(ಅಜಾತಶತ್ರುವಿಗೊಂದು ಶ್ರದ್ಧಾಭಕ್ತಿಪೂರ್ವಕ ಅಕ್ಷರ ನಮನ)
ಶತಮಾನದ ಶಕಪುರುಷ- ಅಟಲ್ ಬಿಹಾರಿ ವಾಜಪೇಯಿ
ಜನನ: 25 ಡಿಸೆಂಬರ್ 1924 | ನಿಧನ: 16 ಆಗಸ್ಟ್ 2018
ಯಾವ ಜನ್ಮದ ಋಣಾನುಬಂಧವೋ
ನಿಮ್ಮನ್ನು ಪಡೆವ ಸೌಭಾಗ್ಯ ಒಲಿದಿತ್ತು ಈ ಪುಣ್ಯಭೂಮಿಗೆ
ಸಾರ್ಥಕವಾಯಿತು ಭಾರತಾಂಬೆ ನಿಮ್ಮನ್ನು ಹಡೆದ ಗಳಿಗೆ
ಧನ್ಯವಾಯಿತು ಭಾರತಮಾತೆ ನಿಮ್ಮನ್ನು ಹೊತ್ತು ಹೆತ್ತ ಆ ಶುಭಗಳಿಗೆ
ನೀವೇ ಈ ಕರ್ಮಭೂಮಿಯ ಅಜಾತ ಶತ್ರುವೆಂಬ ಬಹುದೊಡ್ಡ ಹೆಗ್ಗಳಿಕೆ
ಎಂಥಾ ಉದಾರ ಮನಸ್ಸು ನಿಮ್ಮದು, ಅದನು ದ್ವೇಷಿಸಲುಂಟೆ?
ಎಂಥಾ ಸೌಶೀಲ್ಯತೆ ನಿಮ್ಮದು, ನಿಮ್ಮನು ನೋಯಿಸಲುಂಟೆ?
ಎಂಥಾ ಮುಗ್ಧಮನಸು ನಿಮ್ಮದು, ನಿಮ್ಮನು ವಂಚಿಸಲುಂಟೆ?
ಎಂಥಾ ಮಾತುಗಳು ನಿಮ್ಮದು, ಅವುಗಳನ್ನು ಮರೆಯಲುಂಟೆ?
ತ್ರಿಕರಣಪೂರ್ವಕವಾಗಿ ಬದುಕನ್ನು ದೇಶಕ್ಕಾಗಿ ಅರ್ಪಿಸಿದಿರಿ
ಗೆಲುವಿಗಾಗಿ ಹಂಬಲಿಸಿ ಬಳಲಿದಿರಿ ಸೊರಗಿದಿರಿ ಬೆಂಡಾದಿರಿ
ದೇಶವನ್ನೇ ಹುರಿದುಂಬಿಸಿ ಕೊನೆಗೂ ಗೆದ್ದಿರಿ
ಆ ಗೆಲುವನ್ನೂ ದೇಶವಾಸಿಗಳಿಗೇ ಕೊಟ್ಟಿರಿ.
ನಿಮ್ಮ ಬದುಕೇ ಒಂದು ಕಾವ್ಯಮಯ
ಕಾವ್ಯಕ್ಕೂ ಮೃದು ಸ್ಪರ್ಶತೆಯನ್ನು ತಂದ ಕೋಮಲ ಮನಸು ನಿಮ್ಮದು
ದೇಶಕ್ಕಾಗಿ ನೀವು ಎದುರಿಸಿದ ಸಂಕಷ್ಟಗಳನ್ನು ಮರೆಯಲುಂಟೆ?
ಅಣುಪರೀಕ್ಷೆ ಮೂಲಕ ವಿಶ್ವದ ರಾಷ್ಟ್ರಗಳನ್ನು ಬೆರಗುಗೊಳಿಸಿದ
ನಿಮ್ಮ ಧಾರ್ಷ್ಟ್ಯವನ್ನು ವಿಶ್ವವೇ ಬೆಚ್ಚಿದ್ದು ಕಾರ್ಗಿಲನ್ನು ಗೆದ್ದ ಸಂದರ್ಭದಲ್ಲಿ
ದೃಢ ದಕ್ಷ ನಿರ್ಧಾರಗಳ ಕ್ಷಾತ್ರಪುರುಷಸಿಂಹವೆ
ಹೇಗೆ ಸಾಧ್ಯ ನಿಮ್ಮನ್ನು ಕೇವಲ ರಾಜಕಾರಣಿಯೆನಲು?
ಅಪಾರ ದೂರದೃಷ್ಟಿಯುಳ್ಳ ಅಪೂರ್ವ ಮುತ್ಸದ್ದಿಯಲ್ಲವೆ ತಾವು
ಶಬ್ದಗಳ ಬರ ಕಾಡುತ್ತದೆ ನೀವಿರುವಂತೆ ನಿಮ್ಮನ್ನು ವ್ಯಾಖ್ಯಾನಿಸಲು
ನೆಲವನ್ನು ಗಾಢವಾಗಿ ಪ್ರೀತಿಸುತ್ತ ಆಗಸದೆತ್ತರಕ್ಕೆ ಏರಿದವರು ನೀವು
ಸಮುದ್ರಕ್ಕೆ ಸಮುದ್ರವೇ ಸಾಟಿ, ನಿಮಗೆ ನೀವೇ ಸಾಟಿ!
ಎಂಥಾ ಧಾರ್ಷ್ಟ್ಯವೂ ನಿಮ್ಮೆದುರು ಸೋತಿದೆ, ಸೋಲಬೇಕು ಕೂಡ!
ಮಗುವಿನಂಥ ಮಗು ಮನಸಿನ ನಿಮ್ಮ ಪ್ರೀತಿಗೆ ಮಗುವೇ ಸೋತೀತು!
ಕಮಲದಳಗಳ ಎಳೆ ಮೃದುತ್ವವನ್ನು ಉಣಿಸಿದವರು ನೀವು
ಜನತೆಯ ಹೃತ್ಕಮಲದಲ್ಲಿ ಚಿರಂಜೀವರಾದವರು ತಾವು
ಯಾರೂ ನಿರ್ವಚಿಸರು ನಿಮ್ಮನ್ನು ನೀವಿರುವಂತೆ!
ನಿಮ್ಮ ಮುಖಾರವಿಂದಕ್ಕೆ ಸೋಲದ ಮನಸುಂಟೆ…?
ನಿಮ್ಮ ಅನುನಯವನ್ನು ಮೆಚ್ಚದ, ಒಪ್ಪದ ಶಕ್ತಿಯುಂಟೆ…?
ಯಾರು ತಲೆದೂಗರು ನಿಮ್ಮ ಮೋಡಿಯ ಮಾತುಗಳಿಗೆ…?
ಆರು ಮಂತ್ರಮುಗ್ಧರಾಗರು ನಿಮ್ಮ ರಾಗದ್ವೇಷಕ್ಕೆ…?
ನಿಮ್ಮ ನಡೆಯಲ್ಲಿ ಊನವುಂಟೆ? ನಿಮ್ಮ ನುಡಿಯಲ್ಲಿ ನ್ಯೂನವುಂಟೆ
ಇರಬೇಕಿತ್ತು ನೀವಿನ್ನೂ ನೂರು ವರ್ಷಗಳ ಕಾಲ ನಮ್ಮೊಡೆಯನಾಗಿ
ದೇಶವಾಸಿಗಳ ನಿತ್ಯ ಆರಾಧನಾ ಮೂರ್ತಿಯಾಗಿ
ಹೊರಟೇ ಬಿಟ್ಟಿರಿ ಯಾರಿಗೂ ಹೇಳದೆ,
ನಡೆದೇ ಬಿಟ್ಟಿರಿ ಶಾಶ್ವತವಾಗಿ ನಮ್ಮನ್ನಗಲಿ
ಸೃಷ್ಟಿಸಿಬಿಟ್ಟಿರಿ ನಿಮ್ಮ ಪ್ರಭೆಯನ್ನು ನಮ್ಮೊಳಗಿದ್ದೂ ನಮ್ಮೊಳಗೆ
ಬಹುಕಾಲದಿಂದ ಬಯಸಿದ್ದೆವು ನಿಮ್ಮಂಥ ಧಣಿಗಾಗಿ
ಅಜ್ಞಾನಿಗಳಾಗಿ ನಿಮ್ಮನ್ನು ಕೆಳಗಿಳಿಸಿದೆವು ಆಮಿಷಕ್ಕಾಗಿ
ಮಾಡಿ ಬಿಟ್ಟೆವು ಜೀವನದ ದೊಡ್ಡ ತಪ್ಪನ್ನಾಗಿ
ಆರೋಪಿಸಿದೆವು, ಹಂಗಿಸಿದೆವು ನಿಮ್ಮನ್ನು ಬರಿದೆ ಸುಮ್ಮನಾಗಿ
ದೂಡಿದೆವು ನಿಮ್ಮನ್ನು ನೇಪಥ್ಯಕ್ಕಾಗಿ
ಪರಿಹಾರವುಂಟೆ ನಮ್ಮ ಪಾಪ ಕರ್ಮದ ಫಲಕ್ಕಾಗಿ…???
ಪರ್ಯಾಯವುಂಟೆ ನಿಮ್ಮ ವ್ಯಕ್ತಿತ್ವಕ್ಕೆ
+ವೃದ್ಧೋಪಿ ತರುಣಾಯತೇ; ನೀವಿನ್ನೂ ಚಿರಯುವಕರು
ನಿಮಗೆ ಸಾವಿದೆಯೇ? ಅಮರರಲ್ಲವೇ ತಾವು?
ಚಿರಂಜೀವರಲ್ಲವೆ ನೀವು? ಮರೆಯಲುಂಟೇ ನಾವು?
ಅದು ಹೇಗೆ ಹೋದೀರಿ ಜಾರಿ ನಮ್ಮಿಂದ ವಿಸ್ಮೃತಿಗೆ?
ಮಾನವ ಜನ್ಮದ ಪರಮೌನ್ನತ್ಯದ ಸಾಕಾರಮೂರ್ತಿಯೇ
ನಿಮ್ಮನ್ನು ಕಳೆದುಕೊಂಡೆವು
ಹತ್ತಿರವಿದ್ದೂ ನಿಮ್ಮ ಪರಮಗಮ್ಯವನ್ನು ಗುರುತಿಸದೆ
ಹಾಲುಹಸುಳೆಯ ಸ್ನಿಗ್ಧಮುಖದ ಶಾಂತಮೂರ್ತಿಯೇ
ನಿಮ್ಮಲ್ಲೂ ವಜ್ರದಂಥ ಚಿಂತನೆಗಳಿದ್ದವು, ಮಾತುಗಳಿದ್ದವು
ಮಗುವಿಗೆ ಮಗುವಿನಂತೆ, ವಿದ್ವಾಂಸರಿಗೆ ವಿದ್ವಾಂಸರಂತೆ
ಸ್ಮಿತಃ ಪೂರ್ವಾಭಿಭಾಷಿಯಾಗಿ ಗೆದ್ದಿರಿ ಒಲುಮೆಯಿಂದಾಗಿ
ನೀವು ನಮಗೆ ಕಂಡದ್ದು ಚೈತನ್ಯದ ಚಿಲುಮೆಯಾಗಿ
ಧಾರೆಯೆರೆದು ಕೊಟ್ಟಿರಿ ನಮಗೆ ಭರಿಸಲಾರದಷ್ಟು ವಾತ್ಸಲ್ಯವ
ಹೇಗೆ ತೀರಿಸಲು ಸಾಧ್ಯ ನಿಮ್ಮ ಪ್ರೀತಿಯ ಅಷ್ಟೂ ಋಣವ
ನೀವು ನಮ್ಮನ್ನಗಲಿದ ಕ್ಷಣ
ತಂದೆಯನ್ನು ಕಳಕೊಂಡೆ ಎಂದರು
ನಿಮ್ಮ ಪರಮಪ್ರಿಯ ಶಿಷ್ಯ
ಸತ್ಯವಲ್ಲವೆ ಅವರಾಡಿದ ಮಾತು
ಓ, ಭಾರತದ ಭಾಗ್ಯವಿಧಾತ
ಹೃದಯ ತುಂಬಿ ಬಾಳಿದಿರಿ
ಕೋಟಿ ಕೋಟಿ ಭಾರತೀಯರ
ಮೈಮನಗಳಲ್ಲಿ ತುಂಬಿದಿರಿ
ಬೈರಾಗಿಗಳಾಗಿ ಬದುಕಿದಿರಿ
ಸದ್ದಿಲ್ಲದೆ ನಮ್ಮೊಳಗೆ ಅಡಗಿದಿರಿ
ಭದ್ರವಾಗಿ ನೆಲೆಯೂರಿ,
ಏನೂ ಹೇಳದೆ ಹೊರಟೇಬಿಟ್ಟಿರಿ
ಎಲ್ಲ ಇದ್ದು ಏನೂ ಇಲ್ಲದವರಂತೆ
ಗೆದ್ದುಬಿಟ್ಟಿರಿ ಎಲ್ಲವನ್ನೂ ಕಾಲಡಿಗೆ ಬೀಳುವಂತೆ
ಭವ್ಯಭಾರತದ ಹೆಮ್ಮೆಯ ರತ್ನವೇ
ಕ್ಷಮಿಸಿದ್ದೀರಿ ನಮ್ಮ ತಪ್ಪುಗಳನ್ನು
ಹರಿಸಿದ್ದೀರಿ ಎಂದಿಗೂ ನಮ್ಮನ್ನು
ಹೊಸ ಮನ್ವಂತರಕ್ಕೆ ಭಾರತವನ್ನು
ತೆರೆದು ನಿಲ್ಲಿಸಿದಿರಿ ಎಂದೆಂದೂ ಉಜ್ವಲ ಭವಿಷ್ಯವನ್ನು
ಓ ಭಾರತದ ಗಣಿಯೇ,
ಈ ಜಗದ ಕಣ್ಮಣಿಯೇ
ಸೋಜಿಗದ ಖನಿಯೇ
ಮೈಮನಗಳಲ್ಲಿ ಮೊಳಗುತ್ತಿರುವುದು
ಎಂದಿಗೂ ನಿಮ್ಮ ಕಂಚಿನ ಕಂಠದ ದನಿಯೇ!!!
- ಟಿ. ದೇವಿದಾಸ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ