ಆಧುನಿಕ ಯುಗದ ಇಪ್ಪತ್ತೊಂದನೇ ಶತಮಾನದ ಸ್ಪರ್ಧಾತ್ಮಕ ಜಗತ್ತು ನಾಗಾಲೋಟದಲ್ಲಿ ಓಡುತ್ತಿದೆ. ದೈನಂದಿನ ಆಗು - ಹೋಗುಗಳಲ್ಲಿ ವೇಗೋತ್ಕರ್ಷ ಹೆಚ್ಚಾಗುತ್ತಿದೆ. ಮಾನವನ ಬದುಕು ದಿನೇ ದಿನೇ ಒತ್ತಡಮಯ ಹಾಗೂ ಅಷ್ಟೇ ದುಸ್ತರವಾಗುತ್ತಿದೆ. ಮಿತವಾದ ಸಂಪನ್ಮೂಲಗಳನ್ನು ಮಾನವನ ಅಪರಿಮಿತ ಆಸೆ ಮತ್ತು ಬಯಕೆಗಳಿಗೆ ಹೊಂದಿಸುವ ನಿಟ್ಟಿನಲ್ಲಿ ಮಾನವನು ನೇರವಾಗಿ ಪರಿಸರದ ಮೇಲೆಯೇ ದಾಳಿ ಮಾಡುವಂತಾಗಿದೆ.
ಪರಿಸರದ ಸಂಪನ್ಮೂಲಗಳನ್ನು ಬಿಟ್ಟು ಮಾನವ ಬದುಕಲಾರ ಅರ್ಥಾತ್ ಪರಿಸರವಿಲ್ಲದೆ ಮಾನವ ಉಳಿಯಲಾರ. ಆದರೆ ಮಾನವನಿಲ್ಲದೆ ಪರಿಸರ ಉಳಿಯುತ್ತದೆ. ಪರಿಸರದ ಮೇಲೆ ಆಧುನಿಕ ಮಾನವನ ನೇರವಾದ ಚಟುವಟಿಕೆಗಳು ಭಾರಿ ಪ್ರಭಾವ ಬೀರಿದ್ದು ನೇತ್ತ್ಯಾತ್ಮಕ ಪರಿಣಾಮವನ್ನು ಉಂಟು ಮಾಡುತ್ತಿವೆ.
ಜನಸಂಖ್ಯೆ ಮಿತಿಮೀರಿ ಬೆಳದಿದೆ. ಭೂ ಬಳಕೆ ಅತ್ಯಧಿಕವಾಗಿದೆ. ಕಾಡುಗಳು ಕಡಿಮೆಯಾಗುತ್ತಿವೆ. ಮಳೆಯ ಪ್ರಮಾಣ ಕಡಿಮೆಯಾಗಿದೆ. ಉಷ್ಣಾಂಶದಲ್ಲಿ ಏರಿಕೆಯಾಗುವ ಮೂಲಕ ಜಗತ್ತಿನಲ್ಲಿ ಹೊಸ ರೀತಿಯ ಪರಿಕಲ್ಪನೆಯನ್ನೇ ಸೃಷ್ಟಿಸಿದೆ. ಅದೇ ಜಾಗತಿಕ ತಾಪಮಾನ ಏರಿಕೆ.
ಭೂಮಿಯ ಗೋಳದಲ್ಲಿ ಮುಕ್ಕಾಲು ಭಾಗ ನೀರಿನಿಂದ ಆವೃತವಾಗಿದ್ದು ಕಾಲು ಭಾಗ ಮಾತ್ರ ಭೂಖಂಡಗಳು ಸೃಷ್ಟಿಯಾಗಿವೆ. ಭೂಮಿ ದಿನೇ ದಿನೇ ಸೂರ್ಯನ ಬಿಸಿಲಿನ ತಾಪಕ್ಕೆ ಸಿಕ್ಕಿ ತನ್ನಷ್ಟಕ್ಕೆ ತಾನೇ ಬಿಸಿಯಾಗುತ್ತಿರುವುದು, ಉಷ್ಣಾಂಶದಲ್ಲಿ ಏರಿಕೆಯಾಗುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ.
ಭೌಗೋಳಿಕ ವಿದ್ಯಮಾನಗಳು ನಿತ್ಯ ಬದಲಾವಣೆಗೆ ಒಳಪಡುತ್ತಿವೆ. ವಾಯುಮಂಡಲದ ಮೂಲ ಘಟಕಗಳಾದ ಮಳೆ, ಮೋಡ, ಗಾಳಿ (ಮಾರುತ), ಉಷ್ಣಾಂಶ, ತೇವಾಂಶ (ಆರ್ದ್ರತೆ) ಮುಂತಾದವುಗಳು ಅಸಮ ಮತ್ತು ಅಕಾಲಿಕ ಬದಲಾವಣೆಗಳಿಗೆ ಒಳಪಟ್ಟಿವೆ. ಹವಾಮಾನದಲ್ಲಿ ವ್ಯತ್ಯಾಸ ಮತ್ತು ಬದಲಾವಣೆ ಹಾಗೂ ವಾಯುಗುಣದಲ್ಲಿ ವ್ಯತ್ಯಾಸ ಮತ್ತು ಬದಲಾವಣೆಗಳು ಕಂಡುಬಂದಿದ್ದು ಜಾಗತಿಕ ತಾಪಮಾನ ಏರಿಕೆ ಎಂಬ ಹೊಸ ಪರಿಕಲ್ಪನೆಗೆ ಜನ್ಮ ನೀಡಿದೆ.
ಜಾಗತಿಕ ತಾಪಮಾನ ಒಂದು ಭೌಗೋಳಿಕ ವಿದ್ಯಮಾನವಾಗಿದ್ದು ಇದರ ಕುರಿತು ಮಾತನಾಡುವಾಗ ನಮಗೆ ಹಲವು ಪ್ರಶ್ನೆಗಳು ಎದುರಾಗುತ್ತವೆ ಜಾಗತಿಕ ತಾಪಮಾನ ಏರಿಕೆ ಎಂದರೇನು ? ಜಾಗತಿಕ ತಾಪಮಾನಕ್ಕೆ ಕಾರಣವೇನು? ಜಾಗತಿಕ ತಾಪಮಾನದ ಏರಿಕೆಯಿಂದ ಉಂಟಾಗಿರುವ ಸಮಸ್ಯೆಗಳನ್ನು ಪರಿಹರಿಸಲು ನಾವು ಏನೆಲ್ಲಾ ಮಾಡಬಹುದು ? ಜಾಗತಿಕ ತಾಪಮಾನದ ಏರಿಕೆಯ ಬಗೆಗೆ ಹೆಚ್ಚಿನ ಜನರಿಗೆ ತಿಳಿದಿದೆಯೇ ? ಇವುಗಳನ್ನು ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆಯೇ ? ಎಂಬ ಪ್ರಶ್ನೆಗಳು ಮೇಲೆದ್ದು ನಿಲ್ಲುತ್ತವೆ.
ಜಾಗತಿಕ ತಾಪಮಾನ ಏರಿಕೆಯು ಮೂಲಭೂತವಾಗಿ ಭೂಮಿಯ ಮೇಲ್ಮೈ ತಾಪಮಾನದಲ್ಲಿನ ಹೆಚ್ಚಳವಾದ ಉಷ್ಣಾಂಶ ಎಂದು ಅರ್ಥ. ಇಂದು ಮಾನವನ ಪ್ರಾಕೃತಿಕ ಮತ್ತು ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿ, ಕಲ್ಲಿದ್ದಲು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದಂತಹ ಪಳೆಯುಳಿಕೆಗಳು, ಮುಂತಾದ ಇಂಧನಗಳ ಸುಡವಿಕೆಯಿಂದಾಗಿ ಸಂಭವಿಸುತ್ತದೆ.
ಒಂದೊಮ್ಮೆ ಕೈಗಾರಿಕೀಕರಣಕ್ಕಾಗಿ ಈ ಎಲ್ಲಾ ಚಟುವಟಿಕೆಗಳನ್ನು ನಡೆಸುವುದು ಅಗತ್ಯವೇ ಆಗಿತ್ತು. ಆದರೆ ಕೈಗಾರಿಕೀಕರಣದ ನಂತರದ ಅವಧಿಯಲ್ಲಿ ಅಂದರೆ ಈಗ ನಮ್ಮ ಗ್ರಹಕ್ಕೆ ಜಾಗತಿಕ ತಾಪಮಾನ ಏರಿಕೆಯು ದೊಡ್ಡ ಬೆದರಿಕೆಯಾಗಿದೆ. ಇಂದು ಅಧ್ಯಯನ ಮಾಡುತ್ತಿರುವ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಾಗತಿಕ ತಾಪಮಾನದ ಏರಿಕೆಯದ್ದು ಕೇಂದ್ರೀಕೃತ ವಿಷಯವಾಗಿದೆ. ಜಗತ್ತಿನಾದ್ಯಂತ ಇಂದು ಅನೇಕ ಶಿಕ್ಷಣ ಸಂಸ್ಥೆಗಳು ಜಾಗತಿಕ ತಾಪಮಾನ ಏರಿಕೆಯ ಕುರಿತು ಅರಿವು ಮೂಡಿಸುತ್ತಿವೆ.
ಜಾಗತಿಕ ತಾಪಮಾನದ ಏರಿಕೆಯು ನಿರ್ದಿಷ್ಟವಾಗಿ ಮಾನವನ ಪರಿಸರದ ಚಟುವಟಿಕೆಗಳಿಂದಾಗಿ ಭೂಮಿಯ ಮೇಲ್ಮೈಯ ಉಷ್ಣತೆಯ ಏರಿಕೆಯನ್ನು ಸೂಚಿಸುತ್ತದೆ. ವಾತಾವರಣದಲ್ಲಿನ ಹಸಿರು ಮನೆ ಅನಿಲಗಳಾದ ಇಂಗಾಲದ ಡೈ ಆಕ್ಸೈಡ್, ಕ್ಲೋರೊ ಫ್ಲೋರೋ ಕಾರ್ಬನ್ ಗಳು, ಮಿಥೇನ್, ನೀರಿನ ಆವಿ ಮತ್ತು ಇತರ ಕೆಲವು ಮಾಲಿನ್ಯಕಾರಕಗಳು ವಾತಾವರಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದು ಇವು ಭೂಮಿಯನ್ನು ಮುಟ್ಟುತ್ತವೆ. ಆಗ ಉಷ್ಣಾಂಶದಲ್ಲಿ ಹೆಚ್ಚಳವಾಗುತ್ತದೆ.
ಹಾಗಾದರೆ ಜಾಗತಿಕ ತಾಪಮಾನದ ಏರಿಕೆಯಿಂದಾಗಿ ವಿಭಿನ್ನ ರೀತಿಯ ಪರಿಣಾಮಗಳು ಉಂಟಾಗುತ್ತವೆ. ಯಾವ ಯಾವ ರೀತಿಯ ಪರಿಣಾಮಗಳು ಉಂಟಾಗುತ್ತವೆ ಎಂಬುದನ್ನು ಈ ಕೆಳಗಿನಂತೆ ನೋಡೋಣ.
ಜಾಗತಿಕ ತಾಪಮಾನ ಏರಿಕೆಯಿಂದಾಗಿ ಭೂಮಿಯ ಗೋಳದ ಧ್ರುವ ಪ್ರದೇಶಗಳಲ್ಲಿರುವ ಹಿಮಗಡ್ಡೆಗಳು, ಹಿಮನದಿಗಳು ಕರಗಲು ಪ್ರಾರಂಭಿಸುತ್ತವೆ. ಹಿಮನದಿಗಳು ನೈಸರ್ಗಿಕ ಪರಿಸರ ವ್ಯವಸ್ಥೆಯ ಒಂದು ಭಾಗವಾಗಿದೆ ಎಂದು ನಮಗೆ ತಿಳಿದಿದೆ. ಹಿಮನದಿಗಳು ಕರಗುವ ಮೂಲಕ ನದಿಗಳಲ್ಲಿ ಹರಿವಿನ ಪ್ರಮಾಣ ಹೆಚ್ಚಾಗಿ ಸಮುದ್ರದಲ್ಲಿ ನೀರಿನ ಮಟ್ಟ ಹೆಚ್ಚಳವಾಗುತ್ತದೆ. ಇದರಿಂದ ಭೂಮಿಯ ಮೇಲಿನ ಮಾನವನ ಆಸ್ತಿಪಾಸ್ತಿ ನಷ್ಟವಾಗುತ್ತದೆ. ಪ್ರಾಣಿಗಳ ಆವಾಸಸ್ಥಾನಗಳು ಇಲ್ಲವಾಗುತ್ತವೆ.
ಸಾಮಾನ್ಯ ತಾಪಮಾನದಲ್ಲಿಯೂ ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಉಷ್ಣಾಂಶ ಹೆಚ್ಚಳವಾಗುತ್ತಿದೆ. ಉಷ್ಣವಲಯದ ದೇಶಗಳಿಗೆ ಜಾಗತಿಕ ತಾಪಮಾನದ ಏರಿಕೆಯು ದೊಡ್ಡ ಹೊಡೆತವನ್ನು ಉಂಟುಮಾಡಿದೆ ಅಂತಹ ದೇಶಗಳಲ್ಲಿ ಶಾಖದ ಹೆಚ್ಚಳದಿಂದಾಗಿ ಜೀವಿಗಳ ಆರೋಗ್ಯದ ಮೇಲೆ ಅನೇಕ ರೀತಿಯ ಸಮಸ್ಯೆಗಳು ಹೇರಳವಾಗಿ ಕಂಡುಬರಲು ಕಾರಣವಾಗುತ್ತವೆ.
ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಕಾಡ್ಗಿಚ್ಚುಗಳು ಹೆಚ್ಚುತ್ತವೆ. ಇದರಿಂದಾಗಿ ಅರಣ್ಯವನ್ನು ಜೀವನೋಪಾಯಕ್ಕಾಗಿ ಅವಲಂಬಿಸರುವ ಜನರ ಜೀವನ ನಾಶವಾಗುತ್ತದೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಸಮುದ್ರದಲ್ಲಿ ನೀರಿನ ಮಟ್ಟ ಹೆಚ್ಚಳವಾಗಿ ಕರಾವಳಿ ತೀರ ಪ್ರದೇಶಗಳು ನೀರೊಳಗೆ ಮುಳುಗಿ ಹೋಗುತ್ತವೆ. ಸಹಸ್ರಾರು ಜನರ ಸ್ಥಳಾಂತರಕ್ಕೆ ಯೋಜನೆ ರೂಪಿಸುವುದು ಮತ್ತು ಅವರಿಗೆಲ್ಲ ಊಟ ವಸತಿ ಆರೋಗ್ಯ ಶಿಕ್ಷಣ ನೀಡುವುದು ಹೀಗೆ ಒಂದಲ್ಲಾ ಒಂದು ಸಮಸ್ಯೆಗಳು ಎದುರಾಗುತ್ತಿವೆ.
ಭೂಮಿಯ ಮೇಲೆ ಮನುಷ್ಯನಿಗೆ ಕುಡಿಯಲು ಯೋಗ್ಯವಾದ ನೀರಿನ ಪ್ರಮಾಣ ಬಹಳ ಕಡಿಮೆ ಇದೆ. ಭೂಮಿಯಲ್ಲಿ ತಾಪಮಾನ ಏರಿಕೆಯಿಂದಾಗಿ ಇರುವ ನೀರೂ ಆವಿಯಾಗಿ ಹೋಗಿ ಮಳೆಯೂ ಬಾರದೆ, ಬರ ಅಥವಾ ಕ್ಷಾಮ ಉಂಟಾಗುವ ಭೀತಿ ಎದುರಾಗುತ್ತಿದೆ. ಇದೊಂದು ಅತ್ಯಂತ ಸೂಕ್ಷ್ಮ ಪರಿಣಾಮವೆನಿಸಿದೆ. ಆಹಾರ ಉತ್ಪಾದನೆಯ ಮೇಲೂ ಗಂಭೀರ ಪರಿಣಾಮ ಬೀರುತ್ತದೆ.
ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹಿಮ ನದಿಗಳು ಮತ್ತು ಮಂಜುಗಡ್ಡೆಗಳು ಕರಗಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿ ಲವಣ ಯುಕ್ತ ನೀರಿನ ಸಂಯೋಜನೆಯಲ್ಲಿ ಅಡಚಣೆ ಉಂಟಾಗುತ್ತದೆ. ಇದರಿಂದಾಗಿ ಜಲಚರ ಪ್ರಭೇದಗಳು ಮತ್ತು ಪರಿಸರ ವ್ಯವಸ್ಥೆಯ ವಿನಾಶಕ್ಕೆ ಕಾರಣವಾಗುತ್ತದೆ.
ಇಂದು ಆಧುನಿಕ ತಂತ್ರಜ್ಞಾನ ಮತ್ತು ಮುನ್ನೆಚ್ಚರಿಕೆಯ ಕ್ರಮಗಳ ಹೊರತಾಗಿಯೂ ಜಾಗತಿಕ ತಾಪಮಾನ ಏರಿಕೆಯ ಪರಿಣಾಮವಾಗಿ ಪ್ರವಾಹಗಳು ಹೆಚ್ಚಾಗುತ್ತಿವೆ, ಶಾಖದ ಅಲೆಗಳು ಹೆಚ್ಚಾಗುತ್ತಿವೆ, ಕ್ಷಾಮದ ಪರಿಸ್ಥಿತಿ ಸಾಮಾನ್ಯತೆಗಿಂತ ಹೆಚ್ಚಾಗುತ್ತಿದೆ. ಚಂಡಮಾರುತಗಳು ಮತ್ತು ಪ್ರತ್ಯಾವರ್ತ ಮಾರುತಗಳು ಪರಿಸರದಲ್ಲಿ ಅನಿರೀಕ್ಷಿತ ಮತ್ತು ಅನಿಯಂತ್ರಿತವಾಗಿವೆ.
ಭೂ ಗ್ರಹ ಬಿಸಿಯಾಗುತ್ತಿರುವ ಪರಿಣಾಮ ಮಲೇರಿಯಾ, ಡೆಂಗ್ಯೂನಂತಹ ರೋಗಗಳ ಹರಡುವಿಕೆ ಸಾಮಾನ್ಯತೆಗಿಂತ ಹೆಚ್ಚಾಗಿದೆ. ಹೊಸ ಮತ್ತು ಮಾರಣಾಂತಿಕ ಕೀಟಗಳು, ವೈರಸ್ ಗಳು ಮತ್ತು ಬ್ಯಾಕ್ಟೀರಿಯಗಳು ಎಲ್ಲಾ ರೀತಿಯ ಜೀವಿಗಳಿಗೆ ಕಂಟಕಪ್ರಾಯವಾಗಿವೆ.
ಜಾಗತಿಕ ತಾಪಮಾನದ ಹೆಚ್ಚಳದಿಂದಾಗಿ ಚಂಡಮಾರುತ ಮತ್ತು ಪ್ರವಾಹಗಳು ಅನಿರೀಕ್ಷಿತವಾಗಿ ಹೆಚ್ಚಿದ್ದು , ಇವುಗಳಿಂದ ಜನರು ಮನೆ-ಮಠ, ಆಸ್ತಿಗಳನ್ನು ಕಳೆದುಕೊಂಡು ಬಡವರಾಗುತ್ತಿದ್ದಾರೆ. ಹೊಸ ಕೆಲಸಗಳನ್ನು ಹುಡುಕಿಕೊಂಡು ನಗರಗಳತ್ತ ವಲಸೆ ಹೋಗುತ್ತಿರುವುದು ಹೆಚ್ಚಾಗುತ್ತಿದೆ. ಅಲ್ಲಿ ಕೊಳಗೇರಿಗಳ ಸಂಖ್ಯೆ ಹೆಚ್ಚಾಗಿ ರೋಗರುಜಿನಗಳು ಹೆಚ್ಚುತ್ತಿವೆ. ಮಾನವನ ಜೀವನಮಟ್ಟ ಕುಸಿಯುತ್ತಿದೆ ಹಾಗೂ ಆಯುಷ್ಯ ಪ್ರಮಾಣ ಇಳಿಕೆಯಾಗುತ್ತಿದೆ ಕಿಕ್ಕಿರಿದ ಜನಸಂದಣಿ ಪ್ರದೇಶಗಳು ಆರೋಗ್ಯದ ಅಪಾಯಗಳನ್ನು ಎದುರಿಸುತ್ತಿವೆ.
ಈ ಮೇಲಿನ ಗಂಭೀರ ಪರಿಣಾಮಗಳನ್ನು ಬೀರುತ್ತಿರುವ ಜಾಗತಿಕ ತಾಪಮಾನ ಏರಿಕೆಯನ್ನು ತಡೆಗಟ್ಟುವಲ್ಲಿ ಇಂದಿನ ಪ್ರತೀ ಪೀಳಿಗೆಯ ಪಾತ್ರ ಬಹಳಷ್ಟಿದೆ. ಪರಿಸರದೊಂದಿಗಿನ ನಮ್ಮ ಚಟುವಟಿಕೆಗಳಿಗೆ ನಾವು ಅಂಕುಶವನ್ನಿಟ್ಟು , ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಮತ್ತು ಈಗಾಗಲೇ ಉಂಟಾಗಿರುವ ಹಾನಿಯನ್ನು ತಡೆಯುವಲ್ಲಿ ಪ್ರಯತ್ನಿಸಬೇಕು.
ನಾವೆಲ್ಲರೂ ಸಕ್ರಿಯವಾಗಿ ಭಾಗವಹಿಸುವ ಮತ್ತು ಕ್ರಿಯಾ ಶೀಲ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಹಾಗೂ ಜಾಗತಿಕ ತಾಪಮಾನ ಏರಿಕೆಯನ್ನು ನಿಲ್ಲಿಸಲು ನಮ್ಮ ಸ್ವಂತ ದೃಷ್ಟಿಕೋನಗಳನ್ನು ರೂಪಿಸುವ ಮೂಲಕ ಸಮಾಜದಲ್ಲಿ ಜನರಿಗೆ ಅರಿವುಂಟು ಮಾಡಬೇಕು.
ಜಾಗತಿಕ ತಾಪಮಾನ ಏರಿಕೆಯನ್ನು ಕಡಿಮೆ ಮಾಡುವಲ್ಲಿ ಸರಿಯಾದ ಮಾರ್ಗದರ್ಶನ ಪಡೆದುಕೊಳ್ಳುವುದು ಮತ್ತು ಸರಿಯಾಗಿ ನಮ್ಮ ಪರಿಸರಕ್ಕೆ ನಮ್ಮನ್ನು ಒಡ್ಡಿಕೊಳ್ಳುವುದು ಹಾಗೂ ಅಂತಹ ಜಾಗೃತಿಯನ್ನು ಮೂಡಿಸುವುದು. ನೈಸರ್ಗಿಕ ಅಂಶಗಳಾದ ಅರಣ್ಯಗಳು, ಭೂಮಿ, ಮಣ್ಣು , ನೀರು, ಗಾಳಿ ಮುಂತಾದವುಗಳನ್ನು ಸಂರಕ್ಷಿಸಿ, ಭವಿಷ್ಯದ ಜನಾಂಗಕ್ಕೂ ಉಳಿಸಲು ಪ್ರಯತ್ನಿಸುವ ಮೂಲಕ ಜಾಗತಿಕ ತಾಪಮಾನ ಏರಿಕೆಯನ್ನು ತಡೆಯೋಣ.
✍️ ಕೆ. ಎನ್. ಚಿದಾನಂದ. ಹಾಸನ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ