ಪ್ರಳಯ ರುದ್ರನಾದ ಶಿವನು ಸೃಷ್ಟಿಯ ಮೂಲ. ಪ್ರಳಯ ಮತ್ತು ಸೃಷ್ಠಿ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು ಎಂದು ಹೇಳಲಾಗುತ್ತದೆ. ಪ್ರಳಯಾಗ್ನಿ ಶಿವನು ರುದ್ರ ತಾಂಡವದ ಮೂಲಕ ಕೆಟ್ಟದನ್ನು ವಿನಾಶಗೊಳಿಸಿ, ಒಳ್ಳೆಯದನ್ನು ಈ ಸೃಷ್ಟಿಯಲ್ಲಿ ಉಳಿಸುತ್ತಾನೆ. ಆ ಮೂಲಕ ಯುಗಚಕ್ರ ಪರಿವರ್ತನೆಯ ಕಾರಣಕರ್ತೃವಾಗುತ್ತಾನೆ ಶಿವನು.
ಪ್ರತೀಕ್ಷಣದ ಆಗುಹೋಗುಗಳು ಶಿವನಾಜ್ಞೆಯಾಗಿರುತ್ತವೆ. ಶಿವನ ಆಣತಿಯಿಲ್ಲದೆ ಹುಲ್ಲುಕಡ್ಡಿಯೂ ಅಲುಗಾಡದು ಎನ್ನಲಾಗುತ್ತದೆ. ಆದ್ದರಿಂದಲೇ ಎಲ್ಲಾ ಶಿವಮಯವು ಈ ಜಗದೊಳು ಎಲ್ಲಾ ಶಿವಮಯವು ಎಂದು ಹಾಡಲಾಗುತ್ತದೆ. ಕಷ್ಟಗಳನ್ನು ಮೆಟ್ಟಿ ನಿಲ್ಲುವ ಧೈರ್ಯವನ್ನು ನೀಡುವವನು ಶಿವನಾಗಿರುವುದರಿಂದಲೇ ಶಿವಶಿವ ಎಂದರೆ ಭಯವಿಲ್ಲ ಶಿವನಾಮಕೆ ಸಾಟಿ ಬೇರಿಲ್ಲ ಎಂದು ಹಾಡಲಾಗುತ್ತದೆ. ಶಿವನಿಲ್ಲದೆಡೆಯಿಲ್ಲ, ಶಿವಪಥಕೆ ಕೊನೆಯಿಲ್ಲ ಆದಿಯೂ ಶಿವ ಅಂತ್ಯವೂ ಶಿವ ಆದಿ-ಅಂತ್ಯಗಳ ನಡುವಿನ ಜೀವನವು ಶಿವ ಎಂದು ಹೇಳಲಾಗುತ್ತದೆ. ಕೈಲಾಸವಾಸಿ ಶಿವನನ್ನು ಭಯ ಭಕ್ತಿಗಳಿಂದ ಪೂಜಿಸಿದರೆ ಶಿವಭಕ್ತರಿಗೊಲಿಯದೆ ಅನ್ಯರಿಗೊಲಿಯುವನೇ ಎನ್ನಲಾಗುತ್ತದೆ.
ಇಂತಹ ಮಹಾಶಿವನಿಗೆ ಮಹಾರಾತ್ರಿ ಮಹಾಶಿವರಾತ್ರಿ. ಹಿಂದೂ ಸಂಸ್ಕೃತಿಯ ವಿಶೇಷ ಉತ್ಸವಾರಾಧನೆ. ಇಂದು ಮನೆ ಮನೆಗಳಲ್ಲೂ ಹಬ್ಬ. ಮನಮನಗಳಲ್ಲೂ ಹಬ್ಬವೇ. ಮನೆಗಳನ್ನು ಸ್ವಚ್ಛಗೊಳಿಸಿಕೊಳ್ಳಲಾಗುತ್ತದೆ. ಹಚ್ಚ ಹಸಿರಿನ ಮಾವಿನ ತೋರಣಗಳನ್ನು ಮನೆಯ ಬಾಗಿಲಿಗೆ ಕಟ್ಟಿ , ಬಣ್ಣ ಬಣ್ಣದ ರಂಗೋಲಿಗಳನ್ನಿಟ್ಟು , ಮನೆಯ ಪೂಜಾ ಸ್ಥಳವನ್ನು ಅಲಂಕರಿಸಲಾಗುತ್ತದೆ.
ಮನೆಯವರೆಲ್ಲರೂ ಶುಚಿಯಾಗಿದ್ದು ಶಿವನನ್ನು ಆರಾಧಿಸುವ ದಿನ. ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನದ ರಾತ್ರಿ ಸರ್ವಾಲಂಕಾರಗೊಂಡ ಶಿವಾಲಯಗಳು ಕೈಲಾಸದ ಸಾನಿಧ್ಯವನ್ನು ಭೂಮಿಗೆ ಇಳಿಸುತ್ತವೆ. ಶಿವ ದೇವಾಲಯಗಳ ಸುತ್ತ ಮುತ್ತಲ ಆವರಣವು ವಿದ್ಯುತ್ ದೀಪಗಳಿಂದ ಬಹು ಸುಂದರವಾಗಿ ಬಹು ವಿಧಗಳಲ್ಲಿ ಅಲಂಕೃತಗೊಂಡಿರುತ್ತದೆ. ಧ್ವನಿವರ್ಧಕಗಳಲ್ಲಿ ಶಿವಭಕ್ತಿ ಗೀತೆಗಳ ಗಾಯನ ಮೊಳಗುತ್ತದೆ.
ಜಗದೊಡೆಯನಾದ ಪರಶಿವನು ಭೂವಾಸಿಯಾದ ರಾತ್ರಿ ದೇವಾಲಯಗಳಲ್ಲಿ ಶಿವಭಕ್ತರಿಂದ ಬಹು ವಿಧದಲ್ಲಿ ಪೂಜಿಸಲ್ಪಡುತ್ತಾನೆ ಎಂಬುದು ನಂಬಿಕೆ. ಬಿಲ್ವಪತ್ರೆಯ ಮಾಲೆಗಳಿಂದ ಶಿವಲಿಂಗವನ್ನು ಅಲಂಕರಿಸಲಾಗುತ್ತದೆ. ದೇವಾಲಯಗಳಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಾಗುತ್ತದೆ. ಹಣ್ಣು - ಕಾಯಿ ವಿವಿಧ ವಿಶಿಷ್ಠ ನೈವೇದ್ಯಗಳನ್ನು ಶಿವನಿಗೆ ಅರ್ಪಿಸಲಾಗುತ್ತದೆ. ಹಾಲು , ಮೊಸರು, ತುಪ್ಪ , ಸಕ್ಕರೆ, ನೀರು , ಪುಷ್ಪ, ಮುಂತಾದ ಅಭಿಷೇಕಗಳು ಬಹಳ ಭಕ್ತಿ ನಿಷ್ಠೆ ಯಿಂದ ನಡೆಯುತ್ತವೆ.
ಭಕ್ತಾದಿಗಳ ಉಪವಾಸ ವ್ರತಗಳು ಭಕ್ತಿಯಿಂದ ಸಾಗುತ್ತವೆ. ಶಿವನ ಲೀಲಾ ವಿನೋದಗಳನ್ನು ಕಥಾಮೃತಗಳಾಗಿ ಹೇಳಲಾಗುತ್ತದೆ. ಶಿವ ತಾಂಡವದ ನಾಟ್ಯ ಸಮಾರಂಭಗಳನ್ನು ಏರ್ಪಡಿಸಲಾಗತ್ತದೆ. ಶಿವಭಕ್ತರಂತು ತಾವು ಕೈಲಾಸದಲ್ಲಿಯೇ ಇದ್ದೇವೆ ಎಂದು ಭಕ್ತಿಯಲ್ಲಿ ಪರವಶರಾಗುತ್ತಾರೆ. " ಓಂ ನಮಃ ಶಿವಾಯ " ಎಂಬ ಪಂಚಾಕ್ಷರಿ ಮಂತ್ರದ ಮೂಲಕ ಇಡೀ ರಾತ್ರಿ ಶಿವನ ಧ್ಯಾನ ಮಾಡಿ ಆರಾಧಿಸುತ್ತಾರೆ ಭಕ್ತಾದಿಗಳು. ಪ್ರತಿ ವರ್ಷದ ಶಿವರಾತ್ರಿಯ ಸಮಯದಲ್ಲಿ ಶಿವನು, ಪಾರ್ವತಿಯ ಜೊತೆಯಲ್ಲಿ ಭೂಮಿಗೆ ಆಗಮಿಸುತ್ತಾನೆ. ಭೂ-ಸಂಚಾರ ಮಾಡುತ್ತಾನೆ.
ಸತಿಪತಿಗಳೊಂದುಗೂಡಿ ಅರ್ಪಿಸಿದ ಭಕ್ತಿ ಶಿವನಿಗೆ ಪ್ರಿಯವಾಗುತ್ತದೆ ಎಂಬುದು ಸಹ ನಂಬಿಕೆಯಾಗಿದೆ. ಅರ್ಧನಾರೀಶ್ವರನೆನಿಸಿದ ಶಿವನು ಹೆಣ್ಣಿಗೆ ಒಂದು ಮೌಲ್ಯಯುತವಾದ ಸ್ಥಾನವನ್ನು ನೀಡಿರುತ್ತಾನೆ. ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣಗೊಳ್ಳುತ್ತಾನೆ. ಹೀಗಾಗಿ ಶಿವರಾತ್ರಿಯ ಶಿವನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಬಲವಾಗಿದೆ.
ಶಿವಪುರಾಣವು ಹೇಳುವಂತೆ ಶಿವರಾತ್ರಿಯ ಆಚರಣೆ ಬಂದಿರುವ ಬಗ್ಗೆ ಒಂದು ಸಣ್ಣ ಕಥೆ ಇದೆ. ದೇವಲೋಕದಲ್ಲಿ ಒಮ್ಮೆ ಬ್ರಹ್ಮ ಹಾಗೂ ವಿಷ್ಣುವಿನ ನಡುವೆ ಯಾರು ಶ್ರೇಷ್ಠರು ಎಂಬ ವಿಷಯಕ್ಕೆ ವಾಗ್ವಾದಗಳು ನಡೆಯುತ್ತಿದ್ದವು. ಆಗ ದೇವತೆಗಳೆಲ್ಲ ಹೋಗಿ ಪರಶಿವನನ್ನು ಬೇಡಿಕೊಳ್ಳುತ್ತಾರೆ. ವಿಷ್ಣು ಹಾಗೂ ಬ್ರಹ್ಮರ ಜಗಳವನ್ನು ಶಮನ ಮಾಡುವಂತೆ ಕೋರಿಕೊಳ್ಳುತ್ತಾರೆ.
ಇವರಿಬ್ಬರ ಜಗಳದಿಂದ ಭೂಮಂಡಲವು ಅಲ್ಲೋಲ ಕಲ್ಲೋಲ ವಾಗುತ್ತದೆ ಎಂಬುದನ್ನು ಅರಿತ ಪರಶಿವನು ಮಧ್ಯೆ ಪ್ರವೇಶಿಸಿ ಮಹಾದೇವತೆಗಳಾದ ಬ್ರಹ್ಮ ಮತ್ತು ವಿಷ್ಣು ಇಬ್ಬರನ್ನೂ ಸಮಾಧಾನ ಮಾಡಲು ಪ್ರಯತ್ನಿಸಿದನು. ಆಗ ವಿಷ್ಣು ಮತ್ತು ಬ್ರಹ್ಮರ ನಡುವೆ ಶಿವ, ಅಗ್ನಿಕಂಬದ ರೂಪದಲ್ಲಿ ಬಂದು ನಿಂತು ತನ್ನ ಮೂಲವನ್ನು ಕಂಡುಹಿಡಿ ಯಲು ಸೂಚಿಸುತ್ತಾನೆ. ಆಗ ಹಂಸದ ರೂಪ ತಾಳಿದ ಬ್ರಹ್ಮ ಅಗ್ನಿ ಕಂಬದ ಶಿರವನ್ನು ಹುಡುಕಲು ಮೇಲ್ಮುಖವಾಗಿ ಹೊರಡುತ್ತಾನೆ. ವಿಷ್ಣು ವರಾಹವತಾರ ತಾಳಿ ಕಂಬದ ತಳವನ್ನು ನೋಡುವುದಕ್ಕಾಗಿ ಪಾತಾಳಕ್ಕೆ ಇಳಿಯುತ್ತಾನೆ. ಎಷ್ಟೇ ಮುಂದೆ ಸಾಗಿದರೂ ಬ್ರಹ್ಮ ಹಾಗೂ ವಿಷ್ಣು ಇವರಿಬ್ಬರಿಗೂ ಕಂಬದ ಅಂತ್ಯವೇ ಕಾಣುವುದಿಲ್ಲ.
ಅನಂತವಾಗಿರುವ ಶಿವನ ಶಕ್ತಿಯನ್ನು ನೋಡಿದ ವಿಷ್ಣು ಹಾಗೂ ಬ್ರಹ್ಮರಿಗೆ ಸತ್ಯದ ಅರಿವಾಗುತ್ತದೆ. ಆದರೆ ಶಿವನ ಜಡೆಯಿಂದ ಕೆಳಗೆ ಬೀಳುತ್ತಿದ್ದ ಕೇತಕಿ ಪುಷ್ಪದ ಬಳಿ ಬ್ರಹ್ಮ , ನೀನು ಎಲ್ಲಿಂದ ಬೀಳುತ್ತಿದ್ದೀಯ ಎಂದು ಪ್ರಶ್ನಿಸುತ್ತಾನೆ. ಆಗ ಆ ಪುಷ್ಪವು ನಾನು ಅಗ್ನಿ ಕಂಬದ ಶಿರದಿಂದ ಬೀಳುತ್ತಿದ್ದೇನೆ ಎಂಬ ಉತ್ತರ ನೀಡುತ್ತದೆ. ಆಗ ಬ್ರಹ್ಮ ಶಿವನಲ್ಲಿಗೆ ಬಂದು ಕೇತಕಿ ಪುಷ್ಪವನ್ನು ತೋರಿಸಿ, ತಾನು ಅಗ್ನಿ ಕಂಬದ ಶಿರೋಭಾಗವನ್ನು ನೋಡಿರುವುದಾಗಿಯೂ, ಅಲ್ಲಿಂದಲೇ ಕೇತಕಿ ಪುಷ್ಪವನ್ನು ತಂದಿರುವುದಾಗಿಯೂ ಸುಳ್ಳು ಹೇಳುತ್ತಾನೆ.
ಬ್ರಹ್ಮನ ಮೋಸವನ್ನು ಅರಿತ ಶಿವ, ಬ್ರಹ್ಮನನ್ನು ಯಾರೂ ಪೂಜಿಸಕೂಡದು ಎಂದು ಶಾಪ ನೀಡಿ ಲಿಂಗರೂಪ ತಾಳುತ್ತಾನೆ. ಅಂದು ಮಾಘ ಮಾಸದ ಬಹುಳ ಚತುರ್ದಶಿಯಾಗಿರುತ್ತದೆ. ಹೀಗಾಗಿ, ಶಿವ ಲಿಂಗರೂಪ ತಾಳಿದ ಮಾಘ ಮಾಸದ ಬಹುಳ ಚತುರ್ದಶಿಯಂದು ಶಿವರಾತ್ರಿಯನ್ನು ಆಚರಿಸಲಾಗುತ್ತದೆ.
ಒಂದೊಮ್ಮೆ ಅಮರತ್ವ ಪಡೆಯಲು ದೇವತೆಗಳು ಮತ್ತು ಅಸುರರು ಅಮೃತಕ್ಕಾಗಿ ಸಮುದ್ರ ಮಂಥನ ಮಾಡುತ್ತಿದ್ದಾಗ ಮೊದಲು ಸ್ವರ್ಣ ಕುಂಭದ ತುಂಬ ಹಾಲಾಹಲ ಉತ್ಪತ್ತಿಯಾಯಿತು. ಆದರೆ ದೇವತೆಗಳಾಗಲಿ ಅಸುರರಾಗಲಿ ಯಾರೂ ಆ ಹಾಲಾಹಲವನ್ನು ಕುಡಿಯಲು ಮುಂದಾಗಲಿಲ್ಲ. ಆ ಹಾಲಾಹಲವು ಇಡೀ ನಭೋಮಂಡಲವನ್ನೇ ನಾಶಮಾಡಬಲ್ಲ ಸಾಮರ್ಥ್ಯವನ್ನು ಹೊಂದಿತ್ತು. ಹಾಗಾಗಿ ಲೋಕ ಕಲ್ಯಾಣಕ್ಕಾಗಿ ಈಶ್ವರನೇ ಆ ಹಾಲಾಹಲವನ್ನು ಕುಡಿದನು.
ಈ ವಿಷಯ ತಿಳಿದ ಪತ್ನಿ ಪಾರ್ವತಿ ದೇವಿ ಓಡಿ ಬಂದು ಆ ವಿಷ ಶಿವನ ಹೊಟ್ಟೆ ಸೇರದಂತೆ ಗಂಟಲಲ್ಲೇ ತಡೆ ಹಿಡಿದಳು. ವಿಷಪ್ರಾಶನ ಮಾಡಿದ ಶಿವನು ನಿದ್ರಿಸಿದರೆ ವಿಷವು ಬೇಗನೆ ದೇಹದ ತುಂಬ ಹರಡುತ್ತದೆ. ಶಿವನು ಮೃತನಾಗಬಹುದೆಂದು ಹೆದರಿದ ದೇವತೆಗಳೆಲ್ಲರೂ ಶಿವನ ಭಜನೆ ಮಾಡಿ ಶಿವನನ್ನು ಎಚ್ಚರವಿರಿಸಿದರು. ಆದ್ದರಿಂದ ಈ ಪವಿತ್ರ ದಿನವನ್ನು ಶಿವರಾತ್ರಿ ಎಂದು ಆಚರಿಸಲಾಗುತ್ತದೆ.
ಶಿವರಾತ್ರಿಯ ಮತ್ತೊಂದು ವಿಶೇಷವೆಂದರೆ, ಶಿವನು ಹಿಮವಂತನ ಮಗಳಾದ ಗಿರಿಜೆಯನ್ನು ಅಂದರೆ ಪಾರ್ವತಿ ದೇವಿಯನ್ನು ವಿವಾಹವಾಗಿದ್ದು ಶಿವರಾತ್ರಿಯ ದಿನವೇ. ಪಾರ್ವತಿ ದೇವಿಯು ಶಿವರಾತ್ರಿಯ ಸಮಯದಲ್ಲಿ ಶಿವನನ್ನು ಪ್ರಾರ್ಥಿಸಿದಳು. ಶಿವನ ಜಪ ಮಾಡಿ ಶಿವನನ್ನು ಒಲಿಸಿಕೊಂಡು ವಿವಾಹಳಾದಳು. ಹೀಗೆ ಹಿಂದೂ ಪುರಾಣಗಳಲ್ಲಿ ಶಿವರಾತ್ರಿಗೆ ಮಹತ್ವದ ಹಿನ್ನೆಲೆ ಇದೆ.
ಶಿವರಾತ್ರಿ ಆಚರಣೆಯಲ್ಲಿ ಎರಡು ಮುಖ್ಯ ಪ್ರಕ್ರಿಯೆಗಳು ಮೊದಲ್ಗೊಳ್ಳುತ್ತವೆ. ಒಂದು ಉಪವಾಸ ಮತ್ತೊಂದು ಜಾಗರಣೆ.
ಉಪವಾಸ ಮಾಡುವುದು ಎಂದರೆ, ಶಿವರಾತ್ರಿಯಂದು ಯಾವುದೇ ರೀತಿಯ ಆಹಾರವನ್ನು ಸೇವಿಸದೆ ಇರುವುದು. ದೇವರ ಧ್ಯಾನ, ಜಪ, ತಪಗಳನ್ನು ಮಾಡುತ್ತಾ ದೇವರಿಗೆ ಹತ್ತಿರವಾಗಿರುವುದು. ದೇವರ ಬಗ್ಗೆ ಚಿಂತನೆಯಲ್ಲಿ ತೊಡಗುವುದು ಎಂದು ಅರ್ಥ. ಹೀಗೆ ದೇವರ ಧ್ಯಾನದಲ್ಲಿ ಇರುವಾಗ ಊಟ-ತಿಂಡಿಯ ಕಡೆ ಗಮನ ಹೋಗುವುದಿಲ್ಲ.
ಮತ್ತೊಂದು ಜಾಗರಣೆ. ಜಾಗರಣೆ ಎಂದರೆ, ರಾತ್ರಿಯ ನಿದ್ರೆಯನ್ನು ತ್ಯಜಿಸಿ ಎಚ್ಚರವಾಗಿರುವುದು. ರಾತ್ರಿಯಲ್ಲಿ ಜಾಗರಣೆ ಮಾಡುವುದರ ಅರ್ಥವೇನು? ರಾತ್ರಿ ಎನ್ನುವುದು ತಮೋ ಗುಣದ ಪ್ರತೀಕ. ಆಲಸ್ಯ, ನಿದ್ರೆ, ಅಹಂಕಾರ, ಅಜ್ಞಾನಗಳ ದ್ಯೋತಕ ನಿಶೆ. ಆ ಸಮಯದಲ್ಲಿ ಜಾಗೃತರಾಗಿರಬೇಕು ಎಂದರೆ, ಅವುಗಳಿಂದ ಜಾಗೃತರಾಗಿರಬೇಕು ಎಂಬರ್ಥ.
ಹಾಗೆ ಜಾಗೃತರಾಗಿರುವುದಕ್ಕೆ ನಮಗೆ ಸಹಾಯವನ್ನು ಮಾಡುವವನು ದೇವರು. ಆ ದೇವರನ್ನು ಸ್ಮರಿಸುತ್ತ ಈ ತಮೋ ಗುಣಗಳಿಂದ ಜಾಗೃತರಾಗಿರಬೇಕು ಎನ್ನುವುದರ ಪ್ರತೀಕ ಶಿವರಾತ್ರಿಯ ಜಾಗರಣೆ. ಶಿವರಾತ್ರಿ ಹಬ್ಬದ ಮಾರನೆಯ ದಿನ ವಿಧವಿಧವಾದ ತಿಂಡಿ ತಿನಿಸುಗಳು ವಿಶೇಷವೆನಿಸುತ್ತವೆ.
ಮಹಾಶಿವರಾತ್ರಿಯಂದು ಭಾರತದ ಪವಿತ್ರ ಶೈವ ದೇವಾಲಯಗಳು ಇರುವ ಕಡೆಯಲ್ಲಿ ಲಕ್ಷೋಪಲಕ್ಷ ಜನರು ಸೇರಿ ಶಿವಾರಾಧನೆಯಲ್ಲಿ ತೊಡಗಿರುತ್ತಾರೆ. ಕಾಶಿ, ರಾಮೇಶ್ವರ, ಗೋಕರ್ಣದ ಮಹಾಬಲೇಶ್ವರ, ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯ, ಆಂಧ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದೇಗಲು, ತಮಿಳುನಾಡಿನ ಕೊಯಮುತ್ತೂರಿನ ಆದಿ ಯೋಗಿ ಈಶ ಫೌಂಡೇಷನ್ , ನಂಜನಗೂಡಿನ ನೀಲಕಂಠೇಶ್ವರ ದೇಗುಲ, ಮುರುಡೇಶ್ವರ, ಪುಷ್ಪಗಿರಿ ಮಲ್ಲಿಕಾರ್ಜುನ ಸ್ವಾಮಿ ದೇಗುಲ, ದೇಶದ ಬಹುತೇಕ ಮಠಗಳಲ್ಲಿ ಶಿವಾರಾಧನೆ, ಜಾಗರಣೆ ನಡೆಯುತ್ತದೆ.
ಶಿವರಾತ್ರಿಯ ಸಂದರ್ಭದಲ್ಲಿ ಶಿವ ದೇವಾಲಯಗಳಿಗೆ ಭಕ್ತಾದಿಗಳು ಪಾದಯಾತ್ರೆ ಮಾಡಿ ತಮ್ಮ ಭಕ್ತಿಯನ್ನು ಒಪ್ಪಿಸುತ್ತಾರೆ. ಪಾದಯಾತ್ರೆಯು ದೇಹ ಮತ್ತು ಮನಸ್ಸಿಗೆ ಆರೋಗ್ಯಕರ ಉಲ್ಲಾಸವನ್ನು ನೀಡುತ್ತದೆ.
ಎಲ್ಲಾ ಜೀವರಾಶಿಗಳನ್ನು ಸಂರಕ್ಷಿಸುವ ಜಗತ್ ರಕ್ಷಕ ಶಿವನು ಎಲ್ಲಾ ಆಡಂಬರಗಳಿಂದ ಮುಕ್ತ. ಶಿವನು ಆಭರಣಪ್ರಿಯನಲ್ಲ, ಅಲಂಕಾರ ಪ್ರಿಯನೂ ಅಲ್ಲ. ಭಸ್ಮವನ್ನು ಬಳಿದುಕೊಂಡು, ಹುಲಿಯ ಚರ್ಮವನ್ನು ಉಟ್ಟು, ಸ್ಮಶಾನದಲ್ಲಿರುವ ಸರಳ ಮತ್ತು ಅಮೋಘ ಶಕ್ತಿ ಸ್ವರೂಪಿಯೇ ಶಿವನಾಗಿದ್ದಾನೆ.
ಲೋಕಪೂಜಾಭಾಜನನಾದ ಶಿವನು ಸರಳತೆ, ಪ್ರಾಮಾಣಿಕತೆ ಮತ್ತು ನಿಷ್ಕಲ್ಮಶ ಮನಸ್ಸುಗಳ ಪ್ರತೀಕ. ಛಲಬಿಡದ ಸಾಧನೆಯ ದ್ಯೋತಕ. ಧ್ಯಾನಪ್ರಿಯನೆನಿಸಿದ ಶಿವ ಭಕ್ತರಿಂದ ಬಯಸುವುದು ನಿಷ್ಕಲ್ಮಶ ಮತ್ತು ಪ್ರಾಮಾಣಿಕ ಭಕ್ತಿ ಮಾತ್ರ. ತೋರಿಕೆಯ ಮತ್ತು ಆಡಂಬರದ ಪೂಜೆಯನ್ನು ಬಯಸದ ಮಹಾದೇವನನ್ನು ಇಂದ್ರಿಯ ನಿಗ್ರಹ, ಧ್ಯಾನ, ಸಂಯಮ ಮತ್ತು ವಿಶ್ವಾಸ ಭರಿತರಾಗಿ ಶಿವರಾತ್ರಿಯಂದು ಧ್ಯಾನಿಸಿದರೆ ಆತ ಪ್ರಸನ್ನಗೊಳ್ಳುತ್ತಾನೆ ಎಂಬುದು ದೃಢವಿಶ್ವಾಸ.
ಅಹಂ ದ್ಯೋತಕ ಆಡಂಬರಗಳಿಂದ ಮುಕ್ತರಾಗಿ ಎಲ್ಲರೂ ಸರಳ ಭಕ್ತಿ ಪೂರಕ ಮನಸ್ಸಿನಿಂದ ಪರಶಿವನನ್ನು ನೆನದು, ಭಜಿಸಿ ಶಿವರಾತ್ರಿಯನ್ನು ಆಚರಿಸೋಣ. ಸರಳತೆ, ಪ್ರಾಮಾಣಿಕತೆ, ಸತ್ಯ ಮತ್ತು ಶಕ್ತಿಯ ದೇವತೆ ಈಶ್ವರನು ಲೋಕದಲ್ಲಿರುವ ಸಕಲ ಸಂಕಷ್ಟಗಳಿಗೆ ಪರಿಹಾರ ನೀಡಲಿ. ಸಕಲರಿಗೂ ಸನ್ಮಂಗಳವನ್ನುಂಟು ಮಾಡಲಿ ಎಂಬುದು ಸರ್ವರ ಪ್ರಾರ್ಥನೆ. ಸರ್ವರಿಗೂ ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
-ಕೆ. ಎನ್.ಚಿದಾನಂದ . ಹಾಸನ .
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ