ಶಿವಮೊಗ್ಗದಲ್ಲಿ ಕಟೀಲು ಅಶೋಕ ಪೈ ಸ್ಮಾರಕ ಕಾಲೇಜಿಗೆ ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರದಿಂದ ವಿಶೇಷ ಟ್ಯಾಲಿ ಹಾಗೂ ಐಟಿ ಕೋರ್ಸ್ ಗಳಿಗೆ ಸಹಯೋಗ: ಬ್ರಿಗೇಡಿಯರ್ ಡಾಕ್ಟರ್ ಸುರಜಿತ್ ಸಿಂಗ್ ಪಾಬ್ಲಾ
ಶಿವಮೊಗ್ಗ: ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರದ ಸಹಯೋಗದೊಂದಿಗೆ ನಡೆಸಲಾಗುವ ಟ್ಯಾಲಿ ಹಾಗೂ ಐಟಿ ಕೋರ್ಸುಗಳ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿತ್ತು.
ಉದ್ಘಾಟನೆ ನೆರವೇರಿಸಿದ ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರದ ಅಧ್ಯಕ್ಷರಾದ ಬ್ರಿಗೇಡ್ ಡಾಕ್ಟರ್ ಸುರುಜಿತ್ ಸಿಂಗ್ ಪಾಬ್ಲಾ ರವರು ಮಾತನಾಡುತ್ತಾ "ಕಟೀಲು ಅಶೋಕ ಪೈ ಸ್ಮಾರಕ ಕಾಲೇಜು ಒಂದು ಬಹಳ ಮುಖ್ಯವಾದ ಹೆಜ್ಜೆಯನ್ನು ಇಟ್ಟಿದೆ. ಇಂದು ಔದ್ಯೋಗಿಕ ಕ್ಷೇತ್ರಕ್ಕೆ ಆಯ್ಕೆಯಾಗಲು ಪ್ರತಿಯೊಬ್ಬ ವಿದ್ಯಾರ್ಥಿಗೆ ಕೇವಲ ಪದವಿ ಪ್ರಶಸ್ತಿ ಪತ್ರಗಳು ಸಾಕಾಗುವುದಿಲ್ಲ, ವಿದ್ಯಾರ್ಥಿಯೊಬ್ಬನಲ್ಲ್ರಿರುವ ಔದ್ಯೋಗಿಕ ಕೌಶಲ್ಯಗಳಿಗೂ ಅಷ್ಟೇ ಪ್ರಾಶಸ್ತ್ಯವನ್ನು ನೀಡಲಾಗುತ್ತಿದೆ ಎಂದರು.
ಇದಕ್ಕಾಗಿಯೇ ಈಗ ಒಬ್ಬ ವಿದ್ಯಾರ್ಥಿಯು ತನ್ನ ಪದವಿ ಅಧ್ಯಯನದ ಸಂದರ್ಭದಲ್ಲಿಯೇ ಕೌಶಲ್ಯ ಅಭಿವೃದ್ಧಿಯ ಡಿಪ್ಲೋಮಾ ಅಥವಾ ಸರ್ಟಿಫಿಕೇಟ್ ಕೋರ್ಸ್ ಗಳನ್ನು ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಔದ್ಯೋಗಿಕ ಕ್ಷೇತ್ರಗಳ ಅವಶ್ಯಕತೆ ಹಾಗೂ ಪದವಿ ಪಠ್ಯಕ್ರಮದ ನಡುವೆ ಇರುವ ಅಂತರವನ್ನು ಕಡಿಮೆ ಮಾಡಿ ಉದ್ಯೋಗಕ್ಕೆ ತಕ್ಕ ಜ್ಞಾನ ಹಾಗೂ ಕೌಶಲ್ಯಗಳನ್ನು ರೂಪಿಸಿಕೊಳ್ಳಲು ಇಂದು ವಿದ್ಯಾರ್ಥಿಗಳಿಗೆ ಬಹಳ ಅವಕಾಶಗಳಿವೆ.
ಇದನ್ನೆಲ್ಲ ಮನಗಂಡು ಮಣಿಪಾಲ ಶಿಕ್ಷಣ ಸಂಸ್ಥೆಯ ಮೂಲಕ ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಪ್ರಾರಂಭಿಸಿ ಒಂದು ವಿಶ್ವವಿದ್ಯಾಲಯ ಮಟ್ಟದ ವಿವಿಧ ಕೌಶಲ್ಯ ಅಭಿವೃದ್ಧಿ ಕೋರ್ಸ್ ಗಳನ್ನು ನಡೆಸಲಾಗುತ್ತಿದೆ. ಇಲ್ಲಿ ಕೊಡ ಮಾಡುವ ಇಪ್ಪತ್ತು ಕೋರ್ಸುಗಳು ಕೂಡ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಕೌನ್ಸಿಲ್‌ನ ಮಾನ್ಯತೆಯನ್ನು ಪಡೆದಿವೆ. ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರವು ತನ್ನ ಕೇಂದ್ರದ ವಿದ್ಯಾರ್ಥಿಗಳಿಗೆ ನೇರವಾಗಿ ಕೌಶಲ್ಯಗಳ ಪ್ರಾಯೋಗಿಕ ಕಲಿಕೆಗೆ ಅಗತ್ಯವಾದ ಪಠ್ಯಕ್ರಮವನ್ನು ಹಾಗೂ ಸುವ್ಯವಸ್ಥಿತ ಪ್ರಯೋಗಾಲಯಗಳನ್ನು ಹೊಂದಿದೆ.
ಇಲ್ಲಿಯವರೆಗೂ ಮಣಿಪಾಲ್‌ನಲ್ಲಿರುವ ಈ ಕೇಂದ್ರವು ಉಡುಪಿ ಜಿಲ್ಲೆಗಷ್ಟೇ ತನ್ನ ವ್ಯಾಪ್ತಿಯನ್ನು ಸೀಮಿತಗೊಳಿಸಿತ್ತು. ಆದರೆ ಮೊತ್ತ ಮೊದಲ ಬಾರಿಗೆ ಮಾನಸ ಸಂಸ್ಥೆಯ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಮಣಿಪಾಲ್‌ನ ಕೌಶಲ್ಯ ಅಭಿವೃದ್ಧಿ ಕೇಂದ್ರದೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡು ವಿದ್ಯಾರ್ಥಿಗಳಿಗಾಗಿ ಬಿಕಾಂ ಜೊತೆಗೆ ಟ್ಯಾಲಿ ಕೋರ್ಸ್ ಗಳನ್ನು ಹಾಗೂ ಬಿಸಿಎ ಜೊತೆಗೆ ವಿವಿಧ ಐಟಿ ಕೋರ್ಸ್ ಗಳನ್ನು ಪ್ರಾರಂಭಿಸಲು ನಿರ್ಧಾರ ಮಾಡಿರುವುದು ಎರಡು ಸಂಸ್ಥೆಗಳ ಶೈಕ್ಷಣಿಕ ಹಾದಿಯಲ್ಲಿ ಬಹಳ ಮುಖ್ಯವಾದ ಮೈಲಿಗಲ್ಲು ಆಗಿದೆ.
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಬಿಕಾಂ ಅಥವಾ ಬಿಸಿಎ ಮಾಡುವ ವಿದ್ಯಾರ್ಥಿಗಳಿಗೆ ಟ್ಯಾಲಿ ಕೋರ್ಸುಗಳು ಹಾಗೂ ಐಟಿ ಕೋರ್ಸುಗಳು ಲಭ್ಯವಾಗಲಿರುವುದು ಅವರ ಉದ್ಯೋಗಾವಕಾಶಗಳನ್ನು ವಿಪುಲವಾಗಿ ವಿಸ್ತರಿಸಬಲ್ಲದು. ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಸಂಸ್ಥೆಯು ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನೊಂದಿಗೆ ಸಹಯೋಗವನ್ನು ನೀಡುವ ಮೂಲಕ ಉತ್ತಮ ಗುಣಮಟ್ಟದ ಕೌಶಲ್ಯ ತರಬೇತಿಗೆ ಬದ್ದತೆಯೊಂದಿಗೆ ಮುಂದುವರಿಯವುದು" ಎಂದು ಅವರು ತಿಳಿಸಿದರು.
ಇದೇ ಕಾರ್ಯಕ್ರಮದಲ್ಲಿ ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರದ ಕುಲ ಸಚಿವ ಡಾ. ಅಂಜನಯ್ಯ ದೇವಿನೇನಿಯವರು ಮಾತನಾಡುತ್ತಾ ಕೌಶಲ್ಯ ಅಭಿವೃದ್ಧಿ ಎಂಬುದು ಯಾವುದೇ ವಿದ್ಯಾರ್ಥಿಯು ತನ್ನ ಪದವಿಯೊಂದಿಗೆ ಪಡೆದುಕೊಳ್ಳಬೇಕಾದ ಬಹಳ ಮುಖ್ಯವಾದ ಪರಿಣತಿ. ಈ ಮೂಲಕವಾಗಿ ತನ್ನ ವೃತ್ತಿಪರತೆಯನ್ನು ಔದ್ಯೋಗಿಕ ಬದ್ಧತೆಯನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.
ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರವು, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿಗೆ ಸಹಯೋಗವನ್ನು ನೀಡುವ ಮೂಲಕ ತನ್ನ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಪ್ರಾದೇಶಿಕವಾಗಿ ವಿಸ್ತರಿಸಿದಂತಾಗಿದೆ, ಇದು ಎರಡು ಸಂಸ್ಥೆಗಳು ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ನೀಡಬಹುದಾದ ಅತ್ಯಮೂಲ್ಯ ಕೊಡುಗೆ ಎಂದು ಅವರು ತಿಳಿಸಿದರು. ಮಾನಸ ಸಂಸ್ಥೆಯ ನಿರ್ದೇಶಕರಾದ ಡಾ. ರಜನಿ ಪೈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಆಡಳಿತ ಅಧಿಕಾರಿ ಪ್ರೊ. ರಾಮಚಂದ್ರ ಬಾಳಿಗಾರವರು ಮಾನಸ ಸಂಸ್ಥೆಯ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ವಿದ್ಯಾರ್ಥಿಗಳನ್ನು ಔದ್ಯೋಗಿಕವಾಗಿ ಹಾಗೂ ವೃತ್ತಿಪರತೆಯೊಂದಿಗೆ ಅಭಿವೃದ್ಧಿಪಡಿಸಲು ಈ ಒಡಂಬಡಿಕೆಯನ್ನು ಮಾಡಿಕೊಂಡಿದೆ, ವಿದ್ಯಾರ್ಥಿಗಳು ತಮ್ಮ ವಿಶೇಷ ಕೌಶಲ್ಯದ ಮೂಲಕ ತಮ್ಮ ಪದವಿ ಮುಗಿಸುವ ಸಂದರ್ಭದಲ್ಲಿ ಉದ್ಯೋಗಿಕ ಕ್ಷೇತ್ರಗಳು ಇವರತ್ತ ಆಕರ್ಷಿತರಾಗುವಂತೆ ಮಾಡಬೇಕಿದೆ ಅಂತಹ ಸಾಮರ್ಥ್ಯ ಹಾಗೂ ವ್ಯಕ್ತಿತ್ವ ರೂಪಿಸುವುದು ಸಂಸ್ಥೆಯ ದೂರ ದೃಷ್ಟಿ ಎಂದು ತಿಳಿಸಿದರು.
ಇನ್ನು ಮುಂದೆ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಬಿಕಾಂ ಅಧ್ಯಯನ ಮಾಡಲಿರುವ ಎಲ್ಲ ವಿದ್ಯಾರ್ಥಿಗಳು ಕೂಡ ಪ್ರತಿಷ್ಠಿತ ಟ್ಯಾಲಿ ಕೋರ್ಸುಗಳನ್ನು ಕೂಡ ಪೂರೈಸಿಕೊಳ್ಳಲಿರುವರು ಹಾಗೂ ಬಿಸಿಎ ಅಧ್ಯಯನ ಮಾಡುವ ಎಲ್ಲ ವಿದ್ಯಾರ್ಥಿಗಳಿಗೂ ವಿವಿಧ ಐಟಿ ಕೋರ್ಸ್ಗಳನ್ನು ಮಾಡುವ ಅವಕಾಶವಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ಸಂಧ್ಯಾ ಕಾವೇರಿ ಕೆ ಅವರು, ಮಾನಸ ಟ್ರಸ್ಟ್ ಹಾಗೂ ಮಣಿಪಾಲ ಶಿಕ್ಷಣ ಸಂಸ್ಥೆಗಳು ಕೊಟ್ಟಿರುವ ಅವಕಾಶವನ್ನು ನಿರ್ವಹಿಸುವ ಜವಾಬ್ದಾರಿ ಹಾಗೂ ಬದ್ಧತೆಯನ್ನು ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಅತ್ಯಂತ ಸಂತೋಷದಿಂದ ನಿರ್ವಹಿಸುತ್ತದೆ. ಬಿಕಾಂ ಹಾಗೂ ಬಿಸಿಎ ಪದವಿಗಳು ವಿವಿಧ ಔದ್ಯೋಗಿಕ ಅವಕಾಶಗಳನ್ನು ಒದಗಿಸುತ್ತಿರುವ ಇಂದಿನ ಕಾಲದಲ್ಲಿ ಇದರೊಂದಿಗೆ ದೊರೆಯುವ ಕೌಶಲ್ಯ ಅಭಿವೃದ್ಧಿ ಕೋರ್ಸುಗಳು ಈ ಕಾಲೇಜಿನಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಅತ್ಯುತ್ತಮ ವೃತ್ತಿಪರ ಸಾಮರ್ಥ್ಯವನ್ನು ಒದಗಿಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಸಿಎ ವಿಭಾಗದ ಮುಖ್ಯಸ್ಥ ಮಂಗೇಶ್ ಪೈ, ಬಿಕಾಂ ವಿಭಾಗದ ಮುಖ್ಯಸ್ಥೆ ಕಾವ್ಯ ರಾಯ್ಕರ್, ಪ್ಲೇಸ್‌ಮೆಂಟ್ ಆಫೀಸರ್ ಅನುಮೋಲ್ ಉಪಸ್ಥಿತರಿದ್ದರು. ಉದ್ಘಾಟನಾ ಸಮಾರಂಭದ ನಂತರ ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರದ ಡಾಕ್ಟರ್ ರಾಜಲಕ್ಷ್ಮೀ ಆನಂದ್‌ರವರು ವಿದ್ಯಾರ್ಥಿಗಳಿಗೆ ಟಾಲಿ ಕೋರ್ಸ್ ನ ಮೂಲಭೂತ ಅಂಶಗಳ ಸ್ಥೂಲ ಪರಿಚಯ ಮಾಡಿಕೊಟ್ಟರು. ಹಾಗೂ ವಿದ್ಯಾರ್ಥಿಗಳಿಗೆ ಇಂದು ಅತಿ ಅಗತ್ಯವಾಗಿ ಬೇಕಾಗಿರುವ ಪವರ್ ಬಿ ಐ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗೂ ಇನ್ನಿತರ ಐಟಿ ಕೋರ್ಸುಗಳ ಪ್ರಾಮುಖ್ಯತೆ ಹಾಗೂ ಪ್ರಮುಖ ಅಂಶಗಳನ್ನು ಪರಿಚಯಿಸಿದರು.
ವಿದ್ಯಾರ್ಥಿನಿ ಕಾವ್ಯ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಲಾವಣ್ಯ ಅತಿಥಿಗಳ ಪರಿಚಯ ಮಾಡಿಕೊಟ್ಟರು. ತನ್ಮಯಿ ಹಾಗೂ ಸಂಗಡಿಗರು ಪ್ರಾರ್ಥನೆ ಹಾಡಿದರು. ವಂದನಾರ್ಪಣೆಯನ್ನು ಉಪನ್ಯಾಸಕ ಅನುಮೋಲ್ ರವರು ನಡೆಸಿಕೊಟ್ಟರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ