23 ಜಿಲ್ಲೆಗಳಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರ ಚುನಾವಣೆ ಪೂರ್ಣ: ಪಿ. ರಾಜೀವ್

Upayuktha
0

ಪಕ್ಷದ ಸಂಘಟನಾತ್ಮಕ ಚುನಾವಣೆ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ ಎಂದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ




ಬೆಂಗಳೂರು: ಭಾರತೀಯ ಜನತಾ ಪಕ್ಷದ ಕರ್ನಾಟಕ ಘಟಕದ ಸಂಘಟನಾತ್ಮಕ ಚುನಾವಣೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈಗಾಗಲೇ 23 ಜಿಲ್ಲೆಗಳಲ್ಲಿ ಜಿಲ್ಲಾಧ್ಯಕ್ಷರ ಚುನಾವಣೆ ಮುಗಿದಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಪ್ರಕ್ರಿಯೆ ಮುಂದುವರಿಯುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಕುಡಚಿ ಶಾಸಕ ಪಿ. ರಾಜೀವ್ ತಿಳಿಸಿದರು.


ಪಕ್ಷದ ಪ್ರಧಾನ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಟನಾತ್ಮಕ ಚುನಾವಣಾ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು. ಬೂತ್ ಮಟ್ಟದ ಸಕ್ರಿಯ ಕಾರ್ಯಕರ್ತರ ಹಂತದಿಂದ ತೊಡಗಿ, ಮಂಡಲ ಅಧ್ಯಕ್ಷರು, ಜಿಲ್ಲಾ ಅಧ್ಯಕ್ಷರ ಚುನಾವಣೆ ವರೆಗಿನ ಸಹಮತದ ಪ್ರಕ್ರಿಯೆಯ ಬಗ್ಗೆ ಅವರು ವಿವರ ನೀಡಿದರು.


ಮುಖ್ಯಾಂಶಗಳು:

ಕರ್ನಾಟಕ ರಾಜ್ಯದಲ್ಲಿ ಸಂಘಟನಾ ಪರ್ವ ಪ್ರಾರಂಭ ಆಗಿದೆ. ಸದಸ್ಯತ್ವ ಅಭಿಯಾನದಿಂದ ಪ್ರಾರಂಭವಾದ ಈ ಪರ್ವ, ಈಗ ಜಿಲ್ಲಾ ಅಧ್ಯಕ್ಷರ ಆಯ್ಕೆಗಾಗಿ ಸಹಮತದ ಚುನಾವಣಾ ಪ್ರಕ್ರಿಯೆ ವರೆಗೆ ಬಂದು ತಲುಪಿದೆ. ಮೊದಲನೆಯದಾಗಿ ಸದಸ್ಯತ್ವವನ್ನು ಪಡೆಯಲಾಗುತ್ತದೆ.  ಕರ್ನಾಟಕದಲ್ಲಿ 80 ಲಕ್ಷಕ್ಕಿಂತ ಹೆಚ್ಚು ಜನ ಕಾರ್ಯಕರ್ತರು ಸದಸ್ಯತ್ವವನ್ನು ಪಡೆದಿದ್ದಾರೆ.  ರಾಜ್ಯದಲ್ಲಿ ಸುಮಾರು 10 ಲಕ್ಷಕ್ಕಿಂತ ಹೆಚ್ಚು ಜನ ಸಕ್ರಿಯ ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ. ಸಕ್ರಿಯ ಸದಸ್ಯರು ಆಯಾ ಬೂತ್ ನಲ್ಲಿ ಬೂತ್ ಸಮಿತಿಯನ್ನು ಆಯ್ಕೆ ಮಾಡುತ್ತಾರೆ. ಅದನ್ನು ಆಯ್ಕೆ ಮಾಡುವಂತಹ ಅವಕಾಶ ಸಕ್ರಿಯ ಸದಸ್ಯರಿಗೆ ಮಾತ್ರ ಇರುತ್ತದೆ.


ಬೂತ್ ಸಮಿತಿಯಲ್ಲಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಆಯ್ಕೆಯಾದ ಮೇಲೆ ಮಂಡಲ ಅಧ್ಯಕ್ಷರ ಆಯ್ಕೆಯಾಗುತ್ತದೆ. ಅವರನ್ನು ಆಯ್ಕೆ ಮಾಡುವವರು ಬೂತ್‌ಗಳ ಅಧ್ಯಕ್ಷರು. ಮಂಡಲ ಅಧ್ಯಕ್ಷರು ಮತ್ತು ಮಂಡಲ ಪ್ರತಿನಿಧಿ, ಆ ನಂತರ ಎಲೆಕ್ಟೋರಲ್ ಕಾಲೇಜ್ ಸೇರಿ ಜಿಲ್ಲಾ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತದೆ. ಜಿಲ್ಲೆಯಲ್ಲಿ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡುವವರು ಮಂಡಲ ಅಧ್ಯಕ್ಷರು ಮತ್ತು ಮಂಡಲ ಪ್ರತಿನಿಧಿಗಳು.


ಇವರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಸಕ್ರಿಯ ಸದಸ್ಯರಿಂದ ಆರಂಭವಾಗಿ ಹಂತ ಹಂತವಾಗಿ ನಡೆಯುತ್ತದೆ. ಈ ಎಲ್ಲಾ ಪ್ರಕ್ರಿಯೆಯನ್ನು ನೋಡಿಕೊಳ್ಳಲು ರಾಜ್ಯ ಚುನಾವಣಾಧಿಕಾರಿಯಾಗಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರನ್ನು ನೇಮಿಸಲಾಗಿದೆ.


ಎಲ್ಲ ಜಿಲ್ಲೆಗಳಿಗೆ ಪಕ್ಕದ ಜಿಲ್ಲೆಯಿಂದ ಚುನಾವಣಾಧಿಕಾರಿಯಾಗಿ, ಮತ್ತೆ ಅದೇ ಜಿಲ್ಲೆಯ ಇಬ್ಬರನ್ನು ಸಹ ಚುನಾವಣಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಆ ಜಿಲ್ಲೆಯ ಚುನಾವಣಾ ಅಧಿಕಾರಿಗಳಿಗೆ ಎಲೆಕ್ಟೋರಲ್ ಕಾಲೇಜ್ ನ ಪಟ್ಟಿ ಕೊಟ್ಟು ಜಿಲ್ಲೆಯ ಎಲ್ಲ ಪ್ರಮುಖರ ಅಭಿಪ್ರಾಯವನ್ನು ಪಡೆದುಕೊಂಡು ಜಿಲ್ಲೆಯ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ಈ ಪ್ರಕ್ರಿಯೆಯ ಬಗ್ಗೆ ದೆಹಲಿಯಲ್ಲಿ ಕಾರ್ಯಾಗಾರ ಆಗಿದೆ. ಬೆಂಗಳೂರಿನ ಕೇಂದ್ರ ಕಾರ್ಯಾಲಯದಲ್ಲಿ ಕಾರ್ಯಾಗಾರ ಆಗಿದೆ. ಜಿಲ್ಲೆಯ ಹಂತದ ವರೆಗೂ ಎಲ್ಲ ಕಡೆ ಕಾರ್ಯಾಗಾರವನ್ನು ನಡೆಸಲಾಗಿದೆ.


ಚುನಾವಣಾ ಪ್ರಕ್ರಿಯೆ ಹೇಗೆ ಮಾಡಬೇಕು ಅನ್ನುವ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮತ್ತು ಸಹ ಚುನಾವಣಾಧಿಕಾರಿಗಳಿಗೆ ಸಂಪೂರ್ಣ ತರಬೇತಿ ನೀಡಿ ಕಳುಹಿಸಲಾಗಿದೆ. ಆ ಮೂಲಕ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಿ ಸಂಘಟನೆಯಿಂದ ಪಕ್ಷಕ್ಕೆ ಇರುವ ಬದ್ಧತೆ ಸಹಿತ ಎಲ್ಲವನ್ನೂ ವಿವರಿಸಿ ಸಹಮತದ ಆಯ್ಕೆಯ ಪ್ರಕ್ರಿಯೆ ನಡೆಸಲಾಗಿದೆ. 23 ಜಿಲ್ಲೆಗಳ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇಂದು ನಡೆದಿದೆ. ಉಳಿದ ಜಿಲ್ಲೆಗಳಲ್ಲಿ ಈ ಪ್ರಕ್ರಿಯೆ ಮುಂದುವರಿಯುತ್ತದೆ. ಚುನಾವಣಾಧಿಕಾರಿಯಾಗಿ ಕ್ಯಾ. ಗಣೇಶ್ ಕಾರ್ಣಿಕ್ ಅವರನ್ನು ನಿಯೋಜಿಸಲಾಗಿದ್ದು, ಪ್ರಕ್ರಿಯೆಗೆ ಅಗತ್ಯ ಮಾರ್ಗದರ್ಶನವನ್ನು ಅವರು ಮಾಡುತ್ತಾರೆ.


ಇದರಲ್ಲಿ ಅವರ ಮಾತು ನಡೆಯುತ್ತೆ, ಇವರ ಮಾತು ನಡೆಯುತ್ತೆ ಅಥವಾ ಏಕಪಕ್ಷೀಯವಾಗಿ ಚುನಾವಣೆ ನಡೀತಿದೆ ಅನ್ನುವ ಆರೋಪಕ್ಕೆ ಅವಕಾಶವೇ ಇಲ್ಲ ಎಂದು ರಾಜೀವ್ ಸ್ಪಷ್ಟಪಡಿಸಿದರು.


ಇವತ್ತು 23 ಜಿಲ್ಲೆಗಳ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇಂದು ನಡೆದಿದೆ. ಆದರೆ ಕಾರ್ಯಾಲಯಕ್ಕೆ ಇನ್ನೂ ಪಟ್ಟಿ ಬಂದಿಲ್ಲ. ಚುನಾವಣಾಧಿಕಾರಿಗಳೇ ಅಲ್ಲಿ ಘೋಷಣೆ ಮಾಡಿ, ಆ ಘೋಷಣೆಯ ಪ್ರತಿಯನ್ನು ಕೇಂದ್ರ ಕಚೇರಿಗೆ ಕಳುಹಿಸುತ್ತಾರೆ. ಇಲ್ಲಿ ಬಂದ ಪಟ್ಟಿಯನ್ನು ನಂತರ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ಇದು ಚುನಾವಣಾ ಪ್ರಕ್ರಿಯೆ. ಇದು ಸಂಪೂರ್ಣ ಪ್ರಜಾಪ್ರಭುತ್ವ ರೀತಿಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ಮಾಡಲಾಗುತ್ತದೆ. ಕೆಲವೊಮ್ಮೆ ಇಂಥವರೇ ಆಗಲಿ ಅಂತ ಹೇಳಬಹುದು. ಆದರೆ ಅಲ್ಲಿ ಚುನಾವಣಾಧಿಕಾರಿಯಾಗಿ ಯಾರು ಹೋಗಿರ್ತಾರೆ ಅವರು ಎಲ್ಲರನ್ನು ಒಪ್ಪಿಸುವಂತಹ ಪ್ರಯತ್ನ ಮಾಡಿರುತ್ತಾರೆ. ಅದರಲ್ಲಿ ಆ ಜಿಲ್ಲೆಯ ಚುನಾವಣಾಧಿಕಾರಿ ಪೂರ್ತಿ ನಿಯಮದಲ್ಲೇ ಈ ಪ್ರಕ್ರಿಯೆಯನ್ನು ಮಾಡಿರುತ್ತಾರೆ. ಮಂಡಲ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ, ಮಂಡಲ ಪ್ರತಿನಿಧಿಗಳು, ಆ ನಂತರ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದ ಮೇಲೆ ರಾಜ್ಯಾಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಘೋಷಣೆಯಾಗುತ್ತದೆ.


ಮೂರು ತಿಂಗಳಿನಿಂದ ನಡೆಯುತ್ತಿರುವ ಪ್ರಕ್ರಿಯೆ:

ಆಯಾ ಮಂಡಲದಲ್ಲಿ ಸಕ್ರಿಯ ಸದಸ್ಯರು ಎಷ್ಟು ಮಂದಿ ಆಗಿದ್ದಾರೆ ಎನ್ನುವುದನ್ನು ಪಟ್ಟಿ ತೆಗೆದು ನೋಡಬೇಕು. ಇದು ಒಂದೇ ರಾತ್ರಿ ಬೆಳಗಾಗುವುದರೊಳಗೆ ಆಗುವ ಪ್ರಕ್ರಿಯೆ ಅಲ್ಲ. ಮೂರು ತಿಂಗಳಿನಿಂದ ನಡೆಯುತ್ತಿರುವ ಪ್ರಕ್ರಿಯೆ ಇದು. ಬೂತ್ ಮಟ್ಟದಿಂದ ಸದಸ್ಯತ್ವ ಅಭಿಯಾನ ಪ್ರಾರಂಭವಾಗಿದೆ, ಎಲ್ಲವೂ ಪಾರದರ್ಶಕವಾಗಿವೆ. ಎಲ್ಲಾ ನಾಯಕರೂ ಸಹ ಸದಸ್ಯತ್ವ ಅಭಿಯಾನದಲ್ಲಿ ತೊಡಗಿಕೊಳ್ಳಬೇಕು ಎಂದು ಪ್ರತಿಯೊಬ್ಬರಿಗೂ ಸೂಚನೆ ಇತ್ತು. ಈ ಎಲ್ಲ ಪ್ರಕ್ರಿಯೆಯಲ್ಲಿ ಭಾಗವಹಿಸಿದವರಿಗೆ ಯಾವ ಗೊಂದಲವೂ ಉಂಟಾಗಲು ಸಾಧ್ಯವೇ ಇಲ್ಲ.


ಎಲ್ಲರ ವಿಶ್ವಾಸ ತೆಗೆದುಕೊಂಡು ಚುನಾವಣಾಧಿಕಾರಿಗಳು ಚುನಾವಣೆ ಮಾಡುತ್ತಿದ್ದಾರೆ. ಎಲ್ಲರನ್ನೂ ಓಪನ್ ಆಗಿ ಕೂರಿಸಿ ಸಭೆಯನ್ನು ಮಾಡಲಾಗಿದೆ. ನಂತರ ನಾಮಪತ್ರಗಳನ್ನು ಸ್ವೀಕಾರ ಮಾಡಲಾಗಿದೆ. ಬಳಿಕ ಆಕ್ಷೇಪಣೆ ಸಲ್ಲಿಸಲು ಅವಕಾಶ ಇರುತ್ತದೆ. ಆ ಬಳಿಕ ಮರುಪರಿಶೀಲನೆ ನಡೆಯುತ್ತದೆ. ಆಗಿರುವ ಪ್ರಕ್ರಿಯೆಗಳ ಎಲ್ಲ ಮಾಹಿತಿಯನ್ನು ಹಂತ ಹಂತವಾಗಿ ಕೊಡುತ್ತೇವೆ. ಜಿಲ್ಲೆಗಳಿಂದ ಬಂದ ಅಭಿಪ್ರಾಯಗಳನ್ನು ಕೋರ್ ಕಮಿಟಿಯಲ್ಲಿ ಚರ್ಚಿಸಿ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತದೆ.


ಜಿಲ್ಲಾ ಕೋರ್ ಕಮಿಟಿ ಅಭಿಪ್ರಾಯ, ಜನಪ್ರತಿನಿಧಿಗಳ ಅಭಿಪ್ರಾಯ ಎಲ್ಲವನ್ನೂ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗೆ ಸೂಚನೆ ಇರುತ್ತದೆ. ಅನಂತರ ಜಿಲ್ಲಾಧ್ಯಕ್ಷರ ಅಭಿಪ್ರಾಯವನ್ನೂ ಪಡೆದುಕೊಳ್ಳಬೇಕು. ಮೊದಲ ಹಂತದಲ್ಲಿ ಯಾರು ಅರ್ಹರು ಎಂಬ ಪಟ್ಟಿ ಮಾಡಲಾಗುತ್ತದೆ. ನಂತರ ಅವರ ಮೇಲೆ ಏನಾದರೂ ಕ್ರಿಮಿನಲ್ ಕೇಸುಗಳಿವೆಯೇ ಎಂದು ಪರಿಶೀಲಿಸಲಾಗುತ್ತದೆ. ಯಾವುದಾದರೂ ಪಕ್ಷ ವಿರೋಧಿ ಚಟುವಟಿಕೆ ಇದ್ದರೆ ಅದನ್ನೂ ಪರಿಶೀಲಿಸಲಾಗುತ್ತದೆ.  ಆಮೇಲೆ ಅಭಿಪ್ರಾಯ ಸಂಗ್ರಹ, ಯಾರಿಗೆ ಬಹುಮತ, ಸರ್ವಾನುಮತ ಎಂಬುದನ್ನು ಚುನಾವಣಾಧಿಕಾರಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತಾರೆ.


ಪಕ್ಷದ ಸಂಘಟನಾತ್ಮಕ ಚುನಾವಣೆ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ. ತಳಮಟ್ಟದಿಂದ ಅಭಿಪ್ರಾಯವನ್ನು ಸಂಗ್ರಹಿಸಿ, ಭಿನ್ನಾಭಿಪ್ರಾಯಗಳಿದ್ದರೆ ಅವುಗಳನ್ನೂ ಪರಿಗಣಿಸಲಾಗುತ್ತದೆ. ಇಂತಹದೊಂದು ಪ್ರಕ್ರಿಯೆ ಇರುವುದು ಭಾರತೀಯ ಜನತಾ ಪಕ್ಷದಲ್ಲಿ ಮಾತ್ರ.


ರಾಜ್ಯಾಧ್ಯಕ್ಷರು ಒಬ್ಬನೇ ಒಬ್ಬ ಜಿಲ್ಲಾ ಚುನಾವಣಾಧಿಕಾರಿಗೆ ಫೋನ್ ಮಾಡಿಲ್ಲ. ಹೀಗಾಗಿ ಅವರು ಪ್ರಭಾವ ಬೀರುತ್ತಾರೆ ಎನ್ನುವ ಆರೋಪಗಳಿಗೆ ಆಧಾರವಿಲ್ಲ. ಈ ಪ್ರಕ್ರಿಯೆಗಳಲ್ಲಿ ಎಲ್ಲಾದರೂ ಒಂದಡೆ ಉಲ್ಲಂಘನೆಯಾದರೂ ಅದನ್ನು ವರದಿ ಮಾಡಲು ಅವಕಾಶವಿದೆ. ನಮ್ಮ ಮೇಲ್ಮನವಿ ಪ್ರಾಧಿಕಾರವಿದೆ. ಅಲ್ಲಿಗೆ ವರದಿ ಮಾಡಬಹುದು ಎಂದು ರಾಜೀವ್ ಸ್ಪಷ್ಟಪಡಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top