ಫೆ.1ರಂದು ಹೆಜ್ಜೆ- ಗೆಜ್ಜೆಗಳ ರಸವೈಭವ
ಕಲಬುರಗಿ: ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 300ರಷ್ಟು ವಿದ್ಯಾರ್ಥಿ ಕಲಾವಿದರು ಫೆಬ್ರವರಿ 1 ರಂದು ಕಲಬುರಗಿಯ ನೂತನ ವಿದ್ಯಾಲಯ ಮೈದಾನದಲ್ಲಿ ಸಾದರಪಡಿಸುವ ಆಳ್ವಾಸ್ ಸಾಂಸ್ಕೃತಿಕ ವೈಭವವು ಸಾಂಸ್ಕೃತಿಕ ವಿನಿಮಯದ ಬಲುದೊಡ್ಡ ವೇದಿಕೆ ಎಂದು ಕಲಬುರಗಿ ನುಡಿಸಿರಿ ಘಟಕದ ಅಧ್ಯಕ್ಷರಾದ ಅಪ್ಪಾರಾವ್ ಅಕ್ಕೋಣಿ ಹೇಳಿದರು.
ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ನುಡಿಸಿರಿ ಮತ್ತು ವಿರಾಸತ್ ಕಾರ್ಯಕ್ರಮಗಳ ಮೂಲಕ ಸಾಂಸ್ಕೃತಿಕ ವಿನಿಮಯ ಮಾಡುವ ವಿಶೇಷ ವೇದಿಕೆಯನ್ನು ಸೃಷ್ಟಿಸುತ್ತಿದ್ದು ಆ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಭಾರತೀಯ ವಿವಿಧ ಕಲಾ ಪ್ರಕಾರಗಳಲ್ಲಿ ವಿಶಿಷ್ಟ ಪ್ರತಿಭೆ ಮೈಗೂಡಿಸಿ ಕೊಂಡಿದ್ದು ಅದನ್ನು ನಾನಾ ಕಡೆಗಳಲ್ಲಿ ಸಂಚರಿಸಿ ಕಲಾಪ್ರದರ್ಶನ ನೀಡುತ್ತಿದ್ದಾರೆ. ಹಾಗೆ ಆಯಾಯ ಊರುಗಳ, ಜಿಲ್ಲೆಗಳ ಕಾರ್ಯಕ್ರಮಗಳನ್ನು ನುಡಿಸಿರಿ ಮತ್ತು ವಿರಾಸತ್ ವೇದಿಕೆಗಳಲ್ಲಿ ಸಾದರಪಡಿಸುವ ಅವಕಾಶ ಕಲ್ಪಿಸಲಾಗುತ್ತಿದೆ.
ಈ ಬಾರಿ ಕಲಬುರಗಿಗೆ ಐದು ವರ್ಷಗಳ ನಂತರ 180 ವಿದ್ಯಾರ್ಥಿನಿಯರು ಹಾಗೂ 120 ವಿದ್ಯಾರ್ಥಿ ಗಳನ್ನು ಒಳಗೊಂಡ 300 ವಿದ್ಯಾರ್ಥಿ ಕಲಾವಿದರು ಆಗಮಿಸಿ ಮೂರು ಗಂಟೆಗಳ ಮನಮೋಹಕ ನೃತ್ಯ ಹಾಗೂ ಮಲ್ಲಕಂಬ ಪ್ರದರ್ಶನ, ರೋಪ್ ವೇ ಪ್ರದರ್ಶನಗಳನ್ನು ನೀಡಿ ವಿಶೇಷ ಸಾಂಸ್ಕೃತಿಕ ಹಬ್ಬಕ್ಕೆ ಮೆರುಗು ನೀಡಲಿದ್ದಾರೆ. ಭಾರತೀಯ ಕಲಾ ಪ್ರಕಾರಗಳನ್ನು ಸಾದರಪಡಿಸುವುದರ ಮೂಲಕ ಕಣ್ಣು ಎವೆಯಿಕ್ಕದಂತೆ ನೋಡುವ ಅದ್ಭುತ ಸಾಂಸ್ಕೃತಿಕ ಕಾರ್ಯಕ್ರಮವು ಸಾರ್ವಜನಿಕರಿಗೆ ಮನರಂಜನೆ ನೀಡಲಿದೆ. ಸರಿಯಾಗಿ 6.30 ಕ್ಕೆ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಉಚಿತ ಪ್ರವೇಶ ನೀಡಲಾಗುತ್ತಿದೆ ಎಂದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ಸಂಸ್ಥಾನ ಮಠದ ಪೂಜ್ಯ ಮಾತೃಶ್ರೀ ದಾಕ್ಷಾಯಿಣಿ ಅಪ್ಪ, ಬಸವರಾಜ ದೇಶಮುಖ್, ಮದರ್ ತೆರೇಸಾ ಆಸ್ಪತ್ರೆಯ ನಿರ್ದೇಶಕರಾದ ಫಾ. ವಿನ್ಸೆಂಟ್ ಪಿರೇರಾ, ಸಿದ್ದಾರ್ಥ ಬುದ್ಧ ವಿಹಾರದ ಪೂಜ್ಯ ಬಂತೇಜಿ ಸಂಘಾನಂದ, ಕಲಬುರಗಿಯ ರೋಜಾ ಖುರ್ದ್ ಬಂದೇ ನವಾಜ್ ಶರೀಫ್ ದರ್ಗಾದ ಜನಶೀನ್ ಸಜ್ಜಾದ್ ಸೈಯದ್ ಷಾ ಯದಲ್ಲಾಹ ಹುಸೇನಿ ಹಸನಿ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಫೌಜಿಯ ತರನ್ನುಮ್, ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್ ಡಿ, ಜಿಮ್ಸ್ ನ ಮುಖ್ಯ ಆಡಳಿತಾಧಿಕಾರಿ ಪ್ರಮೀಳಾ ಎಂ.ಕೆ, ಯುನೈಟೆಡ್ ಆಸ್ಪತ್ರೆಯ ಡಾ. ವೀಣಾ ಸಿದ್ಧಾರೆಡ್ಡಿ, ಯುವ ಮುಖಂಡರಾದ ಬಾಲರಾಜ್ ಗುತ್ತೇದಾರ್, ನೂತನ ವಿದ್ಯಾಲಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಗೌತಮ್ ಜಾಗೀರದಾರ್, ಶ್ರೀ ನಗರೇಶ್ವರ ವೆಲ್ಫೇರ್ ಸೊಸೈಟಿಯ ಹಾಗೂ ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ರಾಘವೇಂದ್ರ ಮೈಲಾಪುರ, ಮಣೂರು ಆಸ್ಪತ್ರೆಯ ನಿರ್ದೇಶಕರಾದ ಡಾ. ಫಾರೂಕ್ ಮಣೂರ್, ಆಶ್ರಯ ಗ್ರೂಪ್ ಆಫ್ ಹೋಟೆಲ್ಸ್ ನ ಪ್ರವೀಣ ಜತ್ತನ್, ದಕ್ಷಿಣ ಕನ್ನಡ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ ಭಾಗವಹಿಸಲಿದ್ದಾರೆ.
ಹೋಟೆಲ್ ಬೇಕರಿ ಮತ್ತು ವಸತಿ ಮಾಲಕರ ಸಂಘದ ಅಧ್ಯಕ್ಷ ನರಸಿಂಹ ಮೆಂಡನ್, ಶ್ರೀ ಬೀರದೇವ್ ಫೈನಾನ್ಸಿನ ರಾಮಚಂದ್ರ ಡಿ ರಘೋಜಿ, ಸುವರ್ಣ ಫೈನಾನ್ಸ್ ನ ಶ್ರೀರಾಮ್ ಡಿ ಪವಾರ್, ದರ್ಶನ್ ಆಸ್ಪತ್ರೆ ನಿರ್ದೇಶಕರಾದ ಸಂತೋಷ್ ವರ್ಗೀಸ್,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ್ ತೇಗಲತಿಪ್ಪಿ ಉದ್ಯಮಿ ಅರುಣ್ ಪವಾರ್ ಮತ್ತು ಭಾಗವಹಿಸಲಿದ್ದಾರೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ ಚೇರ್ಮನ್ ಮೋಹನ ಆಳ್ವಾ ಭಾಗವಹಿಸಲಿರುವರು. ಘಟಕದ ಗೌರವಾಧ್ಯಕ್ಷ ಡಾ.ಪಿ. ಎಸ್ ಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಆಳ್ವಾಸ್ ನುಡಿಸಿರಿ ಘಟಕವು ಕಳೆದ ಹಲವು ಬಾರಿ ಆಳ್ವಾಸ್ ಸಾಂಸ್ಕೃತಿಕ ವೈಭವವನ್ನು ಕಲಬುರಗಿಯಲ್ಲಿ ಏರ್ಪಡಿಸಿ ಅಪಾರ ಜನ ಮೆಚ್ಚುಗೆಗೆ ಪಾತ್ರವಾಗಿದ್ದು ಸಾರ್ವಜನಿಕರ ಒತ್ತಾಯದ ಮೇರೆಗೆ ಮತ್ತೆ ಈ ಕಾರ್ಯಕ್ರಮದ ಪ್ರದರ್ಶನ ಏರ್ಪಡಿಸಲಾಗಿದೆ. ಮೂಡುಬಿದಿರೆಯಲ್ಲಿ ನಡೆಯುವ ಆಳ್ವಾಸ್ ನುಡಿಸಿರಿ ಮತ್ತು ವಿರಾಸತ್ ಕಾರ್ಯಕ್ರಮಗಳಲ್ಲಿ ಬೇರೆ ಬೇರೆ ಜಿಲ್ಲೆಗಳ ಕಲಾವಿದರಿಗೆ ಮತ್ತು ತಜ್ಞರಿಗೆ, ವಿದ್ವಾಂಸರಿಗೆ ಅವಕಾಶ ನೀಡುತ್ತಿದ್ದು ಕಾರ್ಯಕ್ರಮವನ್ನು ಏರ್ಪಡಿಸಲು ಘಟಕವು ಮಾರ್ಗದರ್ಶನ ನೀಡುತ್ತಿದೆ ಎಂದು ಸಂಘಟನಾ ಸಂಚಾಲಕರಾದ ಡಾ. ಸದಾನಂದ ಪೆರ್ಲ ಹೇಳಿದರು.
ಭಾಲ್ಕಿಯ ಡಾ. ಬಸವಲಿಂಗಪಟ್ಟದೇವರು, ಡಾ. ಚನ್ನಣ್ಣ ವಾಲಿಕಾರ್, ಎಲ್ ಬಿ. ಕೆ ಅಲ್ದಾಳ್, ಪ್ರೊ. ವಸಂತ ಕುಷ್ಟಗಿ ಏ.ಕೆ ರಾಮೇಶ್ವರ ಹೀಗೆ ಹಲವರಿಗೆ ನುಡಿಸಿರಿ ಪ್ರಶಸ್ತಿಯ ಗೌರವವನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕೂಡ ಈ ಭಾಗದ ಕಲಾವಿದರಿಗೆ ನುಡಿಸಿರಿ ವೇದಿಕೆಗಳಲ್ಲಿ ಪ್ರದರ್ಶನ ನೀಡುವ ಅವಕಾಶ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಪೆರ್ಲ ಹೇಳಿದರು.
ಕಾರ್ಯಕ್ರಮದ ಲ್ಲಿ ಉಚಿತ ಪ್ರವೇಶವಿದ್ದರೂ ಪಾಸ್ ವಿತರಿಸುವ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿದ್ದು ಕಲಬುರಗಿಯ ಜಗತ್ ನಲ್ಲಿರುವ ಹೋಟೆಲ್ ಆಮಂತ್ರಣ, ಸೆಂಟರ್ ಕಾಮತ್, ಡಿ.ಸಿ ಕಚೇರಿಯ ಹೋಟೆಲ್ ಆಮಂತ್ರಣ, ಸೂಪರ್ ಮಾರ್ಕೆಟ್ ಕಾಮತ್ ಹೋಟೆಲ್, ಕೆಕೆಆರ್ ಟಿಸಿ ಕೇಂದ್ರ ಬಸ್ ನಿಲ್ದಾಣದ ಎದುರು ಹೋಟೆಲ್ ಕಮಲ್ ಹಾಗೂ ರಾಮ ಮಂದಿರದ ಸಮೀಪದ ಹೋಟೆಲ್ ಆಮಂತ್ರಣ ನೆಕ್ಸ್ಟ್ ನಲ್ಲಿ ಪಾಸ್‌ಗಳನ್ನು ವಿತರಿಸುವ ವ್ಯವಸ್ಥೆ ಜ.29 ರಿಂದ ಆರಂಭವಾಗಲಿದೆ. ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ರವಿ ಮುಕ್ಕಾ, ಶರಣು ಪಪ್ಪಾ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ನರಸಿಂಹ ಮೆಂಡನ್ ಹಾಗೂ ಸಂಘಟನಾ ಸದಸ್ಯ ಎಸ್. ಎಸ್ ಹಿರೇಮಠ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ