ಕಂಬಾರು ಶ್ರೀದುರ್ಗಾಪರಮೇಶ್ವರೀ ಕ್ಷೇತ್ರವವು ಪುನರ್ನವೀಕರಣ, ಅಷ್ಟಬಂಧ ಬ್ರಹ್ಮಕುಂಭಾಭಿಷೇಕದ ಸಂಭ್ರಮದಲ್ಲಿದ್ದು ಕಂಬಾರಮ್ಮನ ಭಕ್ತರು ಪುಣ್ಯ ಕ್ಷಣಗಳಲ್ಲಿ ಭಾಗಿಯಾಗಿ ಪುನೀತ ಭಾವ ತಳೆಯುತ್ತಿದ್ದಾರೆ.
ಕೇವಲ ಏಳು ತಿಂಗಳ ಪುಟ್ಟ ಅವಧಿಯಲ್ಲೇ ಜಟಾಧಾರಿ ಹಾಗೂ ಪರಿವಾರ ಸಾನ್ನಿಧ್ಯಗಳ ಪುನಃ ಪ್ರತಿಷ್ಠೆ ನೆರವೇರಿರುವುದು ಕಂಬಾರಮ್ಮನ ಭಕ್ತಾದಿಗಳ ಮನದಲ್ಲಿ ಮತ್ತಷ್ಟು ಶ್ರದ್ದಾಭಕ್ತಿ ಮೂಡಿಸಿದೆ.
ಕಂಬಾರು ದೇವಾಲಯದ ಆರಾಧನಾ ಮೂರ್ತಿ ದುರ್ಗಾಂಬೆಯಾದರೂ ಕ್ಷೇತ್ರಪಾಲಕನಾಗಿ ಮೆರೆಯುವ ಶಿವಾಂಶ ಸಂಭೂತ ಜಟಾಧಾರಿಗೂ ಸಮಾನ ಪ್ರಾಧಾನ್ಯತೆಯಿರುವ ಕಾರಣ, ಶ್ರೀದೇವಿಯ ವಿಶೇಷ ಅನುಗ್ರಹದಿಂದಲೇ ಬಹಳ ಕಿರು ಅವಧಿಯಲ್ಲಿ ಸಾವಿರಾರು ಸದ್ಭಕ್ತರ ಶ್ರದ್ಧಾಭಕ್ತಿಯ ಶ್ರಮದಾನ ಸೇವೆಯಿಂದ ಜಟಾಧಾರಿ ಹಾಗೂ ಗಣಪತಿ, ಪರಿವಾರ ಸಾನ್ನಿಧ್ಯಗಳ ಪುನಃ ಪ್ರತಿಷ್ಠೆ ಕಾರ್ಯಕ್ರಮ ವೈಭವೋಪೇತವಾಗಿ ಈ ದಿನ ನೆರವೇರಿದೆ ಎಂಬುದು ಭಕ್ತವೃಂದದ ಮನದಾಳದ ಮಾತುಗಳು.
ಗಣಪತಿ ಹೋಮ, ಅಂಕುರ ಪೂಜೆಯ ನಂತರ ಕ್ಷೇತ್ರಾಚಾರ್ಯರಾಗಿರುವ ಬ್ರಹ್ಮಶ್ರೀ ನೀಲೇಶ್ವರ ಕೀಕಾಂಗೋಡು ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಬೆಳಗ್ಗೆ 6.58 ರಿಂದ 7.47ರ ಒಳಗಿನ ಮಕರ ಲಗ್ನ ಶುಭಮುಹೂರ್ತದಲ್ಲಿ ಪುನಃ ಪ್ರತಿಷ್ಠಾ ಕಾರ್ಯಕ್ರಮಗಳನ್ನು ವಿವಿಧ ಧಾರ್ಮಿಕ ಕ್ರಿಯೆಗಳೊಂದಿಗೆ ನೆರವೇರಿಸಿದರು.
"ಪಾರ್ಥಂಪಾಡಿ ದೈವವು ಜಟಾಧಾರಿ ಎಂಬ ನಾಮಧೇಯದಿಂದ ಕಂಬಾರಮ್ಮನ ಕೃಪಾಶೀರ್ವಾದಿಂದ ಕ್ಷೇತ್ರಪಾಲಕನಾಗಿ ನೆಲೆಗೊಂಡಿರುವಾಗ ಪುನಃ ಪ್ರತಿಷ್ಠೆಯ ಈ ಪಾವನ ಕ್ಷಣಗಳಿಗೆ ಸಾಕ್ಷಿಯಾಗುವ ಅವಕಾಶ ದೊರಕಿದ್ದು ಪೂರ್ವ ಜನ್ಮದ ಸುಕೃತ. ಪಾರ್ಥಂಪಾಡಿಯಿಂದ ಇಲ್ಲಿಗೆ ಬಂದು ಈ ಅಪೂರ್ವ ಕ್ಷಣದಲ್ಲಿ ಭಾಗವಹಿಸುವಂತಹ ಪುಣ್ಯ ಅವಕಾಶ ಶ್ರೀದೇವಿಯ ಕಾರುಣ್ಯದಿಂದ ಲಭಿಸಿದೆ" ಎಂಬುದು ವಿಟ್ಲ ದೇವಸ್ಥಾನದ ಪರಿಚಾರಕರಾದ ಪಾರ್ಥಂಪಾಡಿಯ ನಾರಾಯಣ ನಾವಡ ಅವರ ಧನ್ಯತೆಯ ನುಡಿಗಳು.
"ಬಹುದಿನಗಳ ಕನಸು ನನಸಾಗಿದೆ. ಜಟಾಧಾರಿ ಮತ್ತು ಪರಿವಾರ ಸಾನ್ನಿಧ್ಯಗಳನ್ನು ನೂತನ ಗುಡಿಯಲ್ಲಿ ಪ್ರತಿಷ್ಠೆ ಮಾಡಿದ ಅಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾದಾಗ ಹೃದಯ ತುಂಬಿ ಬಂತು. ಜಗಜ್ಜನನಿಯ ಆಶಯ ಇದು. ಅವಳ ಇಚ್ಛೆ. ಅಸಾಧ್ಯವೆಂದು ಭಾವಿಸಿದ ಕಾರ್ಯಗಳು ಹೂವೆತ್ತಿದಷ್ಟು ಸುಗಮವಾಗಿ ಕೈಗೂಡಿರುವುದು ಅನುಗ್ರಹದಿಂದ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಮಾತ್ರವಲ್ಲ ಕುಡಾಲು- ಬಾಡೂರು ಎರಡೂ ಗ್ರಾಮವಾಸಿಗಳ ಶ್ರದ್ಧೆ, ಪರಿಶ್ರಮ, ತ್ಯಾಗ, ಶ್ರಮದಾನದ ಸಂಕೇತ ಇದು. ಅವರೆಲ್ಲರ ಒಳ್ಳೆಯ ಮನಸ್ಸಿಗೆ ಸದಾ ಋಣಿಯಾಗಿದ್ದೇನೆ. ಅವರ ತ್ಯಾಗ, ಸೇವಾಮನೋಭಾವಗಳ ಬಗ್ಗೆ ಮಾತುಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅಹರ್ನಿಶಿ ಅಮ್ಮನ ಸೇವೆಯಲ್ಲಿ ಭಾಗಿಯಾದ ಎಲ್ಲರಿಗೂ ಕಂಬಾರಮ್ಮನ, ಜಟಾಧಾರಿ ಹಾಗೂ ಪರಿವಾರ ದೇವರುಗಳ ಅನುಗ್ರಹ ಸದಾ ಇರಲಿ. ಆಡಳಿತ ಮೊಕ್ತೇಸರರಾಗಿ ಅಮ್ಮನ ಸೇವೆ ಮಾಡುವ ಅವಕಾಶ ಒದಗಿಸಿರುವ ಶ್ರೀದೇವಿಯ ಚರಣಗಳಿಗೆ ಸದಾ ಶರಣು" ಎಂಬುದು ಆಡಳಿತ ಮೊಕ್ತೇಸರರಾದ ಬಾಡೂರು ಯಜಮಾನ ಕುಞ್ಞಣ್ಣ ಭಂಡಾರಿಯವರ ಹೃದಯಾಂತರಾಳದ ನುಡಿಗಳು.
"ತುಂಬಾ ಸಂತೋಷದ ಭಾವ ಮೂಡಿದೆ. ಅದ್ಭುತ ಅನುಭವ. ಅಮ್ಮನ ಕೃಪೆಯಿಂದ ಎಲ್ಲಾ ಕಾರ್ಯಗಳು ಕ್ಷಿಪ್ರವಾಗಿ ಕೈಗೂಡಿರುವ ಬಗ್ಗೆ ಹೆಮ್ಮೆ ಹಾಗೂ ಸಾರ್ಥಕ ಭಾವನೆಯಿದೆ" ಎಂಬುದು ಅನುವಂಶಿಕ ಮೊಕ್ತೇಸರರಾದ ಕುಡಾಲುಗುತ್ತು ದಿವಾಕರ ಶೆಟ್ಟಿಯವರ ಅಂತರಂಗದ ಮಾತು.
"ಕಿರು ಅವಧಿಯಲ್ಲೇ ಶ್ರೀಕ್ಷೇತ್ರ ನವೀಕರಣಗೊಂಡು ಕ್ಷೇತ್ರಪಾಲಕನಾದ ಜಟಾಧಾರಿ ಹಾಗೂ ಪರಿವಾರ ದೇವರುಗಳು ಬಾಲಾಲಯದಿಂದ ನೂತನ ಗುಡಿಗಳಿಗೆ ಮರಳಿರುವುದು ಸಾರ್ಥಕ ಭಾವ ಮೂಡಿಸಿದೆ. ಇದರ ಹಿಂದೆ ಇರುವುದು ಕಂಬಾರಮ್ಮನ ಭಕ್ತರ ಶ್ರದ್ಧೆ, ನಿಷ್ಠೆಗಳ ಶ್ರಮದಾನ ಸೇವೆ. ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಎಲ್ಲವೂ ಶ್ರೀದುರ್ಗಾಂಬೆಯ ಕೃಪೆ" ಬ್ರಹ್ಮಕಲಶ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಕೋಳಾರು ಸತೀಶ್ ಚಂದ್ರ ಭಂಡಾರಿಯವರ ಮನದ ಮಾತುಗಳು ಇವು.
"ಸಂತೋಷ, ಧನ್ಯತೆ ಮಾತುಗಳನ್ನು ಮೌನವಾಗಿಸಿದೆ. ದುರ್ಗಾಮಾತೆಯ ಅನುಗ್ರಹ" ಆಡಳಿತ ಮೊಕ್ತೇಸರರಾದ ರವಿಶಂಕರ ಭಟ್ ಎಡಕ್ಕಾನ ಅವರ ಭಾವುಕ ನುಡಿಗಳು
"ಉದ್ಧೇಶಿತ ಮುಹೂರ್ತಕ್ಕೆ ಪ್ರತಿಷ್ಠಾಕಾರ್ಯ ನೆರವೇರಿರುವುದು ಧನ್ಯತೆ ಮೂಡಿಸಿದೆ" ಎಂದವರು ಅನುವಂಶಿಕ ಮೊಕ್ತೇಸರರಾದ ನೆರಿಯ ಹೆಗಡೆ ಲಕ್ಷ್ಮೀನಾರಾಯಣ ಭಟ್
"ಬಹುದಿನಗಳ ಕನಸು ನನಸಾಗಿದೆ. ಮನದಲ್ಲಿ ಸಾರ್ಥಕ ಭಾವ ಮೂಡಿದೆ. ಕಂಬಾರಮ್ಮನ ದೇವಾಲಯದ ಪುನರ್ನವೀಕರಣ ಕಾರ್ಯಗಳು ಇಷ್ಟು ಶೀಘ್ರವಾಗಿ ಕೈಗೂಡಲು ಅಮ್ಮನ ಅನುಗ್ರಹ, ಭಕ್ತರ ಶ್ರದ್ಧಾಭಾವನೆಯೇ ಕಾರಣ" ಎಂಬ ಮಾತುಗಳು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಇ.ಎಸ್. ಮಹಾಬಲೇಶ್ವರ ಭಟ್ ಅವರದ್ದು.
ದಿನಾಂಕ 02 - 02 - 2025 ಭಾನುವಾರ ಮಧ್ಯಾಹ್ನ ಗಂಟೆ 12. 51 ರ ವೃಷಭ ಲಗ್ನದಲ್ಲಿ ಬ್ರಹ್ಮಕುಂಭಾಭಿಷೇಕ ನಡೆಯಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ