ತಂಗಿಯ ಮೇಲಿನ ಅಕ್ಕನ ಅಕ್ಕರೆ

Upayuktha
0



ಪ್ರತಿಯೊಬ್ಬರಿಗೂ ಮೊದಲ ಗುರು, ಮೊದಲ ಸ್ನೇಹಿತೆ ಎಂದೆಲ್ಲಾ ಇದ್ದೇ ಇರುತ್ತಾರೆ. ಹಾಗೆ ನನ್ನ ಜೀವನದಲ್ಲಿ ಮೊದಲ ಗುರು ನನ್ನ ಅಕ್ಕ, ಮೊದಲ ಸ್ನೇಹಿತೆ ನನ್ನಕ್ಕ. ತಾಯಿಯ ಪ್ರೀತಿ, ತಂದೆಯ ಮಮಕಾರ, ಅಣ್ಣನ ಕಾಳಜಿ ಇಷ್ಟೆಲ್ಲಾ ಭಾವಗಳನ್ನು ಒಂದೆಡೆ ಕೂಡಿಟ್ಟು ನನಗೆ ನೀಡಿರುವುದು ನನ್ನ ಅದೃಷ್ಟ. ಸಂಬಂಧದಲ್ಲಿ ಸಹೋದರಿಯಾದರೂ, ಪ್ರಾಣ ಸ್ನೇಹಿತೆಯಂತೆ ಇದ್ದಾಳೆ.


ನನ್ನ ದೊಡ್ಡ-ದೊಡ್ಡ ತಪ್ಪುಗಳೊಂದಿಗೆ ಚಿಕ್ಕ-ಪುಟ್ಟ ತಪ್ಪುಗಳನ್ನೂ ತಿದ್ದಿ ಸರಿದಾರಿಗೆ ಕೊಂಡೊಯ್ಯುವ ಮಮತಾಮಯಿ ಇವಳು. ನಾನು ತರ್ಲೆ-ತಮಾಷೆ ಅತಿಯಾಗಿ ಮಾಡುತ್ತೇನೆ. ಇದನ್ನೆಲ್ಲಾ ಕೆಲವೊಮ್ಮೆ ಸಹಿಸಿಕೊಂಡು ಇನ್ನೂ ಕೆಲವೊಮ್ಮೆ ಗದರಿ ಆ ಕ್ಷಣಕ್ಕೆ ನನ್ನ ಬಾಯನ್ನು ಮುಚ್ಚಿಸಿ ಮತ್ತೆ ನಗುಮುಖದಿಂದ ಮಾತನಾಡಿಸುವ ನನ್ನ ಮುದ್ದು ಅಕ್ಕ ಇವಳು. ನನ್ನ ಪಾಲಿನ ಎರಡನೇ ತಾಯಿ ಇವಳು. ಅಮ್ಮನೊಂದಿಗೆ ಹೇಳಿಕೊಳ್ಳಲು ಹಿಂಜರಿಯುವಂತಹ ವಿಷಯಗಳನ್ನು ಇವಳೊಂದಿಗೆ ಹೇಳಿಕೊಂಡು ಸಮಾಧಾನದಿಂದ ನಿಟ್ಟುಸಿರು ಬಿಡುತ್ತೇನೆ. 


ಯಾಕೋ ಗೊತ್ತಿಲ್ಲಾ, ಅಪ್ಪ-ಅಮ್ಮನ ಮಾತಿಗಿಂತ ಅಕ್ಕನ ಮಾತು, ಬುದ್ಧಿವಾದಕ್ಕೆ ನಾನು ಬೇಗ ಮಣಿಯುತ್ತೇನೆ. ಅಕ್ಕ ತಪ್ಪೇ ಮಾಡುವುದಿಲ್ಲ ಎಂಬುದು ನನ್ನ ಭರವಸೆ. ಬರೀ ಪುಸ್ತಕದ ಬದನೆಕಾಯಿ ಆಗಬಾರದು, ಪುಸ್ತಕದಿಂದ ಹೊರಬಂದು ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕೆಂದು ಹುರಿದುಂಬಿಸಿದವಳು ನನ್ನಕ್ಕ. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವಾಗ ಮನೆಯವರ ಅಡ್ಡಿಯಿದ್ದರೂ 'ನೀನು ಭಾಗವಹಿಸು ಅವರು ಏನಾದರು ಹೇಳಲಿ ಅದಕ್ಕೆ ಕಿವಿಗೊಡಬೇಡ ' ಎಂದು ಮತ್ತೆ ಮತ್ತೆ ಪ್ರೋತ್ಸಾಹ ನೀಡುತ್ತಲೇ ಬಂದಳು. ಅವಳು ಸ್ಪರ್ಧೆಗಳಲ್ಲಿ ಭಾಗವಹಿಸದಿದ್ದರೂ ನಾನು ಭಾಗವಹಿಸಿ ಕೀರ್ತಿಗಳಿಸಬೇಕೆಂಬ ಮಹದಾಸೆ ಅವಳದು. ನನಗೆ ಯಾವುದೇ ಪ್ರಶಸ್ತಿ ಬಂದಾಗಲೂ, ಸನ್ಮಾನಿಸಲ್ಪಟ್ಟಾಗಲೂ ನನಗಿಂತ ಅತಿಯಾಗಿ ಸಂತಸಪಟ್ಟ ಜೀವವದು. ಅವಳಿಂದಾಗಿಯೇ ನಾನಿಂದು ಪದವಿ ಮಟ್ಟಕ್ಕೆ ಬಂದು ನಿಂತಿದ್ದೇನೆ ಎಂದರೆ ತಪ್ಪಾಗಲಾರದು. ಒಂದುವೇಳೆ 'ಅವಳ ವಿದ್ಯಾಭ್ಯಾಸ ಸಾಕು ನಿಲ್ಲಿಸಿ ' ಎಂದು ಅಕ್ಕ ಒಂದು ಮಾತು ಅಪ್ಪನ ಬಳಿ ಹೇಳಿದ್ದರೆ, ಇವತ್ತು ನಾನು ಮನೆಯಲ್ಲೋ ಎಲ್ಲೋ ಅಂಗಡಿಯಲ್ಲೋ ಕೆಲಸ ಮಾಡಿಕೊಂಡಿರುತ್ತಿದ್ದೆ. ಅವಳಿಗೆ ನಾನು ಎಷ್ಟೋ ಸಲ ಅಗತ್ಯವಿಲ್ಲದ ವಿಷಯಕ್ಕಾಗಿ ಎದುರು ವಾದಿಸಿದ್ದೇನೆ. ಆದರೂ ಅವಳಿಗೆ ನನ್ನ ಮೇಲಿದ್ದ ಪ್ರೀತಿ, ಕಾಳಜಿ ಕಮ್ಮಿಯಾಗಿಲ್ಲ. ನನಗೆ ಅವಳ ಮೇಲೆ ಬೆಟ್ಟದಷ್ಟು ಪ್ರೀತಿಯಿದ್ದರೂ ಅವಳು ಇಷ್ಟವೇ ಇಲ್ಲವೆಂಬಂತೆ ನಟಿಸುತ್ತೇನೆ. ಒಂದು ವೇಳೆ ಅವಳಿಗೆ ಎರಡು ಕೊಂಬು ಬಂದು ಬಿಟ್ಟರೆ ಎಂಬ ಟೊಳ್ಳು ಭಯ. ಅವಳಿಗೆ ಏಟಾದಾಗ ಅವಳ ಕಣ್ಣಲ್ಲಿ ನೀರು ಬರದಿದ್ದರೂ ನನ್ನ ಕಣ್ಣಲ್ಲಿ ನನಗೆ ಅರಿವಿಲ್ಲದಂತೆ ಕಣ್ಣೀರು ಜಾರುತ್ತದೆ. ಇಂತಹ ಅಕ್ಕ - ತಂಗಿ ಸಂಬಂಧ ಯಾವತ್ತೂ ಕೇವಲ ಮೂರನೇ ವ್ಯಕ್ತಿಯಿಂದ ಕಳಚಿ ಹೋಗಬಾರದು. ಅವಳಿಗೆ ನನ್ನ ಮೇಲಿರುವ ನಂಬಿಕೆ ಕಳೆದುಹೋಗಬಾರದು. ಅವಳು ನನಗೆ ಪ್ರೀತಿ ತೋರಿಸುತ್ತಾ, ಪ್ರೋತ್ಸಾಹಿಸುತ್ತಲೇ ಬಂದಿದ್ದಾಳೆ. ನಾನು ಮನೆಯವರ ಕೈ ತಪ್ಪಿ ಹೋಗಬಾರದೆಂದು ಕೇಳಿದ್ದನ್ನೆಲ್ಲಾ ತಂದು ಕೊಡುತ್ತಿದಾಳೆ.


ಅಪ್ಪ-ಅಮ್ಮ ಕೂಡಾ ನನ್ನನ್ನು ಅಗತ್ಯಕ್ಕಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದಾರೆ. ಈ ಮುಗ್ಧ ಪ್ರೀತಿ, ಸಂಬಂಧವನ್ನು ಎಂದಿಗೂ ಕಳೆದುಕೊಳ್ಳಲು ನಾನು ಇಚ್ಛಿಸುವುದಿಲ್ಲ. ನಮ್ಮಿಬ್ಬರ ಪ್ರೀತಿ, ಹೊಂದಾಣಿಕೆಯನ್ನು ನೋಡಿ ಹೊಟ್ಟೆ ಉರಿ ಪಟ್ಟುಕೊಂಡವರೂ ಇದ್ದಾರೆ. ಹಾಗೆಯೇ ಅಕ್ಕ-ತಂಗಿ ಅಂದ್ರೆ ಹೀಗಿರಬೇಕು ಎಂದು ಹೇಳಿದವರೂ ಇದ್ದಾರೆ. ಹಾಗಿದ್ದ ಮೇಲೆ ನಮ್ಮ ಸಂಬಂಧ ಇನ್ನೂ ಬಿಗಿಯಾಗಿ ಸಾಗಬೇಕೆಂಬುದೇ ನನ್ನಾಸೆ.


ಅಕ್ಕ ನಿನ್ನ ಅಕ್ಕರೆ ನನ್ನ ಮೇಲೆ ಸದಾ ಹೀಗೆಯೇ ಇರಲಿ. ನಮ್ಮಿಬ್ಬರ ಬಾಂಧವ್ಯ ದೂರತೀರವ ಸೇರಲಿ. ನಿನ್ನೀ ತಾಯಿ ಹೃದಯವು ಎಂದಿಗೂ ನೋಯದಿರಲಿ...


ಅಕ್ಕರೆಯ ಪ್ರೀತಿ ತೋರುವಳು

ಸೋಲಿನಲ್ಲೂ ಜತೆಗಿರುವಳು

ಅತ್ತರೆ ಕಣ್ಣೊರೆಸುವಳು

ಬೇಸರವಾದರೆ ನಗಿಸುವಳು

ಅಮ್ಮನಂತೆ ಮುದ್ದಿಸುವಳು

ಮಗಳಂತೆ ನೋಡಿಕೊಳ್ಳುವಳು

ಕಷ್ಟದಲ್ಲಿ ಕೈ ಹಿಡಿಯುವಳು

ಸಾಧನೆಗೆ ಸ್ಫೂರ್ತಿಯಿವಳು

ಮನಸಿನ ಕನ್ನಡಿಯಿವಳು

ಮೊದಲನೇ ಸ್ನೇಹಿತೆಯಿವಳು

ನನ್ನ ಜೀವನದ ಮುತ್ತು ಇವಳು

ನನ್ನ ಪಾಲಿನ ಭಾಗ್ಯ ಇವಳು....ನನ್ನಕ್ಕ


-ಪ್ರಮೀಳಾ ವಾಟೆಕಜೆ                                                       

ಪ್ರಥಮ ಪತ್ರಿಕೋದ್ಯಮ

ವಿವೇಕಾನಂದ ಪದವಿ ಕಾಲೇಜು, ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top