ಎಸ್.ಡಿ.ಎಂ ಕಾಲೇಜಿನಲ್ಲಿ ವಿಶ್ವಮಾನವ ದಿನಾಚರಣೆ

Upayuktha
0

ಸೋಷಿಯಲ್ ಮೀಡಿಯಾಗಳಿಗೆ ಸಂಸ್ಕೃತಿನಿಷ್ಠ ಆಯಾಮ ಅಗತ್ಯ: ನಾಗತಿಹಳ್ಳಿ ಚಂದ್ರಶೇಖರ್




ಉಜಿರೆ: ಹೊಸ ಕಾಲದ ಸಾಮಾಜಿಕ ಜಾಲತಾಣಗಳ ಸಂವಹನದ ಟ್ರೆಂಡ್‌ಗೆ ಸಂಸ್ಕೃತಿನಿಷ್ಠ ಸಾಹಿತ್ಯಕ ಆಯಾಮ ನೀಡಬೇಕಾದ ಅನಿವಾರ್ಯತೆ ಇದೆ ಎಂದು ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.


ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕನ್ನಡ ವಿಭಾಗ ಹಾಗೂ ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಯೋಗದಲ್ಲಿ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಸೋಮವಾರ ಕುವೆಂಪು ಅವರ ೧೨೦ನೇ ಜನ್ಮದಿನೋತ್ಸವದ ಪ್ರಯುಕ್ತ ಆಯೋಜಿತವಾದ 'ವಿಶ್ವ ಮಾನವ ದಿನಾಚರಣೆ' ಕಾರ್ಯಕ್ರಮದಲ್ಲಿ ಕುವೆಂಪು ಅವರ ಸಾಹಿತ್ಯಕ ಮತ್ತು ವೈಚಾರಿಕ ಕೊಡುಗೆಗಳ ಕುರಿತು ಪ್ರದಾನ ಉಪನ್ಯಾಸ ಪ್ರಸ್ತುತಪಡಿಸಿ ಅವರು ಮಾತನಾಡಿದರು.


ಹೊಸ ಕಾಲದ ಸಂವಹನದ ಕ್ರಮಗಳು ಬದಲಾಗಿವೆ. ಸೋಷಿಯಲ್ ಮೀಡಿಯಾ ವೇದಿಕೆಗಳು ಸರಕು ಸಂಸ್ಕೃತಿಯ ವಿಸ್ತರಣೆಯ ರೂಪಗಳಾಗಿ ವಿಜೃಂಭಿಸುತ್ತಿವೆ. ವೀಕ್ಷಕರನ್ನು ಉತ್ಪನ್ನಗಳನ್ನಾಗಿ ಗ್ರಹಿಸಿ ಅದಕ್ಕೆ ತಕ್ಕಂತೆ ಜಾಳುಜಾಳಾದ ಕಂಟೆಂಟ್‌ಗಳನ್ನು ನೀಡುವ ಪ್ರವೃತ್ತಿ ವ್ಯಾಪಕವಾಗಿದೆ. 


ಇಂತಹ ಸಂದರ್ಭದಲ್ಲಿ ಈ ವೇದಿಕೆಗಳಿಗೆ ಸಾಹಿತ್ಯಕ, ಸಾಂಸ್ಕೃತಿಕ ಶಕ್ತಿ ನೀಡಬೇಕು. ನೋಡುವ, ಓದುವ ಮತ್ತು ಗೀಳಾಗಿಸಿಕೊಂಡು ಅವಲಂಬಿತವಾಗುವರಿಗಿಂತ ಸಾಹಿತ್ಯ, ಸಂಸ್ಕೃತಿ ನೆಲೆಯಲ್ಲಿ ಗ್ರಹಿಸುವ ಸಹೃದಯರನ್ನು ಸೃಷ್ಟಿಸುವ ಅಗತ್ಯವಿದೆ. ಈ ದೃಷ್ಟಿಯಿಂದ ಸಾಮಾಜಿಕ ಜಾಲತಾಣಗಳು ಸಂಸ್ಕರಿತಗೊಳ್ಳಬೇಕು ಎಂದರು.


ಸಮೂಹ ಮಾಧ್ಯಮಗಳು ಸೇರಿದಂತೆ ಇಡೀ ನಾಡು ಕುವೆಂಪು ಅವರ ಶ್ರೇಷ್ಠ ಕೊಡುಗೆಗಳನ್ನು ಅರ್ಥೈಸಿಕೊಳ್ಳಬೇಕು. ಹಳೆಯದ್ದೆಲ್ಲವನ್ನೂ ನಿರಾಕರಿಸುವ ಮನಃಸ್ಥಿತಿಯಿಂದ ಹೊರಬಂದು ಹಳೆಯದರೊಳಗಿನ ಮೌಲಿಕತೆ ಅರ್ಥೈಸಿಕೊಳ್ಳಬೇಕು.


ಈಗಾಗಲೇ ಆಗಿಹೋದ ಮಹತ್ವದ ಮೌಲಿಕತೆಯನ್ನು  ವರ್ತಮಾನದಲ್ಲಿ ಬಿಂಬಿಸುವ ಹಾಗೂ ನೆನಪಿಸುವ ಕಾರ್ಯವನ್ನು ಮಾಡಬೇಕು,ಸಾಮಾಜಿಕ ಜಾಲತಾಣದ ಗುಂಗು ಸರ್ವವ್ಯಾಪ್ತಿಯಾಗಿರುವಾಗ ಹೊಸ ಮಾಧ್ಯಮಗಳನ್ನು ಸಾಂಸ್ಕೃತಿಕ ಜಾಲತಾಣಗಳನ್ನಾಗಿ ಪರಿವರ್ತಿಸಿ ಸಾಹಿತ್ಯವನ್ನು ಪಸರಿಸಬೇಕು.


ಇಂದಿನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ದೃಶ್ಯಮಾಧ್ಯಮಗಳು ಮಾನವನ ಕಲ್ಪನಾ ಶಕ್ತಿಯನ್ನು ಕುಂದಿಸುತ್ತಿವೆ. ಈ ನಿಟ್ಟಿನಲ್ಲಿ ಯುವಸಮೂಹ ಪುಸ್ತಕದ ಮೊರೆಹೋಗಬೇಕೆಂದು  ಅವರು ಅಭಿಪ್ರಾಯಪಟ್ಟರು.


ಯುವಕರು ತಮ್ಮನ್ನು ನಿರಂತರ ಓದು ಹಾಗೂ ವಿಚಾರವಂತಿಕೆಗೆ ಒಡ್ಡಿಕೊಳ್ಳಬೇಕು. ಕುವೆಂಪು ಬರಹಗಳಿಗೆ ಜೀವನದೃಷ್ಟಿ ಹಾಗೂ ಮಾನವನ ಚಿಂತನೆಗಳನ್ನು ಬದಲಾಯಿಸುವ ಶಕ್ತಿಯಿದೆ. ಹಳೆಯ ವಿಚಾರಧಾರೆಗಳಿಗೆ ಮರುರೂಪ ನೀಡಿ ಹೊಸ ವ್ಯಾಖ್ಯಾನ ನೀಡುವ ವಿಶೇಷ ಕರ್ತೃತ್ವ ಶಕ್ತಿ ಕುವೆಂಪು ಅವರಿಗಿತ್ತು.


ಕುವೆಂಪು ರಚಿತ 'ಶ್ರೀರಾಮಾಯಣ ದರ್ಶನಂ' ಮಹಾಕಾವ್ಯ ಮತ್ತು ಇತರೆ ಕೃತಿಗಳು ಹೊಸಕಾಲದ ಬರಹಗಾರರಿಗೆ ಸ್ಪೂರ್ತಿಯಾಗುವಂಥವು ಎಂದು ಅವರು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ ಕುಮಾರ ಹೆಗ್ಡೆ ವಿದ್ಯಾರ್ಥಿಗಳು ಕುವೆಂಪು ಬರಹಗಳನ್ನು ಓದುವ ಹಾಗೂ ಅವರ ವಿಚಾರಧಾರೆಗಳಿಗೆ ಒಗ್ಗಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು. 


ಪರಿಸರದೊಂದಿಗೆ ಅತ್ಯಂತ ಆತ್ಮೀಯ ಒಡನಾಟವನ್ನು ಹೊಂದಿದ್ದ ಕುವೆಂಪು ಬರಹಗಳು ವಿದ್ಯಾರ್ಥಿಗಳು ಪ್ರಕೃತಿಯೊಡನೆ ಬೆರೆಯುವಂತೆಪ್ರೇರಣೆ ನೀಡುತ್ತವೆ ಎಂದರು.

 

ಕಾರ್ಯಕ್ರಮದಲ್ಲಿ ಅರಿವಿನ ಹಾಡುಗಾರ ನಾದ ಮಣಿನಾಲ್ಕೂರು ಕುವೆಂಪು ಹಾಡುಗಳನ್ನು ಹಾಡಿದರು. ಎಸ್.ಡಿ.ಎಂ ಕಲಾ ಕೇಂದ್ರದ ಯಶವಂತ ಬೆಳ್ತಂಗಡಿ ನಿರ್ದೇಶಿತ 'ನಾಗಿ ಕಥನ ಕವನ ರೂಪಕ'ವನ್ನು ಎಸ್‌ಡಿಎಂ ಕಲಾಕೇಂದ್ರದ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. 

 

ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಬೋಜಮ್ಮ ಕೆ.ಎನ್  ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು, ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷರಾದ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ, ಸೋನಿಯ ವರ್ಮಾ ಉಪಸ್ಥಿತರಿದ್ದರು. ವಿಭಾಗದ ಪ್ರಾಧ್ಯಾಪಕರಾದ ಡಾ.ರಾಜಶೇಖರ ಹಳೆಮನೆ ವಂದಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top