ಎಸ್‌ವಿಪಿ ಸಂಸ್ಮರಣ ಪ್ರಶಸ್ತಿ ಪ್ರದಾನ ನಾಳೆ

Upayuktha
0

ಡಾ. ವಾಮನ ನಂದಾವರ, ಚಂದ್ರಕಲಾ ನಂದಾವರ, ಡಾ. ಪಿ. ಶ್ರೀಕೃಷ್ಣ ಭಟ್ ಅವರಿಗೆ ಪ್ರಶಸ್ತಿಯ ಗೌರವ



ಮಂಗಳೂರು: ಪ್ರೊ.ಎಸ್.ವಿ. ಪರಮೇಶ್ವರ ಭಟ್ಟ ಪ್ರತಿಷ್ಠಾನ ಮಂಗಳೂರು ಹಾಗೂ ಕನ್ನಡ ವಿಭಾಗ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಮಂಗಳೂರು ಇವರ ಸಹಯೋಗದಲ್ಲಿ ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಸಂಸ್ಮರಣ ಪ್ರಶಸ್ತಿ ಪ್ರದಾನ ಸಮಾರಂಭ- 2025 ನಾಳೆ (ಫೆ.21) ಸಂಜೆ 4 ಗಂಟೆಗೆ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಸಾನ್ನಿಧ್ಯ ಸಭಾಂಗಣದಲ್ಲಿ ಜರಗಲಿದೆ.


ಸಾಹಿತಿಗಳು ಹಾಗೂ ಪ್ರಕಾಶಕರಾದ ಡಾ. ವಾಮನ ನಂದಾವರ ಮತ್ತು ಶ್ರೀಮತಿ ಚಂದ್ರಕಲಾ ನಂದಾವರ ಅವರು 2024ನೆಯ ಸಾಲಿನ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಅವರನ್ನು ನಿಟ್ಟೆ ವಿಶ್ವವಿದ್ಯಾನಿಲಯದ ಮಾನವಿಕ ವಿಭಾಗದ ಪ್ರಭಾರ ಮುಖ್ಯಸ್ಥರಾದ ಡಾ. ಸಾಯಿಗೀತ ಅಭಿನಂದಿಸಲಿದ್ದಾರೆ.

2025ನೇ ಸಾಲಿನ ಪ್ರಶಸ್ತಿ ಪುರಸ್ಕೃತರಾದ ಕಾಸರಗೋಡಿನ ವಿಶ್ರಾಂತ ಪ್ರಾಧ್ಯಾಪಕ ಡಾ. ಪಿ. ಶ್ರೀಕೃಷ್ಣ ಭಟ್ ಅವರನ್ನು ಮಂಗಳೂರಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಡಾ. ಮೀನಾಕ್ಷಿ ರಾಮಚಂದ್ರ ಅವರು ಅಭಿನಂದಿಸಲಿದ್ದಾರೆ.


ಎಸ್‌ವಿಪಿ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಬಿ.ಎ. ವಿವೇಕ ರೈ ಅಧ್ಯಕ್ಷತೆವಹಿಸಲಿದ್ದಾರೆ. ಸಂತ ಅಲೋಶಿಯಸ್ ಸ್ವಾಯತ್ತ ಮಹಾವಿದ್ಯಾಲಯದ ಕುಲಸಚಿವರಾದ ಡಾ. ಆಲ್ವಿನ್ ವಿ. ಡೆ'ಸಾ ಶುಭಾಶಂಸನೆ ನೆರವೇರಿಸಲಿದ್ದಾರೆ.


ಸಮಾರಂಭದಲ್ಲಿ ಪ್ರೊ. ಎಸ್.ವಿ.ಪಿ.ಯವರ ಪುತ್ರ ಎಸ್.ಪಿ. ರಾಮಚಂದ್ರ ಬೆಂಗಳೂರು ಅವರು ಉಪಸ್ಥಿತರಿರುತ್ತಾರೆ. ಅಂಕಿತ ಪುಸ್ತಕ ಬೆಂಗಳೂರು ಪ್ರಾಯೋಜಕತ್ವದಲ್ಲಿ ಶ್ರೀಮತಿ ರತ್ನಾವತಿ ಬೈಕಾಡಿ, ಶ್ರೀಮತಿ ಜಯಲಕ್ಷ್ಮಿ ಶಾಸ್ತ್ರಿ ಅವರಿಂದ ಎಸ್.ವಿ.ಪಿ. ಗೀತಗಾಯನ ಕಾರ್ಯಕ್ರಮ ನಡೆಯಲಿದೆ.


ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ (1914-2000)

ಕನ್ನಡದ ಕಾಳಿದಾಸ ಎಂದೇ ಪ್ರಸಿದ್ದರಾದ ಕವಿ. ಅನುವಾದಕ, ವಿಮರ್ಶಕ, ವಾಗಿ ಎಲ್ಲಕ್ಕಿಂತ ಮಿಗಿಲಾಗಿ ಶಿಷ್ಯ ವಾತ್ಸಲ್ಯವಿದ್ದ ಪ್ರೊ.ಎಸ್.ವಿ. ಪರಮೇಶ್ವರ ಭಟ್ಟರು ಮಂಗಳೂರು ಸ್ನಾತಕೋತ್ತರ ಕೇಂದ್ರದ ಮೊದಲ ನಿರ್ದೇಶಕರು, ಕರಾವಳಿ ಜಿಲ್ಲೆಗಳಲ್ಲಿ ಸಾಹಿತ್ಯದ ಕೈಂಕರ್ಯವನ್ನು ಮಾಡಿ ಮನೆಮಾತಾದ. ಮಂಗಳೂರು ಸ್ನಾತಕೋತ್ತರ ಕೇಂದ್ರಕ್ಕೆ 'ಮಂಗಳಗಂಗೋತ್ರಿ' ಎಂಬ ಅಭಿದಾನಕ್ಕೆ ಕಾರಣರಾದವರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಸುದೀರ್ಘ ಕಾಲ ಅಧ್ಯಾಪಕರಾಗಿದ್ದ ಇವರು ಕವನ ಸಂಕಲನ, ವಿಮರ್ಶಾ ಕೃತಿಗಳು, ವಚನ ಸಾಹಿತ್ಯ, ಗಾದೆಗಳ ಸಂಗ್ರಹವೂ ಒಳಗೊಂಡಂತೆ ಸುಮಾರು 75ಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನು ನೀಡಿದ್ದಾರೆ. ಸಂಸ್ಕೃತದ ಮಹಾಕವಿಗಳಾದ ಕಾಳಿದಾಸ, ಭಾಸ, ಭವಭೂತಿ, ಹರ್ಷ ಮೊದಲಾದವರ ಕೃತಿಗಳನ್ನು ಸಮಗ್ರವಾಗಿ ಕನ್ನಡಕ್ಕೆ ತಂದ ಇವರು ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಲ್ಲದೆ 'ಪೂರ್ಣಕುಂಭ' ಅಭಿನಂದನಾ ಗ್ರಂಥ ಸಮರ್ಪಣೆಯ ಗೌರವಗಳಿಗೆ ಪಾತ್ರರಾದವರು.


ಪ್ರಶಸ್ತಿ ಪುರಸ್ಕೃತರ ಸಂಕ್ಷಿಪ್ತ ಪರಿಚಯ:


2024ನೆಯ ಸಾಲಿನ ಪ್ರಶಸ್ತಿ ಪುರಸ್ಕೃತರು ಡಾ. ವಾಮನ ನಂದಾವರ (1944)

ಸೈಂಟ್ ಆನ್ಸ್ ಪ್ರೌಢಶಾಲೆ, ಸೈಂಟ್ ಆನ್ಸ್ ಶಿಕ್ಷಕಿಯರ ತರಬೇತಿ ಕಾಲೇಜು, ಸಹ್ಯಾದ್ರಿ ಶಿಕ್ಷಕ | ಶಿಕ್ಷಣ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ, ಸುಮಾರು ೩೪ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುವ ಶ್ರೀಯುತರು ಕನ್ನಡ ಹಾಗೂ ತುಳು ಸಾರಸ್ವತ ಲೋಕಕ್ಕೆ ನೀಡಿರುವ ಕೊಡುಗೆ ಅಪಾರ. ಕೋಟಿ ಚೆನ್ನಯ ಜಾನಪದೀಯ ಅಧ್ಯಯನ ಒಳಗೊಂಡಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸುಮಾರು 25ಕ್ಕೂ ಹೆಚ್ಚು ಸ್ವತಂತ್ರ ಕೃತಿಗಳು ಹಾಗೂ ಸುಮಾರು 25ಕ್ಕೂ ಹೆಚ್ಚು ಸಂಪಾದಿತ ಕೃತಿಗಳನ್ನು ನೀಡಿದ್ದಾರೆ. ತುಳು-ಕನ್ನಡ ಜಾನಪದ ಕ್ಷೇತ್ರದ ಪ್ರಮುಖ ಸಂಶೋಧಕರಾದ ಇವರು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರೌಢ ಪ್ರಬಂಧಗಳನ್ನು ಮಂಡಿಸಿದ್ದಾರೆ. ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಂದೇಶ ತುಳು ಸಾಹಿತ್ಯ ಪ್ರಶಸ್ತಿ ಒಳಗೊಂಡಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.


ಶ್ರೀಮತಿ ಚಂದ್ರಕಲಾ ನಂದಾವರ (1950)

ಮಂಗಳೂರು ಶ್ರೀ ಗಣಪತಿ ಪದವಿ ಪೂರ್ವ ಕಾಲೇಜಿನ ಆಧ್ಯಾಪಿಕೆಯಾಗಿ, ಪ್ರಾಂಶುಪಾಲರಾಗಿ ಸುದೀರ್ಘ ಸೇವೆ ಸಲ್ಲಿಸಿರುವ ಶ್ರೀಮತಿ ಚಂದ್ರಕಲಾ ನಂದಾವರ ಕತೆ, ಕವನ, ಲೇಖನ, ಸಂಶೋಧನೆ, ಅಂಕಣ ಬರಹ ಒಳಗೊಂಡಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸುಮಾರು 15ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯ, ಸಾಂಸ್ಕೃತಿಕ ಸಂಘಟನೆಗಳ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ರಾಜ್ಯದ ಮಹಿಳಾ ಸಂಘಟನೆಗಳಲ್ಲಿ ಪ್ರಮುಖವಾಗಿರುವ ಕರಾವಳಿ ಲೇಖಕಿಯರ -ವಾಚಕಿಯರ ಸಂಘದ ಆರಂಭದಿಂದಲೂ ಸಕ್ರಿಯವಾಗಿ ತೊಡಗಿಸಿಕೊಂಡು ಸದಸ್ಯೆಯಾಗಿ, ಅಧಕ್ಷೆಯಾಗಿ ಯಶಸ್ವಿಯಾಗಿ ಮುನ್ನಡೆಸಿದ್ದಾರೆ.

ಡಾ. ವಾಮನ ನಂದಾವರ - ಚಂದ್ರಕಲಾ ದಂಪತಿ ತಮ್ಮ ಹೇಮಾಂಶು ಪ್ರಕಾಶನದ ಮೂಲಕ ಸುಮಾರು ನೂರಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.


2025ನೆಯ ಸಾಲಿನ ಪ್ರಶಸ್ತಿ ಪುರಸ್ಕೃತರು ಡಾ. ಪಿ. ಶ್ರೀಕೃಷ್ಣ ಭಟ್ (1942)

ಬಹುಶ್ರುತ ವಿದ್ವಾಂಸರಾದ ಪ್ರೊ. ಪಿ. ಶ್ರೀಕೃಷ್ಣ ಭಟ್ ವಿದ್ಯಾರ್ಥಿಗಳ ಮೆಚ್ಚುಗೆಯ ಪ್ರಾಧ್ಯಾಪಕರಾಗಿ ಗೋವಿಂದ ದಾಸ ಕಾಲೇಜು ಸುರತ್ಕಲ್, ಸರಕಾರಿ ಕಾಲೇಜು ಕಾಸರಗೋಡು ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಸರಕಾರಿ ಕಾಲೇಜು ಕಾಸರಗೋಡು ಇದರೆ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದವರು. 16 ಎಂ.ಫಿಲ್. ಹಾಗೂ 11 ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಯಶಸ್ವಿ ಮಾರ್ಗದರ್ಶನ ಮಾಡಿದ್ದಾರೆ. ಹಳೆಗನ್ನಡ ಹಾಗೂ ಶಾಸ್ತ್ರಸಾಹಿತ್ಯದಲ್ಲಿ ವಿಶೇಷ ಪರಿಣತರಾದ ಇವರು ಶಾಸನಗಳು ಮತ್ತು ವೀರಗಲ್ಲುಗಳು, ಕನ್ನಡ ಸಾಂಪ್ರದಾಯಿಕ ವ್ಯಾಕರಣಗಳು ಒಳಗೊಂಡಂತೆ ಹಲವು ಉತ್ಕೃಷ್ಟ ಗ್ರಂಥಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಪಿ.ವಿ. ವೆಂಕಟಾಚಲ ಶಾಸ್ತ್ರಿ ವಿದ್ವತ್ ಶಾಸ್ತ್ರಿ ವಿದ್ವತ್ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಕೇಶವ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳಿಗೆ ಭಾಜನರಾದ ಶ್ರೀಯುತರಿಗೆ ಅವರ ವಿದ್ಯಾರ್ಥಿ-ಅಭಿಮಾನಿಗಳು ಇತ್ತೀಚೆಗೆ 'ಸಹಸ್ರ ಚಂದ್ರದರ್ಶನ' ಸಂದರ್ಭದಲ್ಲಿ 'ಶ್ರೀಪಥ' ಎಂಬ ಅಭಿನಂದನ ಗ್ರಂಥ ಸಮರ್ಪಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top