ಹೈಕಮಾಂಡ್‌ಗೆ ನುಂಗಲಾರದ ತುತ್ತಾದ ಕರ್ನಾಟಕ ಬಿಜೆಪಿ

Upayuktha
0


ದೊಂದು ರಾಷ್ಟ್ರದ ಅತೀ ದೊಡ್ಡ ಶಿಸ್ತಿನ ರಾಜಕೀಯ ಪಕ್ಷ ಅನ್ನಿಸಿಕೊಂಡ ಬಿಜೆಪಿ ಮಟ್ಟಿಗೆ ಹೆಚ್ಚು ಚರ್ಚಿತವಾದ ವಿಷಯ. ಕರ್ನಾಟಕವನ್ನು ಹೊರತುಪಡಿಸಿ ಇಡೀ ದೇಶದಲ್ಲಿ ಬಿಜೆಪಿ ಹೈಕಮಾಂಡ್‌ ದೆಹಲಿಯಲ್ಲಿ ಕೂತು ಎಲ್ಲಾ ತಮ್ಮ ಅಧಿಕಾರವುಳ್ಳ ರಾಜ್ಯಗಳಲ್ಲಿ ಸಲೀಸಾಗಿ ತನ್ನ ಬುಗುರಿಯನ್ನು ತಿರುಗಿಸಬಹುದು. ಆದರೆ ಇದು ಕರ್ನಾಟಕದ ಮಟ್ಟಿಗೆ ಸಾಧ್ಯವಿಲ್ಲ ಅನ್ನುವುದು ಇತ್ತೀಚಿನ ಪಕ್ಷದೊಳಗಿನ ವಿದ್ಯಮಾನದಲ್ಲಿ ವೇದ್ಯವಾಗುತ್ತಿದೆ.


ಬಹು ಮುಖ್ಯವಾಗಿ ಹಿಂದಿ ಬೆಲ್ಟ್‌ನಲ್ಲಿ ಪ್ರಧಾನಿ ಮೇೂದಿ ಮತ್ತು ಅಮಿತ್ ಶಾ ಮಾತನಾಡಿದರೆ ಮುಗಿದು ಹೇೂಯಿತು. ಅದನ್ನು ಯಾರು ಕೂಡಾ ಪ್ರಶ್ನೆ ಮಾಡಲು ಸಾಧ್ಯವೇ ಇಲ್ಲ ಅನ್ನುವ ಬಿಜೆಪಿ ಹೈಕಮಾಂಡಿನ ಶಕ್ತಿ ಜಾಹೀರುಗೊಂಡಿದೆ. ಆದರೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಮೊದಲ ಹೆಬ್ಬಾಗಿಲು ಎಂದೇ ಪರಿಗಣಿಸಲ್ಪಟ ಕರ್ನಾಟದಲ್ಲಿ ಇದು ಸಾಧ್ಯವಾಗಿಲ್ಲ ಅನ್ನುವುದು ಸದ್ಯದ ಮಟ್ಟಿಗೆ ಎದ್ದು ಕಾಣುತ್ತಿದೆ.


ಉತ್ತರ ಭಾರತದ ಪ್ರಮುಖ ಬಿಜೆಪಿಯ ಬೆಲ್ಟ್ ಎಂದೇ ಕರೆಯಲ್ಪಡುವ ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ, ಉತ್ತರಾಖಂಡ, ದೆಹಲಿ ಸೇರಿದಂತೆ ಇತರ ಪ್ರಮುಖ ರಾಜ್ಯಗಳಲ್ಲಿ ಸ್ಥಳಿಯ ನಾಯಕರು ಎಷ್ಟೇ ಸಂಖ್ಯೆಯಲ್ಲಿ ಸಾಮರ್ಥ್ಯದಿಂದ ಗೆದ್ದು ಬಂದಿರಲಿ, ಅಂತೂ ಆ ರಾಜ್ಯದಲ್ಲಿ ಮುಂದಿನ ಮುಖ್ಯ ಮಂತ್ರಿಗಳು ಯಾರಾಗಬೇಕು ಅನ್ನುವುದನ್ನು ಕೊನೆಯಲ್ಲಿ ನಿರ್ಧರಿಸುವುದು ದೆಹಲಿಯಲ್ಲಿ ಕೂತ ಹೈಕಮಾಂಡ್ ಅನ್ನುವುದು ಇತ್ತೀಚಿನ ಬಹುತೇಕ ಮುಖ್ಯ ಮಂತ್ರಿಗಳ ಆಯ್ಕೆಯಲ್ಲಿ ಸ್ವಷ್ಟವಾಗಿ ಗೇೂಚರಿಸಿದೆ.


ಹಾಗಾದರೆ ಇದೇ ಹೈಕಮಾಂಡಿನ ಪವರ್ ಕರ್ನಾಟಕದಲ್ಲಿ ಪಕ್ಷದ ಒಬ್ಬ ಅಧ್ಯಕ್ಷನನ್ನು ಆಯ್ಕೆ ಮಾಡುವುದರಲ್ಲಾಗಲಿ ತೆಗೆಯುವುದರಲ್ಲಾಗಲಿ ಯಾಕೆ ಸಾಧ್ಯವಾಗುತ್ತಿಲ್ಲ ಅನ್ನುವುದು ನಮ್ಮ ಮುಂದಿರುವ ಅತೀ ದೊಡ್ಡ ಪ್ರಶ್ನೆ. ಇದನ್ನು ವಿಶ್ಲೇಷಣೆ ಮಾಡುವುದು ನಮ್ಮ ಮುಂದಿರುವ ಅತೀ ದೊಡ್ಡ ಪ್ರಶ್ನೆ. ಕರ್ನಾಟಕದ ಮಟ್ಟಿಗೆ ಬಿಜೆಪಿಯನ್ನು ಬೆಳೆಸಿದ್ದೇ ಜಾತಿ ರಾಜಕೀಯ ಅನ್ನುವುದು ಅಷ್ಟೇ ಸತ್ಯ. ಅದರಲ್ಲೂ ಬಹುಮುಖ್ಯವಾಗಿ ಲಿಂಗಾಯತ ಸಮುದಾಯದವನ್ನೇ ಮುಂದಿಟ್ಟುಕೊಂಡು ಬೆಳೆದು ಬಂದ ಯಡಿಯೂರಪ್ಪನವರ ಆಶ್ರಯದಲ್ಲಿ ಪಕ್ಷ ಕಟ್ಟಿ ಬೆಳೆಸಬೇಕಾದ ಅಂದಿನ ಪರಿಸ್ಥಿತಿ.


ಈ ಅತೀ ದೊಡ್ಧ ಜಾತಿ ಹೆಮ್ಮರದ ಬುಡದಲ್ಲಿ ಸಣ್ಣಪುಟ್ಟ ಜಾತಿಯ ಪ್ರತಿಭೆಗಳಿಗೆ ತಲೆ ಎತ್ತಿ ಬರಲು ಸಾಧ್ಯವಾಗಲೇ ಇಲ್ಲ. ಹಾಗಾಗಿ ಇಂದು ಕೂಡಾ ಇದೇ ಹೆಮ್ಮರವಾಗಿ ಬೆಳೆದ ಜಾತಿಯಿಂದ ಮೊಳೆತು ಬೆಳೆದು ಬಂದ ಯತ್ನಾಳರಂತಹ ಕಿರಿಯ ಸಸಿಗಳೇ ಬಿಜೆಪಿಯ ಹೈಕಮಾಂಡಿಗೆ ಸಡ್ಡು ಹೊಡೆದು ಕ್ಯಾರೇ ಇಲ್ಲ ಅನ್ನುವ ತರದಲ್ಲಿ ಸೆಟೆದು ನಿಲ್ಲಲು ಸಾಧ್ಯವಾಗಿದೆ. ಈಗ ಅದೇ ರೀತಿಯಲ್ಲಿ ಅನ್ಯ ಸಣ್ಣಪುಟ್ಟ ಜಾತಿಯ ನಾಯಕರುಗಳು ಇದೇ ರೀತಿಯಲ್ಲಿ ಸೆಟೆದು ನಿಂತಿದ್ದರೆ ಅವರು ಎಂದೊ ಪಕ್ಷದಿಂದ ಗಡಿಪಾರು ಮಾಡಿಯಾಗುತ್ತಿತ್ತು. ಇದಕ್ಕೆ ಈಶ್ವರಪ್ಪರಂತ ಸಾಕಷ್ಟು ಉದಾಹರಣೆ ನಮ್ಮ ಮುಂದೆ ಬಂದು ನಿಲ್ಲುತ್ತದೆ. ಅಂದರೆ ಕನಾ೯ಟಕದ ಮಟ್ಟಿಗೆ ಲಿಂಗಾಯತ ಜಾತಿಯೊಂದೇ ಬಿಜೆಪಿಯನ್ನು ಮೂಗುದಾರ ಹಾಕಿ ಕುಣಿಸಬಲ್ಲ ಶಕ್ತಿ ಅನ್ನುವ ದೃಷ್ಟಾಂತ ಯಡಿಯೂರಪ್ಪ ಮತ್ತು ಯತ್ನಾಳರ ಕಾದಾಟದಲ್ಲಿ ಜಾತಿಯ ಶಕ್ತಿಯನ್ನು ಬಿಜೆಪಿಯ ಬೀದಿ ರಂಪಾಟದಲ್ಲಿ ಕಾಣುವಂತಾಗಿದೆ. ಈ ಜಾತಿ ರಂಪಾಟದಲ್ಲಿ ರಾಜ್ಯದ ಬಿಜೆಪಿಯ ಭವಿಷ್ಯ ಎಲ್ಲಿಗೆ ಬಂದು ನಿಲ್ಲಬಹುದು ಅನ್ನುವುದು ನಮ್ಮೆಲ್ಲರ ಮುಂದಿರುವ ಅತಿ ಕುತೂಹಲಕಾರಿ ಪ್ರಶ್ನೆ.


- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top