ಶಕ್ತಿ ದೇವತೆಯ ಆರಾಧನೆಯ ಆಷಾಢಮಾಸ

Upayuktha
0


"ಚಾಮುಂಡಿ ಎಂಬೋಳು

ಸೀಮೇಗೆ ದೊಡ್ಡೋಳು

ಮಾಯದ ಬೂದಿ ಸೆರಗಲ್ಲಿ

ಕಟ್ಕೊಂಡು ನ್ಯಾಯಕ್ಕೆ ಮುಂದಾಗಿ

ಹೊರಟ್ಯಾಳು".


ಅನ್ನುವ ಜಾನಪದ ಗೀತೆಯಂತೆ ಶಕ್ತಿದೇವತೆಯ ಆರಾಧನೆಯು ಆಷಾಢಮಾಸದಲ್ಲಿ ನಡೆಯುತ್ತದೆ. ಆಷಾಢ ಮಾಸವು ಹಿಂದೂ ಸಂಪ್ರದಾಯದಲ್ಲಿ ವಿಷ್ಣುವಿಗೆ ಶ್ರಾವಣಮಾಸವಿರುವಂತೆ, ಶಿವನಿಗೆ ಕಾರ್ತಿಕಮಾಸ, ಶಕ್ತಿದೇವತೆಗಳಿಗೆಂದೇ ಇರುವುದು ಆಷಾಡಮಾಸ. ಈ ಮಾಸವನ್ನು ಆಡಿಮಾಸವೆಂದು ಶುಕ್ರವಾರದಂದು ನಾಡಿನೆಲ್ಲೆಡೆ ಶಕ್ತಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಶಕ್ತಿ ದೇವತೆಗಳು ಕಷ್ಟಕಾಲದಲ್ಲಿ ನಮ್ಮ ಕೈಹಿಡಿಯುವರು ಎಂಬ ನಂಬಿಕೆ ನಮ್ಮಲ್ಲಿದೆ.


ಉತ್ತರ ಭಾರತ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಈ ಮಾಸವನ್ನು ಪಾಲಿಸಲಾಗುತ್ತದೆ. ಈ ಮಾಸ ಪ್ರಾರಂಭವಾದ ನಂತರ ಶುಭಕಾರ್ಯಗಳಾದ ಮದುವೆ, ಉಪನಯನ, ಗೃಹಪ್ರವೇಶ, ಜಮೀನುಕೊಳ್ಳುವದು, ಮುಂತಾದ ಕಾರ್ಯಗಳನ್ನು ಮಾಡುವದಿಲ್ಲ. ಇದಕ್ಕೆ ಕಾರಣವೂ ಇದೆ. ಹಿಂದೆ ಆಷಾಢಮಾಸದಲ್ಲಿ ಮಳೆ ಹೆಚ್ಚಾಗುತ್ತಿತ್ತು. ಮನೆಯಿಂದ ಹೊರಹೋಗುವುದೇ ಕಷ್ಟವಾಗುತ್ತಿತ್ತು. ನಮ್ಮ ದೇಶದ ಕೃಷಿಕನಿಗೆ ಹೊಲಗದ್ದೆಗಳಲ್ಲಿ ವಿಪರೀತ ಕೆಲಸಗಳು ಇರುತ್ತಿದ್ದರಿಂದ ಬೇರೆ ವ್ಯವಹಾರಗಳಿಗೆ ಸಮಯವಿರುತ್ತಿರಲಿಲ್ಲ. ಈ ಕಾರಣಗಳಿಂದ ಆಷಾಢದಲ್ಲಿ ಶುಭ ಕಾರ್ಯಗಳನ್ನು ಹಿರಿಯರು ನಿಷೇಧಿಸಿರಬಹುದು. ಶಾಸ್ತ್ರದಲ್ಲಿ ಅಶುಭಮಾಸವೆಂದು ಎಲ್ಲೂ ಹೇಳಿಲ್ಲ.


ಮದುವೆಯಾದ ಹೊಸವರ್ಷದಲ್ಲಿ ಅತ್ತೆ, ಸೊಸೆ ಒಟ್ಟಿಗೆ ಇರಬಾರದೆಂಬ ನಿಷೇಧ ಕೆಲವರಲ್ಲಿದೆ. ಆಷಾಢದಲ್ಲಿ ಮಳೆ ಹೆಚ್ಚಾಗುವದರಿಂದ ಹೊಲಗದ್ದೆ, ಮನೆಗಳಲ್ಲಿ ಕೆಲಸ ಹೆಚ್ಚು. ಅದೂ ಮದುವೆಯಾದ ಹೆಣ್ಣಿಗೆ ಕೆಲಸದ ಒತ್ತಡ ಹೆಚ್ಚಾಗಿ ಅತ್ತೆ ಸೊಸೆಯರಲ್ಲಿ ವೈಮನಸ್ಸು ಉಂಟಾಗಬಹುದೆಂದು ಹಿರಿಯರು ಈ ನಿಯಮ ಮಾಡಿರಬಹುದು. ಕೆಲವು ಕಡೆ ನವವಿವಾಹಿತರು ದೂರವಿರುವದನ್ನು ನೋಡುತ್ತೇವೆ. ಆಷಾಢ ಮಾಸದಲ್ಲಿ ಹೆಣ್ಣು ಗರ್ಭಧರಿಸಿದರೆ ಮಗು ಬೇಸಿಗೆಯಲ್ಲಿ ಹುಟ್ಟುತ್ತದೆ. ಹಿಂದೆ ಹೆಚ್ಚಿನ ವೈದ್ಯಕೀಯ ಸೌಲಭ್ಯಗಳು ಸಿಗುತ್ತಿಲ್ಲವಾದ್ದರಿಂದ ಬೇಸಿಗೆಯನ್ನು ಉತ್ತಮ ದಿನಗಳೆಂದು ಗ್ರಹಿಸುತ್ತಿರಲಿಲ್ಲ. ಅತೀ ಉಷ್ಣತೆಯು ತಾಯಿ ಮಗುವಿನ ಆರೋಗ್ಯ ಸಮಸ್ಯೆಯಾಗುವದೆಂದು, ಈ ಹಿನ್ನೆಲೆಯಲ್ಲಿ ಹೊಸದಾಗಿ ಮದುವೆಯಾದವರನ್ನು ಪ್ರತ್ಯೇಕ ಇರಿಸಲಾಗುತ್ತಿತ್ತು. ಆದರೆ ಈಗ ಸ್ತ್ರೀ ಪುರುಷ ಬೇಧವಿಲ್ಲದೇ ಸಮಾಜದಲ್ಲಿ ದುಡಿಯುತ್ತಿರುವುದರಿಂದ ಈ ಪದ್ಧತಿಗಳೆಲ್ಲ ಮಾಯವಾಗುತ್ತಿವೆ.


ಆಷಾಢ ಮಾಸದ ಮಹತ್ವ:

ಶಿವ ಪಾರ್ವತಿಗೆ ಅಮರತ್ವದ ಮಹತ್ವ ಹೇಳಿದ್ದು,ಗಂಗೆ ಭೂಮಿಗೆ ಉತ್ತರಾಭಿಮುಖವಾಗಿ ಹರಿದಿದ್ದು, ಮಹಾಪತಿವ್ರತೆ ಅನಸೂಯೆ ನಾಲ್ಕು ಸೋಮವಾರ ಪೂಜೆ ಮಾಡಿದ್ದು ಈ ಮಾಸದಲ್ಲಿಯೇ. ಅಮರನಾಥ ಹಿಮಲಿಂಗ ದರ್ಶನ, ಪ್ರಥಮ ಏಕಾದಶಿ ವ್ರತ, ಆಷಾಢ ಶುಕ್ರವಾರದ ಪೂಜೆ, ಬಲಿ ಚಕ್ರವರ್ತಿ ಶಾಂಡಿಲ್ಯ ವ್ರತಮಾಡಿದ್ದು, ಇಂದ್ರನು ಗೌತಮರಿಂದ ಸಹಸ್ರಾಕ್ಷನಾಗು ಎಂಬ ಶಾಪ ಪಡೆದು ಅದರಿಂದ ನಾಲ್ಕು ಸೋಮವಾರ ಪೂಜೆ ಮಾಡಿ ವಿಮುಕ್ತನಾಗಿದ್ದು, ಸುಮಂಗಲಿಯರು ದೀರ್ಘಕಾಲದ ಮಾಂಗಲ್ಯ ಪ್ರಾಪ್ತಿಗಾಗಿ ಜ್ಯೋತಿರ್ಭೀಮೇಶ್ವರ ವ್ರತ ಮಾಡಿ ಭಕ್ತಿಯಿಂದ ಪೂಜಿಸುವುದು ಇದೇ ಮಾಸದಲ್ಲಿ. ಈ ಮಾಸದ ಗುರು ಪೌರ್ಣಿಮೆಯಂದು ಎಲ್ಲ ಮಂದಿರ, ಮಠಗಳಲ್ಲಿ ಚಾತುರ್ಮಾಸ ವ್ರತ ಪ್ರಾರಂಭಿಸುವದು, ಕುಮಾರ ಷಷ್ಠಿ, ಶಮಿ ಗೌರೀವೃತ, ಭಾನುಸಪ್ತಮಿ, ಗೋಪದ್ಮವ್ರತ, ಚಾಮುಂಡೇಶ್ವರಿ ಜನ್ಮದಿನ ಪ್ರಮುಖ ಆಚರಣೆಗಳಾಗಿವೆ. ನಾವೂ ಶಕ್ತಿ ದೇವತೆಗಳನ್ನು ಪೂಜಿಸಿ  ಧನ್ಯರಾಗೋಣ.





- ಗಿರಿಜಾ ಎಸ್. ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top