ಕಾವ್ಯ ಮೀಮಾಂಸೆಯಲ್ಲಿ ಅಪಾರ ಪಾಂಡಿತ್ಯ ಪಡೆದಿದ್ದ ಪಂಡಿತ ಜಗನ್ನಾಥ ಅವರು ಕ್ರಿ.ಶ. 1590-1670 ಕಾಲದಲ್ಲಿ ಪ್ರಸಿದ್ಧರಾಗಿದ್ದರು ಎಂದು ಚರಿತ್ರೆಯ ಮೂಲಕ ತಿಳಿದಿದೆ. ಇವರು ರಚಿಸಿದ "ರಸಗಂಗಾಧರ" ಸಂಸ್ಕೃತ ಕೃತಿ ಎಲ್ಲರಿಂದ ಮನ್ನಣೆ ಪಡೆದ ಅದ್ಭುತ ಗ್ರಂಥವಾಗಿದೆ. ಇವರು ಆಂಧ್ರಪ್ರದೇಶದ ದಂಪತಿಗಳಾದ ಪೆರುಭಟ್ಟ ಮತ್ತು ಲಕ್ಷ್ಮೀ ಅವರ ಪ್ರೀತಿಯ ಪುತ್ರನೆಂದು ತಿಳಿದುಬಂದಿದೆ. ತಮ್ಮ ತಂದೆಯಿಂದ ಈತ ವ್ಯಾಕರಣವನ್ನು ಬಿಟ್ಟು ಎಲ್ಲಾ ಶಾಸ್ತ್ರಗಳನ್ನು ಕಲಿತರು. ಶೇಷವೀರೇಶ್ವರ ಅವರ ಬಳಿ ಇವರು ವ್ಯಾಕರಣವನ್ನು ಅಭ್ಯಾಸ ಮಾಡಿದರು.
ಇವರ ಯೌವನವು ಮೊಗಲ ಬಾದಶಹನಲ್ಲಿ ಕಳೆಯಿತು. ಬಹುಶಃ ಜಹಂಗೀರ್ ಕಾಲದಲ್ಲಿ, ಆತನ ಆಸ್ಥಾನದಲ್ಲಿ ಇದ್ದು, ತದನಂತರ, ಉದಯಪುರದ ಜಗತ್ ಸಿಂಹನ ಆಶ್ರಯದಲ್ಲಿ ಕೆಲವು ದಿನಗಳಿದ್ದು, ಪುನಃ ಶಹಜಾನನ ಆಸ್ಥಾನದಲ್ಲಿ ಅನೇಕ ವರ್ಷಗಳು ಕಳೆದರು. ನಂತರ ಕೂಚ್ ಬಿಹಾರಿನ ಪ್ರಾಣನಾರಾಯಣನ ಆಶ್ರಯದಲ್ಲಿ ಹಲವು ದಿನ ಕಳೆದರು. ಈತನ ಕೃತಿಗಳ ಪ್ರಕಾರ, ಕೊನೆಗೆ ದಿನಗಳನ್ನು ಯಮುನಾ ನದಿ ತಟದಲ್ಲಿ ಶಾಂತ ರೀತಿಯಿಂದ ಕಳೆದರೆಂದು ಊಹಿಸಬಹುದು.
ಈತನ ಬಾಲ್ಯ ವಿದ್ಯಾಭ್ಯಾಸ 1590-1620, ಜಹಂಗೀರ್ ಆಸ್ಥಾನ 1620- 1627, ಜಗತ್ ಸಿಂಹನ ಆಶ್ರಯ 1627-30, ಷಹಜಾನನ ಆಸ್ಥಾನಲ್ಲಿ ಕ್ರಿ.ಶ 1630-58, ಕೂಚ್ ಬಿಹಾರ ದೊರೆ ಪ್ರಾಣನಾರಾಯಣನ ಆಸ್ಥಾನ 1661-1664 ಯುಮುನಾ ನದಿ ತಟದಲ್ಲಿ 1664-70, ಎಂದು ಚರಿತ್ರೆ ತಿಳಿಸಿದೆ.
ಇವರು ತನ್ನ ಪಾಂಡಿತ್ಯವನ್ನು ಪ್ರದರ್ಶಿಸಿ, ಮೊಗಲರ ಆಸ್ಥಾನದಲ್ಲಿ ಸಹ ಬಹುತೇಕ ವರ್ಷಗಳು ಕಳೆದರು. ಮೊಗಲ್ ದೊರೆ ಅಸಫ್ ಖಾನ್ ಇವರಿಗೆ ಪಂಡಿತ ರಾಜ ಎಂದೇ ಬಿರುದು ನೀಡಿ ಸನ್ಮಾನಿಸಿದನು. 1641ರಲ್ಲಿ ಮೊಗಲ ದೊರೆ ಅಸಫ್ ಖಾನ್ ಮರಣ ಹೊಂದಿದಾಗ, ಪಂಡಿತ ಜಗನ್ನಾಥನು ನೊಂದು, ತನ್ನ ದುಃಖವನ್ನು ಶ್ಲೋಕದ ಮೂಲಕ ರಸಗಂಗಾಧರ ಕೃತಿಯಲ್ಲಿ ಬರೆದರು.
ಸರಳ, ಭವ್ಯ ಶೈಲಿಯ ಇವರ ಕಾವ್ಯಗಳು ಶಬ್ದ ಜಾಲದಿಂದ ಅತಿ ವಿಶಾಲವಾದ ಜಾಣ್ಮೆ ಹೊಂದಿ, ಆಳವಾದ ಪಾಂಡಿತ್ಯ ಕಂಡುಕೊಂಡ ಆಗಿನ ಜನರು ಇವರನ್ನು ಸಂಸ್ಕೃತ ಸಾಹಿತ್ಯದ ಶ್ರೇಷ್ಠ ಕವಿಯೆಂದು ಗುರುತಿಸಿದರು!
ದೇವತಾಸ್ತುತಿ ರೂಪದಿಂದ ಐದು ಲಹರಿಗಳನ್ನು ಇವರು ರಚಿಸಿದ್ದಾರೆ. ಭಕ್ತಿ ರಸ ತುಂಬಿ, ಜನರ ಮೆಚ್ಚುಗೆಗೆ ಪಾತ್ರವಾದವು. ತನ್ನ ಪದ್ಯರತ್ನಗಳನ್ನು ದುಷ್ಟ ಜನರು ಅಪಹರಿಸಬಹುದೆಂದು, ಭಾಮಿನಿ ವಿಲಾಸ ಎಂಬ ನೂತನ ಹೆಸರು ಬರೆದು ನಾಲ್ಕು ವಿಭಾಗ ಮಾಡಿದರು. ಯಮುನಾ ವ್ಯಾಖ್ಯಾಯಿಕೆ ಎಂಬ ಗದ್ಯ ಗ್ರಂಥವನ್ನು ಸಹ ರಚಿಸಿದ್ದಾರೆ. ಇವರ ಅದ್ವಿತೀಯ ಗ್ರಂಥ ಮಾತ್ರ ರಸಗಂಗಾಧರ ಎಂದು ಗುರುತಿಸಿದ್ದಾರೆ. ಸಂಸ್ಕೃತ ವಾಂಙ್ಮಯದಲ್ಲಿ ಸಹ ಅದ್ಭುತ ಅಲಂಕಾರ ಶಾಸ್ತ್ರ ಗ್ರಂಥ ಎಂದು ಪರಿಗಣಿಸಲಾಗಿದೆ.
ನ್ಯಾಯ ಮತ್ತು ವ್ಯಾಕರಣ ಶಾಸ್ತ್ರ ಇವರ ಪ್ರೌಢಿಮೆಗೆ ಸಾಕ್ಷಿಯಾಗಿದೆ. ಅನೇಕ ಶಾಸ್ತ್ರ ಗ್ರಂಥಗಳನ್ನು ಜಾಲಾಡಿಸಿ, ವಿಮರ್ಶೆ ಮಾಡಿ ತನ್ನ ಮತವನ್ನು ಪ್ರಕಟಿಸಿದ ಮಹನೀಯರು. ಇತರರ ಕಾವ್ಯ ಲಕ್ಷಣಗಳನ್ನು ವಿಮರ್ಶಿಸಿ, ಪರೀಕ್ಷಿಸಿ, ಕೊನೆಗೆ, ರಮಣೀಯಾರ್ಥ ಪ್ರತಿಪಾದಕಃ ಶಬ್ದಃ ಕಾವ್ಯಂ ಎಂದು ತಾನೆ ಒಂದು ಲಕ್ಷಣವನ್ನು ನೀಡಿದ ಕವಿ. ಧ್ವನಿ ಮತ್ತು ರಸಸೂತ್ರಗಳ ವಿಮರ್ಶೆಯನ್ನು ಅನೇಕ ರೀತಿಯ ಗುಣಗಳನ್ನು ವಿಚಾರ ಮಾಡಿದ್ದಾರೆ.
ಆನಂದವರ್ಧನ ಅಭಿನವಗುಪ್ತರನ್ನು ಬಹುತೇಕ ಅನುಸರಿಸಿದ ಕವಿ! ರಸಗಂಗಾಧರ ಗ್ರಂಥ ಅಪ್ಪಯ್ಯ ದೀಕ್ಷಿತ್ ಅವರ ಚಿತ್ರ ಮೀಮಾಂಸೆಯ ಖಂಡನ ಗ್ರಂಥವಾಗಿದೆ. ಚತುಶಾಸ್ತ್ರ ಪಾಂಡಿತ್ಯ ಪಡೆದು, ಅಲಂಕಾರ ಶಾಸ್ತ್ರ ಕರತಲಾಮಲಕ ಮಾಡಿ ಪಂಡಿತ ರಾಜನೆಂದು ಬಿರುದು ಪಡೆದಿದ್ದರು. ಸಂಸ್ಕೃತ ಸಾಹಿತ್ಯದಲ್ಲಿ ಇವರು ಅಪಾರ ಪಾಂಡಿತ್ಯ ಪಡೆದು, ಅಲಂಕಾರಶಾಸ್ತ್ರದಲ್ಲಿ ಅಪರಿಮಿತ ಪಾಂಡಿತ್ಯ ಪಡೆದ ಮಹಾನ್ ಕವಿ, ವಿದ್ವಾಂಸರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ