ಶತಮಾನೋತ್ಸವದ ಕಾರ್ಯಕ್ರಮಗಳಿಗೆ ಚಾಲನೆ
ಪಿಲಿಕುಳ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯ ಜಿಲ್ಲಾ ತರಬೇತಿ ಕೇಂದ್ರದ ನೂತನ ಸಭಾಭವನದ ಸಾಂಕೇತಿಕ ಉದ್ಘಾಟನೆ ಹಾಗೂ ಜಿಲ್ಲಾ ಸ್ಕೌಟ್ಸ್ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮಗಳ ಚಾಲನೆ ಮಂಗಳವಾರ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಮುಖ್ಯ ಆಯುಕ್ತ ಡಾ. ಮೋಹನ ಆಳ್ವ, ಸ್ಕೌಟ್ಸ್ ಗೈಡ್ಸ್ ಜಗತ್ತಿನದ್ಯಾಂತ ಇರುವ ದೊಡ್ಡ ಆಂದೋಲನ. ಇದು ಭಾರತಕ್ಕೆ ಆಗಮಿಸಿ 115 ವರ್ಷ ಸಂದಿವೆ. ದಕ್ಷಿಣ ಕನ್ನಡ ಜಿಲ್ಲೆಗೆ ಸ್ಕೌಟ್ ಗೈಡ್ಸ್ ಆಗಮಿಸಿ 100 ವರ್ಷ ಸಂದಿವೆ. ಪ್ರಸ್ತುತ ಜಿಲ್ಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ 60 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಮಾನವ ಸಂಪತ್ತಿನಲ್ಲೇ ಮುಖ್ಯವಾದದ್ದು ಯುವಸಂಪತ್ತು. ದೇಶದಲ್ಲಿರುವ 51 ಕೋಟಿ ಯುವ ಸಮುದಾಯದ ಸುಂದರ ಮನಸ್ಸನ್ನು ಕಟ್ಟುವುದು ಹಾಗೂ ಮಾರ್ಗದರ್ಶನ ನೀಡುವುದು ಅಗತ್ಯ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲೂ ಸಹಕಾರ ನೀಡಬೇಕು. ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಗೆ ಬೇಕಾದ ಮೂಲ ಸೌಲಭ್ಯಗಳನ್ನು ನೀಡಲು ಪಿಲಿಕುಳದಲ್ಲಿ 12 ಕೋಟಿ ವೆಚ್ಚದಲ್ಲಿ ಜಿಲ್ಲಾ ತರಬೇತಿ ಕೇಂದ್ರದ ನೂತನ ಸಭಾಭವನ ನಿರ್ಮಾಣವಾಗಿದೆ. ಇದು ಯುವ ಜನತೆಯ ಎಲ್ಲಾ ಕಾರ್ಯಕ್ರಮಗಳಿಗೆ ಸದುಪಯೋಗವಾಗಬೇಕು ಎಂದರು.
ಕ್ಯಾ. ಗಣೇಶ್ ಕಾರ್ಣಿಕ್ ಮಾತನಾಡಿ, ಕರ್ನಾಟಕದ ಯಾವುದೇ ಜಿಲ್ಲೆಯ ಸ್ಕೌಟ್ಸ್ ಗೈಡ್ಸ್‌ನಲ್ಲೂ ಆಗದಷ್ಟು ಕೆಲಸ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ನಮ್ಮ ದೇಶದಲ್ಲಿರುವ 51 ಕೋಟಿ ವಿದ್ಯಾರ್ಥಿ ಸಂಪತ್ತನ್ನು ಹೇಗೆ ಮಾನವ ಸಂಪತ್ತಾಗಿ ಪರಿವರ್ತಸುತ್ತೇವೆ ಎನ್ನುವುದರ ಮೇಲೆ ದೇಶದ ಭವಿಷ್ಯ ಅಡಗಿದೆ. ದೇಶಕ್ಕೆ ಬೆಳಕು ನೀಡಬಹುದಾದ ಶಕ್ತಿ ನಮ್ಮಲ್ಲಿದ್ದರು ದೀಪದ ಕೆಳಗೆ ಉಳಿಯುವ ಕತ್ತಲೆಯಂತೆ ಉಳಿದು ಹೋಗಬಾರದು ಎಂದರು. ರಾಷ್ಟ್ರ ನಿರ್ಮಾಣ ದಲ್ಲಿ ನಮ್ಮ ಕೊಡುಗೆ ಏನು ಎಂಬ ಭಾವನೆ ನಮ್ಮಲ್ಲಿ ಜಾಗೃತವಾಗಬೇಕು. ಡಾ ಮೋಹನ ಆಳ್ವರು ಅದ್ಬುತವಾದ ಸಾಂಸ್ಥಿಕ ರಚನೆಯನ್ನು ಈ ದೇಶಕ್ಕೆ ಕೊಡುಗೆ ನೀಡಿದ್ದಾರೆ ಎಂದರು.
ಸ್ಕೌಟ್ಸ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ. ಜೆ.ಆರ್. ಸಿಂಧ್ಯಾ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಕೌಟ್ಸ್ ಗೈಡ್ಸ್ ಗೆ 100 ವರ್ಷ ತುಂಬಿದ್ದು ಹೆಮ್ಮೆಯ ವಿಚಾರ. ಈಗಿನ ಕಾಲದಲ್ಲಿ ವಿಶ್ವ ಶಾಂತಿಗೆ, ಪ್ರಪಂಚದ ಸಸ್ಯ, ಪ್ರಾಣಿ, ಭೂಮಿ, ನೀರಿನ ರಕ್ಷಣೆಯ ಜೊತೆಗೆ ಎಲ್ಲರನ್ನೂ ಒಗ್ಗೂಡಿಸುವ ಕೆಲಸವನ್ನು ಸ್ಕೌಟ್ಸ್ ಗೈಡ್ಸ್ ಯಶಸ್ವಿಯಾಗಿ ನಡೆಸಿದೆ. ಕೊರೋನ ಸಮಯದಲ್ಲಿ ಸ್ಕೌಟ್ಸ್ ಗೈಡ್ಸ್ ಅನನ್ಯ ಕೊಡುಗೆ ನೀಡಿದೆ. ಮನುಷ್ಯ ಉತ್ತಮವಾಗಿ ಬದುಕಬೇಕಾದರೆ ನಡತೆ ಮುಖ್ಯವಾದದ್ದು. ಸ್ಕೌಟ್ಸ್ ಗೈಡ್ಸ್ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಕಾರಿ ಎಂದರು.
ಜಿಲ್ಲಾ ಸ್ಕೌಟ್ಸ್ ಕೇಂದ್ರದ ಶತಮಾನೋತ್ಸವದ ಕಾರ್ಯಕ್ರಮಗಳಿಗೆ ಚಾಲನೆಯನ್ನು ಲೋಗೋ ಬಿಡುಗಡೆ ಮಾಡುವ ಮೂಲಕ ಮಾಡಲಾಯಿತು. 2024-25 ರಲ್ಲಿ 100 ಕರ‍್ಯಕ್ರಮವನ್ನು ಹಮ್ಮಿಕೊಳ್ಳುವ ಯೋಜನೆ ಮಾಡಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರನ್ನು ಗೌರವಿಸಲಾಯಿತು.
ಸ್ಕೌಟ್ಸ್ ಗೈಡ್ಸ್ ಜಿಲ್ಲೆಯ 19 ಸ್ಥಳೀಯ ಸಂಸ್ಥೆಗಳಲ್ಲಿ ಗಣನೀಯ ಸೇವೆ ನೀಡಿದ ಸಾಧಕರನ್ನು ಗೌರವಿಸಲಾಯಿತು. ಅನ್ನಾ ವಿಜಯ ಕೈರನ್ನ ಅವರನ್ನು ಸನ್ಮಾನಿಸಲಾಯಿತು. ಭಾರತ್ ಸ್ಕೌಟ್ಸ್ ಗೈಡ್ಸ್ ನ ರಾಜ್ಯಕಾರ್ಯದರ್ಶಿ ಗಂಗಪ್ಪ ಗೌಡ, ಎಂಆರ್‌ಪಿಎಲ್‌ನ ಗ್ರೂಪ್ ಮ್ಯಾನೇಜರ್ ಕೃಷ್ಣ ಹೆಗ್ಡೆ, ಎನ್‌ಸಿಸಿ ಗ್ರೂಪ್ ಕಮಾಂಡರ್ ಕರ್ನಲ್ ವಿರಾಜ್ ಕಾಮತ್, ಕರ್ನಲ್ ರೋಹಿತ್ ರೈ, ಉಡುಪಿ ಜಿಲ್ಲಾ ಸ್ಕೌಟ್ಸ್ ಗೈಡ್ಸ್ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ, ಮಡಿಕೇರಿಯ ಜಿಲ್ಲಾ ಸ್ಕೌಟ್ಸ್ ಗೈಡ್ಸ್ ಆಯುಕ್ತ ಬೇಬಿ ಮ್ಯಾಥ್ಯು, ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ. ಪ್ರಭಾಕರ ಭಟ್, ಪದ್ಮಶ್ರೀ ಪುರಸ್ಕೃತೆ ರಾಣಿ ಮಾಚಯ್ಯ, ಕೊಡಗಿನ ಜ್ಯೋತಿ ಜಿ. ಪೈ, ರಾಷ್ಟ್ರೀಯ ಆಯುಕ್ತ ಸುಕುಮಾರ್, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ ಕೆ. ವಿ. ರಾವ್, ಅನ್ನಾ ವಿಜಯ ಕೈರನ್ನ, ಉಪಾಧ್ಯಕ್ಷ ವಸಂತ ರಾವ್, ಜಿಲ್ಲಾ ಆಯುಕ್ತರು ಬಿ. ಎಂ. ತುಂಬೆ, ಜಿಲ್ಲಾ ಕಾರ್ಯದರ್ಶಿ ಪ್ರತಿಮ್ ಕುಮಾರ್ ಇದ್ದರು. ನವೀನ ಅಂಬೂರಿ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ