"ನಹೀ ಜ್ಞಾನೇನ ಸದೃಶಂ " ಅಂದರೆ ಜ್ಞಾನಕ್ಕೆ ಸಮಾನವಾದುದು ಯಾವುದೂ ಇಲ್ಲ ಎಂದು ಪ್ರಾಜ್ಞ ಮಹನೀಯರು ಹೇಳಿದ್ದಾರೆ. ಜ್ಞಾನವೇ ಈ ಜಗತ್ತಿನಲ್ಲಿ ಮಿಗಿಲಾದುದು. ಜ್ಞಾನ ಸಂಪಾದನೆ ಮಾತಿನಲ್ಲಿ ಹೇಳುವಷ್ಟು ಸುಲಭ ಸಾಧ್ಯವಲ್ಲ. ಜ್ಞಾನ ಸಂಪಾದನೆಗೆ ಸಾಕಷ್ಟು ಪರಿಶ್ರಮ, ಶ್ರದ್ಧೆ ಮತ್ತು ನಿಷ್ಠೆ ಬೇಕಾಗುತ್ತದೆ. ಭಕ್ತಿ ಭಾವನೆಯ ಅಗತ್ಯವಿದೆ. ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಅಧ್ಯಯನದಲ್ಲಿ ತೊಡಗಬೇಕು. ಜ್ಞಾನಕ್ಕೆ ಸತ್ಯವು ಜೊತೆಯಾದಾಗ ವಜ್ರದಂತೆ ಹೊಳೆಯುತ್ತದೆ. ಸಾಧಕರು ಜ್ಞಾನವನ್ನೇ ಒಂದು ಮಾರ್ಗವನ್ನಾಗಿ ಆಯ್ಕೆ ಮಾಡಿಕೊಂಡು ಸಂಪಾದಿಸಿದರು ಮತ್ತು ಜಗತ್ತಿಗೆ ಜ್ಞಾನ ದೀವಿಗೆಯನ್ನು ನೀಡಿದರು. ಜ್ಞಾನಮಾರ್ಗದಲ್ಲೆ ಮುಕ್ತಿಯನ್ನು ಪಡೆದರು.
ಸಿದ್ಧಾರ್ಥನೆಂಬ ಯುವರಾಜ ಜ್ಞಾನದ ಬೆಳಕಿಗಾಗಿ ಹಗಲಿರುಳೂ ಶ್ರಮಿಸಿದನು. ಅರಮನೆಯನ್ನು ಬಿಟ್ಟು ಅರಣ್ಯದ ಪಾಲಾದನು. ತಪಸ್ಸಿನಲ್ಲಿ ತಲ್ಲೀನನಾದನು. ಮೌನದ ಧ್ಯಾನಕ್ಕೆ ತನ್ನ ಮನಸ್ಸನ್ನು ಅಣಿಗೊಳಿಸಿದನು. ದೇಹವನ್ನು ದಂಡಿಸಿದನು. ಜಗತ್ತಿನ ಹವಾಮಾನ ವೈಪರೀತ್ಯಗಳಾದ ಬಿಸಿಲು, ಚಳಿ, ಗಾಳಿ ಮತ್ತು ಮಳೆಗೆ ತನ್ನ ಶರೀರವನ್ನು ಸದೃಢವನ್ನಾಗಿಸಿದನು. ಮನೋ ನಿಗ್ರಹ ಮತ್ತು ಇಂದ್ರಿಯ ನಿಗ್ರಹಗಳ ಆಚರಣೆ ಮಾಡಿದನು. ಇಚ್ಛಾಶಕ್ತಿಯನ್ನು ಹೆಚ್ಚಿಸಿಕೊಂಡು ಸರ್ವಸಿದ್ಧತೆಗೆ ಬದ್ಧನಾದ ಸಿದ್ಧಾರ್ಥನು ಮುಂದೊಂದು ದಿನ ಪೌರ್ಣಿಮೆಯ ಬೆಳಕಲ್ಲಿ ಜ್ಞಾನದ ಬೆಳಕನ್ನು ಪಡೆದನು. ಸಿದ್ಧನು ಬುದ್ಧನಾದನು. ಮುಂದೆ ಗೌತಮ ಬುದ್ಧ ನಾದನು. ಬೌದ್ಧ ಧರ್ಮವನ್ನೇ ಪ್ರಾರಂಭಿಸಿ ಜಗತ್ತಿಗೆ ಬೆಳಕಾದನು. ಒಂದು ಪುಟ್ಟ ಹಣತೆ ಕೋಟ್ಯಂತರ ಹಣತೆಗಳನ್ನು ಹಚ್ಚಲು ನೆರವಾಗುವಂತೆ ಓರ್ವ ಬುದ್ಧನು ತನ್ನ ಜ್ಞಾನದ ಬೆಳಕನ್ನು ಜಗದಗಲ ಚೆಲ್ಲಿದನು. ಜ್ಞಾನವನ್ನು ಉತ್ತುಂಗ ಸ್ಥಾನದಲ್ಲಿಟ್ಟನು. ಇದೇ ಜ್ಞಾನದ ಬೆಳಕು ಅಂಗುಲಿಮಾಲನಂತಹ ರಾಕ್ಷಸೀ ಪ್ರವೃತ್ತಿಯುಳ್ಳ ವ್ಯಕ್ತಿಯನ್ನು ಬುದ್ಧನ ಶಿಷ್ಯನನ್ನಾಗಿಸಿತು.
ಜಗತ್ತಿನಲ್ಲಿ ಜ್ಞಾನವು ಅತ್ಯಂತ ಔನ್ನತ್ಯದಲ್ಲಿರುವ ವಿಚಾರವಾಗಿದೆ. ನಹೀ ಜ್ಞಾನೇನ ಸದೃಶಂ ಎಂಬ ಮಾತು ಸರ್ವ ಕಾಲಕ್ಕೂ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತದೆ. ಮನಃಶಾಸ್ತ್ರೀಯ ದೃಷ್ಟಿಕೋನದಲ್ಲಿ ಜ್ಞಾನದ ಮೂಲ ಮನಸ್ಸು ಆಗಿರುತ್ತದೆ. ಜ್ಞಾನವು ಸದಾ ಪ್ರಜ್ವಲಿಸುವ ಜ್ಯೋತಿಯಂತೆ ಬೆಳಗುತ್ತಿರುತ್ತದೆ. ಅಂತಹ ಜ್ಞಾನವನ್ನು ಪಡೆಯಲು ಹುಟ್ಟಿನಿಂದ ಸಾವಿನವರೆಗೂ ಪ್ರಯತ್ನವಂತೂ ನಡೆಯುತ್ತಲೇ ಇರುತ್ತದೆ. ಭೌಗೋಳಿಕ ದೃಷ್ಟಿಕೋನದಲ್ಲಿ ಜ್ಞಾನದ ಮೂಲ ಭಾರತವೇ ಆಗಿದೆ. ಇಲ್ಲಿ ಬದುಕಿ ಬಾಳಿದ ಋಷಿವರ್ಯರು ಜ್ಞಾನದ ಭಂಡಾರವನ್ನು ಲೋಕಾರ್ಪಿಸಿದ್ದಾರೆ. ಸಾಹಿತ್ಯದ ದೃಷ್ಟಿಕೋನದಲ್ಲಿ ಜ್ಞಾನದ ಮೂಲ ವೇದೋಪನಿಷತ್ತುಗಳಾಗಿದ್ದು ಇಡೀ ವಿಶ್ವವನ್ನೇ ಮುನ್ನಡೆಸುವ ಮಾರ್ಗದರ್ಶನ ನೀಡುತ್ತವೆ.
ಜ್ಞಾನವಿಲ್ಲದವನು ಪಶುವಿಗೆ ಸಮಾನ ಎಂದೂ ಹೇಳುವುದುಂಟು. ಜ್ಞಾನದ ಕೊರತೆ ಸಾಂಸ್ಕೃತಿಕ ಹಿಂಬೀಳಿಕೆಗೆ ಕಾರಣವಾಗುತ್ತದೆ. ಜ್ಞಾನ ಸಂಪಾದನೆ ಒಂದು ದಿನದ ಗಳಿಕೆಯಲ್ಲ. ಅದು ನಿರಂತರವಾಗಿ ಪಡೆಯುವ ಅನುಭವ. ತನ್ನರಿವೇ ತನಗೆ ಗುರು ಎಂಬಂತೆ ತಾನೇ ಸ್ವತಃ ಮುಂದಾಗಿ ತಿಳಿದು ಕೊಳ್ಳುವ ಮೂಲಕ ಹೆಚ್ಚಿನ ಜ್ಞಾನ ಪಡೆದುಕೊಳ್ಳಲು ಸಾಧ್ಯವಿದೆ. ಪುಸ್ತಕಗಳ ಮೂಲಕ ಜ್ಞಾನವನ್ನು ಪಡೆಯಲಾಗುತ್ತದೆ. ಗುರುವಿನ ಮಾರ್ಗದರ್ಶನದಲ್ಲಿ ಜ್ಞಾನವನ್ನು ಪಡೆಯಲಾಗುತ್ತದೆ. ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು ಎಂಬಂತೆ ತಾಯಿಯಿಂದಲೇ ಮಗುವಿನ ಜ್ಞಾನದ ಬೆಳಕು ಪ್ರವಹಿಸುತ್ತ ಬೆಳೆಯುತ್ತದೆ.
ಜ್ಞಾನಿಯಾದವನು ಅಹಂಕಾರಿಯಾಗಬಾರದು. ಅಹಂಕಾರಿಯಾದವನು ಎಷ್ಟೇ ವಿದ್ವತ್ತನ್ನು ಪಡೆದಿದ್ದರೂ ಆತ ಜ್ಞಾನಿಯೇ ಅಲ್ಲ. ಅರ್ಧ ಬೆಂದ ಅಕ್ಕಿಯಂತೆ ವ್ಯರ್ಥವಾಗುತ್ತಾನೆ. ಆದ್ದರಿಂದ ಅಹಂನ್ನು ಹತ್ತಿರಕ್ಕೆ ಸುಳಿಯದಂತೆ ನೋಡಿಕೊಳ್ಳಬೇಕು. ಜ್ಞಾನವು ಯಾವಾಗಲೂ ರಾಜಗಾಂಭೀರ್ಯತೆಯನ್ನು ಪಡೆದಿರುತ್ತದೆ. ನಾವು ಜ್ಞಾನಿಗಳಾಗಿ ಅಂಧಕಾರವನ್ನು ಹೋಗಲಾಡಿಸುವ ದೀಪದಂತೆ ಬೆಳಕನ್ನು ಬೀರುಬೇಕು. ಒಟ್ಟಾರೆಯಾಗಿ ಜ್ಞಾನವು ವಿಶ್ವದ ಎಲ್ಲ ಮೂಲೆಗಳಿಂದಲೂ ಹರಿದು ಬರುತ್ತದೆ. ಅಂತಹ ಜ್ಞಾನವನ್ನು ನಾವು ಸ್ವೀಕರಿಸುವ ಮನಸ್ಥಿತಿಯನ್ನು ಹೊಂದಿರಬೇಕಷ್ಟೆ.
ಜ್ಞಾನವನ್ನು ಪಡೆಯಲು ನಾವು ಇಷ್ಟಪಟ್ಟರೆ ಜ್ಞಾನವೇ ನಮ್ಮನ್ನು ಇಷ್ಟಪಟ್ಟು ತಬ್ಬಿಕೊಳ್ಳುತ್ತದೆ. ಜ್ಞಾನಿಗಳಾಗುವ ಮೂಲಕ ಉತ್ತಮ ನಾಗರಿಕರಾಗಿ ಉತ್ತಮ ಸಮಾಜ ನಿರ್ಮಾಣಕ್ಕೆ ಕಾಣಿಕೆ ನೀಡೋಣ.
ಕೆ. ಎನ್. ಚಿದಾನಂದ, ಹಾಸನ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ