ಉಡುಪಿ: ಪೋಕ್ಸೋ ಕಾಯಿದೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದಾಗ ಅಪ್ರಾಪ್ತ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೀಶ್ ಪಿ.ಆರ್, ಹೇಳಿದರು.
ಅವರು ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಕ್ಷಮ ಪ್ರಾಧಿಕಾರ ಪಿಸಿ & ಪಿ.ಎನ್.ಡಿ.ಟಿ ಹಾಗೂ ತಾಯಿ ಆರೋಗ್ಯ ಕಾರ್ಯಕ್ರಮ ಉಡುಪಿ ಮತ್ತು ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಮಣಿಪಾಲ ಮಾಹೆ ಇವರ ಸಹಯೋಗದಲ್ಲಿ ಜಿಲ್ಲೆಯ ಸರಕಾರಿ ವೈದ್ಯಾಧಿಕಾರಿಗಳು ಮತ್ತು ಶುಶ್ರೂಷಾಧಿಕಾರಿಗಳಿಗೆ ಪೋಕ್ಸೋ ಕಾಯಿದೆ ಕುರಿತು ನಡೆದ ಕಾರ್ಯಾಗಾರವನ್ನು ದೀಪ ಬೆಳಗಿಸಿ, ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಹದಿನೆಂಟು ವರ್ಷದೊಳಗಿನ ಯಾವುದೇ ಮಕ್ಕಳನ್ನು ಅಪ್ರಾಪ್ತ ವಯಸ್ಸಿನವರೆಂದು ಪರಿಗಣಿಸಲಾಗುತ್ತದೆ. ಇಂಥ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದು ಅಕ್ಷಮ್ಯ ಅಪರಾಧವಾಗುತ್ತದೆ. ಪೋಕ್ಸೋ ಕಾಯ್ದೆಯಡಿ ಯಾವುದೇ ವ್ಯಕ್ತಿ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ಸಾಬೀತಾದಲ್ಲಿ ಅಂತಹವರ ಮೇಲೆ 20 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು ಎಂದರು.
ದೇಶದ ಪ್ರತಿಯೊಬ್ಬರೂ ಈ ನೆಲದ ಕಾನೂನನ್ನು ಗೌರವಿಸಬೇಕು. ನಾವು ಕಾನೂನು ರಕ್ಷಣೆ ಮಾಡಿದರೆ ಕಾನೂನು ನಮ್ಮನ್ನು ರಕ್ಷಣೆ ಮಾಡುತ್ತದೆ. ಕಾನೂನಿನ ಬಗ್ಗೆ ಅರಿವು ಹೊಂದಿಲ್ಲದೇ ಇದ್ದಾಗ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಛಾಗುವ ಸಾಧ್ಯತೆ ಇದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ (ಪ್ರಭಾರ) ಡಾ. ನಾಗರತ್ನ ಶಾಸ್ತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೋಕ್ಸೋ ಕಾಯಿದೆ ಕುರಿತು ಮಾಹಿತಿ ಹೊಂದಿ, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದಾಗ ಮಾತ್ರ ದೌಜ್ಯನ್ಯಕ್ಕೆ ಒಳಗಾದ ಅಪ್ರಾಪ್ತರಿಗೆ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ ಎಂದರು.
ಕೆ.ಎಂ.ಸಿ ಮಣಿಪಾಲದ ಪ್ರಸೂತಿ ತಜ್ಞೆ ಡಾ. ರಾಜೇಶ್ವರಿ, ಕೆ.ಎಂ.ಸಿ ಮಣಿಪಾಲದ ಫೋರೆನ್ಸಿಕ್ ತಜ್ಞೆ ಡಾ. ಅಪರ್ಣ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ, ಪಿ.ಸಿ.ಪಿ.ಎನ್.ಡಿ.ಟಿ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಡಾ. ಪ್ರತಾಪ್ ಕುಮಾರ್, ಬಿ.ಕೆ, ಕೆ.ಎಂ.ಸಿ. ಮಣಿಪಾಲದ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ತ ಅಶ್ವಿನ್ ಕುಮಾರ್, ಜಿಲ್ಲೆಯ ವೈದ್ಯಾಧಿಕಾರಿಗಳು, ಶುಶ್ರೂಷಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಜ್ಯೋತ್ಸ್ನಾ ಸ್ವಾಗತಿಸಿದರೆ, ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ನಿರೂಪಿಸಿದರೆ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮರಾವ್ ಕೆ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ