ಏನಿದು ಜಿಬಿ ಸಿಂಡ್ರೋಮ್?

Upayuktha
0


ಗಿ
ಲೈನ್ ಬಾರೆ ಸಿಂಡ್ರೋಮ್ ಎಂಬ ಹೆಸರಿನಿಂದ ಕರೆಯಲ್ಪಡುವ ಜಿಬಿ ಸಿಂಡ್ರೋಮ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿ ಮತ್ತು ಸದ್ದು ಮಾಡುತ್ತಿದೆ. ಪುಣೆ ನಗರದಲ್ಲಿ ಈಗಾಗಲೇ ನೂರಾರು ಮಂದಿ ಈ ರೋಗಕ್ಕೆ ತುತ್ತಾಗಿದ್ದು ಸೊಲ್ಲಾಪುರದಲ್ಲಿ ಈಗಾಗಲೇ ಒಂದು ಸಾವು ಕೂಡಾ ಸಂಭವಿಸಿದೆ. ಇದೀಗ ಕಾನ್ಪುರ ಮತ್ತು ಕೋಲ್ಕತ್ತಾ ನಗರಕ್ಕೂ ವ್ಯಾಪಿಸಿದೆ.


1916ರಲ್ಲಿ ಪ್ರೆಂಚ್ ನರ ಶಾಸ್ತ್ರಜ್ಞರಾದ ಚಾರ್ಜ್ ಗಿಲೈನ್ ಮತ್ತು ಜೀನ್ ಅಲೆಗ್ಸಾಂಡರ್ ಬಾರೆ ಈ ನರಸಂಬಂಧಿ ರೋಗ ವನ್ನು ಪತ್ತೆ ಹಚ್ಚಿದ ಕಾರಣದಿಂದ ಈ ರೋಗಕ್ಕೆ ಜಿಬಿ ಸಿಂಡ್ರೋಮ್ ಎಂಬ ಹೆಸರು ಬಂದಿದೆ. ದೇಹದ ರೋಗ ನಿರೋಧಕ ಶಕ್ತಿ ಅಥವಾ ಪ್ರತಿರಕ್ಷಣಾ ವ್ಯವಸ್ಥೆ ಅತಿಯಾಗಿ ಕೆರಳಿಕೊಂಡು ತಮ್ಮದೇ ದೇಹದ ನರಮಂಡಲದ ನರಗಳ  ಮಯಲಿನ್ ಕವಚದ ಮೇಲೆ ದಾಳಿ ಮಾಡಿ ನರಗಳ ಸಮಸ್ಯೆ ತಂದೊಡ್ಡುತ್ತದೆ. 


ಇದೊಂದು ಬಹಳ ಅಪರೂಪದ ನರ ಸಂಬಂಧಿ ಕಾಯಿಲೆಯಾಗಿರುತ್ತದೆ. ಸಕಾಲದಲ್ಲಿ   ಗುರುತಿಸಿ ಸರಿಯಾಗಿ ಚಿಕಿತ್ಸೆ ನೀಡದಿದ್ದಲ್ಲಿ ಮಾರಣಾಂತಿಕವಾಗಲೂಬಹುದು.  ಹೆಚ್ಚಿನ ಸಂದರ್ಭಗಳಲ್ಲಿ ತನ್ನಿಂತಾನೆ ಎರಡರಿಂದ ಮೂರು ವಾರಗಳಲ್ಲಿ ಗುಣಮುಖವಾಗುತ್ತದೆ. ಇದು ಸಾಂಕ್ರಾಮಿಕ ರೋಗ ಅಲ್ಲ ಎಂಬುದು ಸಮಾಧಾನಕರ ಅಂಶವಾಗಿದೆ. ವಯಸ್ಕರಲ್ಲಿ ಮತ್ತು ಪುರುಷರಲ್ಲಿ ಈ ರೋಗ ಹೆಚ್ಚು ಕಂಡು ಬರುತ್ತದೆ. 


ಕಾರಣಗಳು ಏನು?

ಯಾವುದೇ ನಿರ್ದಿಷ್ಟ ಕಾರಣವಿಲ್ಲದ ರೋಗ ಇದಾಗಿದೆ. ವೈರಾಣು ಮತ್ತು ಬ್ಯಾಕ್ಟೀರಿಯಾ ಸೋಂಕು ತಗಲಿದ ಬಳಿಕ ದೇಹದ ರಕ್ಷಣಾ ವ್ಯವಸ್ಥೆ ಅತಿಯಾಗಿ ಕೆರಳಿಕೊಂಡು  ಈ ಜಿಬಿ ಸಿಂಡ್ರೋಮ್ ಬರುವ ಸಾಧ್ಯತೆ  ಇದೆ ಎಂದು ವೈದ್ಯರು ತಿಳಿಸಿದ್ದಾರೆ. 


ಝಿಕಾ ವೈರಾಸ್, ಕ್ಯಾಂಪೈಲೋಬ್ಯಾಕ್ಸರ್ ಜಿಜುನಿ ಎಂಬ ಬ್ಯಾಕ್ಟೀರಿಯಾ ಹಾಗೂ ಕೆಲವೊಂದು ವೈರಾಣು ಲಸಿಕೆಗಳಿಂದಲೂ ಜಿಬಿ ಸಿಂಡ್ರೋಮ್ ಬರುವ ಸಾಧ್ಯತೆ ಇರುತ್ತದೆ. ನೂರಾರು ವರ್ಷಗಳ ಇತಿಹಾಸ ಇರುವ ಈ ಪುರಾತನ ಕಾಯಿಲೆ ಲಕ್ಷದಲ್ಲಿ ಒಂದಿಬ್ಬರಿಗೆ ಬರುತ್ತದೆ. ಆದರೆ ಇದೀಗ ಒಮ್ಮಲೇ ನೂರಾರು ಮಂದಿಯಲ್ಲಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಜನರು ಮತ್ತು ಸರ್ಕಾರ ದಿಗಿಲುಗೊಂಡಿರುವುದು ಸಹಜವಾಗಿದೆ. 


ವೈರಾಣು ಸೋಂಕು ತಗಲಿದ ನೀರು, ವೈರಾಣು ಸೋಂಕು ತಗುಲಿದ ಆಹಾರ, ಜಿರ್ಣಾಂಗ ವ್ಯೂಹದ ಮತ್ತು ಶ್ವಾಸಕೋಶದ ವೈರಾಣೂ ಸೋಂಕಿನ ಬಳಿಕ ಜಿಬಿ ಸಿಂಡ್ರೋಮ್ ಬರುವ ಸಾಧ್ಯತೆ ಹೆಚ್ಚಾಗಿದೆ ಎಂದು ವೈದ್ಯರು ಅಂದಾಜಿಸಿದ್ದಾರೆ. 


ರೋಗದ ಲಕ್ಷಣಗಳು :-

ಶಕ್ತಿ ಹೀನತೆ, ನರಗಳ ದೌರ್ಬಲ್ಯ, ಕೈಕಾಲುಗಳಲ್ಲಿ ಜೋಮು ಹಿಡಿಯುವುದು, ಈ ಸಮಸ್ಯೆ ಪಾದ ಮತ್ತು ಕಾಲುಗಳಿಂದ ಆರಂಭವಾಗಿ ದೇಹದ ಮೇಲ್ಭಾಗಕ್ಕೆ ವಿಸ್ತರಿಸುತ್ತದೆ. ವಾಂತಿ, ವಾಕರಿಕೆ, ಹೊಟ್ಟೆ  ನೋವು ಅತಿಸಾರ ಮುಂತಾದ ಸಮಸ್ಯೆ ಕೂಡಾ ಕಂಡು ಬರಬಹುದು. ಮುಂದುವರಿದ ಹಂತದಲ್ಲಿ ಪಾಶ್ರ್ಚವಾಯು ಉಂಟಾಗಬಹುದು. 


ನರಗಳ ದೌರ್ಬಲ್ಯ ಉಂಟಾದಾಗ ನಡೆಯಲು, ಮೆಟ್ಟಲು ಹತ್ತಲು, ಮುಖಬಾವ ನಿರ್ವಹಣೆ, ಮಾತನಾಡಲು, ಅಗಿಯಲು, ಜಗಿಯಲು, ಅಥವಾ ನುಂಗಲು ಕಷ್ಟವಾಗಬಹುದು. ಅಸ್ಥಿರ ನಡಿಗೆ,ಕಣ್ಣು ಮಂಜಾಗಿ ಎರಡೆರಡಾಗಿ ವಸ್ತು ಗೋಚರಿಸುವುದು, ಕಣ್ಣುಗಳ ನೋವು ಮತ್ತು ಚಲನೆಗೆ ತೊಂದರೆ, ಮಲ ಮೂತ್ರ ವಿಸರ್ಜನೆಯ ತೊಂದರೆ, ಹೃದಯದ ಬಡಿತ ಹೆಚ್ಚಾಗುವುದು, ಉಸಿರಾಟ ಸಮಸ್ಯೆ ರಕ್ತದೊತ್ತಡದಲ್ಲಿ ವಿಪರೀತ ಏರಿಳಿತ ಕಂಡುಬರುತ್ತದೆ. ರೋಗದ ತೀವ್ರತೆಗೆ ಅನುಗುಣವಾಗಿ ರೋಗದ ಲಕ್ಷಣಗಳು ಗೋಚರಿಸುತ್ತದೆ. 


ಏನು ಎಚ್ಚರಿಕೆ ಕ್ರಮಗಳು :-

ನಾವು ಸೇವಿಸುವ ಆಹಾರ ಮತ್ತು ನೀರಿನ ಬಗ್ಗೆ ಎಚ್ಚರಿಕೆ ವಹಿಸಬೇಕು. ಸೋಂಕು ರಹಿತ ಆಹಾರ ನೀರು ಸೇವಿಸಬೇಕು. ಆಹಾರ ಮತ್ತು ನೀರಿನ ನೈರ್ಮಲ್ಯಕ್ಕೆ ಹೆಚು ಆದ್ಯತೆ ನೀಡಬೇಕು.

ಪಾಶ್ಚೀರೀಕರಿಸದ ಹಾಲು, ಡೈರಿ ಉತ್ಪನ್ನಗಳ ಬಳಕೆ ನಿಯಂತ್ರಿಸಬೇಕು. 

ಆಹಾರವನ್ನು ಸರಿಯಾಗಿ ಬೇಯಿಸಿ ಸೇವಿಸಬೇಕು. ಮಾಂಸಹಾರ ಸೇವಿಸುವವರು ಹೆಚ್ಚು ಸ್ವಚ್ಛತೆ ಮತ್ತು ಸರಿಯಾಗಿ ಚೆನ್ನಾಗಿ ಬೇಯಿಸಬೇಕು.

ವೈಯಕ್ತಿಕ ಸ್ವಚ್ಚತೆ ಮತ್ತು ಪರಿಸರ ಸ್ವಚ್ಛತೆಗೆ ಹೆಚ್ಚಾಗಿ ಆದ್ಯತೆ ನೀಡಬೇಕು. ಆಹಾರ ತಯಾರಿಕೆ ನಿರ್ವಹಣೆ ಮತ್ತು ಶೇಖರಣೆಯನ್ನು  ಮಾಡುವಾಗ ಹೆಚ್ಚಾಗಿ ಎಚ್ಚರ ವಹಿಸಬೇಕು. 


ಚಿಕಿತ್ಸೆ :-  

ದೇಹಕ್ಕೆ ಸೋಂಕು ತಗಲಿ ಮೂರು    ವಾರಗಳ ಬಳಿಕ ನರಗಳ ದೌರ್ಬಲ್ಯಉಂಟಾಗುತ್ತದೆ. ಕೆರಳಿದ ರೋಗ ಪ್ರತಿರಕ್ಷಣಾ ವ್ಯವಸ್ಥೆ, ದೇಹದ ನರಗಳ ಸುತ್ತಲಿನ  ಮಯಲಿನ್ ರಕ್ಷಣಾ ಕವಚವನ್ನು ಹಾಳು ಮಾಡುತ್ತದೆ. ಇಂತಹಾ ಸಂದರ್ಭಗಳಲ್ಲಿ ತೀವ್ರ ನಿಗಾ ಘಟಕದಲ್ಲಿ ಹೆಚ್ಚಿನ ಚಿಕಿತ್ಸೆ ಅತೀ ಅಗತ್ಯವಾಗಿರುತ್ತದೆ. 


ರೋಗದ ತೀವ್ರತೆಗೆ ಅನುಗುಣವಾಗಿ ಚಿಕಿತ್ಸೆ ಬೇಕಾಗುತ್ತದೆ. ಪ್ಲಾಸ್ಮಾಫೆರೆಸಿಸ್ ಮತ್ತು ಇನ್ಯೂನೋ ಗ್ಲೋಬಲಿನ್ ಎಂಬ ಎರಡು ವಿಶೇಷ ಚಿಕಿತ್ಸೆ ನೀಡಲಾಗುತ್ತದೆ. ಪ್ಲಾಸ್ಲಾ ಪೆರಪಿಸ್ ಚಿಕಿತ್ಸೆಯಿಂದ ಪ್ಲಾಸ್ಮಾದಲ್ಲಿನ ಅನಗತ್ಯ ಹಾನಿಕಾರಕ ಆಂಟಿಬಾಡಿಗಳನ್ನು ತೆಗೆದು ದೇಹದ ರೋಗ ನಿರೋಧಕ ಶಕ್ತಿ ಕೆರಳುವುದನ್ನು ನಿಯಂತ್ರಿಸಿ ತನ್ನದೇ ನರಮಂಡಲದ ಮೇಲೆ ದಾಳಿಯಾಗುವುದನ್ನು ತಗ್ಗಿಸುತ್ತದೆ.


ಇಮ್ಯುನೋಗ್ಲೋಬುಲಿನ್ ಚಿಕಿತ್ಸೆಯಿಂದ ದೇಹಕ್ಕೆ ಮಾರಕವಾಗುವ ರೋಗ ನಿರೋಧಕ ಕಣಗಳನ್ನು ನಿಷ್ರ್ಕಿಗೊಳಿಸಲಾಗುತ್ತದೆ. ಅಗತ್ಯವಿದ್ದಲ್ಲಿ ಸ್ಟೀರಾಯ್ಡ ಮತ್ತು ನೋವು ನಿವಾರಕ ಔಷಧಿ ನೀಡಲಾಗುತ್ತದೆ.   ಒಟ್ಟಿನಲ್ಲಿ ಸಂಕೀರ್ಣ ಚಿಕಿತ್ಸೆ ಮತ್ತು ದೀರ್ಘಕಾಲಿಕ ಚಿಕಿತ್ಸೆ ಅಗತ್ಯವಿರುತ್ತದೆ. 


ಕೊನೆಮಾತು

ಅತೀ ಅಪರೂಪದ ನರ ಸಂಬಧಿ ರೋಗವಾದ ಜಿಬಿ ಸಿಂಡ್ರೋಮ್ ಸಾಂಕ್ರಾಮಿಕವಲ್ಲದ ರೋಗವಾಗಿದ್ದು ರೋಗ ಬರದಂತೆ ಎಚ್ಚರ ವಹಿಸುವುದರಲ್ಲಿಯೇ ಜಾಣತನ ಅಡಗಿದೆ. 


-ಡಾ| ಮುರಲೀ ಮೋಹನ್ ಚೂಂತಾರು.

MDS DNB MBA FPFA MOSRCSEd.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top