ಕಾಶ್ಮಿರ್ ಮಿನೆಜಸ್ ನಿಧನ

Upayuktha
0

 



ಉಜಿರೆ: ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳದ ಆಶ್ರಯದಲ್ಲಿ ಉಜಿರೆಯಲ್ಲಿ ನಡೆಸಲ್ಪಡುತ್ತಿರುವ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ ನೀಡುವ ``ರತ್ನಮಾನಸ’’ ವಿದ್ಯಾರ್ಥಿನಿಲಯದ ನಿವೃತ್ತ ವಾರ್ಡನ್ ಕಾಶ್ಮಿರ್ ಮಿನೆಜಸ್ (80) ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ರಾತ್ರಿ ಮಂಗಳೂರಿನಲ್ಲಿ ನಿಧನರಾದರು.


ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಅವರ ಅಂತ್ಯ ಸಂಸ್ಕಾರವನ್ನು ಗುರುವಾರ ಬೆಳ್ತಂಗಡಿ ಚರ್ಚ್ ನಲ್ಲಿ ನಡೆಸಲಾಯಿತು. ಶಾಲಾ ಶಿಕ್ಷಣದ ಜೊತೆಗೆ ಕೃಷಿ, ಹೈನುಗಾರಿಕೆ, ತೋಟಗಾರಿಕೆ, ಅಡುಗೆತಯಾರಿ ಮೊದಲಾದ ವಿಷಯಗಳಲ್ಲಿ ವಿಶೇಷ ತರಬೇತಿ ಮತ್ತು ಪ್ರಾತ್ಯಕ್ಷಿಕೆಯೊಂದಿಗೆ ಜೀವನಶಿಕ್ಷಣ ನೀಡುವ ``ರತ್ನಮಾನಸ’’ ವಿದ್ಯಾರ್ಥಿ ನಿಲಯವನ್ನು 1972 ರಲ್ಲಿ ಪ್ರಾರಂಭಿಸಿದಾಗ ಕಾಶ್ಮಿರ್ ಮಿನೆಜಸ್ ವಿದ್ಯಾರ್ಥಿ ನಿಲಯದ ವಾರ್ಡನ್ ಆಗಿ ಸೇರಿದರು. ಬಳಿಕ ಅವರು ಸ್ಥಳೀಯ ಎಸ್.ಡಿ.ಎಂ. ಸೆಕೆಂಡರಿ ಶಾಲೆಯಲ್ಲಿ ಪದವೀಧರ ಸಹಾಯಕ ಶಿಕ್ಷಕರಾಗಿ ನೇಮಕಗೊಂಡರು.


ಸಿಂಡಿಕೇಟ್ ಬ್ಯಾಂಕಿನ ಕೃಷಿ ಪ್ರತಿಷ್ಠಾನದ ಆಶ್ರಯದಲ್ಲಿ ಶಾಲೆಯಲ್ಲಿ ಭಾವಿ ಕೃಷಿಕರ ಸಂಘ ಪ್ರಾರಂಭಿಸಿ ಶಾಲೆ ಹಾಗೂ ರತ್ನಮಾನಸದಲ್ಲಿ ಕೃಷಿ ಹಾಗೂ ತೋಟಗಾರಿಕೆಯಲ್ಲಿ ವಿಶೇಷ ತರಬೇತಿ, ಮಾರ್ಗದರ್ಶನ ನೀಡಿದರು. ಹಾಲು ಕರೆಯುವುದು, ಲೆಕ್ಕಪತ್ರ ನಿರ್ವಹಣೆ, ಕ್ಷೌರ ಮಾಡುವುದು, ಅಡುಗೆ ತಯಾರಿ, ಹಟ್ಟಿ ಹಾಗೂ ದನಕರುಗಳನ್ನು ತೊಳೆಯುವುದು, ಶ್ರಮದಾನ, ನೇಜಿ ನೆಡುವುದು, ಕಟಾವು ಇತ್ಯಾದಿ ಕೆಲಸಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿ ಸ್ವಾವಲಂಬಿ ಜೀವನಕ್ಕೆ ಪ್ರೋತ್ಸಾಹ ನೀಡಿದರು.


ಬಳಿಕ ಮುಖ್ಯೋಪಾಧ್ಯಾಯರಾಗಿ ಬಡ್ತಿಗೊಂಡು ಧರ್ಮಸ್ಥಳದ ಪ್ರೌಢಶಾಲೆಗೆ ವರ್ಗಾವಣೆಗೊಂಡು ನಿವೃತ್ತರಾದರು. ಡಿ. ವೀರೇಂದ್ರ ಹೆಗ್ಗಡೆ ಸಂತಾಪ ಕಾಶ್ಮಿರ್ ಮಿನೆಜಸ್ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಗಾಢ ಸಂತಾಪ ವ್ಯಕ್ತಪಡಿಸಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದ್ದಾರೆ.


ಪ್ರೌಢ ಶಾಲಾ ಶಿಕ್ಷಕರಾಗಿ, ರತ್ನಮಾನಸ ವಿದ್ಯಾರ್ಥಿನಿಲಯದ ವಾರ್ಡನ್ ಆಗಿ ಉತ್ತಮ ಸೇವೆ ನೀಡಿರುವ ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಕೃಷಿಯಲ್ಲಿ ತಜ್ಞರಾಗಿ ಎಲ್ಲಾ ಕಡೆ ಓಡಾಡಿ ಸ್ವ-ಸಹಾಯ ಸಂಘಗಳನ್ನು ರಚಿಸಿ, ಸ್ವಾವಲಂಬಿ ಜೀವನ ನಡೆಸುವ ಬಗ್ಗೆ ವಿಶೇಷ ಮಾರ್ಗದರ್ಶನ, ತರಬೇತಿ ನೀಡಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಅವರ ಬಗ್ಗೆ ಅಪಾರ ಗೌರವವಿದೆ ಎಂದು ಹೆಗ್ಗಡೆಯವರು ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top