ಒಳ ಮೀಸಲಾತಿ | ನ್ಯಾ ನಾಗಮೋಹನ್ ದಾಸ್ ಆಯೋಗಕ್ಕೆ ಕಾಲಾವಕಾಶ ವಿಸ್ತರಣೆ ಬೇಡ: ಬಿಜೆಪಿ ಆಗ್ರಹ

Upayuktha
0

ಕಾಲಹರಣದ ರಾಜಕೀಯ ಬೇಡ; ತುರ್ತು ಮಧ್ಯಂತರ ವರದಿ ತರಿಸಿಕೊಳ್ಳಿ



ಬೆಂಗಳೂರು: ಸವೋಚ್ಚ ನ್ಯಾಯಾಲಯದ ಆದೇಶದಂತೆ ಒಳಮೀಸಲಾತಿ ಜಾರಿ ಮಾಡುವ ನಿಟ್ಟಿನಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ವಿಫಲವಾಗಿದ್ದು ಪರಿಶಿಷ್ಟ ವರ್ಗಗಳಿಗೆ ನ್ಯಾಯ ನಿರಾಕರಿಸಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.


ರಾಜ್ಯ ಬಿಜೆಪಿ ಪ್ರಧಾನ ಕಾರ್ಯಾಲಯದಲ್ಲಿ ಇಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಇಚ್ಛಾಶಕ್ತಿಯೇ ಇಲ್ಲ. ಬ್ರಹ್ಮಾಂಡ ಭ್ರಷ್ಟಾಚಾರವನ್ನೇ ಏಕೈಕ ಗುರಿಯಾಗಿಸಿಕೊಂಡು ಅಧಿಕಾರಕ್ಕೆ ಬಂದಿರುವ ಈ ಸರಕಾರದಿಂದ ರಾಜ್ಯದ ಜನತೆಯ ಬದುಕು ಮೂರಾಬಟ್ಟೆಯಾಗಿದೆ ಎಂದು ಟೀಕಿಸಿದರು. 


ಒಳಮೀಸಲಾತಿ ಬೇಡಿಕೆ ವಿಚಾರದಲ್ಲಿ ನಡೆದಿರುವ ಹೋರಾಟದ ವಿವರ ಹಾಗೂ ಸವೋಚ್ಚ ನ್ಯಾಯಾಲಯದ ತೀರ್ಪಿನ ವಿಚಾರವನ್ನು ಎಳೆ ಎಳೆಯಾಗಿ ವಿವರಿಸಿದ ಕಾರಜೋಳ ಅವರು, 2024 ಆಗಸ್ಟ್ 1 ರಂದು ಭಾರತದ ಸರ್ವೋಚ್ಚ ನ್ಯಾಯಾಲಯದ 7 ಸದಸ್ಯರ ಸಂವಿಧಾನಿಕ ಪೀಠ ತನ್ನ ಐತಿಹಾಸಿಕ ತೀರ್ಪಿನಲ್ಲಿ ಒಳಮೀಸಲಾತಿಯನ್ನು ಜಾರಿ ಮಾಡುವ ಅಧಿಕಾರವನ್ನು ರಾಜ್ಯಗಳಿಗೆ ಕೊಟ್ಟಿದೆ. ಈ ಐತಿಹಾಸಿಕ ತೀರ್ಪು ಎಲ್ಲ 101 ಪರಿಶಿಷ್ಟ ಜಾತಿಗಳಿಗೂ ಸಾಮಾಜಿಕ ನ್ಯಾಯವನ್ನು ಒದಗಿಸಿದೆ ಮತ್ತು ಮಾದಿಗ ಸಂಬಂಧಿತ ಜಾತಿಗಳ 35 ವರ್ಷಗಳ ಅವಿರತ ಹೋರಾಟಕ್ಕೆ ಜಯ ತಂದುಕೊಟ್ಟಿದೆ ಎಂದರು.


ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನುಸಾರ ಕರ್ನಾಟಕ ಸರ್ಕಾರ ಒಳ ಮೀಸಲಾತಿಯನ್ನು ಜಾರಿ ಮಾಡಬೇಕಿತ್ತು. ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯದ ಧೋರಣೆ ಅನುಸರಿಸಿತು. ಎರಡು ತಿಂಗಳು ಕಳೆದರೂ ಸರ್ಕಾರ ಸಣ್ಣ ಹೆಜ್ಜೆಯನ್ನೂ ಮುಂದೆ ಇಡಲಿಲ್ಲ. ಆಗ ಅಕ್ಟೋಬರ್ 16 ರಂದು ರಾಜ್ಯದ ಎಲ್ಲೆಡೆ ಮಾದಿಗ ಒಳ ಮೀಸಲಾತಿ ಸಂಘಟನೆಗಳು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದವು. ಇದರಿಂದ ಎಚ್ಚರಗೊಂಡ ಸರ್ಕಾರ ಅಕ್ಟೋಬರ್ 18 ರಂದು ಸಚಿವ ಸಂಪುಟ ಸಭೆ ನೆಡಸಿ ನಿರ್ಧಾರ ಪ್ರಕಟಿಸುವುದಾಗಿ ಹೇಳಿತು. ಆನಂತರ ಅಕ್ಟೋಬರ್ 24ಕ್ಕೆ ಮುಂದೂಡಲಾಯಿತು. ಕೊನೆಗೆ ಅಕ್ಟೋಬರ್ 28ಕ್ಕೆ ಸಚಿವ ಸಂಪುಟ ಸಭೆಯಲ್ಲಿ ನಿವೃತ್ತ ನ್ಯಾಯಾಧೀಶರ ಆಯೋಗ ರಚಿಸಿ ಒಂದು ತಿಂಗಳಲ್ಲಿ ವರದಿ ಪಡೆದು ಒಳ ಮೀಸಲಾತಿ ಜಾರಿ ಮಾಡುವುದಾಗಿ ರಾಜ್ಯ ಸರ್ಕಾರ ಹೇಳಿತು. ಆ ಮೂಲಕ ಸದ್ಯಕ್ಕೆ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿತು ಎಂದು ಅವರು ಟೀಕಿಸಿದರು.


ಕಾಲ ಹರಣವಷ್ಟೇ ಸಾಧನೆ:

ಎರಡು ತಿಂಗಳು ಕಾಲಹರಣ ಮಾಡಿದ ರಾಜ್ಯ ಸರ್ಕಾರವನ್ನು ಎಚ್ಚರಿಸಲು ಎಲ್ಲ ಶಾಸಕರ ಮನೆ ಮುಂದೆ ಮಾದಿಗ ಸಂಘಟನೆಗಳು ತಮಟೆ ಚಳವಳಿ ನಡೆಸಬೇಕಾಯಿತು. ಡಿಸೆಂಬರ್ ಕೊನೆಯಲ್ಲಿ ನ್ಯಾ. ನಾಗಮೋಹನ್ ದಾಸ್ ಆಯೋಗ ರಚಿಸಿ ಒಂದು ತಿಂಗಳು ಸಾರ್ವಜನಿಕ ಆಹವಾಲು ಪಡೆಯಲು ಅವಕಾಶ ಕಲ್ಪಿಸಲಾಯಿತು.


ಹೊಸ ಅಯೋಗ ರಚಿಸಬೇಕು ಅನ್ನುವುದು ಮಾದಿಗ ಸಂಘಟನೆಗಳ, ಒಳ ಮೀಸಲಾತಿ ಹೋರಾಟಗಾರರ ಬೇಡಿಕೆಯಾಗಿರಲಿಲ್ಲ. ಈಗಾಗಲೇ ಸರ್ಕಾರದ ಮುಂದೆ ನ್ಯಾ ಸದಾಶಿವ ಆಯೋಗ, ಮಾಧುಸ್ವಾಮಿ ಸಮಿತಿ, 2011ರ ಜನಗಣತಿಯ ದತ್ತಾಂಶಗಳು ಇವೆ. ಈ ನಡುವೆ ನ್ಯಾ ನಾಗಮೋಹನ್ ದಾಸ್ ಅವರಿಗೆ ಕೊಡಲಾಗಿದ್ದ ಒಂದು ತಿಂಗಳ ಕಾಲಮಿತಿಯನ್ನು ಮತ್ತೆ ವಿಸ್ತರಿಸುವ ಹುನ್ನಾರ ನಡೆಯುತ್ತಿದೆ ಎಂದು ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.


ಸರ್ಕಾರವನ್ನು ನಿಯಂತ್ರಿಸುತ್ತಿರುವ ಕೆಲ ಒಳ ಮೀಸಲಾತಿ ವಿರೋಧಿ ಶಕ್ತಿಗಳು ಆಯೋಗಕ್ಕೆ ಇನ್ನಷ್ಟು ಕಾಲಾವಕಾಶ ಕೊಡಬೇಕು ಎನ್ನುವ ಪುಕಾರು ಎಬ್ಬಿಸುತ್ತಿದ್ದಾರೆ. ಸರ್ಕಾರ ಇಂತಹ ಶಕ್ತಿಗಳ ಬೇಡಿಕೆಗೆ ಬಗ್ಗಬಾರದು ಎಂದು ಅವರು ಆಗ್ರಹಿಸಿದರು.


ಜನವರಿ 31ಕ್ಕೆ ಒಂದು ತಿಂಗಳು ಮುಗಿಯುವುದರಿಂದ ಸರ್ಕಾರ ಮತ್ತೆ ಆಯೋಗಕ್ಕೆ ಕಾಲಾವಕಾಶ ವಿಸ್ತರಣೆ ಮಾಡಿದರೆ ಮಾದಿಗ ಸಂಘಟನೆಗಳು ಬೀದಿಗೆ ಇಳಿದು ಪ್ರತಿಭಟಿಸಬೇಕಾಗುತ್ತದೆ. ಇದು ಮಾದಿಗ ಸಂಘಟನೆಗಳು ಮತ್ತು ಒಳ ಮೀಸಲಾತಿ ಹೋರಾಟಗಾರರು ಕೊಡುತ್ತಿರುವ ಗಂಭೀರ ಎಚ್ಚರಿಕೆಯಾಗಿದೆ. 


ತುರ್ತು ಮಧ್ಯಂತರ ವರದಿ ನೀಡಲು ಆದೇಶಿಸಿ:

ಸರ್ಕಾರ ನ್ಯಾ ನಾಗಮೋಹನ್ ದಾಸ್ ಆಯೋಗಕ್ಕೆ ತುರ್ತು 'ಮಧ್ಯಂತರ ವರದಿ' ನೀಡಲು ಆದೇಶಿಸಬೇಕು. ಮಾದಿಗ ಸಂಬಂಧಿತ ಜಾತಿಗಳಿಗೆ ಎಲ್ಲ ಆಯೋಗಗಳ ವರದಿಗಳು ಶೇ 6 ರ ಮೀಸಲಾತಿ ಕೊಡಬೇಕೆಂದು ಹೇಳಿವೆ. ಹೀಗಾಗಿ ಸರ್ಕಾರ ಮಧ್ಯಂತರ ವರದಿ ಪಡೆದು ಮಾದಿಗ ಉಪಜಾತಿಗಳಿಗೆ ತುರ್ತು ಶೇ 6 ರ ಪ್ರತ್ಯೇಕ ಮೀಸಲಾತಿ ಜಾರಿ ಮಾಡಬೇಕು. ಉಳಿದ ಶೇ 11ರ ಎಸ್ಸಿ ಮೀಸಲಾತಿಯ ವರ್ಗೀಕರಣ ಮಾಡಲು ಸಮಾಯಾವಕಾಶ ತೆಗೆದುಕೊಳ್ಳಲಿ. ನಮ್ಮ ಅಭ್ಯಂತರವಿಲ್ಲ ಎಂದು ಕಾರಜೋಳ ಸ್ಪಷ್ಟಪಡಿಸಿದರು.


ಹರಿಯಾಣದ ಬಿಜೆಪಿ ಸರ್ಕಾರ ಸುಪ್ರೀಂಕೋರ್ಟ್ ತೀರ್ಪು ಬಂದ ಒಂದೇ ತಿಂಗಳಲ್ಲಿ ಒಳಮೀಸಲಾತಿ ಯನ್ನು ಜಾರಿ ಮಾಡಿ ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸಿದೆ. ಕರ್ನಾಟಕ ಸರಕಾರ ಹರಿಯಾಣ ಮಾದರಿಯನ್ನು ಅನುಸರಿಸಲಿ. ಕಾಲಹರಣದ ರಾಜಕಾರಣ ಬೇಡ. ಒಳ ಮೀಸಲಾತಿ ತುರ್ತು ಜಾರಿಯಾಗಲಿ. ಕಣ್ಣೊರೆಸುವ ರಾಜಕಾರಣ ನಿಲ್ಲಿಸಿ, ಕಣ್ಣೀರು ಒರೆಸುವ ಒಳ ಮೀಸಲಾತಿ ಜಾರಿಮಾಡಿ. ನ್ಯಾ ನಾಗಮೋಹನ್ ದಾಸ್ ಆಯೋಗಕ್ಕೆ ಕಾಲಾವಕಾಶ ವಿಸ್ತರಣೆ ಬೇಡ. ನ್ಯಾ ನಾಗಮೋಹನ್ ದಾಸ್ ಆಯೋಗ ತುರ್ತು 'ಮಧ್ಯಂತರ ವರದಿ' ನೀಡಲಿ ಎಂದು ಅವರು ಆಗ್ರಹಿಸಿದರು.


ಪತ್ರಿಕಾಗೋಷ್ಠಿಯಲ್ಲಿ, ಬಿಜೆಪಿ ರಾಜ್ಯ ವಕ್ತಾರ ಹೆಚ್. ವೆಂಕಟೇಶ್ ದೊಡ್ಡರಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ, ನಿಕಟಪೂರ್ವ ರಾಜ್ಯ ಉಪಾಧ್ಯಕ್ಷ ಎಂ. ಶಂಕರಪ್ಪ, ಅಂಬೇಡ್ಕ‌ರ್ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಸಿ. ಮುನಿಕೃಷ್ಣ, ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top