ಮಂಗಳೂರು ತಾಲೂಕಿನಲ್ಲೇ 30 ಎಕರೆ ಕಂದಾಯ ಭೂಮಿ ವಕ್ಫ್‌ಗೆ: ಸತೀಶ್ ಕುಂಪಲ ಆರೋಪ

Upayuktha
1 minute read
0

ವಕ್ಫ್‌ ಅಕ್ರಮದ ವಿರುದ್ಧ ನಾಳೆ ಜಿಲ್ಲಾ ಬಿಜೆಪಿಯಿಂದ ದಿನವಿಡೀ ಪ್ರತಿಭಟನೆ, ಧರಣಿ: ಜಿಲ್ಲಾ ಬಿಜೆಪಿ ಅಧ್ಯಕ್ಷರಿಂದ ಮಾಹಿತಿ



ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಕುಮ್ಮಕ್ಕಿನಿಂದ ರಾಜ್ಯದಲ್ಲಿ ವಕ್ಫ್‌ ಮಂಡಳಿಯಿಂದ ರೈತರು, ಸಾರ್ವಜನಿಕರು ಮತ್ತು ಸರಕಾರದ ಭೂಮಿಯ ಕಬಳಿಕೆ ನಿರಂತರವಾಗಿ ಮುಂದುವರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಬಹಳಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಮಂಗಳೂರು ತಾಲೂಕು ಒಂದರಲ್ಲಿಯೇ 30 ಎಕರೆಗೂ ಹೆಚ್ಚು ಕಂದಾಯ ಭೂಮಿಯ ಮೇಲೆ ವಕ್ಫ್‌ ಮಂಡಳಿ ಹಕ್ಕು ಸಾಧಿಸಿ ನೋಟೀಸ್ ನೀಡಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.


ವಕ್ಫ್‌ ಅಕ್ರಮದ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ತೀವ್ರ ಹೋರಾಟ ನಡೆಸುತ್ತಿದ್ದು, ಜಿಲ್ಲಾ ಬಿಜೆಪಿ ವತಿಯಿಂದ ಶುಕ್ರವಾರ (ನ.22ರಂದು) ಮಂಗಳೂರಿನ ಮಿನಿ ವಿಧಾನ ಸೌಧದ ಮುಂಭಾಗ ದಿನವಿಡೀ ಹೋರಾಟ ಹಾಗೂ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಅವರು ತಿಳಿಸಿದರು.


ಬುಧವಾರ ಪಕ್ಷದ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮಂಗಳೂರು ತಾಲೂಕಿನಲ್ಲಿ ಇತ್ತೀಚೆಗೆ ನಡೆದಿರುವ ವಕ್ಫ್‌ ಮಂಡಳಿ ಅಕ್ರಮದ ಬಗ್ಗೆ ದಾಖಲೆ ಸಮೇತ ಆರೋಪ ಮಾಡಿದರು. ಜಿಲ್ಲೆಯಲ್ಲಿ ಇನ್ನೂ ಬಹಳ ಮಂದಿಗೆ ತಮ್ಮ ಆಸ್ತಿಗಳ ಸುರಕ್ಷತೆ ಬಗ್ಗೆ ಅರಿವೇ ಇಲ್ಲ. ಯಾವತ್ತೋ ಒಂದು ದಿನ ದಾಖಲೆಗಳನ್ನು ಪರಿಶೀಲಿಸಿದರೆ, ಆ ವೇಳೆಗೆ ಅದು ವಕ್ಫ್‌ ಆಸ್ತಿಯಾಗಿ ಪಹಣಿಯಲ್ಲಿ ದಾಖಲಾಗಿರಬಹುದು ಎಂದು ಸತೀಶ್ ಕುಂಪಲ ಆತಂಕ ವ್ಯಕ್ತಪಡಿಸಿದರು.


ಸಾವಿರಾರು ವರ್ಷಗಳ ಇತಿಹಾಸವುಳ್ಳ, ದೇವಸ್ಥಾನಗಳು, ಮಠ ಮಂದಿರಗಳು ಮತ್ತು ಸಾರ್ವಜನಿಕ ಸ್ಥಳಗಳ ಮೇಲೆ ವಕ್ಫ್‌ ಮಂಡಳಿ ಹಕ್ಕು ಸಾಧಿಸುತ್ತಿದೆ. ಆ ಮೂಲಕ ಲ್ಯಾಂಡ್ ಜಿಹಾದ್‌ ಗೆ ಕಾಂಗ್ರೆಸ್ ಸರಕಾರವೇ ಕುಮ್ಮಕ್ಕು ನೀಡುತ್ತಿದೆ. ಇಂತಹ ಪರಿಸ್ಥಿತಿ ಬರಲು ಕಾರಣವಾಗಿದ್ದು ಕಾಂಗ್ರೆಸ್‌ನ ಅನುಸರಿಸುತ್ತಿರುವ ಮುಸ್ಲಿಂ ಓಲೈಕೆ ರಾಜಕಾರಣ ಎಂದು ಸತೀಶ್ ಕುಂಪಲ ಟೀಕಿಸಿದರು.


ಪಕ್ಷದ ಹಿರಿಯರಾದ ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ನಡೆದಿರಬಹುದಾದ ವಕ್ಫ್‌ ಅಕ್ರಮಗಳ ಬಗ್ಗೆ ದಾಖಲೆಗಳನ್ನು ಸಂಗ್ರಹಿಸುವ ಕೆಲಸ ನಡೆಯುತ್ತಿದೆ. ಪಕ್ಷದ ಹಿರಿಯ ವಕೀಲರು ದಾಖಲೆಗಳನ್ನು ಅಧ್ಯಯನ ಮಾಡಿ, ಅಕ್ರಮದ ವಿರುದ್ಧ ಹೋರಾಟಕ್ಕೆ ಸೂಕ್ತವಾದ ಮಾರ್ಗದರ್ಶನ ಮತ್ತು ಕಾನೂನು ಹೋರಾಟದ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.


ಸುದ್ದಿಗೋಷ್ಠಿಯಲ್ಲಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ರಾವ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಯತೀಶ್ ಅರ್ವಾರ್ ಮತ್ತು ಪ್ರೇಮಾನಂದ ಶೆಟ್ಟಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ ಮುಂತಾದವರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top