ಮಕ್ಕಳಿಗೆ ರಜೆಯನ್ನು ಆನಂದಿಸಲು ಬಿಡಿ

Upayuktha
0



ಬೇಸಿಗೆಯ ರಜೆಯಲ್ಲಿ ಮನೆಯಲ್ಲೇ ಇರುವ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸ, ಮಾನಸಿಕ ಆರೋಗ್ಯ ಇತ್ಯಾದಿಗಳ ಬಗ್ಗೆ ಟಿವಿಯಲ್ಲಿ, ಪೇಪರಿನಲ್ಲಿ, ವಾಟ್ಸಪ್ಪು ಮೊದಲಾದ ಜಾಲ ತಾಣಗಳಲ್ಲಿ ತಜ್ಞರು ಎಂದು ಕರೆಸಿಕೊಂಡವರು ಹಾಕುವ ಲೇಖನಗಳನ್ನು ಓದಿ ಅದೆಷ್ಟೋ ತಂದೆ ತಾಯಿಯರಿಗೆ ತಲೆ ಕೆಟ್ಟುಹೋಗಿದೆ ಪಾಪ. 


ಯಾರೂ ಕೂಡಾ ಈ ಕುರಿತು ಅತಿಯಾಗಿ ಚಿಂತಿಸಬೇಕಾದ ಅಗತ್ಯ ಇಲ್ಲ. ಇದು ಆ ಮಕ್ಕಳಿಗೆ ರಜೆಯ ಸಮಯ. ಅವರಿಗೆ ವಿಶ್ರಾಂತಿಯ ಅಗತ್ಯ ಇದೆ. ಹೀಗಾಗಿ ರಜೆಯಲ್ಲಿ ಎಲ್ಲಾ ವಿದ್ಯಾರ್ಥಿಗಳೂ ಕೂಡಾ ಮನೆಯಲ್ಲೇ ಇರಲಿ. ಅವರಷ್ಟಕ್ಕೆ ಅವರನ್ನು ಆರಾಮಾಗಿ ಇರಲು ಬಿಡಿ. 


ಈ ರಜಾ ಸಮಯದಲ್ಲಿಯಾದರೂ ನೀವು ತಂದೆ ತಾಯಿಯರು ನಿಮ್ಮ ಮಕ್ಕಳ ಜೊತೆ ಸಮಯ ಕಳೆಯಿರಿ. ನಿಮ್ಮ ಮಕ್ಕಳಿಗೆ ಮನಸ್ಸಿದ್ದರೆ ಅವರನ್ನು ನಿಮ್ಮ ಜೊತೆ ಕೆಲಸಕ್ಕೆ ಕರೆದುಕೊಂಡು ಹೋಗಿ. ಅವರು ಕೆಲಸದಲ್ಲಿ ನಿಮಗೆ ಸಹಾಯ ಮಾಡಲಿ. ಅಥವಾ ಈ ರಜೆಯಲ್ಲಿ ಮಕ್ಕಳು ಅವರಾಗಿಯೇ ಬೇರೆ ಏನಾದರೂ ಕೆಲಸ ಮಾಡಿ ಸಂಪಾದಿಸಲು ಬಯಸಿದರೆ ಅದಕ್ಕೆ ಅನುವು ಮಾಡಿಕೊಡಿ. ಬೇಡ ಅನ್ನಬೇಡಿ. ಅದರಿಂದ ಅವರಿಗೂ ಜೀವನಾನುಭವ ಸಿಗುತ್ತದೆ. 


ಹಲವು ವಿದ್ಯಾರ್ಥಿಗಳು ಈ ಹಿಂದೆ ರಜೆಯನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಮನೆಯಲ್ಲಿ ಇದ್ದುಕೊಂಡೇ ಕಂಪ್ಯೂಟರ್ ಕಲಿತವರಿದ್ದಾರೆ, ಹೊಲಿಗೆ ಕಲಿತವರಿದ್ದಾರೆ, ಯಕ್ಷಗಾನ ಕಲಿತವರಿದ್ದಾರೆ. ಸಾಧ್ಯವಾದರೆ ನೀವೇ ನಿಮ್ಮ ಮಕ್ಕಳಿಗೆ ಇಂತಹ ಕೌಶಲ್ಯಗಳ ತರಬೇತಿ ಕೊಡಿಸಿ, ನೀವೇ ಅವರಿಗೆ ಯಾವುದಾದರೂ ಕೆಲಸಗಳನ್ನು ಹೇಳಿಕೊಟ್ಟು ಭವಿಷ್ಯದಲ್ಲಿ ಅವರನ್ನು ಸ್ವಾವಲಂಬಿಗಳಾಗುವಂತೆ ಮಾಡಿ. 


ಮನೆಯಲ್ಲೇ ಇದ್ದರೆ ತಂಟೆ ಮಾಡ್ತಾರೆ ಅಂದುಕೊಂಡು ಒತ್ತಾಯಪೂರ್ವಕವಾಗಿ ಅವರನ್ನು ಯಾವ್ಯಾವುದೋ ಶಿಬಿರಗಳಿಗೆ ದೂಡಿ ಬರಬೇಡಿ. ಮನೆಯಲ್ಲೇ ಇದ್ದು ತಂಟೆ ಮಾಡಿದರೆ ಮಾಡಲಿ. ಮಕ್ಕಳು ತುಂಟಾಟ ಮಾಡದೇ ಇನ್ಯಾರು ಮಾಡೋದು? ಅವರ ತುಂಟಾಟ ನೋಡೋದಕ್ಕೂ ಭಾಗ್ಯ ಬೇಕು ಎಂಬುದಾಗಿ ತಿಳಿಯಿರಿ. 


ಮಕ್ಕಳು ಅಜ್ಜಿಯಮನೆಗೋ ಅಜ್ಜನಮನೆಗೋ ಅಥವಾ ಇನ್ಯಾರಾದರೂ ನೆಂಟರು, ಇಷ್ಟರು, ಸಂಬಂಧಿಕರ ಮನೆಗಳಿಗೆ ಹೋಗಲು ಬಯಸಿದರೆ ಕಳುಹಿಸಿಕೊಡಿ, ಒಂದೆರಡು ದಿನ ಇದ್ದು ಬರಲಿ. 


ಪುನಹ ಶಾಲೆ ಪ್ರಾರಂಭ ಆದೊಡನೆ ಅವರು ತಾವಾಗಿಯೇ ಶಾಲೆಗೆ ಹೋಗ್ತಾರೆ. ಅದು ತನಕ ಅವರನ್ನು ಅವರಷ್ಟಕ್ಕೆ ಇರಲು ಬಿಟ್ಟು ಬಿಡಿ. ಒಂದು ತಿಂಗಳು ರಜೆ ಇದ್ದ ಕೂಡಲೇ ಅವರ ಕಲಿಕೆಯಲ್ಲಿ ಏನೂ ನಷ್ಟ ಆಗೋದಿಲ್ಲ. ಹೀಗಾಗಿ ಈ ರಜೆಯಲ್ಲಿಯೂ ಕೂಡಾ ಅವರಿಗೆ ಕಲಿಕೆಯ ಟೈಮ್ ಟೇಬಲ್ ಮಾಡಿ ಕೊಟ್ಟು, ಇಡೀ ದಿನ “ಕಲಿ, ಬರೆ, ಓದು” ಅಂತ ಅವರ ತಲೆ ತಿನ್ನಬೇಡಿ. ಅವರು ಟಿವಿ ನೋಡಲಿ, ಮೊಬೈಲ್ ನೋಡಲಿ, ಏನಾದರೂ ಮಾಡಿಕೊಳ್ಳಲಿ ಬಿಡಿ. ಪ್ರತಿಯೊಂದರಲ್ಲೂ ಕಲಿಯಲು ತುಂಬಾ ಇದೆ. ನಮ್ಮ ಮಕ್ಕಳು ನಮಗಿಂತ ಬುದ್ಧಿವಂತರಾಗಿರುತ್ತಾರೆ. ಈಗಿನ ಕಾಲಕ್ಕೆ ಸರಿಯಾಗಿ ಏನನ್ನು ಕಲಿಯಬೇಕೋ ಅದನ್ನು ಅವರೇ ಕಲಿತುಕೊಳ್ತಾರೆ. 


ಕಲಿಕೆ ಅಂದರೆ ಬರೇ ಪುಸ್ತಕದ ಬದನೇಕಾಯಿ ಅಲ್ಲ ಅನ್ನೋದನ್ನು ಮರೆಯಬೇಡಿ. ಪುಸ್ತಕದಲ್ಲಿ ಇರುವುದನ್ನು ಕಲಿಯುವುದು ಯಾಕೆ? ಪರೀಕ್ಷೆಯಲ್ಲಿ ಅಂಕ ಗಳಿಸುವುದಕ್ಕಷ್ಟೇ ತಾನೇ? ಅದಕ್ಕೆ ಮುಂದಿನ ವರ್ಷ ಶಾಲೆ ಆರಂಭ ಆದಮೇಲೆ ಶಾಲೆಯಲ್ಲೇ ಅವರ ಅಧ್ಯಾಪಕರು ಪಾಠ ಮಾಡ್ತಾರೆ, ಆಗ ಇವರು ಕಲಿತುಕೊಳ್ತಾರೆ. ಈಗಲೇ ಈ ರಜೆಯಲ್ಲೇ ನೀವು ಅವರನ್ನು ಟ್ಯೂಶನ್ ಕ್ಲಾಸಿಗೆ ಕಳಿಸೋದು ಬೇಕಾಗಿಲ್ಲ. 


ಈ ಬೇಸಿಗೆಯ ಸಂದರ್ಭದಲ್ಲಿ ನೀವು ನಿಮ್ಮ ಮಕ್ಕಳ ಆರೋಗ್ಯದ ಕಡೆಗೆ ಗಮನ ಹರಿಸಿ, ಅವರಿಗೆ ರಜೆಯನ್ನು ಆನಂದಿಸಲು ಬಿಟ್ಟುಬಿಡಿ ಅಷ್ಟೇ ಸಾಕು.  



-ಹರಿಕೃಷ್ಣ ಹೊಳ್ಳ, 

ಬ್ರಹ್ಮಾವರ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top