ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜತೆ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಭೇಟಿ

Upayuktha
0

ದ.ಕ. ಸಮಗ್ರ ಅಭಿವೃದ್ಧಿ-ಭದ್ರತೆ ಬಗ್ಗೆ ಗಮನಸೆಳೆದ ಸಂಸದರು



ಮಂಗಳೂರು: ಉಗ್ರ ಚಟುವಟಿಕೆ ನಿಗ್ರಹಕ್ಕೆ ಮಂಗಳೂರಿನಲ್ಲಿ ಆದಷ್ಟು ಬೇಗ ಎನ್‌ಐಎ ಘಟಕ ಸ್ಥಾಪಿಸುವಂತೆ ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಇಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಹೊಸದಿಲ್ಲಿಯಲ್ಲಿ ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ.


ಕರಾವಳಿ ತೀರದ ಸುರಕ್ಷತೆ ದೃಷ್ಟಿಯಿಂದ ಭಾರತೀಯ ಕೋಸ್ಟ್‌ಗಾರ್ಡ್‌ ಅಕಾಡೆಮಿ ಸ್ಥಾಪನೆ ಯೋಜನೆ ಅನುಷ್ಠಾನ, ದಕ್ಷಿಣ ಕನ್ನಡದಲ್ಲಿ ಸೈನಿಕ ಶಾಲೆ-ಮಿಲಿಟರಿ ನೆಲೆ ಸ್ಥಾಪಿಸುವುದು, ಮಂಗಳೂರು-ಬೆಂಗಳೂರು ನಡುವಿನ ರೈಲು ಹಾಗೂ ರಸ್ತೆ ಸಂಪರ್ಕ ಮತ್ತಷ್ಟು ಸುಗಮಗೊಳಿಸುವುದು ಸೇರಿ ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಅಭಿವೃದ್ಧಿ ಹಾಗೂ ಸುರಕ್ಷತೆ ಹೆಚ್ಚಳಕ್ಕೆ ಪೂರಕವಾದ ಹಲವು ಪ್ರಮುಖ ಬೇಡಿಕೆ ಒಳಗೊಂಡಿರುವ ಮನವಿಯನ್ನು ಇದೇ ವೇಳೆ ಸಂಸದ ಕ್ಯಾ. ಚೌಟ ಅವರು ಗೃಹ ಸಚಿವ ಅಮಿತ್‌ ಶಾ ಅವರಿಗೆ ಸಲ್ಲಿಕೆ ಮಾಡಿದ್ದಾರೆ.


ಸಂಸದರಾದ ಬಳಿಕ ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಮೊದಲ ಬಾರಿಗೆ ಅಧಿಕೃತವಾಗಿ ಅಮಿತ್‌ ಶಾ ಅವರನ್ನು ಶುಕ್ರವಾರ ಸಂಜೆ ಭೇಟಿ ಮಾಡಿದ ಕ್ಯಾ. ಚೌಟ ಅವರು ಜಿಲ್ಲೆಯ ಪ್ರಗತಿಗೆ ಸಂಬಂಧಿಸಿದ ವಿಷಯಗಳ  ಬಗ್ಗೆ ಸಮಲೋಚಿಸಿದ್ದು ಈ ವೇಳೆ ಗೃಹಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.


ಮಂಗಳೂರಿಗೆ ಶೀಘ್ರ ಎನ್‌ಐಎ ಘಟಕ

ಮಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯಾದ ಎನ್‌ಐಎ ಘಟಕ ಸ್ಥಾಪಿಸಬೇಕೆಂಬ ಒತ್ತಾಯ ಹಲವು ವರ್ಷಗಳಿಂದ ಕೇಳಿಬಂದಿತ್ತು. ಈ ಬೇಡಿಕೆಯನ್ನು ಆದ್ಯತೆಯಾಗಿ ಪರಿಗಣಿಸಿದ್ದ ಕ್ಯಾ. ಚೌಟ ಸಂಸದರಾದ ಕೂಡಲೇ ಎನ್‌ಐಎ ಘಟಕ ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದರು. ಅದರಂತೆ ಇಂದು ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಮಂಗಳೂರು ಸೇರಿ ಕರಾವಳಿಯಲ್ಲಿ ಎಸ್‌ಡಿಪಿಐ, ಪಿಎಫ್‌ಐನಂಥ ಮತಾಂಧ ಸಮಾಜಘಾತುಕ ಸಂಘಟನೆಗಳ ಮೂಲಕ ಸ್ಲೀಪರ್‌ಸೆಲ್‌ನಂತಿರುವ ಉಗ್ರ ಚಟುವಟಿಕೆ ಮಟ್ಟ ಹಾಕಬೇಕಾದರೆ ಕರಾವಳಿಯಲ್ಲಿ ಎನ್‌ಐಎ ಘಟಕ ಸ್ಥಾಪಿಸುವುದು ಅತ್ಯಂತ ಅಗತ್ಯವಾಗಿದೆ. ಈ ಹಿಂದೆ ಸಿಎಎ ಪ್ರತಿಭಟನೆ ಹೆಸರಿನಲ್ಲಿ ನಡೆಸಿದ್ದ ಮೂಲಭೂತವಾದಿಗಳ ಗಲಭೆ ಕೂಡ ಕರಾವಳಿಯ ಭದ್ರತೆಗೆ ಎದುರಾದ ಸವಾಲಿಗೆ ಸ್ಪಷ್ಟ ನಿದರ್ಶನ. ಹೀಗಿರುವಾಗ, ಮಂಗಳೂರಿನಲ್ಲಿ ಎನ್‌ಐಎ ಘಟಕ ಸ್ಥಾಪನೆಯಾದರೆ ಈ ಭಾಗದಲ್ಲಿ ಉಗ್ರ ಚಟುವಟಿಕೆಯ ಮೂಲೋತ್ಪಾಟನೆ ಜತೆಗೆ ಕರಾವಳಿಯ ಸುರಕ್ಷತೆ ಹೆಚ್ಚಿಸುವುದಕ್ಕೂ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ಕ್ಯಾ. ಚೌಟ ತಿಳಿಸಿದ್ದಾರೆ.


ಸೈನಿಕ ಶಾಲೆ ಮತ್ತು ಮಿಲಿಟರಿ ಬೇಸ್‌ ಸ್ಥಾಪನೆಗೆ ಮನವಿ

ಶೈಕ್ಷಣಿಕವಾಗಿ ಮಂಗಳೂರು ವಿಶ್ವದರ್ಜೆ ಮನ್ನಣೆ ಪಡೆದಿರುವ ಹಿನ್ನಲೆಯಲ್ಲಿ ಈ ಭಾಗದಲ್ಲಿ ದೇಶ ಸೇವೆಗೆ ಮುಂದಾಗುವ ಯುವಕರನ್ನು ಪ್ರೋತ್ಸಾಹಿಸುವುದಕ್ಕೆ ಹಾಗೂ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ, ಶಿಸ್ತು, ನಾಯಕತ್ವ ಗುಣ ಬೆಳೆಸುವುದಕ್ಕೆ ಸೈನಿಕ ಶಾಲೆ ಸ್ಥಾಪನೆಯಾಗಬೇಕು. ನಮ್ಮ ಕರಾವಳಿ ತೀರದ ರಕ್ಷಣಾ ಸಾಮರ್ಥ್ಯ ಹಾಗೂ ರಾಷ್ಟ್ರೀಯ ಭದ್ರತೆ ಹೆಚ್ಚಿಸುವ ದೃಷ್ಟಿಯಿಂದ ಮಿಲಿಟರಿ ಬೇಸ್‌ ಮಂಗಳೂರಿನಲ್ಲಿ ಸ್ಥಾಪಿಸಬೇಕು. ಸೈನಿಕ ಶಾಲೆ ಜತೆಗೆ ಮಿಲಿಟರಿ ನೆಲೆಯನ್ನೂ ಸ್ಥಾಪಿಸುವುದರಿಂದ ಕರಾವಳಿ ಭಾಗದ ಸುರಕ್ಷತೆಯ ಜತೆಗೆ ದೇಶದ ರಕ್ಷಣಾ ಮೂಲಸೌಕರ್ಯ ಮತ್ತಷ್ಟು ಬಲಗೊಳಿಸುವುದಕ್ಕೆ ವಿಪುಲ ಅವಕಾಶ-ಅನುಕೂಲತೆಗಳು ದೊರೆಯುತ್ತದೆ ಎಂದು ಚೌಟ ಅಭಿಪ್ರಾಯಪಟ್ಟಿದ್ದಾರೆ.


 ಕೇಂದ್ರ ಸರ್ಕಾರವು ಮಂಗಳೂರಿಗೆ 2020ರಲ್ಲಿ ಭಾರತೀಯ ಕೋಸ್ಟ್‌ಗಾರ್ಡ್‌ ಅಕಾಡೆಮಿ ಮಂಜೂರು ಮಾಡಿದೆ. ಆದರೆ, ನಮ್ಮ ಜಿಲ್ಲೆಗೆ ರಾಷ್ಟ್ರ ಮಟ್ಟದಲ್ಲಿ ಹೆಗ್ಗುರುತಾಗುವ ಈ ಯೋಜನೆ ಕಾರ್ಯರೂಪಕ್ಕೆ ಬರಲು ಕೆಲವು ಅನುಮತಿ ಪ್ರಕ್ರಿಯೆಗಳು ಗೃಹ ಸಚಿವಾಲಯದ ಮುಂದೆ ಬಾಕಿಯಿದೆ. ಹೀಗಾಗಿ ಆದಷ್ಟು ಬೇಗ ಅಕಾಡೆಮಿ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು. ಮಂಗಳೂರಿನಲ್ಲಿ ಕೋಸ್ಟ್‌ಗಾರ್ಡ್‌ ಅಕಾಡೆಮಿ ಸ್ಥಾಪಿಸುವುದರಿಂದ ಕರಾವಳಿ ತೀರದ ಕಣ್ಗಾವಲು, ಪ್ರಾಕೃತಿ ವಿಕೋಪದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಅನುಕೂಲವಾಗಲಿದೆ. ಅಲ್ಲದೆ, ಆಯಕಟ್ಟಿನ ಅರೇಬಿಯನ್ ಸಮುದ್ರ ಮತ್ತು ಮಂಗಳೂರು ಬಂದರಿನ ಸಮೀಪದಲ್ಲಿ ಕೋಸ್ಟ್‌ಗಾರ್ಡ್‌ ಅಕಾಡೆಮಿ ಸ್ಥಾಪನೆಯಾದರೆ ಲಕ್ಷದ್ವೀಪ ದ್ವೀಪಗಳು ಮತ್ತು ಮಾಲ್ಡೀವ್ಸ್ ಸೇರಿದಂತೆ ಪ್ರಮುಖ ಕಡಲ ವಲಯಗಳ ಸಾಮೀಪ್ಯದಿಂದ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಕ್ಯಾ. ಚೌಟ ಅವರು ಸಲಹೆ ನೀಡಿದ್ದಾರೆ.


ಮಂಗಳೂರು ಈಗಾಗಲೇ ಬ್ಯಾಂಕ್‌ಗಳ ತೊಟ್ಟಿಲು ಎಂದು ಕರೆಯಿಸಿಕೊಂಡಿರುವ ಹಿನ್ನಲೆಯಲ್ಲಿ ಈ ಭಾಗದಲ್ಲಿರುವ ಸಹಕಾರ ಬ್ಯಾಂಕಿಂಗ್‌ ವಲಯದ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಬೇಕು. ಇದರಿಂದ ಸಣ್ಣ ಉದ್ದಿಮೆದಾರರು ಹಾಗೂ ಕೃಷಿಕರಿಗೆ ಹೆಚ್ಚಿನ ಆರ್ಥಿಕ ನೆರವು ಪಡೆಯುವುದಕ್ಕೆ ಕೋ ಆಪರೇಟಿವ್‌ ಬ್ಯಾಂಕ್‌ಗಳ ಉತ್ತೇಜನ ಅನುಕೂಲ ಮಾಡಲಿದೆ ಎಂದು ಸಹಕಾರಿ ಸಚಿವರೂ ಆಗಿರುವ ಅಮಿತ್‌ ಶಾ ಅವರಲ್ಲಿ ಕ್ಯಾ. ಚೌಟ ಮನವಿ ಮಾಡಿದ್ದಾರೆ.


ಭೇಟಿಯ ವೇಳೆ ಕೇಂದ್ರ ಸಚಿವರಿಗೆ ತುಳುನಾಡಿನ ಜನಪ್ರಿಯ ಕ್ರೀಡೆ ಕಂಬಳದ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top