ಬೆಂಗಳೂರಿನ ಎನ್‌ಎಂಐಟಿಯಲ್ಲಿ 'ಸಹ-ನಾವೀನ್ಯತೆ ಕೇಂದ್ರ' (ಸಿಐಸಿ) ಉದ್ಘಾಟನೆ

Upayuktha
0




ಬೆಂಗಳೂರು: ‘ಜನಸಾಮಾನ್ಯರಲ್ಲಿ ಅಷ್ಟಾಗಿ ಪ್ರಚಲಿತವಿಲ್ಲದ ನವನವೀನ ತಂತ್ರಜ್ಞಾನದ ಅನ್ವೇಷಣೆ ಕುರಿತಂತೆ ಸಂಶೋಧನಾ ಪ್ರಬಂಧಗಳನ್ನು ವಿಶ್ವವಿಖ್ಯಾತ ತಾಂತ್ರಿಕ ನಿಯತಕಾಲಿಕೆಗಳಲ್ಲಿ ಪ್ರಕಟಿಸುವಲ್ಲಿ ಭಾರತ ಇಡೀ ವಿಶ್ವದಲ್ಲಿಯೇ ಮೂರನೇ ಸ್ಥಾನದಲ್ಲಿದೆ. ಇದು ಹೆಮ್ಮೆಯ ಸಂಗತಿ. ಆದರೆ ವಿಷಾದದ ವಿಷಯ ಏನೆಂದರೆ, ನಮ್ಮ ದೇಶ ಅನ್ವೇಷಣೆಗಳನ್ನು ಅನುಷ್ಠಾನಗೊಳಿಸಿ ತತ್ಸಂಬಂಧಿತ ಉತ್ಪನ್ನಗಳನ್ನು ಉದ್ಯಮಗಳನ್ನು ಸ್ಥಾಪಿಸುವ ಮೂಲಕ ಹೊರತರುವಲ್ಲಿ ಬಹಳ ಹಿಂದಿದೆ. ಬಹುಶಃ ಇಡೀ ವಿಶ್ವದಲ್ಲಿ ಭಾರತ 30ನೇ ಸ್ಥಾನ ಗಳಿಸಲೂ ಕಷ್ಟಸಾಧ್ಯವೆನ್ನಿಸಿದೆ ಎಂದು ಐ-ಹಬ್ ಫೆಡೇಶನ್ ಫಾರ್ ಕೊಬೋಟಿಕ್ಸ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶುತೋಷ್ ದತ್ತ ಶರ್ಮ ನುಡಿದರು.


ಅದರಿಂದಲೇ ಅನ್ವೇಷಣೆಯ ಹೊಳಹು ಹಾಗೂ ಅನುಷ್ಠಾನಗಳ ನಡುವಿನ ಭಾರೀ ಅಂತರವನ್ನು ಕಡಿಮೆ ಮಾಡಲು ಮತ್ತು ಉತ್ಪಾದನೆಯ ಗುರಿ ಹೊಂದಿದ ಸ್ಟಾರ್ಟ್ಅಪ್‌ಗಳನ್ನು ಪ್ರೋತ್ಸಾಹಿಸಲು, ಭಾರತ ಸರ್ಕಾರ ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿಯಲ್ಲಿ ‘ಐ-ಹಬ್ ಫೆಡೇಶನ್ ಫಾರ್ ಕೊಬೋಟಿಕ್ಸ್’ ಸಂಸ್ಥೆಯನ್ನು ಸ್ಥಾಪಿಸಿದೆ' ಎಂದು ತಿಳಿಸಿದರು.


ಈ ಸಂಸ್ಥೆ ಆಯ್ದ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಟ್ಟು ಹತ್ತು ‘ಸಹ ಅನ್ವೇಷಣಾ ಕೇಂದ್ರ’ (ಕೊ-ಇನ್ನೊವೇಶನ್ ಸೆಂಟರ್)ಗಳನ್ನು ದೇಶದಲ್ಲಿ ಸ್ಥಾಪಿಸುತ್ತಿದೆ. ಇದರಿಂದ ಹೊಸ ಆವಿಷ್ಕಾರಗಳು ನವೋದ್ಯಮಗಳ ಮೂಲಕ ಉತ್ಪಾದಕ ವಸ್ತುಗಳಾಗಿ ಇಡೀ ಜಗತ್ತಿಗೇ ಲಭಿಸಲಿವೆ’ ಎಂದು ಅವರು ಹೇಳಿದರು.


ಅವರು ನೂತನ ‘ಸಹ ಅನ್ವೇಷಣಾ ಕೇಂದ್ರವನ್ನು’ (ಕೊ-ಇನ್ನೊವೆಶನ್ ಸೆಂಟರ್) ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು. 


‘ಈ ‘ಸಹ ಅನ್ವೇಷಣಾ ಕೇಂದ್ರ’ಗಳು ಪ್ರಮುಖವಾಗಿ ನಾಲ್ಕು ಕ್ಷೇತ್ರಗಳಲ್ಲಿ (ವೈದ್ಯಕೀಯ, ಕೃಷಿ, ಕೈಗಾರಿಕೆ ಹಾಗೂ ರಕ್ಷಣೆ) ಸ್ಟಾರ್ಟ್ಅಪ್‌ಗಳ ಸಂಸ್ಥಾಪನೆಗೆ ತಾಂತ್ರಿಕ ಹಾಗೂ ಆರ್ಥಿಕ ನೆರವು ನೀಡಲಿವೆ. ಮಾತ್ರವಲ್ಲದೆ ಕೌಶಲ್ಯವರ್ಧನೆಗೆ ಮತ್ತು ಅಂತರಾಷ್ಟ್ರೀಯ ಒಡಂಬಡಿಕೆಗಳಿಗೆ ವೇದಿಕೆ ಕಲ್ಪಿಸಲಿವೆ’ ಎಂದರು.


ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಎಸ್. ಮೂಡಿತ್ತಾಯ ಅವರು ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.  ಶಿಕ್ಷಕರು ಕೇವಲ ಜ್ಞಾನದ ಬೋಧನೆ ಮಾತ್ರ ಮಾಡದೆ, ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯನ್ನು ಅಳವಡಿಸಲು ತಾವೇ ಸ್ವತಃ ಉದ್ಯಮಶೀಲತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಮಾತ್ರವಲ್ಲದೆ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ‘ಸಹ ಅನ್ವೇಷಣಾ ಕೇಂದ್ರ’ ವಿದ್ಯಾರ್ಥಿಗಳ ಹಾಗೂ ತಂತ್ರಜ್ಞಾನದ ಹೊಸ ಪದವೀಧರರ ಔದ್ಯಮಿಕ ಕನಸುಗಳನ್ನು ನನಸಾಗಿಸಲು ವೇದಿಕೆ ಕಲ್ಪಿಸಲು ಶ್ರಮಿಸಲಿದೆ ಎಂದು ಆಶ್ವಾಸನೆ ನೀಡಿದರು.


ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ‘ಸಹ ಅನ್ವೇಷಣಾ ಕೇಂದ್ರ’ದ ಮಾರ್ಗದರ್ಶಕ ಡಾ. ಪ್ರಶಾಂತ್ ಎನ್. ಅವರು ಮಾತನಾಡಿ, ಈ ಕೇಂದ್ರ, ಇಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಹಾಗೂ ನೂತನ ಪದವೀಧರರಿಗೆ ಸ್ಟಾರ್ಟ್ಅಪ್‌ಗಳ ಸ್ಥಾಪನೆ ಮಾಡಲು ಸಕಲ ನೆರವು ನೀಡಲಿದೆ ಎಂದರು.


ಪ್ರಾರAಭದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್ ಸರ್ವರನ್ನು ಸ್ವಾಗತಿಸಿದರು. ಅಮೆರಿಕಾದ ಪೆನ್ನ್ ಸ್ಟೇಟ್ ಯೂನಿವರ್ಸಿಟಿಯ ಅಂತಾರಾಷ್ಟ್ರೀಯ ವ್ಯವಹಾರಗಳ ನಿರ್ದೇಶಕ ಡಾ. ಓಮಿದ್ ಅನ್ಸಾರಿ, ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿಯ ಐ-ಹಬ್ ಫೆಡೇಶನ್ ಫಾರ್ ಕೊಬೋಟಿಕ್ಸ್‌ನ ಕ್ಯಾಂಪಸ್ ಸಲಹೆಗಾರ ಡಾ. ಆಕಾಶ್ ಸೊಂದಿ, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಬೆಂಗಳೂರು ಆವರಣದ ಉಪಾಧ್ಯಕ್ಷ ಡಾ. ಸಂದೀಪ್ ಶಾಸ್ತ್ರಿ, ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ, ಸಂಸ್ಥೆಯ ಡೀನ್‌ಗಳು, ವಿಭಾಗಗಳ ಮುಖ್ಯಸ್ಥರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top