ವೈದ್ಯ ಸಾಹಿತ್ಯ ಯಾಕೆ ಅನಿವಾರ್ಯ

Upayuktha
0

ತ್ತೀಚಿನ ದಿನಗಳಲ್ಲಿ ದಿನಕ್ಕೊಂದರಂತೆ ಹೊಸ ಹೊಸ ರೋಗಗಳು ಮತ್ತು ಹೊಚ್ಚ ಹೊಸ ರೋಗಾಣುಗಳು ಹುಟ್ಟಿಕೊಳ್ಳುತ್ತಿದೆ. ಜನರಿಗೆ ರೋಗಾಣು ಮತ್ತು ರೋಗಗಳ ಬಗ್ಗೆ ಅಗತ್ಯಕ್ಕಿಂತ ಜಾಸ್ತಿ ಮಾಹಿತಿ ಕಂಪ್ಯೂಟರ್ ಅಥವಾ ಮೊಬೈಲ್ ಅಂತರ್ಜಾಲದ ಮುಖಾಂತರ ಗೂಗಲ್ ಗಳಲ್ಲಿ ಸಿಕ್ಕುತ್ತಿದೆ.


ಇದು ಕೇವಲ ಮಾಹಿತಿ ಮಾತ್ರ. ಆದರೆ ಜನರು ಈ ಮಾಹಿತಿಗಳನ್ನು ಸತ್ಯವೆಂದು ನಂಬಿ ಕೈ ಕಾಲು ಬಡಿದುಕೊಳ್ಳಲು ಆರಂಭಿಸುತ್ತಾರೆ . ಗೂಗಲ್ ಗಳಲ್ಲಿ ಸಿಗುವ ಎಲ್ಲಾ ಮಾಹಿತಿಗಳು ಸತ್ಯವಲ್ಲ .ಹೆಚ್ಚಿನ ಎಲ್ಲಾ ಮಾಹಿತಿಗಳು  ವೈಭವೀಕರಿಸಲ್ಪಟ್ಟು ಜನರ ಕಿವಿಯಿಂದ ಕಿವಿಗೆ ಹರಡಿ ಕೊನೆಗೆ ಮಾಹಿತಿ ಸಂಪೂರ್ಣ ತಿರುಚಿಕೊಂಡು ಸತ್ಯಕ್ಕಿಂತ ಜಾಸ್ತಿ ಸುಳ್ಳೇ ವಿಜೃಂಭಿಸುವ ಹಂತಕ್ಕೆ ತಲುಪಿರುತ್ತದೆ.


ಈ ಹಿಂದೆ( ಸುಮಾರು ಎರಡು ದಶಕಗಳ ಹಿಂದೆ) ಜನರಿಗೆ ರೋಗಗಳ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ .ಏನೇ ರೋಗ ಬಂದರೂ ರೋಗಿಗಳು ವೈದ್ಯರ ಬಳಿ ಬರಲೇ ಬೇಕಿತ್ತು, ಮತ್ತು ವೈದ್ಯರ ಮೂಲಕ  ಮಾತ್ರ ರೋಗದ ಬಗೆಗಿನ ಮಾಹಿತಿ ದೊರೆತು ಔಷಧಿ ಪಡೆದು ನಿರಾಳರಾಗುತ್ತಿದ್ದರು. ಆದರೆ ಈಗ ಎಲ್ಲಾ ಮಾಹಿತಿಗಳು ಜನರಿಗೆ ಬೇಡವೆಂದರೂ ಸಿಗುತ್ತಿದೆ.


ಈ ಕಾರಣದಿಂದ ಈಗಿನ ಕಾಲ ಘಟ್ಟದಲ್ಲಿ  ಜನರಿಗೆ ಏನಾದರೂ ಅಸೌಖ್ಯತೆ ಕಾಡಿದಾಗ ತಾವೇ ಗೂಗಲ್ ಮಾಡಿ ರೋಗದ ಲಕ್ಷಣಗಳನ್ನು ತಿಳಿದು, ತಾವೇ ರೋಗ ನಿರ್ಣಯ ಮಾಡಿ, ತಾವೇ ಔಷಧಿ ತೆಗೆದುಕೊಳ್ಳುವ ಹಂತಕ್ಕೆ ಜನರು ತಲುಪಿದ್ದಾರೆ .ಒಂದೆರಡು ದಿನ ನೋವು ನಿವಾರಕ ಔಷಧಿ, ಜ್ವರದ ಔಷಧಿ ಮತ್ತು ಒಂದೆರಡು ಬಗೆಯ ಆಂಟಿ ಬಯೋಟಿಕ್ ಔಷಧಿಯನ್ನು ತಾವೇ ಫಾರ್ಮಸಿಯಿಂದ ಪಡೆದು ಸ್ವಯಂ ಮದ್ದುಗಾರಿಕೆ ಮಾಡಿದ ನಂತರ ರೋಗ ಕಡಿಮೆಯಾಗದಿದ್ದಲ್ಲಿ ಮಾತ್ರ ವೈದ್ಯರ ಬಳಿ ಹೋಗುವ ತೀರ್ಮಾನ ಮಾಡುವವರೆಗೆ 'ಸ್ವಾತಂತ್ರ್ಯ ಮತ್ತು ಎದೆಗಾರಿಕೆ ನಮ್ಮ ಜನರಿಗೆ ಈಗ ಬಂದಿರುವುದು ನಿಜವಾಗಿಯೂ ಅಪಾಯಕಾರಿ ಬೆಳವಣಿಗೆ.


ಈ ಹಿಂದೆ ಬೆರಳೆಣಿಕೆಯ ವೈದ್ಯರಿದ್ದರೂ ಜನರು ಕಾದು ಕುಳಿತು ವೈಧ್ಯರಿಂದಲೇ ಔಷಧಿ  ಪಡೆಯುತ್ತಿದ್ದರು . ಈಗ ಕೈಗೊಂದು ಕಾಲಿಗೊಂದು ವೈದ್ಯರಿದ್ದರೂ ತಮ್ಮ ಅರೆಬರೆ ಜ್ಞಾನ ಮತ್ತು ಡಾ| ಗೂಗಲ್ ಸಹಾಯದಿಂದ ಸ್ವಯಂ ಮದ್ದುಗಾರಿಕೆ ಮಾಡಿ ಕೊನೆಗೆ ರೋಗ ಉಲ್ಭಣಿಸಿ ಕೈ ಮೀರಿ ಹೋದಾಗ ಮಾತ್ರ ವೈದ್ಯರ ಬಳಿ ಹೋಗಿ ರೋಗಿಯನ್ನು ಉಳಿಸಿ ಎಂದು ಗೋಗರೆದು , ಕೊನೆಗೆ ರೋಗಿ ಗುಣಮುಖವಾಗದಿದ್ದಲ್ಲಿ ವೈದ್ಯರನ್ನೇ ಹೊಣೆಗಾರನನ್ನಾಗಿ ಮಾಡಿ ವೈದ್ಯರಿಗೆ ನಾಲ್ಕು ಬಿಗಿದು ಅವರನ್ನು ರೋಗಿಯನ್ನಾಗಿಸುವ ಹಂತಕ್ಕೆ ಜನರು ಬೆಳೆದು ನಿಂತಿರುವುದು ಆರೋಗ್ಯಕರ ಬೆಳೆವಣಿಗೆ ಅಲ್ಲವೇ ಇಲ್ಲ. ಈ ಎಲ್ಲಾ ಹಿನ್ನಲೆಗಳನ್ನು ಗಮನಿಸಿದಾಗ ವೈದ್ಯ ಸಾಹಿತ್ಯಕ್ಕೆ ಮತ್ತು ವೈದ್ಯ ಸಾಹಿತ್ಯವನ್ನು ಪ್ರತಿಪಾದಿಸುವ ಮತ್ತು ಪರಿಪಾಲಿಸುವ ವೈದ್ಯರಿಗೆ ಇನ್ನಷ್ಟು ಹೊಣೆಗಾರಿಕೆ ಇದೆ.

 

ವೈದ್ಯರ  ಹೊಣೆಗಾರಿಕೆ ಏನು ?

ವೈದ್ಯನಾದವನು ರೋಗಕ್ಕೆ ಚಿಕಿತ್ಸೆ ನೀಡುವುದು ಆತನ ಪ್ರಾಥಮಿಕ ಕರ್ತವ್ಯ. ಇದರ ಜೊತೆಗೆ ರೋಗವನ್ನು ತಡೆಗಟ್ಟುವ ಬಗ್ಗೆ , ರೋಗವನ್ನು ಬಾರದಂತೆ ಬದುಕುವ ಬಗೆಗೆ ಮತ್ತು ಕೆಲವೊಂದು ತಡೆಗಟ್ಟಲು ಸಾಧ್ಯವಿಲ್ಲದ ರೋಗಗಳ ಬಗ್ಗೆ ಜಾಗೃತೆ ಮಾಡಿಸಿ , ರೋಗ ಬಂದರೂ ರೋಗಗಳ ಜೊತೆಗೆ ಬದುಕುವುದರ ಬಗ್ಗೆ ಜನರಿಗೆ ತಿಳಿ ಹೇಳುವುದು ಅತ್ಯಗತ್ಯ .ಉದಾಹರಣೆಗೆ ಜಗತ್ತಿಗೆ ಸಾವಿಗೆ ಕಾರಣ ವಾಗುವ ರೋಗಗಳಲ್ಲಿ  ಸಿಂಹಪಾಲು ಹೃದಯಾಘಾತಕ್ಕೆ ಸಲ್ಲುತ್ತದೆ. ಹೆಚ್ಚಿನ ಎಲ್ಲಾ ಹೃದಯಾಘಾತಗಳನ್ನು ತಡೆಗಟ್ಟಲು ಸಾಧ್ಯವಿದೆ. ನಮ್ಮ ಆಹಾರ ಪದ್ದತಿ ಜೀವನ ಶೈಲಿ ಮತ್ತು ಒತ್ತಡ ರಹಿತ ಕೆಲಸದ ವಾತಾವರಣಗಳಿಂದ ಹೃದಯಾಘಾತ ತಪ್ಪಿಸಲು ಸಾಧ್ಯವಿದೆ ಎಂದು ರೋಗಿಗಳಿಗೆ ಮನವರಿಕೆ ಮಾಡಬೇಕು. 


ಇದನ್ನು ಸಮಾಜದ ಎಲ್ಲಾ ಸ್ತರದ ಜನರಿಗೆ ತಲುಪುವಂತೆ ಮಾಡುವುದು ವೈದ್ಯರ ಸಾಮಾಜಿಕ ಹೊಣೆಗಾರಿಕೆ ಆಗಿರುತ್ತದೆ. ಇದನ್ನು ಮಾಡಬೇಕಾದಲ್ಲಿ ವೈದ್ಯಕೀಯ ಸಾಹಿತ್ಯದಿಂದ ಮಾತ್ರ ಸಾಧ್ಯವಿದೆ. ದೃಶ್ಯ ಮಾಧ್ಯಮಗಳ ಮುಖಾಂತರ ಯೂ ಟ್ಯೂಬ್ ಚಾನೆಲ್ ಗಳ ಮುಖಾಂತರ , ಮಾಸಿಕ,ದೈನಿಕ , ಪತ್ರಿಕೆಯ ಮುಖಾಂತರ ಜನರಿಗೆ ರೋಗದ ಬಗ್ಗೆ ಅರಿವು , ಜಾಗೃತೆ ಮಾಡಿಸುವ ಕೆಲಸ ನಿರಂತರ ಮಾಡುತ್ತಿರಲೇಬೇಕು.


ಸರಿಯಾದ ಅಂಕಿ ಅಂಶಗಳು ಮಾಹಿತಿಗಳು ಮತ್ತು ರೋಗದ ಬಗೆಗಿನ ವಿಚಾರಗಳನ್ನು ಹಂಚಿಕೊಳ್ಳಬೇಕು. ರೋಗದ ಚಿಕಿತ್ಸೆ ಬಗ್ಗೆ ಯಾವುದೇ ವಿಚಾರ ಹಂಚಿಕೊಳ್ಳಬಾರದು. ರೋಗದ ನಿರ್ಣಯದ ಬಗ್ಗೆ, ರೋಗ ಗುರುತಿಸುವ ಬಗ್ಗೆ, ರೋಗ ತಡೆಗಟ್ಟುವ ಬಗ್ಗೆ, ರೋಗ ಹರಡದಂತೆ ಹೇಗೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಕೂಲಂಕುಶವಾಗಿ ಮಾಹಿತಿ ವೈದ್ಯ ಸಾಹಿತ್ಯದ ಮುಖಾಂತರ ಜನರಿಗೆ ತಲುಪಿಸಬೇಕು. 


ಜನರಿಗೆ ತಪ್ಪು ಮಾಹಿತಿ ತಲುಪದಂತೆ ನೋಡಿಕೊಳ್ಳಬೇಕು. ಜನರ ಅಪನಂಬಿಕೆ ಮತ್ತು ಮೌಡ್ಯಗಳನ್ನು ತೊಡೆದು ಹಾಕಲು ಪೂರಕವಾದ ಮಾಹಿತಿ , ಅಂಕಿ ಅಂಶಗಳನ್ನು ವೈದ್ಯರು ತಮ್ಮ ಜ್ಞಾನ ಕೌಶಲ್ಯ ಮತ್ತು ತರಬೇತಿ ಅನುಭವಗಳನ್ನು ವೈದ್ಯ ಸಾಹಿತ್ಯದ ಮೂಲಕ ಹಂಚಿಕೊಳ್ಳಬೇಕು.ಹೀಗೆ ಮಾಡಿದ್ದಲ್ಲಿ ಜನರಿಗೆ ಸರಿಯಾದ ಮಾಹಿತಿ ಹೊರೆತು ಅವರಿಗೆ ಆತ್ಮವಿಶ್ವಾಸ ಬೆಳೆದು ರೋಗವನ್ನು ಎದುರಿಸುವ ಶಕ್ತಿ ಅವರಿಗೆ ದೊರಕುತ್ತದೆ.ಈ ಹಿನ್ನಲೆಯಲ್ಲಿ ವೈದ್ಯರಿಗೆ ಅತೀ ಹೆಚ್ಚಿನ ಸಾಮಾಜಿಕ ಹೊಣೆಕಾರಿಕೆ ಮತ್ತು ಜವಾಬ್ಧಾರಿ ಇರುತ್ತದೆ.


ವೈದ್ಯ ಸಾಹಿತ್ಯದಿಂದ ಏನು ಲಾಭವಿದೆ?


1. ಹತ್ತು ಹಲವಾರು ರೋಗಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಜನರಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಿ, ಜನರಲ್ಲಿ ರೋಗದ ಬಗೆಗಿನ ಅನಗತ್ಯ ಭಯವನ್ನು ತಪ್ಪಿಸಬಹುದಾಗಿದೆ.

2. ಇನ್ನು ಕೆಲವು ರೋಗಗಳ ಬಗ್ಗೆ ಜನರು ಮೂಡ ನಂಬಿಕೆ ಮತ್ತು ತಪ್ಪು ಅಭಿಪ್ರಾಯ ಹೊಂದಿರುತ್ತಾರೆ,ಇದನ್ನು ಪರಿಣಿತ ವೈದ್ಯರು  ಸರಿಯಾದ ಮಾರ್ಗಧರ್ಶನ ನೀಡಿ ಜನರ ತಪ್ಪು ಕಲ್ಪನೆಗಳನ್ನು ದೂರ ಮಾಡಲು ವೈದ್ಯ ಸಾಹಿತ್ಯದಿಂದ ಸಾಧ್ಯವಿದೆ.

3. ಸ್ವಯಂ ಮದ್ಧುಗಾರಿಕೆ ಮಾಡುವುದರಿಂದ ಉಂಟಾಗುವ ತೊಂದರೆಗಳ ಬಗ್ಗೆ ಮತ್ತು ಅಪಾಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ತುರ್ತು ಅಗತ್ಯತೆ ಇದೆ. ಸೈಬರ್ ಕಾಂಡ್ರಿಯಾ , ಅಂತರ್ಜಾಲದ ಔಷಧಿಗಾರಿಕೆ ಮುಂತಾದ ಚಟಗಳನ್ನು ಬುಡ ಸಮೇತ ಕಿತ್ತು ಹಾಕಲು ವೈದ್ಯ ಸಾಹಿತ್ಯ ಅತೀ ಅವಶ್ಯಕ.

4. ಕೆಟ್ಟ ಜೀವನ ಶೈಲಿ ಮತ್ತು ಕೆಟ್ಟ ಆಹಾರ ಪದ್ದತಿಯಿಂದಾಗಿ ಬರುವ ಜೀವನ ಶೈಲಿ ಸಂಬಂಧಿ ತಡೆಗಟ್ಟಬಹುದಾದ ರೋಗಗಳಾದ ಮದುಮೇಹ,ಅಧಿಕ ರಕ್ತದೊತ್ತಡ , ಹೃದಯಾಘಾತ ಮತ್ತು ಖಿನ್ನತೆ ಮುಂತಾದ ರೋಗಗಳನ್ನು ಬಾರದಂತೆ ತಡೆಯುವಲ್ಲಿ "ವೈದ್ಯ ಸಾಹಿತ್ಯ" ಮುಖ್ಯ ಭೂಮಿಕೆ ವಹಿಸುತ್ತದೆ. ಈ ನಿಟ್ಟಿನಲ್ಲಿ ವೈದ್ಯರು ರೋಗದ ಚಿಕಿತ್ಸೆಯ ಜೊತೆಗೆ ರೋಗ ತಡೆಗಟ್ಟುವ ವಿಧಾನದ ಬಗ್ಗೆ ಜನರಲ್ಲಿ ವೈದ್ಯ ಸಾಹಿತ್ಯ ದ ಮುಖಾಂತರ ಜಾಗೃತಿ ಮೂಡಿಸುವ ತುರ್ತು ಅವಶ್ಯಕತೆಯಿದೆ.


5. ವೈದ್ಯ ಸಾಹಿತ್ಯವನ್ನು ಪ್ರತಿಪಾದಿಸುವ ವೈದ್ಯರು ನಿರಂತರವಾಗಿ ಅಧ್ಯಯನ ಶೀಲರಾಗಿರಬೇಕಾಗುತ್ತದೆ ಈ ಕಾರಣದಿಂದ ವೈದ್ಯರ ಜ್ಞಾನಾರ್ಜನೆ ನಿರಂತರವಾಗಿ ಸಾಗುತ್ತಿರುತ್ತದೆ. ಹೊಸ ರೋಗ ಮತ್ತು ರೋಗಾಣುಗಳು ಹುಟ್ಟಿದಂತೆ,ಹೊಸ ಔಷಧಿ ಹೊಸ ಆವಿಷ್ಕಾರಗಳ ಬಗ್ಗೆ ವೈದ್ಯರು ಒಟ್ಟು ಮಾಹಿತಿ ಪಡೆದು ಜನರಿಗೆ ತಿಳಿ ಹೇಳುತ್ತಾರೆ. ಒಟ್ಟಿನಲ್ಲಿ ವೈದ್ಯರು ನಿರಂತರವಾಗಿ ಅಧ್ಯಯನ ಮಾಡುವುದರಿಂದ ಸಾಮಾಜಿಕ ಸ್ವಾಸ್ತ್ಯ ಹೆಚ್ಚುತ್ತದೆ.


6. ಹೊಸ ಹೊಸ ರೋಗಗಳು ಬಂದಾಗ ಜನರು ಹೆಚ್ಚಾಗಿ ಗೂಗಲ್ ಮುಖಾಂತರ ರೋಗಗಳ ಬಗ್ಗೆ ಅನಗತ್ಯ ಮಾಹಿತಿ ಪಡೆದು ವಿನಾಕಾರಣ ಒತ್ತಡಕ್ಕೆ ಒಳಗಾಗುತ್ತಾರೆ. ಈ ಹಿನ್ನಲೆಯಲ್ಲಿ ಹೊಸ ರೋಗಗಳು ಹುಟ್ಟಿಕೊಂಡಾಗ ವೈದ್ಯರು ತಮ್ಮ ವಿಚಾರಧಾರೆಗಳನ್ನು ವೈದ್ಯ ಸಾಹಿತ್ಯದ ಮುಖಾಂತರ ಜನರಿಗೆ ತಲುಪಿಸಿ ಅನಗತ್ಯ ಗೊಂದಲವನ್ನು ತಪ್ಪಿಸಲು ಸಾಧ್ಯವಿದೆ.


ಕೊನೆಮಾತು : 'ಅಲೋಪತಿ ' ವೈದ್ಯ ಪದ್ಧತಿ ಎನ್ನುವುದು ನಿಂತ ನೀರಾಗಿರದೆ, ನಿರಂತರವಾಗಿ ಹೊಸತನಕ್ಕೆ ತೆರೆದುಕೊಳ್ಳುವ ವೈದ್ಧ್ಯಕೀಯ ಪದ್ಧತಿ ಆಗಿರುತ್ತದೆ.60-70 ದಶಕದಲ್ಲಿ ಇದ್ದಂತಹ ರೋಗಗಳು ಮತ್ತು ಔಷಧಿಗಳು ಈಗ ದುರ್ಭೀನು ಹಾಕಿ ಹುಡುಕಿದರೂ ಸಿಗಲಿಕ್ಕಿಲ್ಲ.


ಹಲವಾರು ಔಷಧಿಗಳು ಮತ್ತು ರೋಗಗಳು ವೈದ್ಯರ ಪಟ್ಟಿಯಿಂದ ಕಾಣೆಯಾಗಿದೆ.ಜಗತ್ತು ದಿನೇ ದಿನೇ ಕಿರಿದಾಗುತ್ತಿದೆ. ಎಲ್ಲೋ  ಹುಟ್ಟಿದ ವೈರಾಣು ದಿನ ಬೆಳಗಾಗುವುದರಲ್ಲಿ ಯಾವುದೋ ದೇಶದ ಯಾವುದೋ ಮೂಲೆಗೆ ತಲುಪಲು ಸಾಧ್ಯವಿದೆ . ಈ ಕಾರಣದಿಂದ ವಿರಳಾತೀತ ವೈರಾಣು ರೋಗದಿಂದ ಹಿಡಿದು ಅತೀ ಸಾಮಾನ್ಯ ರೋಗಗಳ ಬಗ್ಗೆಯ ವೈದ್ಯರಿಗೆ ಮತ್ತು ಜನರಿಗೆ ಸರಿಯಾದ ಮಾಹಿತಿ ಇರಬೇಕಾಗುತ್ತದೆ. ಇದನ್ನು ಜನರಿಗೆ ತಲುಪಿಸಬೇಕಾದಲ್ಲಿ 'ವೈದ್ಯ ಸಾಹಿತ್ಯ  ' ಅತೀ ಅಗತ್ಯ .ಅದು ಕೇವಲ ವೃತ್ತ ಪತ್ರಿಕೆಯಾಗಿರಬೇಕಾಗಿಲ್ಲ .ದೃಶ್ಯ ಮಾಧ್ಯಮ, ಯೂ ಟ್ಯೂಬ್, ಇನ್ಸ್ಟಾಗ್ರಾಮ್ ಅಥವಾ ಇನ್ನಾವುದೇ ಮಾಧ್ಯಮ ಮುಖಾಂತರ ಸರಿಯಾದ ಮಾಹಿತಿ ಮತ್ತು ವಿಚಾರಗಳನ್ನು ರೋಗಿಗಳಿಗೆ ಮತ್ತು ಸಮಾಜಕ್ಕೆ ಸಕಾಲದಲ್ಲಿ ತಲುಪಬೇಕಾಗುತ್ತದೆ. 


ಈ ಕಾರಣದಿಂದ ವೈದ್ಯರುಗಳು ಕಾಲಕಾಲಕ್ಕೆ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ತಮ್ಮ ವಿಚಾರಧಾರೆಯನ್ನು ಮತ್ತು ರೋಗಗಳ ಬಗೆಗಿನ ಮಾಹಿತಿಯನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಲೇಬೇಕು . ಹೀಗೆ ಮಾಡಬೇಕಾದಲ್ಲಿ 'ವೈದ್ಯ ಸಾಹಿತ್ಯ'ಅತೀ ಅನಿವಾರ್ಯ. 


ವೈದ್ಯರು ತಾವೇನಿದ್ದರೂ ಔಷಧಿ ನೀಡಿ ರೋಗ ಗುಣಪಡಿಸುವ ಕೆಲಸ ಮಾತ್ರ ತಮ್ಮದು ಎಂಬ ಚಿಂತನೆಯನ್ನು ಬದಿಗೊತ್ತಿ, ಇಡೀ ಸಮಾಜದ ಸ್ವಾಸ್ಥವನ್ನು ಗಮನದಲ್ಲಿ ಇಟ್ಟುಕೊಂಡು ರೋಗದ ಚಿಕಿತ್ಸೆ ಜೊತೆಗೆ , ರೋಗ ತಡೆಗಟ್ಟುವ ಮಾಹಿತಿಯನ್ನು ವೈದ್ಯಸಾಹಿತ್ಯದ ಮೂಲಕ ನಿರಂತರವಾಗಿ ಜನರಿಗೆ ಮತ್ತು ಸಮಾಜಕ್ಕೆ ತಲುಪಿಸುವ ಕಾರ್ಯ ಮಾಡಲೇಬೇಕು. ರೋಗಿಗೆ ನೀಡುವ ಚುಚ್ಚು  ಮದ್ದಿನ ಜೊತೆಗೆ ಸಮಾಜಕ್ಕೆ ನಿರಂತರವಾಗಿ ಚುಚ್ಚು ಮದ್ದು ನೀಡುವ ಔದಾರ್ಯವನ್ನು ವೈದ್ಯರು ವೈದ್ಯ ಸಾಹಿತ್ಯದ  ಮುಖಾಂತರ  ಮಾಡಿದ್ದಲ್ಲಿ ಆರೋಗ್ಯವಾದ ಸಮಾಜ ನಿರ್ಮಾಣ ಸಾಧ್ಯವಿದೆ.


-ಡಾ| ಮುರಲೀ ಮೋಹನ್ ಚೂಂತಾರು.

                               


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top