ತುಳುನಾಡು-ನುಡಿ-ಸಂಸ್ಕೃತಿ: ರಾಷ್ಟ್ರೀಯ ವಿಚಾರಸಂಕಿರಣ
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ವಿಚಾರಸಂಕಿರಣವನ್ನು ಉದ್ಘಾಟಿಸಿದರು.
ಉಜಿರೆ: ತುಳುನಾಡಿನಲ್ಲಿ ವೈವಿಧ್ಯಮಯ ಜಾತಿ-ಮತ, ಸಂಪ್ರದಾಯದವರಿದ್ದರೂ ಎಲ್ಲರೂ ಪರಸ್ಪರ ಪ್ರೀತಿ-ವಿಶ್ವಾಸದೊಂದಿಗೆ, ಸುಖ-ಶಾಂತಿ, ನೆಮ್ಮದಿಯಿಂದ ಸೌಹಾರ್ದಯುತ ಜೀವನ ನಡೆಸುತ್ತಿದ್ದಾರೆ. ತುಳುನಾಡಿನ ವಿಶಿಷ್ಠ ಆಚಾರ-ವಿಚಾರಗಳು, ನಂಬಿಕೆ-ನಡವಳಿಕೆಗಳು ಹಾಗೂ ವೈವಿಧ್ಯಮಯ ಜಾನಪದ ಕಲೆಗಳನ್ನು ಉಳಿಸಿ, ಬೆಳೆಸಬೇಕು ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಹೇಳಿದರು.
ಅವರು ಮಂಗಳವಾರ ಉಜಿರೆಯಲ್ಲಿ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನಲ್ಲಿ ಮಂಗಳೂರು ವಿ.ವಿ.ಯ ಎಸ್.ಡಿ.ಎಂ. ತುಳುಪೀಠ, ತುಳುಸ್ನಾತಕೋತ್ತರ ಅಧ್ಯಯನ ವಿಭಾಗ, ವಿ.ವಿ. ಸಂಧ್ಯಾ ಕಾಲೇಜು, ಹಾ.ಮಾ.ನಾ. ಸಂಶೋಧನ ಕೇಂದ್ರ, ಕನ್ನಡ ವಿಭಾಗ ಮತ್ತು ತುಳುಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ “ತುಳುನಾಡು - ನುಡಿ-ಸಂಸ್ಕೃತಿ: ಉಳಿಸಿ, ಬೆಳೆಸುವ ಮಾರ್ಗೋಪಾಯಗಳು” ಎಂಬ ರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ವಿಶೇಷವಾಗಿ ಕೃಷಿ ಸಂಸ್ಕೃತಿಯನ್ನು ಮೂಲವಾಗಿ ಹೊಂದಿರುವ ತುಳುನಾಡಿನಲ್ಲಿ ಪ್ರಕೃತಿ-ಪರಿಸರ ಸಂರಕ್ಷಣೆಯೊಂದಿಗೆ ದೇವರ ಆರಾಧನೆ, ದೈವಾರಾಧನೆ, ನಾಗಾರಾಧನೆ, ಯಕ್ಷಗಾನ, ಕಂಬಳ, ಕೋಳಿಅಂಕ ಮೊದಲಾದ ಜಾನಪದ ಕ್ರೀಡೆಗಳು, ದೀಪಾವಳಿ, ಕೆಡ್ಡಸ, ಮೊದಲಾದ ಹಬ್ಬಹರಿದಿನಗಳ ಆಚರಣೆಗಳು ವಿಶಿಷ್ಟವಾಗಿವೆ. ಪ್ರಗತಿ ಹಾಗೂ ಪರಿವರ್ತನೆಯ ನೆಪದಲ್ಲಿ ಇವುಗಳ ಮೂಲ ಸತ್ವ ಮತ್ತು ತತ್ವಗಳನ್ನು ಕಡೆಗಣಿಸಬಾರದು ಎಂದು ಅವರು ಸಲಹೆ ನೀಡಿದರು.
ಯುವಜನತೆಗೆ ನಮ್ಮ ಭವ್ಯ ಇತಿಹಾಸ ಮತ್ತು ಪರಂಪರೆ ಬಗ್ಯೆ ಅರಿವು, ಜಾಗೃತಿ ಮೂಡಿಸಲು ಇಂತಹ ವಿಚಾರಸಂಕಿರಣಗಳು ಉಪಯುಕ್ತವಾಗಿವೆ ಎಂದರು.
ಉಜಿರೆಯಲ್ಲಿ ನಡೆದ ವಿಶ್ವ ತುಳುಸಮ್ಮೇಳನದ ವೀಡಿಯೊ ಪ್ರದರ್ಶನ ನಡೆಯಿತು.
ಮಂಗಳೂರು ವಿ.ವಿ.ಯ ಎಸ್.ಡಿ.ಎಂ. ತುಳುಪೀಠದ ಸಂಯೋಜಕ ಡಾ. ಮಾಧವ, ಎಂ.ಕೆ. ಪ್ರಾಸ್ತಾವಿಕ ಮಾತುಗಳೊಂದಿಗೆ ತುಳುಪೀಠದ ಚಟುವಟಿಕೆಗಳ ಮಾಹಿತಿ ನೀಡಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ದಿಕ್ಸೂಚಿ ಭಾಷಣ ಮಾಡಿ ತುಳುನಾಡಿನ ಭವ್ಯ ಸಂಸ್ಕೃತಿ ಮತ್ತು ಹಿನ್ನೆಲೆಯ ಬಗ್ಯೆ ವಿವರ ನೀಡಿದರು.
ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಪ್ರೊ. ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿದರು.
ತುಳುಪೀಠದ ಸಲಹಾ ಸಮಿತಿ ಸದಸ್ಯರುಗಳಾದ ಉಜಿರೆಯ ಪ್ರವೀಣ್ ಕುಮಾರ್ ಇಂದ್ರ ಮತ್ತು ರಾಜಶ್ರೀ ಎಸ್. ಹೆಗ್ಡೆ ಶುಭಾಶಂಸನೆ ಮಾಡಿದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಬೋಜಮ್ಮ ಉಪಸ್ಥಿತರಿದ್ದರು. ಎಸ್.ಡಿ.ಎಂ. ಕಾಲೇಜಿನ ತುಳು ಸಂಘದ ಅಧ್ಯಕ್ಷ ಡಾ. ಸನ್ಮತಿ ಕುಮಾರ್ ಸ್ವಾಗತಿಸಿದರು. ಮಂಗಳೂರು ವಿ.ವಿ. ತುಳು ಉಪನ್ಯಾಸಕಿ ಮಣಿ ಎಂ. ರೈ ಧನ್ಯವಾದವಿತ್ತರು.
ಉಪನ್ಯಾಸಕರಾದ ಭವ್ಯಶ್ರೀ ಬಲ್ಲಾಳ್ ಮತ್ತು ದಿವಕೊಕ್ಕಡ ಕಾರ್ಯಕ್ರಮ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ