ನಾವು ಪ್ರತಿ ವರ್ಷ ಮಾರ್ಚ್ 22ರಂದು ವಿಶ್ವ ಜಲ ದಿನವನ್ನಾಗಿ ಆಚರಿಸುತ್ತಿದ್ದೇವೆ. ಇದರ ಮೂಲಕ ಜನರಲ್ಲಿ ಜಲ ಸಂರಕ್ಷಣೆಯ ಬಗ್ಗೆ ಅರಿವನ್ನು ತೋರುವ ಉದ್ದೇಶವಿದೆ.
ಈ ಜಗತ್ತಿನ ಪಂಚಭೂತಗಳಲ್ಲಿ ನೀರನ್ನು ಕೂಡ ಮುಖ್ಯವಾಗಿ ಪರಿಗಣಿಸಲಾಗಿದೆ. ನೀರು ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದೆ. ಭೂಮಿಯ ಮೇಲೆ ನೀರಿನ ಪ್ರಮಾಣ ಕೇವಲ ಶೇಕಡಾ 79ರಷ್ಟು ಮಾತ್ರ. ನೀರು ಸಪ್ತ ಸಾಗರಗಳಲ್ಲಿ, ಕೆರೆ, ಕೊಳ್ಳಗಳಲ್ಲಿ ಹಂಚಿ ಹೋಗಿದೆ. ಆದರೂ ನೀರಿನ ಸಲುವಾಗಿ ಬಾಯಿ ಬಾಯಿ ಬಿಡುವುದು ತಪ್ಪಿಲ್ಲ.
ಬೆಳಿಗ್ಗೆ ಸ್ನಾನ ಮಾಡುವಾಗ "ಗಂಗೇಚ ಯಮುನೆ ಚೈವ ಗೋದಾವರಿ ಸರಸ್ವತಿ
ನರ್ಮದಾ ಸಿಂಧು ಕಾವೇರಿ ಜಲೇ ಸ್ಮಿನ್ ಸನ್ನಿಧಿಮ್ ಕುರು"
ಇದು, ನಾವು ನದಿಗಳು ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗುವುದನ್ನು ತೋರಿಸುತ್ತದೆ.
ಆದರೆ ನಾವು ನದಿ ಮೂಲಗಳನ್ನು ಎಷ್ಟು ಶುಚಿಯಾಗಿ ಇಟ್ಟು ಕೊಂಡಿದ್ದೇವೆ? ನಮ್ಮ ಸ್ವಾರ್ಥಕ್ಕೆ ನಾವು ಯಾವ ನದಿಗಳನ್ನು ಬಿಟ್ಟಿಲ್ಲ. ಗಂಗೆ ಈಗೀಗ ಶುದ್ಧ ಆಗುತ್ತಿದ್ದಾಳೆ. ಯಮುನೆ ಈಗಾಗಲೇ ಕಲುಷಿತಗೊಂಡಿದ್ದಾಳೆ. ಸದ್ದಾಂ ಹುಸೇನ್ ಇರಾಕ್ ಅಧ್ಯಕ್ಷರಾಗಿದ್ದಾಗ ಬ್ಯಾರಲ್ ಗಟ್ಟಲೆ ಪೆಟ್ರೋಲ್ ನ್ನು ಸಮುದ್ರಕ್ಕೆ ಸುರಿಯಲಾಗಿತ್ತು. ಲಕ್ಷ ಗಟ್ಟಲೆ ಸಮುದ್ರ ಜೀವಿಗಳ ಮಾರಣ ಹೋಮ ನಡೆದಿತ್ತು.
ಮೊದಲು ಮೀನುಗಾರರು ಮೀನುಗಳು ಗರ್ಭ ಧರಿಸುವ ಕಾಲದಲ್ಲಿ ಮೀನು ಹಿಡಿಯುತ್ತಿರಲಿಲ್ಲ. ಮೊದಲಿನ ಸಾಂಪ್ರದಾಯಿಕ ಮೀನಿನ ಬಲೆಗಳು ಕೇವಲ ದೊಡ್ಡ ಮೀನುಗಳನ್ನು ಹಿಡಿಯಲಾಗುತ್ತಿತ್ತು. ಹೀಗಾಗಿ ಮೀನುಗಳ ಸಂಖ್ಯೆ ಸಮತೋಲನವಾಗಿ ಸಮುದ್ರವು ಕೂಡ ಶುದ್ಧವಾಗಿತ್ತು. ಆದರೆ ಈಗಿನ ಯಾಂತ್ರೀಕೃತ ಬೋಟಿಗಳಿಂದ, ಆಧುನಿಕ ಮೀನು ಹಿಡಿಯುವ ಜಾಳಿಗೆಗಳಿಂದ ಸಣ್ಣ ಮೀನಿನ ಮರಿಗಳು ಕೂಡ ಮನುಷ್ಯನ ನಾಲಿಗೆ ಚಪಲಕ್ಕೆ ಬಲಿಯಾಗುತ್ತಿವೆ.
ಮಿತಿಮೀರಿದ ಬೋರ್ವೆಲ್ ಗಳಿಂದ ನೀರಿನ ಮಟ್ಟ ಕುಸಿಯುತ್ತಿದೆ. ಕಾರ್ಖಾನೆಗಳು ತಮ್ಮ ತ್ಯಾಜ್ಯವನ್ನು ನದಿಗಳಿಗೆ ಬಿಟ್ಟು ನೀರು ಕಲುಷಿತಗೊಳ್ಳುತ್ತಿದೆ. ಆದರೂ ನಮಗೆ ಇನ್ನೂ ಬುದ್ದಿ ಬಂದಿಲ್ಲ. ಬೇಸಿಗೆಯ ದಿನಗಳಲ್ಲಿ ಮಿತಿ ಮೀರಿದ ಉಷ್ಣತೆಯಿಂದ ನದಿಗಳು ಇಂಗಿ ನೀರಿನ ಹಾಹಾಕಾರ ಕಾಣುತ್ತೇವೆ. ಒಂದು ಕೊಡ ನೀರಿಗಾಗಿ ಕಿಲೋಮೀಟರ್ ಗಟ್ಟಲೆ ಅಲೆದಾಡುವುದನ್ನು ಕಾಣುತ್ತೇವೆ.
ಎಲ್ಲೋ ಒಂದು ಕಡೆ ಓದಿದ ನೆನಪು. ನಮ್ಮ ಪೂರ್ವಜರು ನದಿಗಳಲ್ಲಿ ನೀರನ್ನು ಕಂಡರು. ನಾವು ಬಾಟಲಿಗಳಲ್ಲಿ ನೀರನ್ನು ಕಾಣುತ್ತಿದ್ದೇವೆ. ನಮ್ಮ ಮುಂದಿನ ಪೀಳಿಗೆಗೆ ನೀರು ಕಣ್ಣೀರಿನಲ್ಲಿ ನೋಡುವಂತಾಗಿದೆ. ಇದು ವಿಚಿತ್ರವಾದರೂ ಸತ್ಯ. ಈಗಲಾದರೂ ಎಚ್ಚೆತ್ತುಕೊಂಡು ಸರಿಯಾಗಿ ಇರೋಣ.
- ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ