ಸಾಹಿತ್ಯದಿಂದ ಮಾನವೀಯತೆಯ ಶ್ರೇಷ್ಠತೆ ಪ್ರತಿಪಾದನೆ: ಕೈಕಸಿ ವಿ.ಎಸ್

Upayuktha
0



ಉಜಿರೆ : ಮಾನವೀಯತೆಯ ಶ್ರೇಷ್ಠತೆ ಎತ್ತಿಹಿಡಿಯುವುದಕ್ಕೆ ಸಾಹಿತ್ಯದ ಅಧ್ಯಯನ ಅಗತ್ಯ ಎಂದು ಕೇರಳ ಮಲ್ಲಾಪುರಂನ ಮಂಕಡ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಕೈಕಸಿ ವಿ.ಎಸ್ ಅಭಿಪ್ರಾಯಪಟ್ಟರು. 


ಎಸ್.ಡಿ.ಎಂ ಸ್ನಾತಕೊತ್ತರ ಕೇಂದ್ರದ ಇಂಗ್ಲಿಷ್ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಏರ್ಪಡಿಸಿದ್ದ ರಾಷ್ಟ್ರೀಯ ಮಟ್ಟದ ಅಂತರ್‌ಕಾಲೇಜು ಫೆಸ್ಟ್ 'ಎಸ್ಪರಾಂಜಾ' ಉದ್ಘಾಟಿಸಿ ಅವರು ಮಾತನಾಡಿದರು.


ಇತ್ತೀಚಿನ ದಿನಗಳಲ್ಲಿ ಗೂಗಲ್, ಕೃತಕ ಬುದ್ಧಿಮತ್ತೆ, ಮೆಟಾ ಸೇರಿದಂತೆ ವಿವಿಧ ತಾಂತ್ರಿಕ ವೇದಿಕೆಗಳು ವಿದ್ಯಾರ್ಥಿಗಳ ಕಲಿಕೆಯಲ್ಲಿ ಪ್ರಭಾವ ಬೀರುತ್ತಿರುವುದು ಶೋಚನೀಯ ಸಂಗತಿ. ಸಾಹಿತ್ಯದಂತಹ ಜ್ಞಾನಶಿಸ್ತು ತಾಂತ್ರಿಕತೆಯ ಪ್ರಭಾವದೊಂದಿಗೆ ಮನವರಿಕೆಯಾಗುವಂಥದ್ದಲ್ಲ. ತಂತ್ರಜ್ಞಾನದಿಂದಷ್ಟೇ ಸಾಹಿತ್ಯದ ಸಮಗ್ರ ತಿಳುವಳಿಕೆ ಸಾಧ್ಯವಾಗುವುದಿಲ್ಲ. ತರಗತಿ ಬೋಧನೆಯ ಕ್ರಮಗಳು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಮೌಲಿಕ ಚರ್ಚೆಯನ್ನು ಹುಟ್ಟುಹಾಕುತ್ತವೆ ಎಂದರು.


ಸಾಹಿತ್ಯವು ಅನುಕರಿಸಿ ಅಥವಾ ಬಾಯಿಪಾಠ ಹೊಡೆದು ಕಲಿಯುವಂಥದ್ದಲ್ಲ. ಮನುಷ್ಯನ ಅನುಭವಗಳಿಗೆ ಜೀವ ತುಂಬುವ ಶ್ರೇಷ್ಠ ವಿಷಯವೇ ಸಾಹಿತ್ಯ. ಮನುಷ್ಯ ಜೀವಂತಿಕೆಗೆ ಸಾಕ್ಷಿಯಾಗಬಲ್ಲ ಸಾಮರ್ಥ್ಯ ಸಾಹಿತ್ಯಕ್ಕಿದೆ.  ಮಾನವ ಜೀವಿಯು ಇತರ ಜೀವಿಗಳಿಗಿಂತ ವಿಭಿನ್ನವಾಗಿರಲು ಆತನ ಭಾವನೆಗಳೂ, ಮಾತುಗಳು ಕಾರಣ. ಇದರಿಂದಾಗಿಯೇ ಮನುಷ್ಯ ಜಗತ್ತಿನಲ್ಲಿ ಪ್ರಾಬಲ್ಯ ಸಾಧಿಸಲು ಸಾಧ್ಯವಾಗಿದೆ. ಕೇವಲ ಸಾಹಿತ್ಯ ಅಧ್ಯಯನ ಮಾಡಿದ ವ್ಯಕ್ತಿ ಮಾತ್ರ ಇನ್ನೋರ್ವ ವ್ಯಕ್ತಿಯ ನೋವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ, ಆ ನೋವನ್ನು ಮರೆಸುವ ಶಕ್ತಿಯೂ ಸಹ ಸಾಹಿತ್ಯದ ಓದಿಗೆ ಇದೆ ಎಂದರು.


ಸಾಹಿತ್ಯ ಸಂಬಂಧಿತ ಮಹತ್ವದ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ರವಾನಿಸಲು ಸ್ಪರ್ಧಾತ್ಮಕ ಮನೋಭಾವ ಬಿತ್ತುವ ಕಾರ್ಯಕ್ರಮಗಳು ಆಯೋಜಿತವಾಗಬೇಕು. ಶಿಕ್ಷಣ ಸಂಸ್ಥೆ, ಅಧ್ಯಾಪಕರು ಮತ್ತು ಸಹಪಾಠಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ವೃದ್ಧಿಸುವುದಕ್ಕೆ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ಅಲ್ಲದೇ ಪರಸ್ಪರ ಸಹಕಾರ ಮನೋಭಾವ ಮತ್ತು ಕಾಳಜಿಯನ್ನು ಕಲಿಸುವುದಲ್ಲದೆ ಸಂಶೋಧನಾ ಪ್ರಜ್ಞೆಯನ್ನು ಅಳವಡಿಸಿಕೊಳ್ಳು ನೆರವಾಗುತ್ತವೆ ಎಂದರು.


ಎಸ್ ಡಿ ಎಂ ಕಾಲೇಜಿನ  ಉಪ ಪ್ರಾಂಶುಪಾಲೆ ನಂದಾಕುಮಾರಿ ಕೆ.ಪಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜ್ಞಾನ ಮತ್ತು ಸೃಜನಶೀಲತೆ ಇವೆರಡೂ ಮಹತ್ವಾಕಾಂಕ್ಷಿ ಕನಸುಗಳ ಸಾಕಾರಕ್ಕೆ ಪೂರಕವಾಗುತ್ತವೆ ಎಂದು ಹೇಳಿದರು.  


ಈ ಕಾರ್ಯಕ್ರಮದ ಸಂಯೋಜಕರಾದ ದ್ವಿತೀಯ ಎಂ.ಎ.ಯ  ಹಾಸಿನಿ ಸಿಂಗ್.ಪಿ ಮತ್ತು ಸಂಮ್ಯಕ್ ಜೈನ್ ಉಪಸ್ಥಿತರಿದ್ದರು. ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ಮುಖ್ಗಸ್ಥರಾದ ಡಾ. ಮಂಜುಶ್ರೀ ಆರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಷ್ಣು ವಿನೀತ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಮನು ಎ.ಆರ್ ವಂದಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top