ಕಂಬಾರು ಶ್ರೀದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಬ್ರಹ್ಮಕುಂಭಾಭಿಷೇಕದ ಸಂಭ್ರಮ

Upayuktha
0


ಕಾಸರಗೋಡು ಜಿಲ್ಲೆಯ ಕುಡಾಲು- ಬಾಡೂರು ಗ್ರಾಮಗಳ ಅಧಿದೇವತೆಯಾಗಿ ಮೆರೆದು, ಉಭಯ ಗ್ರಾಮಗಳ ಭಕ್ತಾಭೀಷ್ಟಪ್ರದಾಯಿನಿಯಾಗಿ ಕಂಬಾರಮ್ಮ ಎಂದೇ ಭಕ್ತರಿಂದ ಕರೆಯಿಸಿಕೊಳ್ಳುವ ಶ್ರೀದುರ್ಗೆಯ ನೆಲೆವೀಡಾದ ಕಂಬಾರು ಶ್ರೀದುರ್ಗಾಪರಮೇಶ್ವರೀ ಕ್ಷೇತ್ರವು ಇಂದು ಬ್ರಹ್ಮಕುಂಭಾಭಿಷೇಕದ ಸಂಭ್ರಮದಲ್ಲಿದೆ.


ಸಂಪದ್ಭರಿತವಾಗಿ ಹರಿಯುವ ಸೀರೆ ಹೊಳೆಯ ಪಕ್ಕದಲ್ಲೇ ತಲೆಯೆತ್ತಿ ನಿಂತು ಕಂಗೊಳಿಸುವ ಗಿರಿ ಶಿಖರದಲ್ಲಿ ಮೆರೆಯುವ ಪಾವನ ಕ್ಷೇತ್ರವೇ ಕಂಬಾರು ದುರ್ಗಾಂಬೆಯ ಸನ್ನಿಧಿ. ಶರಣಾಗಿ ಬರುವ ಭಕ್ತರಿಗೆ ಅಭಯವನಿತ್ತು ಹರಸುವ ಜಗಜ್ಜನನಿಯು ಕಂಬಾರಿನ ಪುಣ್ಯ ಭೂಮಿಯಲ್ಲಿ ನೆಲೆಸಿರುವುದಕ್ಕೆ ಹಿನ್ನೆಲೆಯಾಗಿರುವ ಇತಿಹಾಸವು ಹೀಗಿದೆ.



'ಜಲದುರ್ಗೆಯಾಗಿ ಉದ್ಭವಿಸಿ ವನದುರ್ಗೆಯಾಗಿ ನೆಲೆಸಿದ ಕಂಬಾರಮ್ಮ'

ಸಾವಿರಾರು ವರ್ಷಗಳ ಹಿಂದೆ ಕಂಬಾರು ಗಿರಿಯ ಸಮೀಪದಲ್ಲಿ ಋಷಿಮುನಿಗಳು ಲೋಕ ಕಲ್ಯಾಣಾರ್ಥವಾಗಿ ದುರ್ಗಾದೇವಿಯ ತಪಸ್ಸು ಕೈಗೊಂಡಿದ್ದರು. ಅವರ ತಪಸ್ಸಿಗೆ ಒಲಿದ ತ್ರಿಗುಣಾತ್ಮಿಕೆಯು, ಪರಾಶಕ್ತಿಯೂ ಆಗಿರುವ  ತಾಯಿ ದುರ್ಗಾಂಬೆಯು ಲೋಕಾನುಗ್ರಹಕ್ಕಾಗಿ ಸೀರಾ ನದಿಯ ಗಯವೊಂದರಲ್ಲಿ ಲಿಂಗಸ್ವರೂಪಿಯಾಗಿ ಋಷಿಮುನಿಗಳಿಗೆ ಗೋಚರಿಸಿದಳು.


ನದಿನೀರಿನ ಗಯದಲ್ಲಿ ಉದ್ಭವಿಸಿದ ಲಿಂಗಸ್ವರೂಪೀ ಜಗನ್ಮಾತೆಯನ್ನು ಪೂಜಿಸಲು ಅನಾನುಕೂಲವಾಗಬಹುದು ಎಂಬ ಋಷಿಮುನಿಗಳ ಕೋರಿಕೆಯಂತೆ, ಜಗದಂಬೆಯು ವನದುರ್ಗೆಯಾಗಿ ಕಂಬಾರು ಗಿರಿಶಿಖರದಲ್ಲಿ ನೆಲೆಸಿದಳು. ವಿಶಿಷ್ಟ ಯೋಗಿಗಳ ತಪಃ ಸಿದ್ಧಿಗೊಲಿದು ಲೋಕಾನುಗ್ರಹಕ್ಕಾಗಿ ಪ್ರತ್ಯಕ್ಷಗೊಂಡ ಆದಿಶಕ್ತಿಗೆ ಗಿರಿಶಿಖರದಲ್ಲಿ ಪೂರ್ವಾಭಿಮುಖವಾಗಿ ದೇಗುಲವೊಂದನ್ನು ನಿರ್ಮಿಸಲಾಯಿತು.


ಶ್ರೀದೇವೀ ಸಾನ್ನಿಧ್ಯದ ಜೊತೆಗೆ ಶಾಸ್ತಾರ ಸಾನ್ನಿಧ್ಯವೂ ಕಂಡು ಬಂದಾಗ ಗಣಪತಿ ಹಾಗೂ ಶಾಸ್ತಾರ ದೇವರುಗಳ ಗುಡಿಯನ್ನು ನಿರ್ಮಿಸಲಾಯಿತು.


ಶ್ರೀದುರ್ಗೆಯು ಆವಿರ್ಭವಿಸಿರುವ ನೀರಿನ ಗಯದಲ್ಲಿ ದೇವೀ ಸಾನಿಧ್ಯವಿರುವುದರಿಂದ ಕಂಬಾರಮ್ಮನ ನಿತ್ಯಪೂಜೆಯ ಅಭಿಷೇಕಾದಿ ಬಳಕೆಗಳಿಗೆ ಇಂದಿಗೂ ಆ ನದಿಯ ನೀರನ್ನೇ ಉಪಯೋಗಿಸಲಾಗುತ್ತಿದೆ. ದೇವಿಯು ಲಿಂಗಸ್ವರೂಪಿಯಾಗಿ ಉದ್ಭವಿಸಿದ ಸ್ಥಳವು 'ದೇವರ ಗಯ' ಎಂದೇ ಕರೆಯಲ್ಪಡುತ್ತಿದೆ.


ಶಿವಾಂಶ ಸಂಭೂತ ಜಟಾಧಾರಿ

ಕಂಬಾರು ದೇವಾಲಯದ ಆರಾಧನಾ ಮೂರ್ತಿ ದುರ್ಗಾಂಬೆಯಾದರೂ ಕ್ಷೇತ್ರಪಾಲಕನಾಗಿ ಮೆರೆಯುವ ಶಿವಾಂಶ ಸಂಭೂತ ಜಟಾಧಾರಿಗೂ ಸಮಾನ ಪ್ರಾಧಾನ್ಯತೆಯಿದೆ.


ವಿಟ್ಲ ಅರಮನೆಯ ಆರಾಧ್ಯ ದೈವವಾದ ಪಾರ್ಥಂಪಾಡಿ ದೈವವು ದೇಶ ಸಂಚಾರ ಕೈಗೊಳ್ಳುವ ಸಂದರ್ಭದಲ್ಲಿ ಬಾಡೂರು ಚಾವಡಿಯಲ್ಲಿ ನೆಲೆಸಿ ಮುಂದೆ ಕಂಬಾರಮ್ಮನನ್ನು ತಪಸ್ಸಿನ ಮೂಲಕ‌ ಒಲಿಸಿ, ಶ್ರೀದೇವಿಯ ಅನುಗ್ರಹದಂತೆ ದೇವಸ್ಥಾನದ ಮುಂಭಾಗದ ಪೂರ್ವ ಗೋಪುರದಲ್ಲಿ ಕ್ಷೇತ್ರಪಾಲಕನಾಗಿ ನೆಲೆಯೂರಿತು ಎಂದು ಐತಿಹ್ಯಗಳು ಸಾರುತ್ತವೆ.


ಒಂದು ಕರದಲ್ಲಿ ತ್ರಿಶೂಲ, ಇನ್ನೊಂದು ಕರದಲ್ಲಿ ಅಗ್ನಿಯ ಪಾತ್ರೆಯನ್ನು ಹಿಡಿದಿರುವ ಭಂಗಿಯಲ್ಲಿರುವ ಜಟಾಧಾರಿ ದೈವದ ಉತ್ಸವವನ್ನು 'ಮಹಿಮೆ' ಎಂದು ಕರೆಯಲಾಗುತ್ತಿದೆ.


ಕಂಬಾರು ದುರ್ಗೆ- ಕಿದೂರು ಮಹಾದೇವ

ಕಂಬಾರು ಶ್ರೀದುರ್ಗೆಗೂ, ಕಿದೂರು ಮಹಾದೇವರೊಳಗಿನ ಸಂಬಂಧದ ಬಗ್ಗೆ ಐತಿಹ್ಯಗಳು ಸಾರುವ ನಂಬಿಕೆಯನ್ನು ಇಂದಿಗೂ ಆಚರಿಸಲಾಗುತ್ತಿದೆ.


ಕಂಬಾರು ದೇವಿ ಹಾಗೂ ಕಿದೂರು ಮಹಾದೇವರು ಪರಸ್ಪರ ಭೇಟಿಗಾಗಿ ಸೀರಾ ನದಿಯ ಕಡವಿನಲ್ಲಿ ದೋಣಿ ದಾಟುತ್ತಾರೆ ಎಂಬ ನಂಬಿಕೆಯಿಂದ ಇಂದಿಗೂ ಭಕ್ತವೃಂದ ಫಣಿಕ್ಕರ ಕಡವು ಎಂಬಲ್ಲಿ ಯಾವುದೇ ಕಾರಣಕ್ಕೂ ರಾತ್ರಿಕಾಲದಲ್ಲಿ ದೋಣಿಯನ್ನು ನದಿಗಿಳಿಸುವುದಿಲ್ಲ. ಈ ಕಡವಿನ ಪರಮಾಧಿಕಾರವು ಮಹಾದೇವನಿಗೆ ಒಳಪಟ್ಟಿರುವುದು ಎಂಬುದಕ್ಕೆ ನಿದರ್ಶನವಾಗಿ ಪ್ರಾಚೀನ‌ ಕಾಲದಿಂದಲೂ ಇಲ್ಲಿ ದೋಣಿ ನಡೆಸುವ ಅಂಬಿಗರ ವಂಶದವರು ಪ್ರತೀ ವರ್ಷವೂ ಕಿದೂರು ಹಾಗೂ ಕಂಬಾರು ದೇವಸ್ಥಾನಗಳ ಉತ್ಸವಕಾಲದಲ್ಲಿ ಉಪ್ಪನ್ನು ಸುಂಕದ ರೂಪವಾಗಿ ಕೊಡುವ ಪದ್ಧತಿ ನಡೆದು ಬರುತ್ತಿದೆ.


ಪ್ರತಿವರ್ಷವೂ ಕುಂಭಮಾಸದ ಹುಣ್ಣಿಮೆಗೆ ಕಂಬಾರು ಕ್ಷೇತ್ರದಲ್ಲಿ ಕಾಲಾವಧಿ ಉತ್ಸವವು ಜರಗುತ್ತಿದ್ದು, ಮಾರನೇ ದಿನ ರಾತ್ರಿ ಜಟಾಧಾರಿ ದೈವದ ಮಹಿಮೆಯೂ ನಡೆದು ಬರುತ್ತಿದೆ.


ಬ್ರಹ್ಮಕುಂಭಾಭಿಷೇಕದ ಸಂಭ್ರಮದಲ್ಲಿ ಶ್ರೀಕ್ಷೇತ್ರ

ಕಂಬಾರಿನ ಪಾವನ ಭೂಮಿಯಲ್ಲಿ ಶ್ರೀದುರ್ಗಾಪರಮೇಶ್ವರೀ ದೇವಿ ಹಾಗೂ ಜಟಾಧಾರಿ ದೈವವು ಸಮಾನ ಪ್ರಾಧಾನ್ಯತೆ ಹೊಂದಿರುವ ಆಧ್ಯಾತ್ಮ ಸನ್ನಿಧಿಯಲ್ಲಿ, ಶ್ರೀಮಹಾಗಣಪತಿ, ಶಾಸ್ತಾರ, ನಾಗದೇವತೆಗಳ ಸಾನ್ನಿಧ್ಯದೊಂದಿಗೆ ಮೆರೆದು, ನಂಬಿ ಬಂದ ಭಕ್ತರ ಅಭೀಷ್ಟಗಳನ್ನು ಈಡೇರಿಸಿ ಅನುಗ್ರಹಿಸುತ್ತಾ ಬರುತ್ತಿರುವ ಸಂದರ್ಭದಲ್ಲಿ ಕಾಲದೋಷವೋ, ಕರ್ಮದೋಷವೋ ಎಂಬಂತೆ ಕೆಲವು ದುರ್ನಿಮಿತ್ತಗಳು ಗೋಚರಿಸಿದಾಗ ದೈವಜ್ಞರ ಮೂಲಕ ಪ್ರಶ್ನೆಯನ್ನಿರಿಸಿ ಚಿಂತನೆ ನಡೆಸಿದಾಗ ಕಾಲದ ಹೊಡೆತಕ್ಕೆ ಸಿಲುಕಿ ದೇವಸ್ಥಾನದ ಸುತ್ತುಗೋಪುರಗಳು ಹಾಗೂ ನೈವೇದ್ಯಕೊಠಡಿ  ಶಿಥಿಲಾವಸ್ಥೆಗೆ ತಲುಪಿರುವುದು ಶ್ರೀಕ್ಷೇತ್ರದ ಸಾನ್ನಿಧ್ಯಕ್ಷಯಕ್ಕೆ ಕಾರಣವೆಂಬುದಾಗಿ ತಿಳಿದುಬಂತು. ಕ್ಷೇತ್ರಕ್ಕೆ ಒಳಪಟ್ಟ ದೈವ ಸ್ಥಾನಗಳ ಪುನರ್ನವೀಕರಣವೇ ನಂಬಿರುವ ಭಕ್ತರ ಕ್ಷೇಮಾಭಿವೃದ್ಧಿಗೆ ಮೂಲ ಎಂಬುದಾಗಿ ಕಂಡು ಬಂತು.


ಕ್ಷೇತ್ರಾಚಾರ್ಯರಾಗಿರುವ ಬ್ರಹ್ಮಶ್ರೀ ನೀಲೇಶ್ವರ ಕೀಕಾಂಗೋಡು ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು, ಜ್ಯೋತಿಷ್ಯರತ್ನ ವಳಕ್ಕುಂಜ ವೆಂಕಟ್ರಮಣ ಭಟ್, ವಾಸ್ತುಶಿಲ್ಪಿ ಕೃಷ್ಣಪ್ರಸಾದ ಮುನಿಯಂಗಳ ಮತ್ತು ಇಂಜಿನಿಯರ್ ಕೆ. ರಾಮಚಂದ್ರ ಶಾಸ್ತ್ರಿ ಇವರುಗಳ ಮಾರ್ಗದರ್ಶನ, ಸಲಹೆ, ಸೂಚನೆಗಳೊಂದಿಗೆ ಭಗವದ್ಭಕ್ತರ ಅವಿರತ ಸೇವೆ, ತ್ಯಾಗ, ಶ್ರಮ ಹಾಗೂ ಸಹಕಾರಗಳ ಫಲಶ್ರುತಿಯಾಗಿ ಶ್ರೀದೇವಿ, ಜಟಾಧಾರಿ ಹಾಗೂ ಪರಿವಾರ ಸಾನ್ನಿಧ್ಯಗಳ ಪೂರ್ಣಾನುಗ್ರಹದಿಂದ ಶ್ರೀಕ್ಷೇತ್ರದ ಕೆಲಸಕಾರ್ಯಗಳು ಬಹುತೇಕ ಪೂರ್ಣಗೊಂಡಿದೆ.


ಶ್ರೀಕ್ಷೇತ್ರದಲ್ಲಿ ನೂತನವಾಗಿ ಜಟಾಧಾರಿ, ಗಣಪತಿ- ಶಾಸ್ತಾರ ಗುಡಿಗಳು,  ನೈವೇದ್ಯಶಾಲೆ, ಭದ್ರತಾ ಕೊಠಡಿ, ಸುತ್ತುಪೌಳಿಗೆ ತಾಮ್ರದ ಹೊದಿಕೆಯ ಮೇಲ್ಛಾವಣಿ, ವಸಂತ ಕಟ್ಟೆ ಸಹಿತ ನಾಲ್ಕು ಕಟ್ಟೆಗಳು, ಸರ್ವಋತು ಉಪಯೋಗಿ ವಿಶಾಲವಾದ ಹೊರಾಂಗಣ, ಸುಸಜ್ಜಿತವಾದ ರಂಗಮಂದಿರ ಜನರ ಮನಸೆಳೆಯುತ್ತಿದೆ.


ಶ್ರೀಕ್ಷೇತ್ರದ ತಂತ್ರಿವರ್ಯರ ದಿವ್ಯ ನೇತೃತ್ವದಲ್ಲಿ ಕಂಬಾರು ಶ್ರೀದುರ್ಗಾಪರಮೇಶ್ವರೀ ಕ್ಷೇತ್ರದ  ಜಟಾಧಾರಿ, ಗಣಪತಿ - ಶಾಸ್ತಾರ ಸಾನ್ನಿಧ್ಯಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶ ಕಾರ್ಯಕ್ರಮಗಳು ಜ. 28 ರಿಂದ ಆರಂಭಗೊಂಡಿದ್ದು ವಿವಿಧ ವೈದಿಕ, ತಾಂತ್ರಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಫೆ. 4 ರ ವರೆಗೆ ಜರಗಲಿದೆ. ಇದಕ್ಕಾಗಿ ಊರ ಪರವೂರ ಭಗವದ್ಭಕ್ತರನ್ನು ಒಗ್ಗೂಡಿಸಿ ಬ್ರಹ್ಮಕಲಶೋತ್ಸವ ಸಮಿತಿ, ಜೀರ್ಣೋದ್ಧಾರ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಆಡಳಿತ ಮೊಕ್ತೇಸರರು, ಅನುವಂಶಿಕ ಮೊಕ್ತೇಸರರು, ದೇವಸ್ಥಾನದ ಪ್ರಧಾನ ಅರ್ಚಕರು, ಸಿಬ್ಬಂದಿ ವರ್ಗ ಹಾಗೂ ಕುಡಾಲು ಬಾಡೂರು ಗ್ರಾಮಗಳ ಹತ್ತು ಸಮಸ್ತರು ಕಾರ್ಯೋನ್ಮುಖರಾಗಿದ್ದಾರೆ.


ಜ. 31 ಶುಕ್ರವಾರ ಬೆಳಗ್ಗೆ 6-58 ರಿಂದ 7-47 ರೊಳಗಿನ ಮಕರ ಲಗ್ನದಲ್ಲಿ ಜಟಾಧಾರಿ ಹಾಗೂ ಪರಿವಾರ ಸಾನ್ನಿಧ್ಯಗಳ ಪುನಃ ಪ್ರತಿಷ್ಠೆ ನಡೆದಿದೆ.


ಫೆ. 2 ಆದಿತ್ಯವಾರ ಮಧ್ಯಾಹ್ನ 12-51 ರ ವೃಷಭ ಲಗ್ನದಲ್ಲಿ ಬ್ರಹ್ಮಕುಂಭಾಭಿಷೇಕ ನಡೆಯಲಿದೆ.


ಜನವರಿ 28 ರಿಂದ ಆರಂಭವಾದ ಬ್ರಹ್ಮಕುಂಭಾಭಿಷೇಕದ ಧಾರ್ಮಿಕ, ತಾಂತ್ರಿಕ ಕಾರ್ಯಕ್ರಮಗಳ ಜೊತೆಗೆ ವೈವಿಧ್ಯಮಯ  ಸಾಂಸ್ಕೃತಿಕ ಕಾರ್ಯಕ್ರಮಗಳೂ ಜನರ ಮನವನ್ನು ರಂಜಿಸುತ್ತಿದೆ. ವಾಗ್ದೇವಿ ಸಂಕೀರ್ತನಾ ಮಂಟಪದಲ್ಲಿ ವಿವಿಧ ಭಜನಾ ತಂಡಗಳಿಂದ ದಿನವಿಡೀ ಭಜನಾ ಕಾರ್ಯಕ್ರಮ ನಡೆಯುತ್ತಿದೆ.


ಮತೀಯ ಸಾಮರಸ್ಯದ ಬಾಂಧವ್ಯ

ಪೆರ್ಮುದೆಯ ಸಂತ ಲಾರೆನ್ಸ್ ಇಗರ್ಜಿಯ  ಕ್ರಿಶ್ಚಿಯನ್ ಬಾಂಧವರು ಹಾಗೂ ಬದ್ರಿಯಾ ಜುಮಾ ಮಸೀದಿಯ ಮುಸ್ಲಿಂ ಬಾಂಧವರು ಸಹಾ ಶ್ರೀದೇವಿಯ ಸನ್ನಿಧಿಗೆ ಹೊರೆಕಾಣಿಕೆ ತಂದೊಪ್ಪಿಸಿರುವುದು ಈ ಪ್ರದೇಶದ ಮತೀಯ ಸಾಮರಸ್ಯದ ಬಾಂಧವ್ಯವನ್ನು ಸೂಚಿಸುತ್ತಿದೆ.


ಉದರ ತಣಿಸುವ ಪುಷ್ಕಳ ಭೋಜನ

ದಿನದ ಮೂರೂ ಹೊತ್ತುಗಳಲ್ಲಿ ಭಕ್ತವೃಂದದವರ ಹಸಿದ ಉದರವನ್ನು ತಂಪಾಗಿಸಲು ಗೋಪಾಲಕೃಷ್ಣ ಭಟ್ ನೆಕ್ಕರೆಕಾಡು ಹಾಗೂ ತಂಡದವರ ನಿರಂತರ ಶ್ರಮವಿದೆ. 


ಸ್ವಯಂ ಸೇವಕರ ಶ್ರಮ

ಯಾವುದೇ ಕಾರ್ಯಗಳನ್ನು ಮಾಡಲು ಸದಾ ಸಿದ್ಧವಿರುವ ಸ್ವಯಂ ಸೇವಕರ ತಂಡ ಎಲ್ಲರ ಮೆಚ್ಚುಗೆ ಗಳಿಸಿದೆ. ಎರಡೂ ಗ್ರಾಮಗಳ ಪ್ರತೀ ಮನೆಯವರು ಮಾತ್ರವಲ್ಲದೆ, ಪರವೂರಿನವರು ಶ್ರೀದೇವಿಯ ಕೈಂಕರ್ಯದಲ್ಲಿ‌ ಸ್ವಯಂಸೇವಕಾಗಿ ಕೈ ಜೋಡಿಸುತ್ತಿರುವುದು ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಗುತ್ತಿದೆ.



- ಪ್ರಸನ್ನಾ ವಿ. ಚೆಕ್ಕೆಮನೆ

ಧರ್ಮತ್ತಡ್ಕ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top