ಇನ್ನೇನು ಜನೆವರಿ ತಿಂಗಳು ಮುಗಿದು ಫೆಬ್ರವರಿ ಕಾಲಿಟ್ಟಿತು. ಈಗ ಪರೀಕ್ಷೆಗಳದ್ದೇ ಮಾತು ಎಲ್ಲೆಡೆ. ಪರೀಕ್ಷೆ ಎಂದರೆ ವಿದ್ಯಾರ್ಥಿಗಳಿಗೆ ಡವ್ ಡವ್ ಬಡಿಯಲು ಶುರುವಾಗುತ್ತದೆ. ಈಗಿನ ತಂದೆತಾಯಿಗಳು ಮಗ / ಮಗಳು ಮುಂದಿನ ರಾಂಕ್ ಬರಬೇಕು ಎಂಬ ಆಶಯ ಹೊಂದಿರುತ್ತಾರೆ. ನಮ್ಮ ಮಕ್ಕಳು ಕಲಿತು ಒಳ್ಳೇ ಕಾಲೇಜ್ ಲ್ಲಿ ಸೀಟ್ ಗಿಟ್ಟಿಸಿ ಮುಂದೆ ಇಂಜಿನಿಯರ್ / ಡಾಕ್ಟರ್ / ಪ್ರೊಫೆಸರ್ ಇನ್ನೊಂದೊ ಮತ್ತೊಂದೊ ಆಗಬೇಕು ಎಂದು ಬಯಸುತ್ತಾರೆ. ಈಗಿನ ಸ್ಪರ್ಧಾ ಯುಗದಲ್ಲಿ ಎಲ್ಲರೂ ಮುಂದೋಡಬೇಕು ಎಂದು ಬಯಸುವುದು ಸಹಜ.
ಆದರೆ ಹೇಗೆ ಓದಬೇಕು, ಹೇಗೆ ತಯಾರಿ ಮಾಡಬೇಕು? ಹೇಗೆ ಬರೆಯಬೇಕು ಎಂಬುದು ನಿಶ್ಚಿತವಾಗಿ ತಿಳಿದಿರಬೇಕು. ಆಗ ಮಾತ್ರ ಮುಂದಿನ ಸಾಲಲ್ಲಿ ನಿಲ್ಲಲು ಸಾಧ್ಯವಾಗುತ್ತದೆ.
ಪರೀಕ್ಷೆಗೆ ತಯಾರಿ ಮಾಡುವವರು ಮೂರು ವಿಧದಲ್ಲಿ ತಯಾರಿ ನಡೆಸಬೇಕು.
1. ಗ್ರಹಣ
2. ಮನನ
3. ಅಧ್ಯಯನ
ಗ್ರಹಣ:
ವಿದ್ಯಾರ್ಥಿಗಳಿಗೆ ಶಿಕ್ಷಕರು ಎಲ್ಲರಿಗೂ ಒಂದೇ ರೀತಿಯಲ್ಲಿ ಪಾಠ ಮಾಡುತ್ತಾರೆ. ಎಲ್ಲರಿಗೂ ತಿಳಿಯುವ ರೀತಿಯಲ್ಲಿ ಸಾಧ್ಯವಿದ್ದಷ್ಟು ಪರಿಶ್ರಮ ಪಟ್ಟು ಹೇಳುತ್ತಾರೆ.
ವಿದ್ಯಾರ್ಥಿಗಳು ಅದನ್ನು ಹೇಗೆ ಗ್ರಹಿಕೆ ಮಾಡಿ ಮೆದುಳಿನಲ್ಲಿ ಶೇಖರಿಸಿ ಇಟ್ಟುಕೊಳ್ಳುತ್ತಾರೆ ಎಂಬುದು ಮುಖ್ಯ. ಪ್ರತಿ ವಿದ್ಯಾರ್ಥಿಯ ಗ್ರಹಿಕೆ ಮಾಡುವ ಶಕ್ತಿ ಬೇರೆ ಬೇರೆ ಇರುತ್ತದೆ.
ಒಬ್ಬರಿಗೆ ಫಿಜಿಕ್ಸ್ ಸುಲಭ ಅನಿಸಿದರೆ ಇನ್ನೊಬ್ಬರಿಗೆ ಗಣಿತ, ಮಗದೊಬ್ಬರಿಗೆ ಬಯೋ ಸುಲಭವಾಗಿ ತಿಳಿಯುವ ಶಕ್ತಿ ಇರಬಹುದು. ಹೀಗೇ ಅವರವರ ಆಸಕ್ತಿ ಮತ್ತು ಶಕ್ತಿಯ ಮೇಲೆ ಗ್ರಹಿಕೆ ಇರುತ್ತದೆ. ಇದು ಮೊದಲ ಹೆಜ್ಜೆ.
ಮನನ:
ಮನನ ಎಂದರೆ ನೆನಪಿನಲ್ಲಿಟ್ಟುಕೊಳ್ಳುವುದು. ಶಿಕ್ಷಕರು ಹೇಳಿದ ಯಾವುದೇ ವಿಷಯವನ್ನೂ ಸರಿಯಾಗಿ ಗ್ರಹಿಸಿ, ಸರಿಯಾದ ರೀತಿಯಲ್ಲಿ ನೆನಪು ಮಾಡಿಕೊಳ್ಳುವುದು. ಇದೇ ಮನನ. ಬರೀ ಸರಿಯಾಗಿ ತಿಳಿದುಕೊಂಡರೆ ಆಗದು. ಅದನ್ನು ಸರಿಯಾಗಿ ನೆನಪು ಇಟ್ಟುಕೊಳ್ಳಬೇಕು. ಇದು ಎರಡನೇ ಹೆಜ್ಜೆ.
ಅಧ್ಯಯನ:
ಹೇಳಿದನ್ನು ಗ್ರಹಿಸಿ, ನೆನಪಲ್ಲಿಟ್ಟುಕೊಂಡು ಅಧ್ಯಯನಶೀಲರಾಗಿ ಪೂರ್ತಿ ವಿಷಯವನ್ನು ಅಭ್ಯಾಸ ಮಾಡಿ ಪರೀಕ್ಷೆಗೆ ತಯಾರಿ ಮಾಡುವುದು ಮೂರನೇ ಹೆಜ್ಜೆ. ಹೆಚ್ಚು ಹೆಚ್ಚು ಆಳವಾಗಿ ಅಧ್ಯಯನ ಮಾಡುವುದರಿಂದ ವಿಷಯ ಗ್ರಹಿಕೆಗೆ ಅನುಕೂಲ ಆಗುತ್ತದೆ.
ಮೇಲಿನ ಎಲ್ಲ ಹೆಜ್ಜೆಗಳನ್ನು ಸರಿಯಾಗಿ ಇಡುತ್ತ ಬಂದರೆ ಪರೀಕ್ಷೆಗೆ ತಯಾರಿ ಮಾಡಿದಂತೆ ಸರಿ.
ಆದರೆ ಪರೀಕ್ಷೆಗೆ ಬರೀ ತಯಾರಿ ಮಾಡಿದರೆ ಸಾಲದು. ಅದನ್ನು ಉತ್ತರ ಪತ್ರಿಕೆಗಳಲ್ಲಿ ಸರಿಯಾಗಿ ಬರೆಯುವುದೂ ಬಲು ಮುಖ್ಯ.
ಪರೀಕ್ಷೆಗೆ ಹದಿನೈದು ಇಪ್ಪತ್ತು ನಿಮಿಷ ಮೊದಲು ಹೋಗಿ ಹಾಲ್ ಟಿಕೆಟ್, ಪಾಡ್, ಪೆನ್ ಪೆನ್ಸಿಲ್ ಗಳನ್ನು ಒಯ್ದು ಆರಾಮಾಗಿ ಕುಳಿತುಕೊಳ್ಳಬೇಕು.
ಪರೀಕ್ಷೆ ಚೆನ್ನಾಗಿ ಬರೆಯುತ್ತೇನೆ ಎಂಬ ಆತ್ಮವಿಶ್ವಾಸದಿಂದ ಪರೀಕ್ಷಾ ಕೊಠಡಿ ಪ್ರವೇಶಿಸಬೇಕು. ಉತ್ತರ ಪತ್ರಿಕೆ ಕೊಟ್ಟ ತಕ್ಷಣ ಮೊದಲು ನಿಮ್ಮ ರೆಜಿಸ್ಟರ್ no. ದಾಖಲಿಸಬೇಕು. ಆಮೇಲೆ ಪ್ರಶ್ನೆಗಳನ್ನು ಸರಿಯಾಗಿ ಓದಿಕೊಳ್ಳಬೇಕು.
ಆಮೇಲೆ ಪ್ರಶ್ನೆ ಸಂಖ್ಯೆಯನ್ನು ಸರಿಯಾಗಿ ನಮೂದಿಸುತ್ತ ಉತ್ತರಗಳನ್ನು ಬರೆಯಬೇಕು.
ನೆನಪಿರಲಿ
ಬರೀ ಓದಿ ನೆನಪಿನಲ್ಲಿಟ್ಟುಕೊಂಡು ಸರಿಯಾಗಿ ಉತ್ತರ ಬರೆಯದೇ ಹೋದರೆ ಕಡಿಮೆ ಅಂಕಗಳು ಬರುತ್ತವೆ.
ಬರೆಯಲು ಮುಂದಿದ್ದು, ಓದಿದ್ದು ನೆನಪೇ ಆಗದಿದ್ದರೆ, ಆಗಲೂ ಕಡಿಮೆ ಅಂಕಗಳು ಬರುತ್ತವೆ.
ಹೀಗಾಗಿ ಓದಿ, ಓದಿದ್ದನ್ನು ಸರಿಯಾಗಿ ನೆನಪಿಟ್ಟುಕೊಂಡು, ಸರಿಯಾದ ರೀತಿಯಲ್ಲಿ ಉತ್ತರಿಸಿದರೆ ಮಾತ್ರ ಒಳ್ಳೇ ಅಂಕಗಳು ಬರಲು ಸಾಧ್ಯವಾಗುತ್ತದೆ.
ಹೀಗೇ ಪರೀಕ್ಷೆ ಕೂಡ ಒಂದು ಜ್ಞಾನ ಯಜ್ಞ ಅದನ್ನು ಸರಿಯಾಗಿ ಹೋಮ ಮಾಡಿದರೆ ಮಾತ್ರ ಅತ್ಯುತ್ತಮ ಪ್ರತಿಫಲ ಸಿಗುತ್ತದೆ.
ಈಗೀಗ ಕನ್ನಡ ಇಂಗ್ಲಿಷ್ ಏನು ಮಹಾ, ಬೇಗ ಬರೆಯಲು ಬರುತ್ತದೆ ಎಂದುಕೊಂಡು ಸರಿಯಾದ ತಯಾರಿ ಮಾಡದೇ ಅದೇ ವಿಷಯಗಳಲ್ಲಿ ಫೇಲ್ ಆಗಿದ್ದನ್ನು ಕೇಳುತ್ತೇವೆ. ಇನ್ನೊಂದು ವಿಚಾರ, ಇಂಜಿನಿಯರ್ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್ ಸರಳ ವಿಷಯಗಳು ಎನಿಸಿದರೂ, ಸರಿಯಾಗಿ ಓದಿಕೊಂಡು ಬರೆದರೆ ಅಂಕಗಳ ಮೊತ್ತ ಹೆಚ್ಚಾಗಿ 100 ಕ್ಕೆ ಹೆಚ್ಚು ಅಂಕಗಳು ಬಂದು ಮೇಲ್ದರ್ಜೆಯಲ್ಲಿ ಪಾಸಾಗುತ್ತಾರೆ.
ಹೀಗೇ ಪರೀಕ್ಷೆ ಎಂದರೆ ಭಯ ಪಡದೆ ಸರಿಯಾಗಿ ತಯಾರಿ ನಡೆಸಿದರೆ ಉತ್ತಮ ದರ್ಜೆ ಜೊತೆಗೆ ತಂದೆ ತಾಯಿಗಳು ಅಭಿಮಾನ ಪಡುವಂತೆ ಪಾಸ್ ಆಗುತ್ತಾರೆ.
ಪರೀಕ್ಷೆಗೆ ಸನ್ನದ್ಧರಾದ ಎಲ್ಲ ವಿದ್ಯಾರ್ಥಿಗಳಿಗೂ ಶುಭವಾಗಲಿ.
- ರೇಖಾ. ಮುತಾಲಿಕ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ