ಮನ್ಮನೋಭೀಷ್ಟವರದಂ ಸರ್ವಾಭೀಷ್ಟಫಲಪ್ರದಮ್ |
ಪುರಂದರಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಮ್ ||
ಶ್ರೀಪುರಂದರದಾಸರು ಕನ್ನಡನಾಡು ಕಂಡ ಅಪ್ರತಿಮ ಧರ್ಮಪ್ರಸಾರಕರು. ಕನ್ನಡ ಭಾಷೆಗೆ ವಿಶಿಷ್ಟವಾದ ಗೇಯತೆಯನ್ನು ತಂದುಕೊಟ್ಟ ಮಹಾಮಹಿಮರು.
ಪುರಂದರದಾಸರ ಮೂಲಸ್ಥಾನ ಪಂಢರಪುರದ ಬಳಿಯ ಪುರಂದರಗಡ. ಪೂರ್ವಜೀವನದಲ್ಲಿ ಚಿನಿವಾರರಾಗಿದ್ದ ಇವರು ಅಪಾರ ಐಶ್ವರ್ಯವನ್ನು ಗಳಿಸಿದ್ದರು. ನವಕೋಟಿನಾರಾಯಣ ಎಂಬ ಇವರ ಪ್ರಶಸ್ತಿಯಲ್ಲಿ ಅವರ ಅಗಾಧಸಂಪತ್ತಿನ ಹಿರಿಮೆಯನ್ನು ಕಾಣಬಹುದು.
ಪೂರ್ವಜೀವನದಲ್ಲಿ ಜಿಪುಣಾಗ್ರೇಸರರೆಂದು ಸುಪ್ರಸಿದ್ಧರಾಗಿದ್ದ ಇವರು ಅನಂತರ ಸರ್ವಸ್ವ ದಾನಮಾಡಿದ ದಾನಶೂರರೆನ್ನಿಸಿದ್ದು ವಿಶಿಷ್ಟ ದೈವಸಂಕಲ್ಪ.
ನವಕೋಟಿ ಎನ್ನಿಸಿದ ಮಹಾಲಕ್ಷ್ಮಿಯನ್ನು ತೊರೆದು ಅವಳ ಪತಿಯಾದ ನಾರಾಯಣನನ್ನು ಆರಾಧಿಸಿದ್ದು ಇವರ ಅಮೋಘಸಾಧನೆ. ಕೇವಲ ಮಹಾಲಕ್ಷ್ಮಿಯ ಉಪಾಸನೆ ಅನರ್ಥಕರ. ನಾರಾಯಣನ ಉಪಾಸನೆಯೇ ತಾರಕ ಎಂಬ ಭಗವದ್ಗೀತೆಯ ಹನ್ನೆರಡನೆಯ ಅಧ್ಯಾಯದ ನಿರೂಪಣೆಗೆ ಇವರ ಜೀವನ ನಿದರ್ಶನ.
ಪೂರ್ವಜೀವನದಲ್ಲಿ ಚಿನಿವಾರರಾಗಿ ಸುವರ್ಣವ್ಯಾಪಾರಿಗಳಾಗಿದ್ದರೆ ಅನಂತರದಲ್ಲಿ ಮಧ್ವಮತಪ್ರಸಾರಕರಲ್ಲಿ ಶಾಸ್ತ್ರಸುವರ್ಣದ ದಾನಶೂರರೆನ್ನಿಸಿದ್ದು ವಿಶೇಷ. ಅವರ ಇಂತಹ ಪರಿವರ್ತನೆಗೆ ಒಂದು ರೀತಿಯಲ್ಲಿ ಅವರ ಧರ್ಮಪತ್ನಿ ಸರಸ್ವತೀಬಾಯಿಯ ಧರ್ಮಶ್ರದ್ಧೆ ಕಾರಣವಾಯಿತು. ಇದರ ಸ್ಮರಣೆಗೆಂಬಂತೆ `ಹೆಂಡತಿ ಸಂತತಿ ಸಾವಿರವಾಗಲಿ ದಂಡಿಗೆ ಬೆತ್ತ ಹಿಡಿಸಿದಳಯ್ಯ' ಎಂದು ಅವರು ಅನಂತರ ಹಾಡಿದರು. ಪತಿಯು ಸನ್ಮಾರ್ಗ ಹಿಡಿಯಲು ಪತ್ನಿಯು ವಹಿಸಬೇಕಾದ ಎಚ್ಚರಿಕೆಯನ್ನು ಸರಸ್ವತೀಬಾಯಿಯ ಪ್ರಸಂಗ ಸ್ತ್ರೀಕುಲಕ್ಕೆ ನೀಡಿದೆ.
ಶ್ರೀವ್ಯಾಸರಾಜರಂತಹ ವಿದ್ವನ್ಮಣಿಗಳ ಸಂಪರ್ಕ ಇವರನ್ನು ಮಧ್ವಸಿದ್ಧಾಂತದ ವಿಶ್ವರೂಪದರ್ಶನಕ್ಕೆ ಅಣಿಯಾಗಿಸಿತು. `ಮಧ್ವಮತದ ಸಿದ್ಧಾಂತದ ಪದ್ಧತಿ ಬಿಡಬೇಡಿ ಬಿಟ್ಟು ಕೆಡಬೇಡಿ' ಎಂಬ ಇವರ ಸಂದೇಶ ಜಿಙ್ಙಾಸುಗಳ ಪಾಲಿಗೆ ಅಮೃತಧಾರೆ.
ವಿಜಯನಗರವೆನ್ನಿಸಿದ ಹಂಪಿ ಇವರ ಹರಿದಾಸ ಜೀವನದ ಮುಖ್ಯಕಾರ್ಯಕ್ಷೇತ್ರ. ದಶಕಗಳ ಕಾಲದ ಹಂಪಿಯ ಸಂಪರ್ಕ ಇವರನ್ನು ವಿಜಯನಗರದ ಹರಿದಾಸರೆಂದೇ ಗುರುತಿಸುವಂತೆ ಮಾಡಿದೆ.
ಪುರಂದರದಾಸರ ದೇಶಸಂಚಾರದ ವೈಖರಿಯೂ ಅಗಾಧವಾದುದು. ಸಮಗ್ರ ಭರತಖಂಡವನ್ನೇ ಅವರು ಸಂಚರಿಸಿದ್ದುದಕ್ಕೆ ಅವರ ಕೃತಿಗಳಲ್ಲಿಯೇ ಸಾಕ್ಷ್ಯ ದೊರೆಯುತ್ತದೆ. ಅವರ ಸಂಚಾರ ಕೇವಲ ತೀರ್ಥದರ್ಶನವಾಗದೇ ತೀರ್ಥಮಹಿಮೆಯ ಪ್ರಸಾರಕಾರ್ಯವೂ ಆಗಿನಕಾರ್ಯವೆನ್ನಿಸಿತು. ಅಪಾರಸಂಖ್ಯೆಯಲ್ಲಿ ತೀರ್ಥಕ್ಷೇತ್ರಗಳ ಮಹಿಮೆಯನ್ನು ಕುರಿತು ಅವರು ರಚಿಸಿರುವ ಕೃತಿಗಳು ಒಂದರ್ಥದಲ್ಲಿ ಕನ್ನಡ ತೀರ್ಥಪ್ರಬಂಧದಂತೆ ಮಾನ್ಯವಾಗಿವೆ.
ಸಂಗೀತಪ್ರಪಂಚದ ಮಟ್ಟಿಗೆ ಪುರಂದರದಾಸರನ್ನು ಕರ್ನಾಟಕಸಂಗೀತ-ಪಿತಾಮಹ ಎಂದೇ ಪರಂಪರೆ ಗುರುತಿಸಿದೆ. ತ್ಯಾಗರಾಜರಂತಹ ಸಂಗೀತಕ್ಷೇತ್ರದ ರಸ ಋಷಿಗಳು ಪುರಂದರದಾಸರನ್ನು ಮಹಾನುಭಾವರೆಂದು ಕೊಂಡಾ-ಡಿರುವುದು ಅವರ ಸಂಗೀತ ಕ್ಷೇತ್ರದ ಸಾಧನೆಯ ಬಗೆಗಿನ ಉಜ್ವಲ ನಿದರ್ಶನ.
ಸಂಗೀತದ ಸಕಲಸಾಧ್ಯತೆಗಳನ್ನು ತೆರೆದಿಟ್ಟ ಶ್ರೇಯಸ್ಸು ಸಹಪುರಂದರದಾಸರದು. ಕೀರ್ತನೆ ಉಗಾಭೋಗ, ಸುಳಾದಿ, ವೃತ್ತನಾಮ ಮೊದಲಾದ ಮುಖ್ಯಪ್ರಾಕಾರಗಳಿಗೆಲ್ಲ ಪುರಂದರದಾಸರ ಕೊಡುಗೆ ಸಂದಿದೆ. ಆ ಅರ್ಥದಲ್ಲಿಪುರಂದರದಾಸರದು ದಾಸಸಾಹಿತ್ಯದ ಮೇರು ಸಾಧನೆ.
ಸಂಖ್ಯೆಯಲ್ಲೂ ಪುರಂದರದಾಸರ ಕೃತಿಗಳಿಗೆ ಅಗ್ರಸ್ಥಾನ. ಅವರೇ ತಿಳಿಸಿರುವಂತೆ ಹಾಗೂ ಮುಂದೆ ಶ್ರೀವಿಜಯದಾಸರಂತಹ ಶ್ರೇಷ್ಠದಾಸವರೇಣ್ಯರು ತಿಳಿಸಿರುವಂತೆ ಅವರ ಕೃತಿಗಳ ಸಂಖ್ಯೆ ನಾಲ್ಕುಲಕ್ಷದ ಎಪ್ಪತೈದು ಸಾವಿರ. ಕನ್ನಡದ ಮಟ್ಟಿಗೆ ಇದೊಂದು ದಾಖಲೆ. ಕನ್ನಡದ ಬೇರಾವ ಕೃತಿಕಾರರು ಇಷ್ಟು ವ್ಯಾಪಕವಾದ ರಚನೆಯನ್ನು ಮಾಡಿದ ದಾಖಲೆ ಕಂಡುಬರುವುದಿಲ್ಲ. ವೈವಿಧ್ಯದಲ್ಲೂ ಪುರಂದರದಾಸರ ಕೃತಿಗಳಿಗೆ ಅಗ್ರಸ್ಥಾನ ಎಂಬುದು ಪ್ರಸನ್ನವೇಂಕಟದಾಸರ ಕೃತಿಯೊಂದರಿಂದ ತಿಳಿಯುತ್ತದೆ `ಗೀತಾಠಾಯಿ ಸುಳಾದ್ಯುಗಾಭೋಗ ಪದ್ಯಪದವ್ರಾತ ಪ್ರಬಂಧರಚಿಸಿ ವಿಟ್ಠಲನ ಪ್ರೀತಿಪಡಿಸಿ ಪ್ರತ್ಯಕ್ಷ ಕಂಡು ನಲಿವ ವೈಷ್ಣವನಾಥ ಪ್ರಸನ್ನವೇಂಕಟಕೃಷ್ಣ ಪ್ರಿಯನ'.
ಶ್ರೀಕೃಷ್ಣಲೀಲೆಗಳನ್ನು ಕುರಿತ ಪುರಂದರದಾಸರ ಕೃತಿಗಳು ಶ್ರೀಮದ್ಭಾಗವತವನ್ನು ಕನ್ನಡ ದಶಮಸ್ಕಂಧದ ಸಂಗೀತರೂಪಕವನ್ನಾಗಿಸಿದೆ. ಪುರಾಣಪ್ರಪಂಚದ ಮಹೋನ್ನತವಿಚಾರಗಳನ್ನೂ ಕಥೆ ಉಪಕಥೆಗಳನ್ನೂ ಕನ್ನಡದಲ್ಲಿ ಸಂಗೀತಬದ್ಧವಾಗಿ ಒದಗಿಸಿದ ಶ್ರೇಯಸ್ಸು ಹರಿದಾಸಸಾಹಿತ್ಯದ್ದು. ಆ ಕೀರ್ತಿಯ ಸಿಂಹಪಾಲುಪುರಂದರದಾಸರದು.
ತಮ್ಮ ಜೀವನದ ಸುಮಾರು40ರ ಪ್ರಾಯದಲ್ಲಿ ಅಧ್ಯಾತ್ಮಕ್ಕೆ ತೆರೆದುಕೊಂಡ ಶ್ರೀದಾಸರು ಅನಂತರದ ಸುಮಾರು 40 ವರ್ಷಗಳ ಅವಧಿಯಲ್ಲಿ ಮಾಡಿದ ಸಾಧನೆ ಕನ್ನಡದಲ್ಲಿ ಅಭೂತಪೂರ್ವ ಎನ್ನಿಸಿತು. ತಾವು ಮಾತ್ರವಲ್ಲದೇ ತಮ್ಮ ಪತ್ನಿಪುತ್ರರೂ ಸಹ ಹರಿದಾಸರಾಗುವಂತೆ ಪ್ರೇರೇಪಿಸಿದ್ದು ದಾಸರ ಮತ್ತೊಂದು ಸಾಧನೆ.
ವ್ಯಾಸರಾಜರು,ವಾದಿರಾಜರು ಮೊದಲಾದ ಯತಿಶೇಖರರೊಂದಿಗೂ, ಕೃಷ್ಣದೇವರಾಜನಂತಹ ಅರಸನೊಂದಿಗೂ, ಕನಕದಾಸರಂತಹ ಹರಿದಾಸರೊಂದಿಗೂ ಪುರಂದರದಾಸರ ಒಡನಾಟ ಅವರ ಬಹುಮುಖ ಹಿರಿಮೆಗೆ ದ್ಯೋತಕ.
ಕನಕದಾಸರ ಹಿರಿಮೆಯನ್ನು ಗುರುತಿಸುವಲ್ಲಿವ್ಯಾಸರಾಜ, ವಾದಿರಾಜರ ಪಾತ್ರದಂತೆ ಪುರಂದರದಾಸರ ಪಾತ್ರವೂ ಅಮೋಘವಾದುದು. ಕನಕದಾಸರ ಬಗ್ಗೆ ಅವರು ರಚಿಸಿರುವ `ಕನಕದಾಸನ ಮೇಲೆ ದಯಮಾಡಲು ವ್ಯಾಸಮುನಿ ಮಠದವರೆಲ್ಲ ದೂರಿಕೊಂಬುವರು' ಎಂಬ ಕೃತಿ ಕನಕದಾಸರ ಬಗೆಗಿನ ಒಂದು ಅಪೂರ್ವದಾಖಲೆಯಾಗಿ ಮಾನ್ಯವಾಗಿದೆ.
ವಿದ್ಯೆಯ ಮೇರುವೆನ್ನಿಸಿದ್ದ ವ್ಯಾಸರಾಜರಿಂದ `ದಾಸರೆಂದರೆ ಪುರಂದರ-ದಾಸರಯ್ಯ' ಎನ್ನಿಸಿಕೊಂಡ ಪುರಂದರದಾಸರದು ಪರಮಸಾರ್ಥಕಜೀವನ. ಅವರ ಕೃತಿಗಳಲ್ಲಿ ವೇದಾಂತದ ಸಾರ ತುಂಬಿದೆ. ಪುರಂದರೋಪನಿಷತ್ತು ಎಂದು ಕರೆಯುವ ಮೂಲಕ ಅವುಗಳ ಹಿರಿಮೆಯನ್ನು ಜಗತ್ತಿಗೆ ಸಾರಿದ ವ್ಯಾಸರಾಜರ ಹೃದಯವೈಶಾಲ್ಯ ಐತಿಹಾಸಿಕ ಮಹತ್ತ್ವದ್ದು.
ವಿಜಯದಾಸರಿಗೆ ಸ್ವಪ್ನದಲ್ಲಿಪುರಂದರದಾಸರ ರೂಪದಲ್ಲಿಯೇ ಅಂಕಿತವನ್ನು ಅನುಗ್ರಹಿಸುವ ಮೂಲಕ ಅವರ ಸ್ಥಾನವನ್ನು ಅಜರಾಮರವನ್ನಾಗಿ ಶ್ರೀಹರಿ ಮಾಡಿದ. ದಾಸಕೂಟದ ವ್ಯಾಪಕಪ್ರಸಾರಕ್ಕೆ ಹೀಗೆ ಪರೋಕ್ಷವಾಗಿಯೂ ಪುರಂದರದಾಸರ ಕೊಡುಗೆ ಅಪಾರವಾದುದು.
ಪುರಂದರದಾಸರು ಶ್ರೀಪಾದರಾಜರು, ವ್ಯಾಸರಾಜರು, ವಾದಿರಾಜರು ಎಂಬ ರಾಜತ್ರಯರಾದ ಮುನಿತ್ರಯರ ಅನಂತರ ಒಬ್ಬ ಗೃಹಸ್ಥವರೇಣ್ಯರಾಗಿಹರಿದಾಸಸಾಹಿತ್ಯವನ್ನು ಉತ್ತುಂಗಕ್ಕೆ ಒಯ್ದರು. ಅವರ ಸಾಧನೆ ನಿಜವಾದ ಅರ್ಥದಲ್ಲಿ ವ್ಯಾಸರಾಜರು ಹೇಳಿದಂತೆ `ಪೂತಾತ್ಮ ಪುರಂದರದಾಸರಿವರಯ್ಯ' ಎನ್ನಿಸಿದೆ.
ತಮ್ಮ ಪ್ರಧಾನಕಾರ್ಯಕ್ಷೇತ್ರವಾದ ಹಂಪಿಯಲ್ಲಿಯೇ ಅವರು ತಮ್ಮ ಕೊನೆಯ ದಿನಗಳನ್ನು ಕಳೆದರು. ಅವರು ಹರಿಪುರಕ್ಕೆ ತೆರಳಿದ್ದು ಸಹ ಹಂಪೆಯಲ್ಲಿಯೇ ಎಂಬುದು ಅವರ ಪುತ್ರ ಮಧ್ವಪತಿದಾಸರ ಕೃತಿಯಿಂದ ತಿಳಿಯುತ್ತದೆ.
- ಡಾ|| ವ್ಯಾಸನಕೆರೆ ಪ್ರಭಂಜನಾಚಾರ್ಯ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ