ಉಡುಪಿ: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ರಕ್ಷಕ-ಶಿಕ್ಷಕರ ಪಾತ್ರ ಹಿರಿದಾದುದು. ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರ ತರಲು ಮತ್ತು ಕೀಳರಿಮೆಯಿಂದ ಹೊರಬಂದು ಆತ್ಮಸ್ಥೈರ್ಯ ಬೆಳೆಸಿಕೊಳ್ಳುವಲ್ಲಿ ಶಿಕ್ಷಕರ ಜೊತೆಗೆ ಪಾಲಕರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದಾಗ ಮಾತ್ರ ಸಾಧ್ಯ ಎಂದು ಮಂಗಳೂರಿನ ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಮಹೇಶ್ ರಾವ್ ಹೇಳಿದರು.
ಇವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇಲ್ಲಿ 2024-25ನೇ ಸಾಲಿನ ರಕ್ಷಕ-ಶಿಕ್ಷಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಯಶಸ್ಸಿನ ಜೊತೆಗೆ ವೃತ್ತಿ ಭವಿಷ್ಯ ಮತ್ತು ಜೀವನದ ಸಾರ್ಥಕತೆಯಲ್ಲಿ ಶಿಕ್ಷಕರ, ಪಾಲಕರ, ಪೋಷಕರ, ಸಮಾಜದ ಮತ್ತು ಸರಕಾರಗಳ ಪಾತ್ರ ಮಹತ್ತರವಾದುದು ಎಂದು ಅವರು ನುಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಇದರ ಮನೋ ವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, “ಪಾಲಕರು ತಮ್ಮ ಮಕ್ಕಳ, ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಅವರ ನಡತೆ-ಶಿಸ್ತು, ಹಾಜರಾತಿ, ಶೈಕ್ಷಣಿಕ ಪ್ರಗತಿ, ಸ್ನೇಹಿತ ವಲಯ, ಚಲನ-ವಲನಗಳ ಬಗ್ಗೆ ಮಾಹಿತಿ ಪಡೆಯುತ್ತಾ ಇರಬೇಕು. ಯಾರನ್ನು ಯಾವುದೇ ರೀತಿಯಲ್ಲಿ ಹೋಲಿಕೆಗಳನ್ನು ಮಾಡದೆ ಪ್ರತಿಯೊಬ್ಬರಲ್ಲಿರುವ ವ್ಯಕ್ತಿತ್ವವನ್ನು ಗುರುತಿಸಿ, ನೊಂದಾಗ ಸಾಂತ್ವನ ನೀಡಿ, ಸಾಧಿಸಿದಾಗ ಶ್ಲಾಘಿಸಿ, ಯುವ ಜನತೆ ಸನ್ಮಾರ್ಗದಲ್ಲಿ ಸಾಗಲು ಮಾರ್ಗದರ್ಶನ ಮಾಡಬೇಕು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ನಿತ್ಯಾನಂದ ವಿ. ಗಾಂವಕರ ಅವರು ಕಾಲೇಜಿನಲ್ಲಿ ದೊರಕುವ ವಿವಿಧ ಸವಲತ್ತುಗಳು ಮತ್ತು ಸಂಸ್ಥೆಯ ವಿಶೇಷತೆಯ ಕುರಿತು ಮಾಹಿತಿ ನೀಡಿ, ನಮ್ಮ ವಿದ್ಯಾರ್ಥಿಗಳು ಸ್ವಾವಲಂಬಿ, ಸ್ವತಂತ್ರ ಬದುಕು ಕಟ್ಟಿಕೊಳ್ಳುವಂತೆ ಮಾಡುವಲ್ಲಿ ಶಿಕ್ಷಕರು, ಪಾಲಕರು ಹಾಗೂ ಸಮಾಜ ಒಟ್ಟಾಗಿ ಶ್ರಮಿಸಬೇಕು. ಪೋಷಕರು ಪ್ರತಿನಿತ್ಯ ತಮ್ಮ ಮಕ್ಕಳಲ್ಲಿ ಸಂಪರ್ಕವನ್ನಿಟ್ಟುಕೊಂಡಾಗ ಅವರ ಶ್ರೇಯಸ್ಸನ್ನು ನಿರೀಕ್ಷಿಸಲು ಸಾಧ್ಯ ಎಂದರು.
ಸಭೆಯಲ್ಲಿ 2024-25ನೇ ಶೈಕ್ಷಣಿಕ ವರ್ಷಕ್ಕೆ ಶಿಕ್ಷಕ-ರಕ್ಷಕ ಸಂಘದ ರಚನೆ ಪೋಷಕರ ಸಮ್ಮುಖದಲ್ಲಿ ನಡಯಿತು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ರಾಧಾಕೃಷ್ಣ ಪೈ, ಉಪಾಧ್ಯಕ್ಷರಾಗಿ ಇಂದಿರಾ, ಕಾರ್ಯದರ್ಶಿಯಾಗಿ ಶಂಕರ್‌ದಾಸ್ ಚಂಡ್ಕಳ, ಜಂಟಿ ಕಾರ್ಯದರ್ಶಿಯಾಗಿ ರಾಜೀವಿ ಆಯ್ಕೆಗೊಂಡರು.
ವೇದಿಕೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಆದ್ಯಕ್ಷರಾದ ಭಾರತಿ ಕೆ., ವಿದ್ಯಾರ್ಥಿ ಕ್ಷೇಮಪಾಲನಾ ವೇದಿಕೆ (ಪದವಿ ವಿಭಾಗ) ಸಂಚಾಲಕರಾದ ಪ್ರಶಾಂತ ಎನ್., ಐಕ್ಯೂಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ ಉಪಸ್ಥಿತರಿದ್ದರು. ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಸಾದ್ ಹೆಚ್.ಎಂ. ಪ್ರಾರ್ಥನೆಗೈದರು. ರಕ್ಷಕ-ಶಿಕ್ಷಕ ಸಂಘದ ಸಂಚಾಲಕ ಉಮೇಶ್ ಪೈ ಸ್ವಾಗತಿಸಿದರು. ರಕ್ಷಕ-ಶಿಕ್ಷಕರ ಸಂಘದ ಸಂಚಾಲಕಿ ಸುಷ್ಮಾ ಟಿ. ವಂದಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ವೇದಿಕೆ ಸಂಚಾಲಕ ಡಾ. ರಘು ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ