ಲೇಖಾ ಲೋಕ-34: ಪ್ರಖ್ಯಾತ ಹಾಸ್ಯ, ನಾಟಕಗಳ ಸಾಹಿತಿ ನಾ. ಕಸ್ತೂರಿ

Upayuktha
0


ರ್ನಾಟಕ ರಾಜ್ಯದ ಹಾಸ್ಯ ಸಾಹಿತಿಗಳಲ್ಲಿ ಒಬ್ಬರಾದ ನಾರಾಯಣ ಕಸ್ತೂರಿ ಅವರು (ನಾರಾಯಣ ಕಸ್ತೂರಿ ರಂಗನಾಥ ಶರ್ಮ) ಅನೇಕ ಹಾಸ್ಯ, ನಾಟಕ, ಕಾದಂಬರಿಗಳನ್ನು ಬರೆದು ಜನಮನ ಗೆದ್ದ ಅಪರೂಪದ ಸಾಹಿತಿ. ಇವರು ಜನಿಸಿದ್ದು ಕೇರಳ ರಾಜ್ಯದ ತ್ರಿಪುನಿತ್ತುರ ಎಂಬ ಸಣ್ಣ ಗ್ರಾಮದಲ್ಲಿ ಆದರೂ, ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿ ಪ್ರಖ್ಯಾತರಾದರು. ತಾ॥ 25-12-1887 ರಂದು ಜನಿಸಿ, ತಮ್ಮ ತಂದೆಯವರನ್ನು ಚಿಕ್ಕ ವಯಸ್ಸಿನಲ್ಲಿ ಕಳೆದುಕೊಂಡು, ತಾಯಿಯ ಆಶ್ರಯ ಇವರ ಬಾಲ್ಯಕ್ಕೆ ನೆರವಾಯಿತು. ಇವರ ತಾತ ಸಂಸ್ಕೃತ ಶಾಲೆಗೆ ಸೇರಿಸಲು ಇಚ್ಛೆ ಪಟ್ಟಾಗ, ಕಸ್ತೂರಿ ಅವರ ತಾಯಿ, ತಮ್ಮ ಒಡವೆಗಳನ್ನು ಮಾರಾಟ ಮಾಡಿ, ವ್ಯಾವಹಾರಿಕ ಶಾಲೆಗೆ ಸೇರಿಸಿದರು. ಕಸ್ತೂರಿ ಅವರು ತಮ್ಮ ಪ್ರತಿಭೆ ವ್ಯಕ್ತಪಡಿಸಿ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಪಡೆದರು.


ವಿದ್ಯಾಥಿ೯ವೇತನ ದೊರಕಿ ತಮ್ಮ ಇಂಟರ್ ಮಿಡಿಯಟ್ ಪರೀಕ್ಷೆ ಎನಾ೯ಕುಲಮ್ ಮಹಾರಾಜಾ ಕಾಲೇಜಿನಲ್ಲಿ ಪಾಸು ಮಾಡಿದರು. ನಂತರ ತಿರುವನಂತಪುರ ಮಹಾರಾಜಾ ಕಾಲೇಜಿನಲ್ಲಿ ಬಿ.ಎ. (ಆನಸ್೯) ಪದವಿ 2ನೇ ಶ್ರೇಣಿಯಲ್ಲಿ ಪಡೆದರು. ಇವರು 14 ವರ್ಷದವರಾಗಿದ್ದಾಗಲೇ ತಮ್ಮ ತಂದೆಯ ಸೋದರಿಯ ಪುತ್ರಿಯನ್ನು ವಿವಾಹವಾದರು. ಕಸ್ತೂರಿ ಅವರು ತಿರುವನಂತಪುರದ ಹೈಸ್ಕೂಲಿನಲ್ಲಿ ಆಧ್ಯಾಪಕ ವೃತ್ತಿ ಪ್ರಾರಂಭಿಸಿ ತಮ್ಮ ದೊಡ್ಡ ಸಂಸಾರವನ್ನು ನಿಭಾಯಿಸುವ ಅನಿವಾರ್ಯತೆ ಬಂದಿತು. ಆದರೂ ಇವರು ಇದ್ದ ಸಮಯದಲ್ಲಿ ಕಾನೂನಿನ ವ್ಯಾಸಂಗ ಮಾಡಿದರು. ಅಲ್ಲಿನ ಪ್ರಮುಖ ಪತ್ರಿಕೆಯಾದ "ಪೀಪಲ್ಸ್ ಫ್ರೆಂಡ್" ಇವರ ಹಲವಾರು ಪ್ರಬುದ್ಧ ಲೇಖನಗಳನ್ನು ಪ್ರಕಟಿಸಿತು.


ಹೈಸ್ಕೂಲು, ಕಾಲೇಜಿನಲ್ಲಿ ಇವರು ಹಲವು ನಾಟಕಗಳನ್ನು ಬರೆದು ಪ್ರದರ್ಶಿಸಿದರು. ನಾಟಕಗಳಿಂದ ಬಂದ ಹಣವನ್ನು ಬಡಜನರಿಗೆ ವಿನಿಯೋಗಿಸಿದರು. ಕನ್ನಡ ನಾಡು ಇವರನ್ನು ಕೈ ಬೀಸಿ ಕರೆದು ಮೈಸೂರಿನಲ್ಲಿ ಡಿ.ಬಿ.ಸಿ ಹೈಸ್ಕೂಲಿನಲ್ಲಿ ಅಧ್ಯಾಪಕ ಸೇವೆಯನ್ನು ಮಾಡುವ ಅವಕಾಶ ನೀಡಿತು. ತದನಂತರ ಬನುಮಯ್ಯ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿ ಮಾಡಿದರು. ಚರಿತ್ರೆ ಮತ್ತು ಅರ್ಥಶಾಸ್ತ್ರ ಬೋಧನೆ ಮಾಡಿ, ಕಾಲೇಜಿನ ಪತ್ರಿಕೆಯನ್ನೂ ನಡೆಸಿದರು. ವಿದ್ಯಾರ್ಥಿ ಪಾರ್ಲಿಮೆಂಟ್ ನಡೆಸಿ, ಹಲವಾರು ನಾಟಕಗಳನ್ನು ಆಡಿಸಿ ತಾವೂ ನಟಿಸಿದರು. ಮೈಸೂರಿನಲ್ಲಿ ರಾಮಕೃಷ್ಣ ಆಶ್ರಮ ಸ್ಥಾಪಿಸಿದ ಸ್ವಾಮಿ ಸಿದ್ದೇಶ್ವರಾನಂದರು ಕಸ್ತೂರಿ ಅವರ ಸಹಪಾಠಿ ಎಂಬುದು ವಿಶೇಷ.


ಕಸ್ತೂರಿ ಅವರು ರೋವರ್ ಲೀಡರ್ ತರಬೇತಿ ಪಡೆದು "ವಿವೇಕಾನಂದ ರೋವರ್ಸ್ ದಳ" ಸ್ಥಾಪಿಸಿದರು. ಹಲವಾರು ನಾಟಕಗಳನ್ನು ಆಡಿಸಿ ಆಶ್ರಮಕ್ಕೆ ಹಣ ಸಂಗ್ರಹಿಸಿದರು. ಕುಸ್ತಿ ಅಖಾಡಾ ಮಾಡಿ ಹಲವಾರು ಪೈಲ್ವಾನರನ್ನು ತಯಾರು ಮಾಡಿದುದಲ್ಲದೇ, ಆಧ್ಯಾತ್ಮಿಕ ಶಿಬಿರ, ಪ್ರವಚನ, ಉಪನ್ಯಾಸ ಏರ್ಪಡಿಸಿದರು. ವಯಸ್ಕರ ಶಿಕ್ಷಣ, ದಲಿತರಿಗೆ ಶಿಕ್ಷಣ, ಬಾಲಬೋಧೆ ಪಠ್ಯಗಳ ರಚನೆ, ಹರಿಕೀರ್ತನೆ, ಸಂಗೀತ, ನಾಟಕಗಳನ್ನು ಸಹ ಏರ್ಪಡಿಸಿ ಜ್ಞಾನ ಪ್ರಸಾರ ಮಾಡಿದ ಮಹನೀಯರು. ತಾವು ಸಹ ಹರಿದಾಸ ವೇಷ ಧರಿಸಿ ಸಾಮಾಜಿಕ ಕೀರ್ತನೆಗಳನ್ನು ರಚಿಸಿದರು. ಸಾಮೂಹಿಕ ಭಜನೆ ವಾಚನಾಲಯಗಳನ್ನು ಸ್ಥಾಪನೆ ಮಾಡಲು ಪ್ರೇರಣೆ ನೀಡಿದರು.

ದಿವಾನ್ ಮಿರ್ಜಾ ಅವರ ಕಾಲದಲ್ಲಿ ಮೈಸೂರಿನಲ್ಲಿ ಜನಗಣತಿ ಕಾರ್ಯದಲ್ಲಿ ಸೇರಿ ಆದಿಕರ್ನಾಟಕ ಕಾಲೋನಿ ಆಯ್ಕೆ ಮಾಡಿಕೊಂಡು, ಕಾರ್ಯಕ್ರಮಗಳನ್ನು ನಡೆಸಿದರು. ಕನ್ನಡದ ಹಾಸ್ಯಬ್ರಹ್ಮ ರಾ..ಶಿ. (ಡಾ॥ಎಮ್.ಶಿವರಾಂ) ಅವರು ಕಸ್ತೂರಿ ಅವರನ್ನು ತಮ್ಮ ಹಾಸ್ಯ ಪತ್ರಿಕೆ ಕೊರವಂಜಿಗೆ ಬರಹಗಳನ್ನು ಬರೆಯಲು ಕರೆದು ಅವರಿಂದ ಅನೇಕ ಹಾಸ್ಯ ಬರಹಗಳನ್ನು ಪ್ರಕಟಿಸಿದರು. ಕಸ್ತೂರಿ ಅವರು ಶಂಕರ್ಸ್ ವೀಕ್ಲೀ ಪತ್ರಿಕೆಯ ಮಿಯರ್ ಪ್ರಾಟಲ್ ಅಂಕಣಕಾರರಾದರು. ಕನ್ನಡದಲ್ಲಿ ಅನೇಕ ಹಾಸ್ಯ, ನಾಟಕ, ಕಾದಂಬರಿ, ಕವನಗಳನ್ನು ಬರೆದರು. ಅನಥ೯ಕೋಶ ಎಂಬ ಹೊಸ ಪ್ರಕಾರವನ್ನು ಸೃಷ್ಟಿಸಿದರು.


ಮೈಸೂರಿನಲ್ಲಿ ಆಕಾಶವಾಣಿ ಡಾ॥ಎಂ ವಿ ಗೋಪಾಲ ಸ್ವಾಮಿ ಅವರ ಪ್ರಯತ್ನದ ಫಲದಿಂದ ಪ್ರಾರಂಭಿಸಿ, ಅದರ ಹೆಸರನ್ನು ನಾ. ಕಸ್ತೂರಿಯವರೇ ಸೂಚಿಸಿದರು. ಕೆಲ ಕಾಲ ಆಕಾಶವಾಣಿಯಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಸೇವೆ ಸಲ್ಲಿಸಿ ಪುನಃ ತಮ್ಮ ಮೂಲ ಹುದ್ದೆಗೆ ವಾಪಸಾದರು. ಶಿವಮೊಗ್ಗದಲ್ಲಿ ಸಹ ಇವರು ವರ್ಷಾಗಮ ಮಹೋತ್ಸವ, ಆಶುನಾಟಕ ಸ್ಪರ್ಧೆ, ಹಾಸ್ಯ ಚಟಾಕಿ, ಮುಂತಾದ ಹಲವಾರು ಕಾಯ೯ಕ್ರಮಗಳನ್ನು ರೂಪಿಸಿದರು. ಜನಪ್ರಿಯ ಹಾಸ್ಯ ಸಾಹಿತಿಯಾಗಿ, ಸೂಪರಿಂಟೆಂಡ್ ಹುದ್ದೆ ಪಡೆದು ಶಿವಮೊಗ್ಗದಿಂದ ದಾವಣಗೆರೆಗೆ ವರ್ಗವಾಗಿ ಸೇವೆ ಸಲ್ಲಿಸಿ ನಂತರ ವಿಶ್ವವಿದ್ಯಾಲಯದ ಸೇವೆ ಮಾಡಿ, ನಿವೃತ್ತರಾದರು.


(1954) ಎಂಟು ಅದ್ಭುತ ಕೃತಿಗಳು, ಎರಡು ಕೃತಿ ಅನುವಾದ (ಕೆಂಪು ಮೀನು), ಷಾಹಜಹಾನ್ ರಚಿಸಿದ ಮಹಾನುಭಾವರು. ಇವರ ಕಿರಿಯ ಪುತ್ರ ವೆಂಕಟಾದ್ರಿ ಚಿಕ್ಕ ವಯಸ್ಸಿನಲ್ಲಿ ನಿಧನ ಹೊಂದಿದಾಗ ವ್ಯಾಕುಲಗೊಂಡು, ಸತ್ಯ ಸಾಯಿಬಾಬಾ ಆಶ್ರಮ ಸೇರಿದರು. ಕಸ್ತೂರಿ ಅವರು ಸತ್ಯಸಾಯಿಬಾಬಾ ಅವರನ್ನು ಕುರಿತು ಅನೇಕ ಕೃತಿಗಳನ್ನು ಬರೆದರು.


ಅನೇಕ ಸಾಮಾಜಿಕ ಸೇವೆ ಮಾಡಿ, ಅಪರೂಪದ ಹಾಸ್ಯ, ನಾಟಕಗಳನ್ನು, ಕಾದಂಬರಿಗಳನ್ನು ನಾಡಿಗೆ ನೀಡಿ, ತಾ॥14-8-1987 ರಂದು ಕೊನೆಯಲ್ಲಿ ಪ್ರಶಾಂತಿ ನಿಲಯದಲ್ಲಿ (ಅನಂತಪುರ ಜಿಲ್ಲೆ) ನಿಧನರಾದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top