ಅಂಬಿಕಾದಲ್ಲಿ ಮಾಜಿ ಬಿ.ಎಸ್.ಎಫ್. ಯೋಧರೊಂದಿಗೆ ಗಣರಾಜ್ಯೋತ್ಸವ

Upayuktha
0

ಯುವಸಮುದಾಯ ಸೈನ್ಯಕ್ಕೆ ಸೇರುವ ಕನಸು ಕಾಣಬೇಕು : ಚಂದಪ್ಪ ಮೂಲ್ಯ


ಪುತ್ತೂರು:
ಭಾರತೀಯ ಸೇನಾ ವ್ಯವಸ್ಥೆ ಈ ಹಿಂದಿಗಿಂತ ಈಗ ಎಷ್ಟೋ ಆಧುನಿಕತೆಗೆ ಒಡ್ಡಿಕೊಂಡಿದೆ. ಸೈನಿಕರ ವೇತನ, ಸೌಲಭ್ಯಗಳು ಸಾಕಷ್ಟು ಉನ್ನತವಾಗಿವೆ. ಹಾಗಾಗಿ ಯುವಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಪ್ರವೇಶ ಪಡೆಯುವ ಪ್ರಯತ್ನ ನಡೆಸಬೇಕು. ತನ್ಮೂಲಕ ದೇಶಸೇವೆಯ ಅವಕಾಶವನ್ನು ಪಡೆದುಕೊಳ್ಳಬೇಕು ಎಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ವಿಶ್ರಾಂತ ಬಿ.ಎಸ್.ಎಫ್. ಸೈನಿಕರ ಕಲ್ಯಾಣ ಸಮಿತಿಯ ಗೌರವಾಧ್ಯಕ್ಷ ಹಾಗೂ ಭಾರತೀಯ ಗಡಿಭದ್ರತಾ ಪಡೆಯ ವಿಶ್ರಾಂತ ಡೆಪ್ಯುಟಿ ಕಮಾಂಡೆಂಟ್ ಡಿ.ಚಂದಪ್ಪ ಮೂಲ್ಯ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ವಿಶ್ರಾಂತ ಬಿ.ಎಸ್.ಎಫ್. ಯೋಧರ ಜತೆಗೆ ಆಯೋಜಿಸಲಾದ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾನುವಾರ ಮಾತನಾಡಿದರು.


ಈಗ ನಾವು ಕೃತಕ ಬುದ್ಧಿಮತ್ತೆಯ ಕಾಲದಲ್ಲಿದ್ದೇವೆ. ಸೇನೆಯಲ್ಲಿಯೂ ಸಹಜವಾಗಿಯೇ ಕೃತಕ ಬುದ್ಧಿಮತ್ತೆಯ ಬಳಕೆ ಧಾರಾಳವಾಗಿ ನಡೆಯುತ್ತಿದೆ. ಹಾಗಾಗಿ ಮುಖಾಮುಖಿ ಯುದ್ಧದ ಕಲ್ಪನೆ ಹಿಂದೆ ಸರಿಯುತ್ತಿದೆ. ಇದ್ದ ಜಾಗದಿಂದಲೇ ನಿಗದಿತ ಪ್ರದೇಶಕ್ಕೆ ಗುರಿಯಿಡುವ, ನಿರ್ದಿಷ್ಟ ವಲಯವನ್ನು ಛಿದ್ರಗೊಳಿಸುವ ವ್ಯವಸ್ಥೆಗಳು ಜಾರಿಗೊಳ್ಳುತ್ತಿವೆ. ಹಾಗಾಗಿ ಸೇನೆಗೆ ಸೇರ್ಪಡೆಗೊಳ್ಳುವ ಹಾಗೂ ಯುದ್ಧದಲ್ಲಿ ಭಾಗಿಯಾಗುವ ಬಗೆಗಿನ ಆತಂಕಗಳನ್ನು ಯುವಸಮಾಜ ಇಟ್ಟುಕೊಳ್ಳಬೇಕಿಲ್ಲ ಎಂದು ನುಡಿದರು.


ಉಪಸ್ಥಿತರಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ವಿಶ್ರಾಂತ ಬಿ.ಎಸ್.ಎಫ್. ಸೈನಿಕರ ಕಲ್ಯಾಣ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿದೀಪ್ ಕುಮಾರ್ ಮಾತನಾಡಿ ಬಿಎಸ್‌ಎಫ್ ಯೋಧರೆಂದರೆ ಯುದ್ಧದ ಹೊರತಾದ ಸಮಯದಲ್ಲಷ್ಟೇ ಗಡಿ ರಕ್ಷಿಸುವವರು ಎಂಬ ತಪ್ಪು ಕಲ್ಪನೆಗಳಿವೆ. ಬಿಎಸ್‌ಎಫ್‌ನವರು ಯುದ್ಧದ ಸಂದರ್ಭದಲ್ಲೂ ಮಿಲಿಟರಿ ಪಡೆಯೊಂದಿಗೆ ಹೋರಾಡುತ್ತಾರೆ. ಕೆಲವು ಸಂದರ್ಭಗಳಲ್ಲಿ ಮಿಲಿಟರಿ ಪಡೆಗಳ ಹೊರತಾಗಿ ಏಕಾಂಗಿಯಾಗಿಯೂ ಕಾದಾಟ ನಡೆಸುತ್ತಾರೆ ಎಂದು ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ಸ್ವಾರ್ಥಲಾಲಸೆಯಿಂದ, ವೈಯಕ್ತಿಕ ಅಭೀಷ್ಟೆಗಳಿಂದ ಬದುಕುತ್ತಿರುವ ಈ ಸಮಾಜದಲ್ಲಿ ನಿಜವಾದ ಸಮರ್ಪಣಾಭಾವದಿಂದ ಕಾರ್ಯನಿರ್ವಹಿಸುತ್ತಿರುವವರು ನಮ್ಮ ಹೆಮ್ಮೆಯ ಯೋಧರು. ಅಂತಹ ಸೈನಿಕರನ್ನು ಗೌರವಿಸಬೇಕಾದದ್ದು ಈ ದೇಶದ ಪ್ರತಿಯೊಬ್ಬರ ಕರ್ತವ್ಯವಾಗಿದೆ. 


ದೇಶದೆಡೆಗೆ ಪ್ರತಿಯೊಬ್ಬರಿಗೂ ಋಣಗಳಿವೆ. ರಾಷ್ಟ್ರೀಯ ಹಬ್ಬಗಳಲ್ಲಿ ಭಾಗಿಯಾಗುವ ಮೂಲಕ, ಸೈನಿಕರನ್ನು ಗೌರವಿಸುವ ಮೂಲಕ ನಮ್ಮ ಋಣವನ್ನು ತೀರಿಸುವ ಪ್ರಯತ್ನ ಮಾಡಬೇಕು. ಬದುಕಿನಲ್ಲಿ ಒಮ್ಮೆಯಾದರೂ ದೇಶದ ಗಡಿಗೆ ಭೇಟಿಕೊಟ್ಟು ಸೈನಿಕರ ಶ್ರಮಗಳನ್ನು ಕಣ್ಣಾರೆ ಕಾಣಬೇಕು ಎಂದು ಕರೆನೀಡಿದರು. ವಿಶ್ರಾಂತ ಡೆಪ್ಯುಟಿ ಕಮಾಂಡೆಂಟ್ ಡಿ.ಚಂದಪ್ಪ ಮೂಲ್ಯ ಅವರನ್ನು ಸನ್ಮಾನಿಸಲಾಯಿತು. 


ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಬಿಎಸ್‌ಎಫ್ ಯೋಧರಾದ ವಿದೀಪ್ ಕುಮಾರ್ ಕೆ., ಎನ್.ಎಂ.ಮಹೇಶ, ಜೋಸೆಫ್ ಪಿ.ಚೆರಿಯನ್, ಎ.ಸುರೇಶ್ ನಾಯ್ಕ್, ಬಾಲಕೃಷ್ಣ ಎನ್.ಬಿ., ಸುಂದರ ಗೌಡ, ಜೆ.ವಾಸಪ್ಪ ನಾಯ್ಕ್, ಕಿರಣ್ ರೈ ಬಿ., ಬಾಲಕೃಷ್ಣ ಬಸ್ತಿ, ಡಿ.ಮಾಧವ ಗೌಡ, ವೀರಪ್ಪ ಪೂಜಾರಿ, ಪಿ.ರಾಮ ಪೂಜಾರಿ, ದಾಮೋದರ ಪಿ., ಎಸ್.ಜಗನ್ನಾಥ ನಾಯ್ಕ್, ಬಿ.ಪಿ.ಜಯಕುಮಾರ ರೈ, ರಾಜೇಶ್ ಜೆ., ಸಿ.ಡಿ.ದಿನೇಶ್, ಪುರುಷೋತ್ತಮ ನಾಯ್ಕ್, ಜಿ.ಕೆ.ಬಾಲಕೃಷ್ಣ, ಮಾಧವ ನಾಯ್ಕ, ಕೆ.ಮಹಾಬಲ, ಕೆ.ತನಿಯಪ್ಪ ನಾಯ್ಕ್, ಟಿ.ಎಂ.ಚೆರಿಯನ್, ಪದ್ಮ ನಾಯ್ಕ, ಬಾಲಕೃಷ್ಣ ಎಂ, ಸುಂದರ ಮೂಲ್ಯ  ಅವರನ್ನು ಅಂಬಿಕಾ ಸಂಸ್ಥೆಗಳ ವಿದ್ಯಾರ್ಥಿಗಳು ಅಭಿನಂದಿಸಿ ಗೌರವಿಸಿದರು.


ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್.ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ, ವಿಶ್ರಾಂತ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್, ಸುರೇಶ ಶೆಟ್ಟಿ, ಡಾ.ಎಂ.ಎಸ್.ಶೆಣೈ, ಬಾಲಕೃಷ್ಣ ಬೋರ್ಕರ್, ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ., ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಬಿ.ಎಸ್.ಎಫ್. ಯೋಧರನ್ನು ಮೆರವಣಿಗೆ ಮೂಲಕ ಧ್ವಜಸ್ಥಂಭದ ಬಳಿಗೆ ಕರೆತರಲಾಯಿತು. ಡಿ.ಚಂದಪ್ಪ ಮೂಲ್ಯ ಅವರು ಧ್ವಜಾರೋಹಣಗೈದರು.


ವಿದ್ಯಾರ್ಥಿನಿಯರಾದ ವೈಷ್ಣವಿ ಸ್ವಾಗತಿಸಿ, ಆದ್ಯತಾ ವಂದಿಸಿದರು. ಶ್ರೀಲಕ್ಷ್ಮಿ ಸುರೇಶ್ ಬಿ.ಎಸ್.ಎಫ್. ಬಗೆಗೆ ಮಾಹಿತಿ ನೀಡಿದರು. ದೀಪ್ತಿ ಅತಿಥಿ ಪರಿಚಯ ನಡೆಸಿಕೊಟ್ಟರೆ ಧೃತಿ ಭಟ್ ಕೆ. ಕಾರ್ಯಕ್ರಮ ನಿರ್ವಹಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top