರಿ ಮುಗಿಯದ ಕಾರಣ ಪ್ಲೈ ಓವರ್ ನ ಒಂದು ಭಾಗದಲ್ಲಿ ವಾಹನಗಳನ್ನು ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಎರಡು ವಾರಗಳ ಬಳಿಕ ಇನ್ನೊಂದು ಭಾಗದಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಕಂಪೆನಿ ಮೂಲಗಳು ತಿಳಿಸಿವೆ.


ಉಳಿದಂತೆ ನರಹರಿ ಭಾಗದಲ್ಲಿ ಕಾಮಗಾರಿಗೆ ವೇಗ ದೊರೆತಿದ್ದು, ಮಾಣಿ ಅಂಡರ್ ಪಾಸ್‌ನಲ್ಲಿ ಒಂದು ಭಾಗದಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ.


ಹಾಗಾಗಿ ಮಳೆಗಾಲದಲ್ಲಿ ಬಹುತೇಕ ಕಾಂಕ್ರೀಟ್ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಇದರಿಂದ ವಾಹನ ಸವಾರರು ತುಸು ನಿಟ್ಟುಸಿರು ಬಿಡುವಂತಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top